NEWS

ಜಿಲ್ಲೆಯಲ್ಲಿ 9 ಗ್ರಾಮಗಳನ್ನು ತಂಬಾಕು ಮುಕ್ತ ಗ್ರಾಮಗಳಾಗಿ ಘೋಷಣೆ: ಡಾ. ಕುಮಾರ

ಹತ್ತು ಸಾವಿರ ಹೆಚ್ಚಿನ ವಿದ್ಯಾರ್ಥಿಗಳಿಂದ  ಮಾದಕ ವಸ್ತುಗಳ ದುಷ್ಪರಿಣಾಮಗಳ ಕುರಿತಾಗಿ ಪತ್ರ ಅಭಿಯಾನ

ಪಾಲನೆ ನ್ಯೂಸ್

ಮಂಡ್ಯ: ಜಿಲ್ಲೆಯಲ್ಲಿ 9 ಗ್ರಾಮಗಳನ್ನು ತಂಬಾಕು ಮುಕ್ತ ಗ್ರಾಮಗಳಾಗಿ ಘೋಷಣೆ ಮಾಡಲಾಗಿದ್ದು ಕಳೆದ ಸಭೆಯಲ್ಲಿ ಸೂಚಿಸಿದಂತೆ ಹತ್ತು ಸಾವಿರಕ್ಕೂ ಹೆಚ್ಚಿನ ಶಾಲಾ ಕಾಲೇಜು ವಿದ್ಯಾರ್ಥಿಗಳಿಂದ ಮಾದಕ ವಸ್ತುಗಳ ದುಷ್ಪರಿಣಾಮಗಳ ಕುರಿತು ಪತ್ರ ಅಭಿಯಾನ ನಡೆಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ. ಕುಮಾರ ಅವರು ಹೇಳಿದರು.

ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಆಯೋಜಿಸಿದ್ದ ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಸಮಿತಿ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು ಮಕ್ಕಳಿಂದ ಅವರ ಪೋಷಕರಿಗೆ ಮಾದಕ ವಸ್ತುಗಳ ಸೇವನೆಯ ದುಷ್ಪರಿಣಾಮಗಳ ಕುರಿತು ಪತ್ರ ಬರೆಯುವ ಮೂಲಕ ಜಾಗೃತಿ ಮೂಡಿಸಿದರೆ ಪೋಷಕರು ಪರಿವರ್ತನೆಗೊಳ್ಳುವ ಸಾಧ್ಯತೆ ಇರುತ್ತದೆ ಜೊತೆಗೆ ಮಕ್ಕಳಿಗೂ ಸಹ ಮಾದಕ ವಸ್ತುಗಳನ್ನು ಸೇವನೆ ಮಾಡಬಾರದು ಎಂಬ ಅರಿವು ಮೂಡುತ್ತದೆ ಎಂದು ಹೇಳಿದರು.

ತುಂಬಾಕು, ಮಧ್ಯಪಾನ, ಧೂಮಪಾನ ಮತ್ತು ಮಾದಕ ವಸ್ತುಗಳ ದುಷ್ಪರಿಣಾಮಗಳ ಕುರಿತು ಜಿಂಗಲ್ಸ್ ಸಿದ್ಧಪಡಿಸಿ ನಗರ ಸಭೆ ಹಾಗೂ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸ್ವಚ್ಚತಾ ವಾಹನಗಳ ಮೂಲಕ ಅರಿವು ಮೂಡಿಸಿ ಎಂದು ಸೂಚಿಸಿದರು.

