NEWS

ಡಿ.29ರಂದು ಯಾಚೇನಹಳ್ಳಿಯಲ್ಲಿ ‘ವಿಶ್ವಮಾನವ ಧರ್ಮ’ ಮೊದಲ ಮಹಾಧಿವೇಶನ

ಕುವೆಂಪು ಅವರ ಪಂಚತತ್ವಗಳೇ ವಿಶ್ವಮಾನವ ಧರ್ಮ: ಶ್ರೀ ನಾದಾನಂದನಾಥ ಸ್ವಾಮೀಜಿ

ಕುವೆಂಪು ಕೇವಲ ವಿಚಾರವಂತರಲ್ಲ, ಅವರೊಬ್ಬ ಮಹಾತ್ಮ: ಕೆ. ಮಾಯಿಗೌಡ

ಪಾಲನೆ ನ್ಯೂಸ್‌

ಮಂಡ್ಯ: ಬೆಂಗಳೂರಿನ ʻವಿಶ್ವಮಾನವ ಧರ್ಮ ಜಾಗೃತಿ ವೇದಿಕೆʼಯ ವತಿಯಿಂದ ಡಿ.29ರಂದು ಕುವೆಂಪು ಜನ್ಮದಿನದಂದು ‘ವಿಶ್ವಮಾನವ ಧರ್ಮ ಮೊದಲ ಮಹಾಅಧಿವೇಶನ’ ವನ್ನು ಮೈಸೂರು ಜಿಲ್ಲೆಯ ಟಿ.ನರಸೀಪುರ ತಾಲೂಕಿನ ಯಾಚೇನಹಳ್ಳಿಯ ಶ್ರೀರಾಮಕೃಷ್ಣ ಸೇವಾ ಕೇಂದ್ರ ಟ್ರಸ್ಟ್‌ನ ಆವರಣದಲ್ಲಿ ಆಯೋಜಿಸಲಾಗಿದೆ ಎಂದು ಟ್ರಸ್ಟ್‌ನ ವ್ಯವಸ್ಥಾಪಕ ಟ್ರಸ್ಟಿ ಶ್ರೀ ನಾದಾನಂದನಾಥ ಸ್ವಾಮೀಜಿಯವರು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಗಳೂರಿನ ವೇದಿಕೆಯ ವತಿಯಿಂದ ಕುವೆಂಪುರವರ ಜನ್ಮದಿನದ ಪ್ರಯುಕ್ತ ‘ವಿಶ್ವಮಾನವ ಧರ್ಮ ಮೊದಲ ಮಹಾಅಧಿವೇಶನ’ವನ್ನು ನಡೆಸಲಾಗುತ್ತಿದೆ. ಹಲವು ವಿಚಾರವಂತರ ನೇತೃತ್ವದಲ್ಲಿ ಕುವೆಂಪು ತಾತ್ವಿಕ ಆಶಯಗಳ ಪ್ರಚಾರದ ಮೂಲಕ ಜಾಗೃತಿ ಮೂಡಿಸಲಾಗುವುದು ಎಂದರು.

ರಾಜ್ಯದ ಎಲ್ಲ ಸಮುದಾಯದ ಪ್ರಗತಿಪರ ಸಂಘಟನೆಗಳು, ವಿಚಾರವಂತರು, ಕುವೆಂಪು ಅನುಯಾಯಿಗಳು, ನಾಗರಿಕರನ್ನೊಳಗೊಂಡ ಸ್ವಾಗತ ಸಮಿತಿ ರಚಿಸಿ ಮಹಾಅಧಿವೇಶನಕ್ಕೆ ಸಿದ್ಧತೆ ನಡೆಯುತ್ತಿದೆ. ನಾಡಿನ ಎಲ್ಲ ಜನರು ಮಹಾಅಧಿವೇಶನದಲ್ಲಿ ಭಾಗವಹಿಸಬೇಕು. ಈ ನಿಟ್ಟಿನಲ್ಲಿ ಆನ್‌ಲೈನ್ ನೋಂದಣಿ ಪ್ರಕ್ರಿಯೆಯು ಆರಂಭಗೊಂಡಿದೆ ಎಂದು ಹೇಳಿದರು.

