ಪಾಲನೆ ನ್ಯೂಸ್
ಮಂಡ್ಯ: ಯುವ ಜನತೆ ರಸ್ತೆ ಸುರಕ್ಷತಾ ನಿಯಮಗಳನ್ನು ಪಾಲಿಸದೆ ರಸ್ತೆ ಅಪಘಾತಗಳು ಹೆಚ್ಚಾಗುತ್ತಿವೆ ಯುವ ಜನತೆ ರಸ್ತೆ ಸುರಕ್ಷತಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಟಧಿಕಾರಿ ಡಾ. ವಿ. ಜೆ. ಶೋಭರಾಣಿ ಅವರು ಹೇಳಿದರು.
ಸಂಚಾರಿ ಪೊಲೀಸ್ ಇಲಾಖೆ ವತಿಯಿಂದ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ 2026 ರ ಅಂಗವಾಗಿ ಇಂದು ನಗರದ ಸಂಜಯ ವೃತ್ತದಲ್ಲಿ ಆಯೋಜಿಸಲಾಗಿದ್ದ “ಜಾಗೃತಿ ಜಾಥಾ” ಕಾರ್ಯಕ್ರಮವನ್ನು ಜಿಲ್ಲಾ ಪೊಲೀಸ್ ವರಿಷ್ಟಧಿಕಾರಿ ಡಾ. ವಿ. ಜೆ. ಶೋಭರಾಣಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಆನಂದ. ಎಂ ಅವರು ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿ ಮಾತನಾಡಿದರು.
ರಸ್ತೆ ಅಪಘಾತಗಳು ಎರಡು ರೀತಿಯಲ್ಲಿ ಜರುಗುತ್ತದೆ ಅದರಲ್ಲಿ ರಸ್ತೆ ಸರಿಯಿಲ್ಲದೇ ಹಾಗೂ ಸಂಚಾರಿ ನಿಯಮ ಉಲ್ಲಂಘನೆಯಿಂದಾಗಿ ಜರುಗುತ್ತದೆ ಹೀಗಾಗಿ ರಸ್ತೆ ಸುರಕ್ಷತೆ ಬಗ್ಗೆ ಎಲ್ಲರೂ ಜಾಗೃತರಾಗಬೇಕು. ಹೆಲ್ಮೆಟ್ ಧರಿಸದೆ ವಾಹನ ಚಾಲನೆ. ದ್ವಿಚಕ್ರ ವಾಹನಗಳಲ್ಲಿ ಮೂರು ಮಂದಿ ವಾಹನ ಚಾಲನೆ ಮಾಡುವುದು. ವಾಹನ ಚಲಿಸುವಾಗ ಮೊಬೈಲ್ ಬಳಕೆ ಮಾಡುವುದು ಕಾನೂನು ಬಾಹಿರ ಎಂದು ಹೇಳಿದರು.
ಮಂಡ್ಯ ಜಿಲ್ಲೆಯಲ್ಲಿ ಅತಿ ಹೆಚ್ಚಿನ ಪ್ರಮಾಣದಲ್ಲಿ ರಸ್ತೆ ಅಪಘಾತಗಳ ಸಂಖ್ಯೆಯಲ್ಲಿ ಪ್ರತಿ ವರ್ಷ ಸುಮಾರು 500 ರಿಂದ 600 ಮಂದಿ ರಸ್ತೆ ಅಪಘಾತದಿಂದ ಸಾವನಪ್ಪುತ್ತಿರುವುದು ವಿಷಾದಕರ ಸಂಗತಿ. ಇದನ್ನು ತಡೆಗಟ್ಟಲು ಸುರಕ್ಷತೆ ವಾಹನ ಚಾಲನೆ ಮಾಡುವುದರ ಜೊತೆಗೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಕಡ್ಡಾಯವಾಗಿ ಮಾಡಬೇಕು. ಸಂಚಾರಿ ನಿಯಮಗಳ ಪಾಲನೆ ಕೇವಲ ಒಂದು ದಿನಕ್ಕೆ ಮಾತ್ರ ಸೀಮಿತವಾಗಬಾರದು ವರ್ಷ ಪೂರ್ತಿ ರಸ್ತೆ ಸುರಕ್ಷತೆ ನಿಯಮ ಪಾಲನೆ ಮಾಡುವುದು ಕಡ್ಡಾಯ ಎಂದು ಹೇಳಿದರು.

ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಆನಂದ. ಎಂ ಅವರು ಮಾತನಾಡಿ ವಾಹನ ಚಾಲನೆಯಲ್ಲಿ ಯುವ ಜನತೆ ಸಾಕಷ್ಟು ಪ್ರಮಾಣದಲ್ಲಿ ಸಾವನಪ್ಪುತ್ತಿರುವುದು ವಿಷಾದಕಾರ ಸಂಗತಿಯಾಗಿದೆ. ಯುವ ಜನತೆ ಹಾಗೂ ಸಾರ್ವಜನಿಕರು ಸಂಚಾರಿ ನಿಯಮ ಪಾಲನೆ ಮಾಡುವುದು ಕಡ್ಡಾಯ ಎಂದು ಹೇಳಿದರು.
ಜಾಥಾದಲ್ಲಿ ಅಪರ ಪೊಲೀಸ್ ವರಿಷ್ಟಧಿಕಾರಿ ತಿಮ್ಮಯ್ಯ, ಗಂಗಾಧರಸ್ವಾಮಿ, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕರಾದ ಚೆಲುವಯ್ಯ, ಮಂಡ್ಯ ಉಪ ವಿಭಾಗ ಉಪಾಧಿಕ್ಷರಾದ ಹೆಚ್. ಲಕ್ಷ್ಮೀ ನಾರಾಯಣ ಪ್ರಸಾದ್, ಮಂಡ್ಯ ಸಂಚಾರ ಪೊಲೀಸ್ ಠಾಣೆ ಪೊಲೀಸ್ ನಿರೀಕ್ಷಕ ಹೆಚ್. ಆರ್. ಸಿದ್ದಪ್ಪ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ವಿದ್ಯಾರ್ಥಿಗಳಿಂದ ರಸ್ತೆ ಸುರಕ್ಷತೆಯ ಕುರಿತು ಜಾಗೃತಿ ಜಾಥಾ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ 2026 ರ ಅಂಗವಾಗಿ ವಿದ್ಯಾರ್ಥಿಗಳು ಮಂಡ್ಯ ನಗರದ ಪ್ರಮುಖ ರಸ್ತೆಯಲ್ಲಿ ರಸ್ತೆ ಸುರಕ್ಷತೆಯ ಕುರಿತು ಜಾಗೃತಿ ಜಾಥಾ ನಡೆಸಿ ಅರಿವು ಮೂಡಿಸಿದರು.
ಪಾಲನೆ.ಇನ್ ವಾಟ್ಸ್ ಆಪ್ ಗುಂಪಿಗೆ ಸೇರಿರಿ.