ಶಾಲಾ ವ್ಯಾಪ್ತಿಯಲ್ಲಿ ಮಾದಕ ವಸ್ತುಗಳ ಕುರಿತು ನಿಗಾ ವಹಿಸಲು ಶಿಕ್ಷಕರಿಗೆ ಜವಾಬ್ದಾರಿ ನೀಡಿ ಶಾಲೆಗಳ ಸುತ್ತಲಿನ 100 ಮೀಟರ್ ವ್ಯಾಪ್ತಿಯಲ್ಲಿ ತುಂಬಾಕು ಅಥವಾ ಯಾವುದೇ ಮಾದಕ ವಸ್ತುಗಳನ್ನು ಮಾರಾಟ ಮಾಡುವಂತಿಲ್ಲ. ಆದರೆ ಕೆಲವು ಕಡೆ ಬೇರೆ ಬೇರೆ ಅಂಗಡಿಗಳ ಮೂಲಕ ಮಾದಕ ವಸ್ತುಗಳ ಮಾರಾಟವಾಗುವ ಸಾಧ್ಯತೆ ಇರುತ್ತದೆ ಹಾಗಾಗಿ ಶಾಲೆಯ ಸುತ್ತಲಿನಲ್ಲಿ ಯಾರು ಮಾದಕ ವಸ್ತುಗಳ ಮಾರಾಟ ಮಾಡುತ್ತಿದ್ದಾರೆ ಎಂಬುದನ್ನು ಗುರುತಿಸಿ ಸಂಬಂಧಪಟ್ಟವರಿಗೆ ತಿಳಿಸುವ ಜವಾಬ್ದಾರಿಯನ್ನು ಶಾಲಾ ಶಿಕ್ಷಕರಿಗೆ ವಹಿಸಿ ಎಂದು ಹೇಳಿದರು.

ಅನೇಕ ಸಂದರ್ಭಗಳಲ್ಲಿ ಜನರು ಕಬ್ಬಿನ ಗದ್ದೆ ಹಾಗೂ ಅರಣ್ಯ ಇಲಾಖೆಯ ವ್ಯಾಪ್ತಿಯ ಜಾಗದಲ್ಲಿ ಗಾಂಜಾ ಬೆಳೆಯನ್ನು ಬೆಳೆಸಿ ಮಾರಾಟ ಮಾಡುತ್ತಿದ್ದಾರೆ. ಅಂತಹವರನ್ನು ಗುರುತಿಸಿ ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಜಾರಿಗೊಳಿಸಿ. ಮಾದಕ ವಸ್ತುಗಳು ಸಮಾಜಕ್ಕೆ ಮಾರಕ ಹಾಗಾಗಿ ಮಾದಕ ವಸ್ತುಗಳ ದುಷ್ಪರಿಣಾಮಗಳ ಕುರಿತು ಸಾರ್ವಜನಿಕರಿಗೆ ಹೆಚ್ಚಿನ ಅರಿವು ಮೂಡಿಸಿ ಎಂದು ತಿಳಿಸಿದರು.

ನಗರ ಸಭೆ ವ್ಯಾಪ್ತಿಯಲ್ಲಿ ಅಕ್ರಮವಾಗಿ ತುಂಬಾಕು ಉತ್ಪನ್ನಗಳನ್ನು ಮಾರಾಟ ಮಾಡಿದರೆ ಸದರಿ ಅಂಗಡಿಯ ಮಾಲೀಕರ ಮಾರಾಟ ಪರವಾನಿಗೆಯನ್ನು (ಟ್ರೇಡ್ ಲೈಸನ್ಸ್) ರದ್ದುಗೊಳಿಸಿ. ತಂಬಾಕು ಸೇವನೆಯ ದುಷ್ಪರಿಣಾಮಗಳ ಪೋಸ್ಟರ್ ಗಳನ್ನು ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ, ಪಾರ್ಕ್ ಮತ್ತು ಜನ ಸಂದಣಿ ಇರುವ ಕಡೆ ಅಂಟಿಸಿ ಅರಿವು ಮೂಡಿಸಿ, ಇಂಜಿನಿಯರಿಂಗ್, ಮೆಡಿಕಲ್ ಮತ್ತು ಪದವಿ ಕಾಲೇಜಿನ ವಿದ್ಯಾರ್ಥಿಗಳಿಗೆ ಮಾದಕ ವಸ್ತುಗಳ ಸೇವನೆ ಪರಿಣಾಮಗಳ ಕುರಿತು ಜಾಗೃತಿ ಮೂಡಿಸಿ ಎಂದು ಹೇಳಿದರು.

