ಪಾಲನೆ ನ್ಯೂಸ್
ವಾಷಿಂಗ್ಟನ್: ಇರಾನ್‌ನಲ್ಲಿ ಅನಿಶ್ಚಿತತೆ ರೂಪುಗೊಂಡಿರುವ ಬೆನ್ನಲ್ಲೇ ಇರಾನ್ ಜೊತೆ ವ್ಯವಹಾರ ನಡೆಸುವ ದೇಶಗಳ ವಿರುದ್ಧ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೋಮವಾರ ವ್ಯಾಪಕ ವ್ಯಾಪಾರ ಎಚ್ಚರಿಕೆಯನ್ನು ಘೋಷಿಸಿದ್ದು, ಅಂತಹ ರಾಷ್ಟ್ರಗಳ ಮೇಲೆ ಶೇ. 25ರಷ್ಟು ದಂಡ ರೂಪದ ಹೊಸ ತೆರಿಗೆಗಳನ್ನು ವಿಧಿಸಲಾಗುವುದು ಎಂದು ಹೇಳಿದ್ದಾರೆ.
ವರದಿಯ ಪ್ರಕಾರ, ಚೀನಾ, ಬ್ರೆಜಿಲ್, ಟರ್ಕಿ ಮತ್ತು ರಷ್ಯಾ, ಇರಾನ್ ಜೊತೆ ವ್ಯವಹಾರ ಸಂಬಂಧ ಹೊಂದಿರುವ ಆರ್ಥಿಕತೆಗಳಾಗಿವೆ.
ಏನಾಗುತ್ತಿದೆ?
ಪ್ರತಿಭಟನಾಕಾರರ ಹತ್ಯೆಯ ಕುರಿತು ಮಿಲಿಟರಿ ಕ್ರಮದ ಬೆದರಿಕೆಗಳು ಸೇರಿದಂತೆ ಇರಾನ್ ನಾಯಕತ್ವದ ಮೇಲೆ ಒತ್ತಡವನ್ನು ತೀವ್ರಗೊಳಿಸುತ್ತಾ, ಅಮೆರಿಕ, ಇರಾನ್ ಅಧಿಕಾರಿಗಳನ್ನು ಭೇಟಿ ಮಾಡಲಿದ್ದು, ಇರಾನ್‌ನ ವಿರೋಧ ಪಕ್ಷಗಳೊಂದಿಗೆ ಸಂಪರ್ಕದಲ್ಲಿದೆ ಎಂದು ಟ್ರಂಪ್ ಭಾನುವಾರ ಹೇಳಿದ್ದಾರೆ.
ವೈಮಾನಿಕ ದಾಳಿ ನಡೆಸುವುದು ಆಯ್ಕೆಯಾಗಿದ್ದು, ರಾಜತಾಂತ್ರಿಕತೆಯು ಆಡಳಿತದ ಆದ್ಯತೆಯಾಗಿ ಉಳಿದಿದೆ. ಟೆಹ್ರಾನ್‌ನಿಂದ ಅಮೆರಿಕ ಮಿಶ್ರ ಪ್ರತಿಕ್ರಿಯೆಗಳನ್ನು ಪಡೆಯುತ್ತಿದೆ ಎಂದು ಎಂದು ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಕ್ಯಾರೋಲಿನ್ ಲೀವಿಟ್ ಹೇಳಿದ್ದಾರೆ.
‘ಇರಾನ್ ಆಡಳಿತದಿಂದ ಸಾರ್ವಜನಿಕವಾಗಿ ಕೇಳಿಬರುತ್ತಿರುವ ಸಂದೇಶಗಳು ಆಡಳಿತವು ಖಾಸಗಿಯಾಗಿ ಸ್ವೀಕರಿಸುತ್ತಿರುವ ಸಂದೇಶಗಳಿಗಿಂತ ಸಾಕಷ್ಟು ಭಿನ್ನವಾಗಿದೆ, ಅಧ್ಯಕ್ಷರು ಆ ಸಂದೇಶಗಳ ಬಗ್ಗೆ ಪರಾಮರ್ಶಿಸುವಲ್ಲಿ ನಿರತರಾಗಿದ್ದಾರೆ ಎಂದು ನಾನು ಭಾವಿಸುತ್ತೇನೆ” ಎಂಬುದಾಗಿಯೂ ಅವರು ತಿಳಿಸಿದ್ದಾರೆ.

ಪ್ರಾದೇಶಿಕ ಪ್ರಭಾವ ದುರ್ಬಲಗೊಂಡಿರುವ ಇರಾನ್‌ನ ನಾಯಕರು ತೀವ್ರ ಆರ್ಥಿಕ ಸಂಕಷ್ಟದಿಂದ ಪ್ರಾರಂಭವಾದ ವ್ಯಾಪಕ ಪ್ರತಿಭಟನೆಗಳನ್ನು ಎದುರಿಸುತ್ತಿದ್ದಾರೆ.

