- ಪುಸ್ತಕಗಳ ಜೋಡಣೆಗೆ ಅನುದಾನ ನೀಡಲು ಕಡತ ಮಂಡಿಸಲು ಸಚಿವ ಸೂಚನೆ
- ಎಚ್.ಕೆ.ಪಾಟೀಲರಿಂದ ಸಾಂಸ್ಕೃತಿಕ ಪ್ರವಾಸಿ ತಾಣ ಘೋಷಣೆಗಾಗಿ ಸ್ಥಳಕ್ಕೆ ಭೇಟಿ ಭರವಸೆ
- ಬಜೆಟ್‌ನಲ್ಲಿ 5 ಕೋಟಿ ರೂ. ಅನುದಾನ ಹಾಗೂ 5 ಎಕರೆ ನಿವೇಶನ ಘೋಷಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಮನವಿ
- ಹರಳಹಳ್ಳಿಯಲ್ಲಿ 5 ಎಕರೆ ನಿವೇಶನ ನೀಡಲು ಬೇಡಿಕೆ
- ಕಾವೇರಿ ನೀರಾವರಿ ನಿಗಮದಿಂದ ನೂತನ ಕಟ್ಟಡ ನಿರ್ಮಿಸಿಕೊಡಲು ಡಿಸಿಎಂಗೆ ಮನವಿ
- ಡಿಜಿಟಲೀಕರಣದ ಮೂಲಕ ಜ್ಞಾನ ಭಂಡಾರ ಉಳಿಸಲು ವಿಶೇಷ ಪ್ರಯತ್ನ

ಪಾಲನೆ ನ್ಯೂಸ್
ಬೆಂಗಳೂರು: ಮಂಡ್ಯದ ‘ಅಕ್ಷರ ಸಂತ’ ಶ್ರೀ ಅಂಕೇಗೌಡರ ಅಪರೂಪದ ಜ್ಞಾನ ಭಂಡಾರವನ್ನು ರಕ್ಷಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಅಂಕೇಗೌಡರ ‘ಪುಸ್ತಕ ಮನೆ’ಯಲ್ಲಿರುವ ಸುಮಾರು 25 ಲಕ್ಷಕ್ಕೂ ಅಧಿಕ ಪುಸ್ತಕಗಳನ್ನು ವ್ಯವಸ್ಥಿತವಾಗಿ ಜೋಡಿಸಿಡಲು ಅಗತ್ಯವಿರುವ ಪುಸ್ತಕದ ರ್ಯಾಕ್‌ಗಳ (Bookshelves) ಅಳವಡಿಕೆಗೆ ಅನುದಾನ ಮಂಜೂರು ಮಾಡುವ ಕುರಿತು ಕಡತ ಮಂಡಿಸುವಂತೆ ಅಧಿಕಾರಿಗಳಿಗೆ ಸಚಿವ ಶಿವರಾಜ್ ತಂಗಡಗಿ ಸೂಚಿಸಿದ್ದಾರೆ.
ಗುರುವಾರ ಶಾಸಕ ದಿನೇಶ್ ಗೂಳಿಗೌಡ ಅವರು ಸಚಿವ ಶಿವರಾಜ್ ತಂಗಡಗಿ ಅವರನ್ನು ಭೇಟಿ ಮಾಡಿ ಈ ಸಂಬಂಧ ಮನವಿ ಸಲ್ಲಿಸಿದರು. ಶಾಸಕರ ಮನವಿಗೆ ತಕ್ಷಣವೇ ಸ್ಪಂದಿಸಿದ ಸಚಿವರು, ಅಗತ್ಯ ಅನುದಾನ ಮಂಜೂರು ಮಾಡಲು ಕಡತ ಮಂಡಿಸುವಂತೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಾರ್ಯದರ್ಶಿಗೆ ಸೂಚನೆ ನೀಡಿದ್ದಾರೆ.
ಮನವಿಯಲ್ಲೇನಿತ್ತು?:
ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ಹರಳಹಳ್ಳಿಯ ಅಂಕೇಗೌಡರು ಕಳೆದ 40 ವರ್ಷಗಳಿಂದ 25 ಲಕ್ಷಕ್ಕೂ ಹೆಚ್ಚು ಪುಸ್ತಕಗಳನ್ನು ಸಂಗ್ರಹಿಸಿದ್ದಾರೆ. ಆದರೆ, ಪ್ರಸ್ತುತ ಈ ಪುಸ್ತಕಗಳನ್ನು ಜೋಡಿಸಿಡಲು ಸ್ಥಳಾವಕಾಶದ ಕೊರತೆ ಇರುವುದರಿಂದ ಪುಸ್ತಕಗಳನ್ನು ಒಂದರ ಮೇಲೊಂದು ರಾಶಿ ಹಾಕಲಾಗಿದೆ. ಇದರಿಂದ ಮೌಲ್ಯಯುತ ಪುಸ್ತಕಗಳು ಹಾಳಾಗುವ ಆತಂಕವಿದ್ದು, ಅವುಗಳನ್ನು ಸಂರಕ್ಷಿಸಲು ಸುಸಜ್ಜಿತ ಸ್ಟೀಲ್ ರ್ಯಾಕ್‌ಗಳನ್ನು ಅಳವಡಿಸಲು ಇಲಾಖೆಯಿಂದ ವಿಶೇಷ ಅನುದಾನ ನೀಡಬೇಕೆಂದು ಶಾಸಕರು ಕೋರಿದ್ದರು.