ಮಾದಕ ವಸ್ತುಗಳ ಸೇವನೆಗೆ ಪ್ರಚೋದನೆ ನೀಡುವ ಸಿನಿಮಾ ಪೋಸ್ಟರ್ ಗಳನ್ನು ಬದಲಾಯಿಸಿ ಜಿಲ್ಲೆಯ ಚಿತ್ರಮಂದಿರಗಳಲ್ಲಿ ಬಿಡುಗಡೆಗೊಳ್ಳುವ ಹೊಸ ಚಲನಚಿತ್ರ ಪೋಸ್ಟರ್ ಗಳನ್ನು ಪರಿಶೀಲಿಸಿ. ಮಾದಕ ವಸ್ತುಗಳ ಸೇವನೆಗೆ ಪ್ರಚೋದನೆ ನೀಡುವ ಚಲನಚಿತ್ರಗಳ ಪೋಸ್ಟರ್ ಅನ್ನು ಬದಲಾಯಿಸುವಂತೆ ಚಿತ್ರಮಂದಿರದ ಮಾಲೀಕರಿಗೆ ಸೂಚಿಸಿ. ಸಾರ್ವಜನಿಕ ಸ್ಥಳಗಳಲ್ಲಿ ಮಾದಕ ವಸ್ತುಗಳ ಬಳಕೆಗೆ ಉತ್ತೇಜನ ನೀಡುವಂತಹ ಪೋಸ್ಟರ್ ಗಳನ್ನು ಅಳವಡಿಸುವುದು ಕಾನೂನು ಬಾಹಿರ ಎಂದು ಹೇಳಿದರು.

ಏಪ್ರಿಲ್ 2025 ರಿಂದ ಡಿಸೆಂಬರ್ 2025 ರ ವರೆಗೆ ಸಾರ್ವಜನಿಕ ಸ್ಥಳಗಳಲ್ಲಿ ಮಾದಕ ವಸ್ತುಗಳ ಸೇವನೆ ಅಕ್ರಮ ಮಾರಾಟ ಮಾಡುವುದನ್ನು 601 ಪ್ರಕರಣಗಳನ್ನು ದಾಖಲಿಸುವ ಮೂಲಕ ರೂ. 64430 ದಂಡವನ್ನು ವಸೂಲಿ ಮಾಡಲಾಗಿದೆ ಎಂದು ಹೇಳಿದರು.

ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ ಮೋಹನ್, ಅಬಕಾರಿ ಉಪ ಆಯುಕ್ತರಾದ ಡಾ. ಆರ್. ನಾಗಶಯನ, ಜಿಲ್ಲಾ ತುಂಬಾಕು ನಿಯಂತ್ರಣ ಕೋಶಾಧಿಕಾರಿ ತಿಮ್ಮರಾಜು, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಲೋಕೇಶ್, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ಕುಮಾರ, ಕುಟುಂಬ ಕಲ್ಯಾಣಾಧಿಕಾರಿ ಡಾ. ಬೆಟ್ಟಸ್ವಾಮಿ, ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ. ಎಮ್. ಎನ್. ಆಶಲಾತ, ಆರ್. ಸಿ. ಎಚ್ ಅಧಿಕಾರಿ ಡಾ.ಕೆ.ಪಿ ಅಶ್ವಥ್, ಕುಷ್ಠರೋಗ ನಿರ್ಮೂಲನಾಧಿಕಾರಿ ಸೋಮಶೇಖರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಪಾಲನೆ.ಇನ್‌ ವಾಟ್ಸ್‌ ಆಪ್‌ ಗುಂಪಿಗೆ ಸೇರಿರಿ.

Related posts

ಅನುದಾನಿತ ಶಾಲಾ ಕಾಲೇಜುಗಳ ನೌಕರರಿಂದ ಬೆಳಗಾವಿ ಚಲೋ

ಪ್ಲೇಆಫ್ ಹಂತಕ್ಕೆ ಆರ್‌ಸಿಬಿ ಪ್ರವೇಶ ಮಾಡಲಿದೆ

ಗ್ರಾಮ ಪಂಚಾಯಿತಿಯ ಆಡಳಿತಾಧಿಕಾರಿಗಳಿಗಾಗಿ ತರಬೇತಿ ಕಾರ್ಯಗಾರ

Leave a Comment