ಡಿಸೆಂಬರ್ 17ರಂದು ಬೃಹತ್ ಧರಣಿ ಸತ್ಯಾಗ್ರಹ
ಪಾಲನೆ ನ್ಯೂಸ್

ಮಂಡ್ಯ: ಸರ್ಕಾರ ಕಳೆದ ಚುನಾವಣಾ ಸಮಯದಲ್ಲಿ ತನ್ನ ಪ್ರಣಾಳಿಕೆಯಲ್ಲಿ ಮಾತು ಕೊಟ್ಟಂತೆ ಅನುದಾನಿತ ಶಾಲಾ ಕಾಲೇಜುಗಳ ನೌಕರರಿಗೆ ಹಳೆಯ ಪಿಂಚಣಿ ಯೋಜನೆ ಮರುಜಾರಿ,ಸೇರಿದಂತೆ ಅನೇಕ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ,ಇದೇ ಡಿಸೆಂಬರ್ 17 ರಂದು ಬೆಳಗಾವಿಯಲ್ಲಿ ಅಖಿಲ ಕರ್ನಾಟಕ ಅನುದಾನಿತ ಶಾಲಾ ಕಾಲೇಜುಗಳ ನೌಕರರ ಸಂಘ ಬೃಹತ್ ಹೋರಾಟ ನಡೆಸಲಿದೆ ಎಂದು ಕೇಂದ್ರ ಸಂಘದ ರಾಜ್ಯಉಪಾಧ್ಯಕ್ಷರಾದ ಶಿವಣ್ಣಮಂಗಲ ತಿಳಿಸಿದ್ದಾರೆ.
2006ರ ನಂತರ ಅನುದಾನಕ್ಕೆ ಒಳಪಟ್ಟ ನೌಕರರಿಗೆ ಯಾವುದೇ ಪಿಂಚಣಿ ವ್ಯವಸ್ಥೆ ಇಲ್ಲ. ಈಗಾಗಲೇ ಸುಮಾರು 4000 ಅನುದಾನಿತ ನೌಕರರು ಯಾವುದೇ ಪಿಂಚಣಿ ಇಲ್ಲದೆ ನಿವೃತ್ತರಾಗಿ ಕಷ್ಟದ ಜೀವನ ನಡೆಸುತ್ತಿದ್ದಾರೆ. ಸರ್ಕಾರ ಅನುದಾನಿತ ನೌಕರರ ಹಿಂದಿನ ಸೇವೆಯನ್ನು ಪರಿಗಣಿಸಿ ಯಾವುದೇ ಹಿಂಬಾಕಿ ಇಲ್ಲದೆ, ಅವರನ್ನು ಸಹ ಹಳೆಯ ಪಿಂಚಣಿಗೆ ಪರಿಗಣಿಸಬೇಕು ಎಂದು 2022ರಲ್ಲಿ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಅನುದಾನಿತ ನೌಕರರು ಸುಮಾರು 141 ದಿನಗಳ ಕಾಲ ಸತತ ಹೋರಾಟ ಮಾಡಿದ ಸಂದರ್ಭದಲ್ಲಿ ಪ್ರಸ್ತುತ ಸರ್ಕಾರದ ಜನಪ್ರತಿನಿಧಿಗಳು ತಮ್ಮ ಸರ್ಕಾರ ಬಂದಾಗ ಹಳೆಯ ಪಿಂಚಣಿ ವ್ಯವಸ್ಥೆಯನ್ನು ಅನುದಾನಿತ ನೌಕರರಿಗೂ ಜಾರಿ ಮಾಡುವುದಾಗಿ ಭರವಸೆ ನೀಡಿ, ಪ್ರಣಾಳಿಕೆಯಲ್ಲಿ ಹಾಕಲಾಗಿತ್ತು. ಆದರೆ ಸರ್ಕಾರ ಬಂದು ಸುಮಾರು ಎರಡುವರೆ ವರ್ಷಗಳು ಮುಗಿದಿದ್ದರೂ ಇದುವರೆಗೂ ಇದರ ಬಗ್ಗೆ ಗಮನ ಹರಿಸದಿರುವುದರಿಂದ, ಸರ್ಕಾರದ ಗಮನ ಸೆಳೆಯಲು ಅನಿವಾರ್ಯವಾಗಿ ಈ ಹೋರಾಟ ಮಾಡಬೇಕಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.
ಇದರ ಜೊತೆಗೆ ಜ್ಯೋತಿ ಸಂಜೀವಿನಿ ಆರೋಗ್ಯ ವಿಮೆ, ಖಾಲಿ ಇರುವ ಹುದ್ದೆಗಳ ಶೀಘ್ರ ಭರ್ತಿ, ಅಲ್ಲಿಯ ತನಕ ಅತಿಥಿ ಶಿಕ್ಷಕ ಹಾಗೂ ಉಪನ್ಯಾಸಕರ ನೇಮಕಾತಿ, ಇನ್ನಿತರ ಹತ್ತಾರು ಸಮಸ್ಯೆಗಳ ಪರಿಹಾರಕ್ಕೆ ಒತ್ತಾಯಿಸಿ ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಇದೇ ಡಿಸೆಂಬರ್ 17ರಂದು ಬೃಹತ್ ಹೋರಾಟ ರೂಪಿಸಲಾಗಿದೆ ಎಂದು ತಿಳಿಸಿದ್ದಾರೆ.
ಅನುದಾನಿತ ನೌಕರರ ಮತ್ತು ಸಂಸ್ಥೆಗಳ ಉಳಿವಿಗಾಗಿ ಈ ಹೋರಾಟ ಅನಿವಾರ್ಯವಾಗಿದ್ದು ಮಂಡ್ಯ ಜಿಲ್ಲೆಯ ಎಲ್ಲಾ ತಾಲೂಕುಗಳ ಅನುದಾನಿತ ಶಾಲಾ ಕಾಲೇಜುಗಳ ನೌಕರರು ಸಂಘದ ಪದಾಧಿಕಾರಿಗಳು ಈ ಹೋರಾಟದಲ್ಲಿ ಭಾಗವಹಿಸಬೇಕೆಂದು ಸಂಘದ ಮಂಡ್ಯ ಜಿಲ್ಲಾಧ್ಯಕ್ಷರಾದ ಶಿವಲಿಂಗೇಗೌಡ ಹಾಗೂ ಪ್ರಧಾನ ಕಾರ್ಯದರ್ಶಿ ಸತೀಶ್ ಬಾಬು ವಿನಂತಿಸಿದ್ದಾರೆ.
