NEWS

ಇಲಾಖೆಯಿಂದಲೇ ಮಂಡ್ಯದಲ್ಲಿ ಕೈಗಾರಿಕೆ

ಎಆರ್‌ಎಐ ಘಟಕ ಸ್ಥಾಪನೆ ಸಂಬಂಧ ಪರಿಶೀಲನೆ: ಎಚ್‌.ಡಿ. ಕುಮಾರಸ್ವಾಮಿ

ಪಾಲನೆ ನ್ಯೂಸ್

ಮಂಡ್ಯ: ಜಿಲ್ಲೆಯಲ್ಲಿ ಕೈಗಾರಿಕೆ ಪೂರಕ ವಾತಾವರಣ ನಿರ್ಮಾಣ ಮಾಡಬೇಕು. ಅದಕ್ಕೆ ಪೂರಕವಾಗಿ ಕೇಂದ್ರದ ಬೃಹತ್ ಕೈಗಾರಿಕೆ ಇಲಾಖೆ ವತಿಯಿಂದಲೇ ಕೈಗಾರಿಕೆ ಸ್ಥಾಪನೆ ಮಾಡುವ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಹೇಳಿದರು.

ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮಂಡ್ಯ ಜಿಲ್ಲೆಗೆ ಏನು ಮಾಡಬೇಕು ಎಂಬುದು ನನಗೆ ಗೊತ್ತಿದೆ. ಈ ಬಗ್ಗೆ ಬೇರೆ ಯಾರದೇ ಸರ್ಟಿಫಿಕೇಟ್ ಬೇಕಿಲ್ಲ. ಈ ಬಗ್ಗೆ ನಾನೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದೇನೆ ಎಂದರು.

ಮಂಡ್ಯದಲ್ಲಿ ಕೇಂದ್ರ ಸರ್ಕಾರಿ ಸ್ವಾಮ್ಯದ ಆಟೋಮ್ಯಾಟಿವ್ ರಿಸರ್ಚ್ ಅಸೋಸಿಯೆಷನ್ ಆಫ್ ಇಂಡಿಯಾ (ಎಆರ್‌ಎಐ) ಸಂಸ್ಥೆ ಸ್ಥಾಪಿಸಲು ಜಾಗ ಕೊಡುವಂತೆ ನನ್ನ ಇಲಾಖೆಯಿಂದಲೇ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದೇನೆ. ಇದರಲ್ಲಿ ಅನವಶ್ಯ ರಾಜಕೀಯ ಅಗತ್ಯ ಇಲ್ಲ. ಜಿಲ್ಲೆಯ ಅಭಿವೃದ್ಧಿ ಎಲ್ಲರ ಜವಾಬ್ದಾರಿ. ಜಿಲ್ಲಾಧಿಕಾರಿಗಳು ಜಾಗ ಇಲ್ಲ ಎಂದು ಹೇಳಿದ್ದರು. ಶಾಸಕರಿಗೆ ಜಾಗ ಕೊಡುವ ಅವಕಾಶ ಇದೆಯೇ? ಇದೇ ವಿಚಾರ ಇಟ್ಟುಕೊಂಡು ಕಾಂಗ್ರೆಸ್ಸಿಗರು ರಾಜಕೀಯ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಕರ್ನಾಟಕದಲ್ಲಿ ಬೇಡ ಅಂತಾರೆ: ಇತ್ತೀಚೆಗೆ ಅಪರೂಪದ ಅಯಸ್ಕಾಂತ (ರೇರ್ ಅರ್ಥ್ ಮ್ಯಾಗ್ನೆಟಿಕ್) ಕಾರ್ಖಾನೆ ಸ್ಥಾಪಿಸಲು ಕರ್ನಾಟಕದವರೇ ಪ್ರಸ್ತಾಪ ಸಲ್ಲಿಸಿದ್ದರು. ಅವರು ನನ್ನಲ್ಲಿಗೆ ಬಂದಿದ್ದರು. ಮಂಡ್ಯದಲ್ಲೇ ಒಂದು ಕೈಗಾರಿಕೆ ಸ್ಥಾಪಿಸುವಂತೆ ಕೇಳಿದರೆ ಕರ್ನಾಟಕದಲ್ಲಿ ಬೇಡ ಅಂತಾರೆ. ಕರ್ನಾಟಕ ಸರ್ಕಾರ ಬೆಂಬಲ ಕೊಡಲ್ಲ ಎಂದು ದೂರುತ್ತಾರೆ. ವಿಶಾಖಪಟ್ಟಣದಲ್ಲಿ ಜಾಗ ಕೊಡಿಸಿ ಎಂದು ಕೇಳುತ್ತಾರೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ರಾಜ್ಯದಲ್ಲಿ ಇಂಥ ಕೆಟ್ಟ ಪರಿಸ್ಥಿತಿ ಸೃಷ್ಟಿ ಮಾಡಿದ್ದು ಯಾರು? ಸರ್ಕಾರ ಅಲ್ಲವೇ? ಇವರಿಗೆ ಅಭಿವೃದ್ಧಿ ಬೇಕಿಲ್ಲ. ರಾಜ್ಯ ಸರ್ಕಾರದ ಯಾವೊಬ್ಬ ಸಚಿವರೂ ಅಭಿವೃದ್ಧಿ ವಿಚಾರವಾಗಿ ನನ್ನೊಂದಿಗೆ ಚರ್ಚಿಸಿಲ್ಲ. ಕೈಗಾರಿಕೆ ಅಷ್ಟೇ ಅಲ್ಲ, ಬೇರೆ ಯಾವ ಅಭಿವೃದ್ಧಿ ಕೆಲಸಕ್ಕೂ ಕೂಡ ನಮ್ಮನ್ನು ಭೇಟಿ ಮಾಡಿ ಚರ್ಚೆ ನಡೆಸಿಲ್ಲ ಎಂದು ಅವರು ಕಿಡಿಕಾರಿದರು.

