NEWS

ಸೂರ್ಯಕುಮಾರ್-ಇಶಾನ್ ಕಿಶನ್ ಸ್ಫೋಟಕ ಬ್ಯಾಟಿಂಗ್

ಕಿವೀಸ್ ವಿರುದ್ದ ಭಾರತಕ್ಕೆ ಭರ್ಜರಿ ಜಯ

ಪಾಲನೆ ನ್ಯೂಸ್

ರಾಯ್ ಪುರ: ಭಾರತ ತಂಡ ಟಿ20 ಕ್ರಿಕೆಟ್‌ನಲ್ಲಿ 5 ತನ್ನ ಪ್ರಾಬಲ್ಯವನ್ನು ಮುಂದುವರಿಸಿದೆ. ಪಂದ್ಯಗಳ ಟಿ20 ಸರಣಿಯ 2ನೇ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ತಂಡ ನೀಡಿದ್ದ 209ರನ್‌ಗಳ ಬೃಹತ್ ಗುರಿಯನ್ನು ಭಾರತ ತಂಡ ಲೀಲಾಜಾಲವಾಗಿ ಬೆನ್ನಟ್ಟಿ ಭರ್ಜರಿ ಗೆಲುವು ಸಾಧಿಸಿತು. ಕಮ್‌ ಬ್ಯಾಕ್ ಹೀರೋ ಇಶಾನ್ ಕಿಶನ್ 76 ರನ್ ಸಿಡಿಸಿದರೆ, ನಾಯಕ ಸೂರ್ಯಕುಮಾರ್ ಬಹಳ ದಿನಗಳ ನಂತರ ಚುಟುಕು ಕ್ರಿಕೆಟ್‌ನಲ್ಲಿ ಪರಾಕ್ರಮ ತೋರಿದರು. ಸೂರ್ಯಕುಮಾರ್ ಅಜೇಯ 82 ರನ್ ಸಿಡಿಸಿ ಫಾರ್ಮ್‌ಗೆ ಮರಳಿದರಲ್ಲದೆ, ಭಾರತಕ್ಕೆ ಸುಲಭ ಗೆಲುವು ತಂದುಕೊಟ್ಟರು. ಇವರಿಬ್ಬರ ಬ್ಯಾಟಿಂಗ್ ಅಬ್ಬರದಿಂದ ಭಾರತ ತಂಡ 209 ರನ್‌ಗಳ ಬೃಹತ್ ಗುರಿಯನ್ನು ಇನ್ನೂ 28 ಎಸೆತಗಳು ಉಳಿದಿರುವಂತೆಯೇ ವಿಜಯ ಸಾಧಿಸಿತು. ಟೀಮ್ ಇಂಡಿಯಾ ಮೊದಲ 7 ಎಸೆತಗಳಲ್ಲೇ ಭಾರೀ ಆಘಾತ ಅನುಭವಿಸಿತು. ಮೊದಲ ಓವರ್ ನ 5 ಎಸೆತಗಳಲ್ಲಿ 6 ರನ್‌ ಗಳಿಸಿದ್ದ ಸಂಜು ಸ್ಯಾಟ್ಸನ್ ಮ್ಯಾಟ್ ಹೆನ್ರಿ ಬೌಲಿಂಗ್‌ನಲ್ಲಿ ರಚಿನ್ ರವೀಂದ್ರಗೆ ಕ್ಯಾಚ್ ನೀಡಿ ಔಟ್ ಆದರು. 2ನೇ ಓವರ್‌ನ ಮೊದಲ ಎಸೆತದಲ್ಲೇ ಅಭಿಷೇಕ್ ಶರ್ಮಾ ಜಾಕೋಬ್ ಡಫಿ ಬೌಲಿಂಗ್‌ನಲ್ಲಿ ಗೋಲ್ಡನ್ ಡಕ್ ಆದರು.

6 ರನ್‌ ಗಳಿಗೆ 2 ವಿಕೆಟ್ ಕಳೆದುಕೊಂಡಿದ್ದ ಭಾರತ ತಂಡ ಸೋಲಿನ ಸುಳಿಗೆ ಸಿಲುಕಿತ್ತು. ಆದರೆ ಇಶಾನ್ ಕಿಶನ್ ಹಾಗೂ ನಾಯಕ ಸೂರ್ಯಕುಮಾರ್ ಯಾದವ್ ಎಲ್ಲರ ಲೆಕ್ಕಾಚಾರವನ್ನೇ ತಲೆಕೆಳಗು ಮಾಡಿದರು.

ಕೇವಲ 49 ಎಸೆತಗಳಲ್ಲಿ ಈ ಜೋಡಿ 122 ರನ್ ಗಳನ್ನು ಸಿಡಿಸಿ ಕಿವೀಸ್ ಬೌಲರ್‌ಗಳನ್ನು ಧೂಳೀಪಟ ಮಾಡಿದರು.

ಇಶಾನ್ ಕಿಶನ್ 34 ಎಸೆತಗಳಲ್ಲಿ 11 ಬೌಂಡರಿ, 4 ಸಿಕ್ಸರ್ ಸಹಿತ 76 ರನ್ ಸಿಡಿಸಿದರು. ನಾಯಕ ಸೂರ್ಯಕುಮಾರ್ ಯಾದವ್ 37 ಎಸೆತಗಳಲ್ಲಿ 9. ಬೌಂಡರಿ, 4 ಸಿಕ್ಸರ್‌ಗಳ ಸಹಿತ ಅಜೇಯ 82 ರನ್ ಗಳಿಸಿದರೆ, ಕೊನೆಯಲ್ಲಿ ಅಬ್ಬರಿಸಿದ ಶಿವಂ ದುಬೆ ಅಜೇಯ 36 ರನ್‌ ಗಳಿಸಿ ತಂಡವನ್ನು ಗೆಲುವಿನ ಗಡಿ ದಾಟಿಸಿದರು. ಭಾರತ ತಂಡ 15.2 ಓವರ್ ಗಳಲ್ಲೇ 209 ರನ್‌ಗಳ ಗುರಿ ತಲುಪಿತು.

ಪಾಲನೆ.ಇನ್‌ ವಾಟ್ಸ್‌ ಆಪ್‌ ಗುಂಪಿಗೆ ಸೇರಿರಿ.

Related posts

ಎಪಿಎಂಸಿ ಪರ ಸುಪ್ರೀಂ ಕೋರ್ಟ್ ತೀರ್ಪು

ನಾಳೆಯಿಂದ ಪಟ್ಟಲದಮ್ಮ ಸಿಡಿಹಬ್ಬ

ಸರ್ಕಾರಿ ಪ್ರೌಢಶಾಲೆಯಲ್ಲಿ ವಾಮಾಚಾರ‌ ಮಾಡಿದ ಕಿಡಿಗೇಡಿಗಳು

Leave a Comment