ಬಾಕ್ಸ್ 1
‘ಸಾಂಸ್ಕೃತಿಕ ಪ್ರವಾಸಿ ತಾಣ’ವಾಗಿ ಅಭಿವೃದ್ಧಿ ಮಾಡಲು ಎಚ್.ಕೆ. ಪಾಟೀಲ್‌ಗೆ ಮನವಿ
ಇದೇ ಸಂದರ್ಭದಲ್ಲಿ ಶಾಸಕ ದಿನೇಶ್ ಗೂಳಿಗೌಡ ಅವರು ಪ್ರವಾಸೋದ್ಯಮ ಸಚಿವ ಎಚ್.ಕೆ. ಪಾಟೀಲ್ ಅವರನ್ನು ಭೇಟಿ ಮಾಡಿ, ಅಂಕೇಗೌಡರ ಪುಸ್ತಕ ಮನೆಯನ್ನು ಅಧಿಕೃತವಾಗಿ ‘ಗ್ರಾಮೀಣ ಸಾಂಸ್ಕೃತಿಕ ಪ್ರವಾಸಿ ತಾಣ’ ಎಂದು ಘೋಷಿಸಲು ಮನವಿ ಮಾಡಿದರು. ರಾಹುಲ್ ಗಾಂಧಿ ಸೇರಿದಂತೆ ಅನೇಕ ಗಣ್ಯರು ಭೇಟಿ ನೀಡಿರುವ ಈ ಸ್ಥಳದಲ್ಲಿ ಸುಸಜ್ಜಿತ ವಸ್ತು ಸಂಗ್ರಹಾಲಯ ನಿರ್ಮಾಣ, ಪುಸ್ತಕಗಳ ಡಿಜಿಟಲೀಕರಣ ಮತ್ತು ಮೂಲಸೌಕರ್ಯ ಅಭಿವೃದ್ಧಿಗೆ ವಿಶೇಷ ಅನುದಾನ ನೀಡುವಂತೆ ಅವರು ಕೋರಿದರು. ಈ ಮನವಿಯನ್ನು ಪುರಸ್ಕರಿಸಿದ ಸಚಿವ ಎಚ್.ಕೆ. ಪಾಟೀಲ್ ಅವರು, ಶೀಘ್ರದಲ್ಲೇ ಸ್ಥಳಕ್ಕೆ ಖುದ್ದು ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.
ಬಾಕ್ಸ್ 2
ಬಜೆಟ್‌ನಲ್ಲಿ 5 ಕೋಟಿ ಅನುದಾನ,5 ಎಕರೆ ನಿವೇಶನಕ್ಕಾಗಿ ಸಿಎಂಗೆ ಮನವಿ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿರುವ ಶಾಸಕ ದಿನೇಶ್ ಗೂಳಿಗೌಡ ಅವರು, ಮುಂಬರುವ ರಾಜ್ಯ ಆಯವ್ಯಯದಲ್ಲಿ ಅಂಕೇಗೌಡರ ಪುಸ್ತಕ ಭಂಡಾರಕ್ಕೆ ಶಾಶ್ವತ ಪರಿಹಾರ ಘೋಷಿಸುವಂತೆ ಕೋರಿದ್ದಾರೆ. ಪಾಂಡವಪುರ ತಾಲೂಕಿನ ಹರಳಹಳ್ಳಿಯಲ್ಲಿ 5 ಎಕರೆ ಜಮೀನು ಮಂಜೂರು ಮಾಡುವುದು ಹಾಗೂ ಸುಸಜ್ಜಿತ ಗ್ರಂಥಾಲಯ ಸಂಕೀರ್ಣ ನಿರ್ಮಿಸಲು 5 ಕೋಟಿ ರೂ. ಅನುದಾನವನ್ನು ಬಜೆಟ್‌ನಲ್ಲಿ ಮೀಸಲಿಡುವಂತೆ ಅವರು ಪ್ರಮುಖವಾಗಿ ವಿನಂತಿಸಿದ್ದಾರೆ.
