NEWS

ಪುಣಜನೂರು ಮೂಲಕ ಕಸಾಯಿಖಾನೆಗೆ ದನಗಳ ಸಾಗಾಣೆ

ಪಾಲನೆ ನ್ಯೂಸ್


ಚಾಮರಾಜನಗರ : ಕರ್ನಾಟಕದ ಗಡಿ ಪುಣಜನೂರು ಮೂಲಕ ಕಸಾಯಿ ಖಾನೆಗೆ ದನಗಳನ್ನು ಸಾಗಿಸುತ್ತಿದ್ದ ಕಂಟೈನರ್‌ನ್ನು ತಡೆದು ಪೊಲೀಸರಿಗೆ ಮಾಹಿತಿ ನೀಡಿದ ಹಿಂದೂ ರಾಷ್ಟ್ರ ರಕ್ಷಣಾ ಪಡೆಯ ಐವರ ಮೇಲೆ ದನ ಸಾಗಾಣಿಕೆದಾರರು ಹಲ್ಲೆ ನಡೆಸಿ ಅವರ ಕಾರಿನ ಮೇಲೆ ದಾಳಿ ನಡೆಸಿ ಜಖಂಗೊಳಿಸಿರುವ ಘಟನೆ ಜರುಗಿದೆ.


ಮಂಗಳವಾರ ಸಂಜೆ ೪-೩೦ರ ಸಮಯದಲ್ಲಿ ಕಂಟೇನರ್ ವಾಹನ ವೊಂದರಲ್ಲಿ ತಮಿಳುನಾಡಿನ ಕಸಾಯಿಖಾನೆಗೆ ಅಕ್ರಮವಾಗಿ ದನಗಳನ್ನು ಸಾಗಿಸಲಾಗುತ್ತಿತ್ತು. ಬಣ್ಣಾರಿಗೆ ತೆರಳುತ್ತಿದ್ದ ಬೆಂಗಳೂರಿನ ಹಿಂದೂ ರಾಷ್ಟ್ರ ರಕ್ಷಣಾ ಪಡೆಯವರು ಇದನ್ನು ಗಮನಿಸಿ ಪುಣಜನೂರು ಕೋಳಿಪಾಳ್ಯ ನಡುವೆ ಈ ವಾಹನವನ್ನು ತಡೆದು ಪೂರ್ವ ಠಾಣೆ ಪೋಲಿಸರಿಗೆ ಮಾಹಿತಿ ನೀಡಿದ್ದಾರೆ.


ಸ್ಥಳಕ್ಕೆ ಬಂದ ಪಿಎಸ್‌ಐ ನವೀನ್ ಮತ್ತು ಸಿಬ್ಬಂದಿ ಕಂಟೇನರ್ ವಾಹನವನ್ನು ವಶಕ್ಕೆ ಪಡೆದು ಕೇಸು ದಾಖಲಿಸಿದ್ದಾರೆ.
ಕಂಟೇನರ್ ನಲ್ಲಿ ೨ ಎತ್ತು,೨ ಎಮ್ಮೆ, ೨೧ ಇಲಾಚಿ ಹಸುಗಳಿದ್ದವು. ಇವುಗಳನ್ನು ಹಿಂಸಾತ್ಮಕ ರೀತಿಯಲ್ಲಿ ಆಹಾರ,ನೀರು ಕೊಡದೆ ತುರುಕಿ ಕಟ್ಟಲಾಗಿತ್ತು. ಇವರ ಬಳಿ ಸಾಗಣೆಗೆ ಅಗತ್ಯವಾದ ಪರವಾನಗಿ ಪಶುವೈದ್ಯರ ಪ್ರಮಾಣಪತ್ರ ಇರಲಿಲ್ಲ. ದನಗಳ ಅಕ್ರಮ ಸಾಗಣೆ ಮಾಡುತ್ತಿದ್ದ ಹರದನಹಳ್ಳಿ ಗ್ರಾಮದ ಕೂಲಿ ಕೆಲಸದ ಉಬೇದ್ ಉಲ್ಲಾ ಖಾನ್ ಮತ್ತು ತಮಿಳುನಾಡು ಪುಳಿಯಂಬಟ್ಟಿ ಗ್ರಾಮದ ಪ್ರಭು ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.


ಮಾಹಿತಿ ನೀಡಿದವರ ಮೇಲೆ ಹಲ್ಲೆ ಕಾರಿನ ಮೇಲೆ ದಾಳಿ ಹಿಂದೂ ರಕ್ಷಣಾ ಪಡೆಯವರು ಅಕ್ರಮ ದನಗಳ ಸಾಗಣೆ ಮಾಡುತ್ತಿದ್ದ ಕಂಟೇನರ್ ತಡೆದಿದ್ದಾರೆ ಎಂಬ ಮಾಹಿತಿ ರವಾನೆಯಾದ ಕೆಲ ಹೊತ್ತಿನಲ್ಲಿ ಸ್ಥಳಕ್ಕೆ ಕಾರಿನಲ್ಲಿ ಧಾವಿಸಿದ ಒಂದು ಗುಂಪು, ಹಿಂದೂ ರಾಷ್ಟ್ರ ರಕ್ಷಣಾ ಪಡೆಯವರು ಪ್ರಯಾಣಿಸುತ್ತಿದ್ದ ಕಾರಿನ ಮೇಲೆ ದಾಳಿ ನಡೆಸಿ ಜಖಂಗೊಳಿಸಿದ್ದಾರೆ. ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿದ್ದಾರೆ.


ಗಾಯಗೊಂಡ ಬೆಂಗಳೂರಿನ ಹಿಂದೂ ರಾಷ್ಟ್ರ ರಕ್ಷಣಾ ಪಡೆಯ ಸಿಎಸ್ ರಾಮಕೃಷ್ಣ, ಅಭಿಷೇಕ್, ಕಿರಣ್ ಕುಮಾರ್, ಪುಷ್ಪಲತಾ ಹಾಗು ಜಯಂತಿ ಗೌಡ ಸಿಮ್ಸ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರು ಆಸ್ಪತ್ರೆಯಲ್ಲಿ ನೀಡಿದ ಹೇಳಿಕೆಯ ಮೇಲೆ ಸೈಯದ್ ರೆಹಮಾನ್, ವಾಸಿಂಅಕ್ರಮ್,ಇರ್ಫಾನ್, ತಬ್ರೇಜ್ ಹಾಗೂ ಇತರೆ ಹತ್ತು ಜನರ ಗುಂಪಿನ ಮೇಲೆ ಪೂರ್ವ ಪೋಲಿಸ್ ಠಾಣೆಯ ಪಿಎಸ್‌ಐ ವೆಂಕಟೇಶ್ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

✅ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ. ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn

Related posts

ತಮಿಳುನಾಡು ರಾಜಕೀಯದ ಈ ಬಿಕ್ಕಟ್ಟಿನ ಕುರಿತು ಕಮಲ್ ಹಾಸನ್ ಪೋಸ್ಟ್

ನದಿಗಳ ಜೋಡಣೆ: ಲಾಭ, ನಷ್ಟಗಳು

ಬಿಪಿಎಲ್ ಪಡಿತರ ಚೀಟಿಗಳನ್ನು ರದ್ದಿಗೆ ಪ್ರತಿಭಟನೆ

Leave a Comment