ಇಒ, ಪಿಡಿಒ ಸೇರಿ ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಉಪಲೋಕಾಯುಕ್ತ ಸೂಚನೆ
ಪಾಲನೆ ನ್ಯೂಸ್
ಮಂಡ್ಯ: ಇಂಡುವಾಳು ಗ್ರಾಮ ಪಂಚಾಯಿತಿಯಲ್ಲಿ ಅಕ್ರಮ ಇ-ಖಾತೆಗಳನ್ನು ಮಾಡಿರುವ ಹಿಂದಿನ ತಾಪಂ ಕಾರ್ಯನಿರ್ವಾಹಕ ಅಧಿಕಾರಿ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು (ಪಿಡಿಒ) ಮತ್ತು ತಪ್ಪೆಸಗಿರುವ ಇತರ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳುವಂತೆ ಮಂಡ್ಯ ಜಿಪಂ ಸಿಇಒ ಅವರಿಗೆ ಉಪ ಲೋಕಾಯುಕ್ತ ನ್ಯಾ. ಬಿ. ವೀರಪ್ಪ ಅವರು, ಆದೇಶಿಸಿದ್ದಾರೆ.
ಮಂಡ್ಯ ತಾಲ್ಲೂಕು ತಹಸಿಲ್ದಾರ್, ತಾಪಂ ಇಒ ಅವರ ವರದಿ ಪ್ರಕಾರ ಇಂಡುವಾಳು ಗ್ರಾಮ ಪಂಚಾಯಿತಿಯಲ್ಲಿ 2021 ರಿಂದ 2025ರವರೆಗೆ 1,881 ಅಕ್ರಮ ಇ-ಖಾತೆಗಳನ್ನು ಮಾಡಲಾಗಿದೆ ಎಂದು ತಿಳಿದು ಬಂದಿದೆ. ಈ ಸಂಬಂಧ ಕೂಡಲೇ ಕ್ರಮ ಕೈಗೊಂಡು ವರದಿ ನೀಡುವಂತೆ ತಿಳಿಸಿದ್ದಾರೆ.
ಡಿ.1 ರಂದು ತಪ್ಪಿತಸ್ಥ ಅಧಿಕಾರಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದರೂ ಇನ್ನೂ ಕ್ರಮ ತೆಗೆದುಕೊಳ್ಳದಿರುವುದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಉಪ ಲೋಕಾಯುಕ್ತರು, ಉಪ ತಹಸಿಲ್ದಾರ್ ಹಿಂದೆ ನೀಡಿದ್ದ ವರದಿ ಪ್ರಕಾರ 1,281 ಇ-ಖಾತಾಗಳಲ್ಲಿ 17 ಇ-ಖಾತಾಗಳು ಮಾತ್ರ ಕ್ರಮಬದ್ದವಾಗಿದ್ದು, 1,264 ಇ-ಖಾತಾಗಳು ಕಾನೂನು ಪ್ರಕಾರ ಕ್ರಮಬದ್ದವಾಗಿಲ್ಲ. ಹೀಗಿದ್ದರೂ ಈವರೆಗೂ ಕ್ರಮ ಕೈಗೊಂಡಿಲ್ಲ. ಈಗ ಒಟ್ಟಾರೆ 1,881 ಇ- ಖಾತಾಗಳು ಅಕ್ರಮ ಎಂಬುದು ತನಿಖೆಯಿಂದ ಗೊತ್ತಾಗಿದೆ ಎಂದು ಹೇಳಿದ್ದಾರೆ.
ಇಂಡುವಾಳು ಗ್ರಾಮ ಪಂಚಾಯಿತಿಯಲ್ಲಿ 1,281ರ ಇ-ಖಾತಾ ಕಡತಗಳು ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಆರಂಭವಾಗಿತ್ತು. ಇದರಲ್ಲಿ 495 ಕಡತಗಳು ಪತ್ತೆಯಾಗಿದ್ದು, ಇನ್ನೂ 786 ಕಡತಗಳು ಪತ್ತೆ ಯಾಗಬೇಕಿದ್ದು, ಏಳುಮಂದಿ ಅಧಿಕಾರಿಗಳಿಗೆ ನೋಟಿಸ್ ಜಾರಿಗೊಳಿಸಿ ಕಡತಗಳನ್ನು ಪಂಚಾಯಿತಿ ವಶಕ್ಕೆ ನೀಡಲು ನ. 20ರವರೆಗೆ ಗಡುವು ನೀಡಲಾಗಿತ್ತು.