ಬುದ್ಧ, ಬಸವ, ಅಂಬೇಡ್ಕರ್ ಆಶಯಗಳನ್ನೊಳಗೊಂಡ ಕುವೆಂಪು ಅವರ ಪಂಚತತ್ವಗಳೇ ವಿಶ್ವಮಾನವ ಧರ್ಮವಾಗಿದೆ. ಕಳೆದ ಸೆಪ್ಟೆಂಬರ್ ಮಾಹೆಯಲ್ಲಿ ನಡೆದ ಸಾಮಾಜಿಕ ಸಮೀಕ್ಷೆಯಲ್ಲಿ ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ ಸೇರಿದಂತೆ 500ಕ್ಕೂ ಹೆಚ್ಚು ಜನ ಧರ್ಮ ಕಾಲಂನಲ್ಲಿ ʻವಿಶ್ವಮಾನವ ಧರ್ಮʼ ಎಂದು ನಮೂದಿಸಿದ್ದಾರೆ ಎಂದು ನುಡಿದರು.

ವಿಚಾರವಾದಿ ಕೆ.ಮಾಯಿಗೌಡ ಅವರು ಮಹಾಕವಿ ಕುವೆಂಪು ಅವರ ಜತೆಗಿನ 15 ವರ್ಷದ ಒಡನಾಟವನ್ನು ಸ್ಮರಿಸಿಕೊಂಡು, ಕುವೆಂಪು ಕೇವಲ ಕವಿಯಲ್ಲ, ವಿಚಾರವಂತರಲ್ಲ, ನಾಟಕಕಾರಲ್ಲ, ಸಾಹಿತಿಯಲ್ಲ, ಅವರೊಬ್ಬ ಮಹಾತ್ಮ ಎಂದು ಸ್ಮರಿಸಿದರು. 1973 ರಲ್ಲಿ ಮಂಡ್ಯದಲ್ಲಿ ಕುವೆಂಪು ಪ್ರೇರಿತ ಮಂತ್ರ ಮಾಂಗಲ್ಯ ನಡೆಯಿತು. ನಾನೂ ಭಾಗವಹಿಸಿದ್ದೆ. ಅಂದಿನಿಂದ ಜಿಲ್ಲೆಯ ಜನರು ಕುವೆಂಪು ಸಾರಿದ ವಿಶ್ವಮಾನವ ಸಂದೇಶವನ್ನು ಅರ್ಥಮಾಡಿಕೊಂಡು ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಡೆಯುತ್ತಿದ್ದಾರೆ. ಮುಂದೆಯೂ ಜನರ ನೆಮ್ಮದಿ, ಶಾಂತಿ, ಸಹಬಾಳ್ವೆ ಬದುಕಿಗಾಗಿ ಅವರ ಮಾರ್ಗದಲ್ಲಿ ಸಾಗಬೇಕಿದೆ ಎಂದು ತಿಳಿಸಿದರು.

ನನಗೀಗ 87 ವರ್ಷ. ಅಪಘಾತದಿಂದ ಕಾಲು ಮುರಿದಿದ್ದು ನಡೆಯಲೂ ಕಷ್ಟವಾಗಿದೆ. ಆದರೂ ಕುವೆಂಪು ಸ್ಮರಿಸುವ, ಅವರ ವಿಚಾರಧಾರೆಯನ್ನು ಅಪ್ಪಿಕೊಳ್ಳುವ ಕೆಲಸ ನಡೆಯುತ್ತಿದೆ ಎಂದು ತಿಳಿದು ನಾನು ಮನೆಯಿಂದ ಹೊರ ಬಂದಿದ್ದೇನೆ. ಅವರು ಸರ್ವ ಜನರ ಚೈತನ್ಯ ಎಂದು ಬಣ್ಣಿಸಿದರು.