ಮಂಡ್ಯಕ್ಕೆ ಕೈಗಾರಿಕೆ ತರಲು ಎಷ್ಟು ಶ್ರಮ ಹಾಕುತ್ತಿದ್ದೇನೆ ಎನ್ನುವುದು ನನಗೆ ಮಾತ್ರ ಗೊತ್ತು. ರಾಜಕೀಯವಾಗಿ ಟೀಕೆ ಸಾಮಾನ್ಯ. ಮಂಡ್ಯ ಜಿಲ್ಲೆಗೆ ಒಳ್ಳೆಯದಾಗಬೇಕು ಎಂದರೆ ಜಾತ್ಯತೀತ ಜನತಾದಳವನ್ನು ಒದ್ದೋಡಿಸಬೇಕು ಎಂದಿದ್ದಾರೆ. ಮುಂದಿನ ದಿನಗಳಲ್ಲಿ ಯಾರು ಯಾರನ್ನು ಒದ್ದೋಡಿಸುತ್ತಾರೆ ಎನ್ನುವುದು ಗೊತ್ತಾಗುತ್ತದೆ ಎಂದು ಸಚಿವ ಎನ್. ಚಲುವರಾಯಸ್ವಾಮಿ ವಿರುದ್ದ ಹರಿಹಾಯ್ದರು.

ಈ ಸಂದರ್ಭದಲ್ಲಿ ಮಾಜಿ ಸಚಿವ ಸಿ.ಎಸ್. ಪುಟ್ಟರಾಜು ಹಾಜರಿದ್ದರು.

ಪಾಲನೆ.ಇನ್‌ ವಾಟ್ಸ್‌ ಆಪ್‌ ಗುಂಪಿಗೆ ಸೇರಿರಿ.

Related posts

ಸಿರಿಧಾನ್ಯಗಳನ್ನು ಬಳಸಿ ಪೌಷ್ಟಿಕಾಂಶವನ್ನು ಹೆಚ್ಚಿಸುವ  ಆರೋಗ್ಯಕರವಾದ  ಶುಚಿಯಾದ ರುಚಿಕರವಾದ ಅಡಿಗೆ ತಯಾರಿಸಬಹುದು

3 ವರ್ಷದಲ್ಲಿ 5ನೇ ಬಾರಿಗೆ ಹೆಚ್ಚಳ ಮದ್ಯದ ಬೆಲೆ ಏರಿಕೆ‌

ಮಲ್ಯಗೆ ಬಾಂಬೆ ಹೈಕೋರ್ಟ್ ಸೂಚನೆ : ಭಾರತಕ್ಕೆ ಬರಲೇಬೇಕು

Leave a Comment