ಬಾಕ್ಸ್ 3
ಕಾವೇರಿ ನೀರಾವರಿ ನಿಗಮದಿಂದ ಕಟ್ಟಡ ನಿರ್ಮಾಣಕ್ಕೆ ಡಿಸಿಎಂಗೆ ಕೋರಿಕೆ
ಉಪ ಮುಖ್ಯಮಂತ್ರಿ ಹಾಗೂ ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಅವರಿಗೂ ಶಾಸಕರು ಮನವಿ ಸಲ್ಲಿಸಿದ್ದು, ಮಂಡ್ಯ ಜಿಲ್ಲೆಯ ಸಾಂಸ್ಕೃತಿಕ ಪರಂಪರೆಯ ರಕ್ಷಣೆಯ ಭಾಗವಾಗಿ ಕಾವೇರಿ ನೀರಾವರಿ ನಿಗಮದ ವತಿಯಿಂದ ಪುಸ್ತಕ ಮನೆಗೆ ನೂತನ ಕಟ್ಟಡ ನಿರ್ಮಿಸಿಕೊಡುವಂತೆ ಕೇಳಿಕೊಂಡಿದ್ದಾರೆ. ಜ್ಞಾನ ಭಂಡಾರದ ಡಿಜಿಟಲೀಕರಣ ಹಾಗೂ ಮೂಲಸೌಕರ್ಯ ಒದಗಿಸಲು ಸರ್ಕಾರ ಮುತುವರ್ಜಿ ವಹಿಸಬೇಕೆಂದು ಅವರು ಪತ್ರದಲ್ಲಿ ಮನವಿ ಮಾಡಿದ್ದಾರೆ.
ಸಿಎಂ-ಡಿಸಿಎಂಗೆ ಮಾಡಿದ ಮನವಿಯಲ್ಲೇನಿದೆ?
- ನಿವೇಶನ ಮಂಜೂರಾತಿ ಘೋಷಣೆ: ಈ ಪುಸ್ತಕ ಭಂಡಾರವನ್ನು ಉಳಿಸಿ ಬೆಳೆಸಲು, ಪಾಂಡವಪುರ ತಾಲೂಕಿನ ಹರಳಹಳ್ಳಿ ಗ್ರಾಮದಲ್ಲಿಯೇ (ಅವರ ಊರಿನಲ್ಲಿ) ಕಂದಾಯ ಇಲಾಖೆಯಿಂದ 5 ಎಕರೆ ಸರ್ಕಾರಿ ಜಮೀನು ಅಥವಾ ಸೂಕ್ತವಾದ ಸಿ.ಎ ನಿವೇಶನವನ್ನು ಮಂಜೂರು ಮಾಡುವುದಾಗಿ ಬಜೆಟ್‌ನಲ್ಲಿ ಘೋಷಿಸಬೇಕು.
- 5 ಕೋಟಿ ರೂ. ಅನುದಾನ ಮೀಸಲು: ಮಂಜೂರಾದ ಜಾಗದಲ್ಲಿ ಸುಸಜ್ಜಿತ ಗ್ರಂಥಾಲಯ, ಓದುಗರ ಕೊಠಡಿ ಮತ್ತು ವಸ್ತು ಸಂಗ್ರಹಾಲಯವನ್ನು ನಿರ್ಮಿಸಲು 5 ಕೋಟಿ ರೂ.ಗಳ ವಿಶೇಷ ಅನುದಾನವನ್ನು ಈ ಆಯವ್ಯಯದಲ್ಲಿ ಮೀಸಲಿಡಬೇಕು.
- ಪ್ರವಾಸಿ ತಾಣವಾಗಿ ಅಭಿವೃದ್ಧಿ: ಇಲ್ಲಿರುವ ಲಕ್ಷಾಂತರ ಪುಸ್ತಕಗಳನ್ನು ಮುಂದಿನ ಪೀಳಿಗೆಗೆ ಉಳಿಸಲು ‘ಡಿಜಿಟಲೀಕರಣ’ ವ್ಯವಸ್ಥೆಗೆ ನೆರವು ನೀಡುವುದರ ಜೊತೆಗೆ, ಈ ತಾಣವನ್ನು ಪ್ರವಾಸೋದ್ಯಮ ಇಲಾಖೆಯ ವ್ಯಾಪ್ತಿಗೆ ತಂದು ‘ಗ್ರಾಮೀಣ ಸಾಂಸ್ಕೃತಿಕ ಪ್ರವಾಸಿ ತಾಣ’ ಎಂದು ಘೋಷಿಸಬೇಕು.
✅ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn
