ಮಂಡ್ಯ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಆರೋಪ | ಸಮಿತಿ ವರದಿ ಪಡೆದು ಖಾಸಗಿಯವರಿಗೆ ವಹಿಸಲು ಹುನ್ನಾರ
ಪಾಲನೆ ನ್ಯೂಸ್
ಮಂಡ್ಯ: ಮೈಷುಗರ್ ಸಕ್ಕರೆ ಕಾರ್ಖಾನೆಯಲ್ಲಿ ನಡೆದಿರುವ ಅಕ್ರಮ, ಅವ್ಯವಹಾರಗಳ ಕುರಿತಂತೆ ರಾಜ್ಯ ಸರ್ಕಾರ ತನಿಖಾ ಸಮಿತಿ ರಚನೆ ಮಾಡಿರುವುದರ ಹಿಂದೆ ಕಾರ್ಖಾನೆಯನ್ನು ಖಾಸಗೀಕರಣ ಮಾಡುವ ಹುನ್ನಾರ ಅಡಗಿದೆ ಎಂದು ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಪ್ರಧಾನ ಕಾರ್ಯದರ್ಶಿ ಸುನಂದಾ ಜಯರಾಂ ಆರೋಪಿಸಿದರು.
2025-26ನೇ ಸಾಲಿನಲ್ಲಿ ಕಬ್ಬು ನುರಿಸುವ ಕಾರ್ಯ ಆರಂಭದ ಸಮಯದಲ್ಲಿ ಸಕ್ಕರೆ ಆಯುಕ್ತರು, ಕೈಗಾರಿಕೆ ಇಲಾಖೆ, ಹಣಕಾಸು ಇಲಾಖೆಗಳು 2026-27ನೇ ಸಾಲಿಗೆ ಕಾರ್ಖಾನೆಯನ್ನು ಖಾಸಗಿ ವಲಯಕ್ಕೆ ಗುತ್ತಿಗೆ ನೀಡಬೇಕು ಎಂಬ ಷರತ್ತಿನೊಂದಿಗೆ 10 ಕೋಟಿ ರೂ. ಹಣವನ್ನು ಸಾಲ ರೂಪದಲ್ಲಿ ನೀಡಿದ್ದವು. ಅದರ ಹಿನ್ನೆಲೆಯಲ್ಲೇ ತನಿಖಾ ಸಮಿತಿಯನ್ನು ರಚಿಸಲಾಗಿದೆ ಎಂಬ ಅನುಮಾನವನ್ನು ಗುರುವಾರ ಸುದ್ದಿಗೋಷ್ಠಿಯಲ್ಲಿ ವ್ಯಕ್ತಪಡಿಸಿದರು.
ಕಾರ್ಖಾನೆ ಸಮರ್ಪಕವಾಗಿ ಕಬ್ಬು ಅರೆಯದಿರುವುದಕ್ಕೆ ಜನಪ್ರತಿನಿಧಿಗಳು ಹಾಗೂ ಕಾರ್ಖಾನೆಯ ಆಡಳಿತ ಮಂಡಳಿಮುಖ್ಯ ಕಾರಣವಾಗಿದೆ. ಅವರೆಲ್ಲ ರೂ ಹಣದ ಲಭಿಯಲ್ಲಿ ಮುಖ್ಯ ಪಾತ್ರ ವಹಿಸಿದ್ದಾರೆ. ರಾಜ್ಯ ಸಾರ್ವಜನಿಕ ಲೆಕ್ಕ ಪತ್ರ ಪರಿಶೋಧನಾ ಸಮಿತಿ ಸಭೆ ಮಾಡದೆ, ಲೆಕ್ಕ ಪರಿಶೀಲಿಸದೆ ಹಣ ಲೂಟಿಗೆ ಕಾರಣವಾಗಿದೆ. ಕಳೆದ 25 ವರ್ಷದಲ್ಲಿ ಸುಮಾರು 600 ಕೋಟಿ ರೂ. ವರೆಗೆ ಹಣ ಲೂಟಿಯಾಗಿದೆ. ನಷ್ಟಕ್ಕೆ ಕಾರಣರಾಗಿರುವವರೆಲ್ಲರೂ ಅಪರಾಧಿ ಸ್ಥಾನದಲ್ಲಿ ನಿಂತಿದ್ದಾರೆ ಎಂದು ಆಪಾದಿಸಿದರು.
ಮೈಷುಗರ್‌ಸ್ಥಿತಿ-ಗತಿಯನ್ನು ಅರಿ ಯುವುದಕ್ಕೆ ಸಚಿವರು ಹಾಗೂ ಜಿಲ್ಲೆಯ ಶಾಸಕರು ಒಮ್ಮೆಯೂ ಭೇಟಿ ನೀಡಲಿಲ್ಲ. ಸಮರ್ಪಕವಾಗಿ ಕಬ್ಬನ್ನು ಅರೆಯುವುದಕ್ಕೆ ಯಾವುದೇ ವ್ಯವಸ್ಥೆ ಮಾಡಲಿಲ್ಲ. ಇದೀಗ ರಾಜ್ಯ ಸರ್ಕಾರ ತನಿಖಾ ಸಮಿತಿಯನ್ನು ರಚಿಸಿ ಕಾರ್ಯೋನ್ಮು ಖರಾಗಿರುವುದು ಖಾಸಗೀಕರಣಕ್ಕೆ ಒಪ್ಪಿಸುವ ಗುಮಾನಿಗೆ ಎಡೆಮಾಡಿಕೊಟ್ಟಿದೆ ಎಂದು ದೂರಿದರು.
ಮೈಷುಗರ್‌ಕಬ್ಬು ಒಪ್ಪಿಗೆದಾರರ ಸಂಘದ ಅಧ್ಯಕ್ಷ ಎಸ್.ಕೃಷ್ಣ ಮಾತನಾಡಿ, ಕಾರ್ಖಾನೆ ಅಧ್ಯಕ್ಷರಾಗಿದ್ದ ಎಂ.ನಾಗರಾಜಪ್ಪನವರ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುವಂತೆ ಹೈಕೋರ್ಟ್ ಆದೇಶ ಹೊರಡಿಸಿದೆ. ಆದರೆ, ಇದುವರೆಗೂ ರಾಜ್ಯ ಸರ್ಕಾರ ಆಸ್ತಿ ಮುಟ್ಟುಗೋಲಿಗೆ ಆದೇಶ ಹೊರಡಿಸಿಲ್ಲ. ಜಿಲ್ಲಾಡಳಿತ ಅಥವಾ ಕಾರ್ಖಾನೆ ಆಡಳಿತ ಮಂಡಳಿಯಿಂದ ಆಸ್ತಿ ಮುಟ್ಟುಗೋಲಿಗೆ ಅವಕಾಶವಿಲ್ಲ. ನಾಗರಾಜಪ್ಪಗೆ ಸೇರಿದ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುವಲ್ಲಿ ರಾಜ್ಯ ಸರ್ಕಾರ, ಸಚಿವರು, ಜನಪ್ರತಿನಿಧಿಗಳಿಗೆ ಆಸಕ್ತಿ ಇರುವಂತೆ ಕಂಡುಬರುತ್ತಿಲ್ಲ ಎಂದು ಟೀಕಿಸಿದರು.
ಮೈಷುಗರ್‌ನಲ್ಲಿ ನಡೆದಿರುವ ಅಕ್ರಮಗಳ ಕುರಿತಂತೆ ಯಾವುದೇ ದಾಖಲೆಗಳನ್ನು ಆಡಳಿತ ಮಂಡಳಿ ಒದಗಿಸುತ್ತಿಲ್ಲ. ತನಿಖೆ ನಡೆಸುವುದಿದ್ದರೆ ಕಾರ್ಖಾನೆಯ ಅಧ್ಯಕ್ಷ ಸಿ.ಡಿ.ಗಂಗಾಧರ್ ಮತ್ತು ವ್ಯವಸ್ಥಾಪಕ ನಿರ್ದೇಶಕ ಮಂಗಲ್ ದಾಸ್ ಅವರನ್ನು ಕಂಪನಿಯಿಂದ ಹೊರಗಿಟ್ಟು ತನಿಖೆ ನಡೆಸಬೇಕು. ಇಲ್ಲವಾದಲ್ಲಿ ಸಾಕ್ಷ್ಯನಾಶಪಡಿಸುವುದಕ್ಕೆ ಎಡೆಮಾಡಿಕೊಟ್ಟಂತಾಗುತ್ತದೆ ಎಂದರು.
ಗೋಷ್ಠಿಯಲ್ಲಿ ಜಿ.ಬಿ. ಶಿವಕುಮಾರ್, ಕೆ.ಬೋರಯ್ಯ, ಎಚ್.ಸಿ.ಮಂಜುನಾಥ, ಎಸ್.ನಾರಾಯಣ್, ಎಂ. ಬಿ. ನಾಗಣ್ಣಗೌಡ ಇದ್ದರು.
ಪಾಲನೆ.ಇನ್ ವಾಟ್ಸ್ ಆಪ್ ಗುಂಪಿಗೆ ಸೇರಿರಿ.