ಪತ್ರಕರ್ತ ಚಂದ್ರಶೇಖರ ದ.ಕೋ.ಹಳ್ಳಿ ಮಾತನಾಡಿ, ಯಾಚೇನಹಳ್ಳಿಯ ಶ್ರೀರಾಮಕೃಷ್ಣ ಸೇವಾ ಕೇಂದ್ರದಲ್ಲಿ ಕುವೆಂಪು ಅವರ ಚಿತಾಭಸ್ಮವನ್ನು ಸಂರಕ್ಷಿಸಲಾಗುತ್ತಿದೆ. ಸರಕಾರದ 1.50 ಕೋಟಿ ರೂ. ಅನುದಾನದಿಂದ ಸ್ಮಾರಕ ನಿರ್ಮಾಣವಾಗುತ್ತಿದೆ. ಕುವೆಂಪು ಅವರಿಗೆ ಮೈಸೂರು ಕರ್ಮಭೂಮಿಯಾಗಿತ್ತು. ಮಂಡ್ಯ ಜಿಲ್ಲೆಯ ಜನ ಕುವೆಂಪು ಅವರ ವಿಚಾರಧಾರೆಯನ್ನು ಹೆಚ್ಚು ಅಪ್ಪಿಕೊಂಡು ಅನುಷ್ಠಾನಕ್ಕೆ ತಂದಿದ್ದಾರೆ. ಈ ಹಿನ್ನೆಲೆಯಲ್ಲಿ ಎರಡೂ ಜಿಲ್ಲೆಯ ಗಡಿಯಾದ ಯಾಚೇನಹಳ್ಳಿಯಲ್ಲಿ ಮಹಾಅಧಿವೇಶನ ಆಯೋಜಿಸಲಾಗಿದೆ. ಆದ ಕಾರಣ ಕುವೆಂಪು ಅಭಿಮಾನಿಗಳು ಮಹಾಅಧಿವೇಶನದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಕದಸಂಸ ಜಿಲ್ಲಾ ಸಂಚಾಲಕ ಎಂ.ವಿ.ಕೃಷ್ಣ , ರೈತ ಸಂಘದ ತಾಲೂಕು ಅಧ್ಯಕ್ಷ ಎಚ್.ಮಲ್ಲಿಗೆರೆ ಅಣ್ಣಯ್ಯ, ಪರಿವರ್ತನಾ ಸೇವಾ ಸಂಸ್ಥೆಯ ಕಾರ್ಯದರ್ಶಿ ಟಿ.ಡಿ.ನಾಗರಾಜು, ಕ್ರೈಸ್ತ ಸಮುದಾಯದ ಮುಖಂಡ ಥಾಮಸ್ ಬೆಂಜಮಿನ್, ಮುಸ್ಲಿಂ ಒಕ್ಕೂಟದ ಕಾರ್ಯದರ್ಶಿ ಮಹಮ್ಮದ್ ತಾಹೀರ್ ಉಪಸ್ಥಿತರಿದ್ದರು.

Related posts

ರಷ್ಯಾದಿಂದ ತೈಲ: ಭಾರತದ ಮೇಲೆ ಅಮೆರಿಕದಿಂದ ಮತ್ತಷ್ಟು ದಂಡನೆ? ಹೊಸ ಮಸೂದೆ ಶೀಘ್ರ

ಮೊದಲ ಪ್ರಯತ್ನ 25ನೇ ವಯಸಿಗೇ ಜಡ್ಜ್ ಆದ ಶಿರಸಿಯ ಸುಮಂತ್‌!

ಮಕ್ಕಳಿಗೆ ಗಮಕದ ಅರಿವು ಅಗತ್ಯ : ವಿ. ಸುಜಾತ ಕೃಷ್ಣ

Leave a Comment