ಗ್ರಾಮ ಪಂಚಾಯಿತಿ ಕಚೇರಿಯನ್ನು ಹಳೆಯ ಕಟ್ಟಡದಿಂದ ಹೊಸ ಕಟ್ಟಡಕ್ಕೆ ಸ್ಥಳಾಂತರ ಮಾಡುವ ಸಮಯದಲ್ಲಿ ಸಾವಿರಾರು ಕಡತಗಳು ಹಳೆಯ ಕಟ್ಟಡದಲ್ಲೇ ಉಳಿದುಕೊಂಡಿದ್ದವು ಎನ್ನಲಾಗುತ್ತಿದೆ.
ಉಪಲೋಕಾಯುಕ್ತರ ಆದೇಶದ ಮೇರೆಗೆ ತಹಸಿಲ್ದಾರ್, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ, ಭೂ ದಾಖಲೆಗಳ ಸಹಾಯಕ ನಿರ್ದೇಶಕರು ತನಿಖೆಗೆ ತೆರಳಿದ್ದ ಸಮಯದಲ್ಲಿ ಸಿಗದ ಕಡತಗಳು, ಕರ್ತವ್ಯ ಲೋಪವೆಸಗಿದ ಅಧಿಕಾರಿಗಳಿಗೆ ನೋಟಿಸ್ ಜಾರಿಗೊಳಿಸಿದ ಬೆನ್ನಲ್ಲೇ 495 ಕಡತಗಳು ಪತ್ತೆಯಾಗಿದ್ದು ಸಾರ್ವಜನಿಕವಾಗಿ ಸಾಕಷ್ಟು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ಉಪ ಲೋಕಾಯುಕ್ತ ಬಿ.ವೀರಪ್ಪ ಅವರು ಕಚೇರಿ ಹೊಸ ಕಟ್ಟಡಕ್ಕೆ ಸ್ಥಳಾಂತರಗೊಂಡ ಬಳಿಕವೇ ಭೇಟಿ ನೀಡಿ ದಾಖಲೆಗಳನ್ನು ಪರಿಶೀಲಿಸಿದ್ದರು. ಆ ಸಮಯದಲ್ಲೂ ಕಡತಗಳು ಕಚೇರಿಯಲ್ಲಿರಲಿಲ್ಲ.

ನಾಪತ್ತೆಯಾಗಿದ್ದ 1,281 ಕಡತಗಳ ಸತ್ಯಾಸತ್ಯತೆಯನ್ನು ಪರಿಶೀಲಿಸುವುದಕ್ಕೆ ತಂಡ ರಚನೆ ಮಾಡುವಂತೆ ತಾಪಂ ಕಾರ್ಯನಿರ್ವಹಣಾಧಿಕಾರಿ ಲೋಕೇಶ ಮೂರ್ತಿ ಅವರು ಜಿಪಂ ಸಿಇಒ ಕೆ.ಆರ್. ನಂದಿನಿ ಅವರಿಗೆ ಪತ್ರ ಬರೆದಿದ್ದರು.
ಅದರಂತೆ ಅಧಿಕಾರಿಗಳ ತಂಡವೊಂದನ್ನು ರಚಿಸಿ ನಾಪತ್ತೆಯಾಗಿದ್ದ ಕಡತಗಳಲ್ಲಿರುವ ದಾಖಲೆಗಳು ಮೂಲ ದಾಖಲೆಗಳಲ್ಲಿರುವಂತೆ ಸ್ವತ್ತಿನ ಮಾಲೀಕತ್ವ, ಪರಭಾರೆ ಹಾಗೂ ಹಕ್ಕುಗಳ ವರ್ಗಾವಣೆಗೆ ಸಂಬಂಧಿಸಿದ ಮಹತ್ವದ ದಾಖಲೆಗಳನ್ನು ತಾಳೆ ಮಾಡಿ ಪರಿಶೀಲಿಸಿದ್ದರು.
ಪಾಲನೆ.ಇನ್ ವಾಟ್ಸ್ ಆಪ್ ಗುಂಪಿಗೆ ಸೇರಿರಿ.


