NEWS

ಕುವೆಂಪು ಪಂಚಮಂತ್ರ ಎಲ್ಲ ಕಾಲಕ್ಕೂ ಬೇಕು: ಕೆ.ಪಿ. ಮೃತ್ಯುಂಜಯ

ಎಂ ಆರ್ ಎಂ ಸಾಹಿತ್ಯ ಹಾಗೂ ಪ್ರಕಾಶನ ಪ್ರಶಸ್ತಿ ಪ್ರದಾನ, ಕೃತಿಗಳ ಲೋಕಾರ್ಪಣೆ 

ಪಾಲನೆ ನ್ಯೂಸ್

ಮಂಡ್ಯ: ರಾಷ್ಟ್ರಕವಿ ಕುವೆಂಪು ಅವರ ಪಂಚಮಂತ್ರಗಳಾದ ಮನುಜಮತ, ವಿಶ್ವಪಥ, ಸರ್ವೋದಯ, ಸಮನ್ವಯ ಹಾಗೂ ಪೂರ್ಣದೃಷ್ಟಿಯನ್ನು ಎಲ್ಲ ಕಾಲಕ್ಕೂ ನಮ್ಮದಾಗಿಸಿಕೊಳ್ಳಬೇಕು ಎಂದು ಕವಿ ಕೆ.ಪಿ.ಮೃತ್ಯುಂಜಯ ಅವರು ತಿಳಿಸಿದರು.

ಮಂಡ್ಯದ ಎಂ.ಆರ್.ಎಂ. ಪ್ರಕಾಶನ ಮೈಸೂರು ಜಿಲ್ಲೆ, ತಿ.ನರಸೀಪುರ ತಾಲ್ಲೂಕು ಯಾಚೇನಹಳ್ಳಿಯ ಶ್ರೀರಾಮಕೃಷ್ಣ ಸೇವಾ ಕೇಂದ್ರದಲ್ಲಿ ಸೋಮವಾರ ಸಂಜೆ ಆಯೋಜಿಸಿದ್ದ ಪ್ರಥಮ ವಾರ್ಷಿಕೋತ್ಸವ, ʻಅವಧೂತ ಮಾದಪ್ಪʼ ಹಾಗೂ ʻ ದಿ ಕಾಪಿʼ ಕೃತಿಗಳ ಬಿಡುಗಡೆ, ರಾಷ್ಟ್ರೀಯ ಯುವ ದಿನ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ  ಕೊಡಮಾಡಿದ ಎಂ.ಆರ್.ಎಂ. ಸಾಹಿತ್ಯ ಪ್ರಶಸ್ತಿಯನ್ನು ಸ್ವೀಕರಿಸಿ ಅವರು ಮಾತನಾಡಿದರು.

ಕುವೆಂಪು ಹಾಗೂ ಡಾ. ರಾಜ್‌ಕುಮಾರ್‌ ನಾಡು ಕಂಡ ಶೇಷ್ಠ ಸಾಂಸ್ಕೃತಿಕ ನಾಯಕರು ಎಂದು ಬಣ್ಣಿಸಿದ ಅವರು, ಸ್ವಾಮಿ ವಿವೇಕಾನಂದರು ಹಿಂದೂ ಧರ್ಮದಲ್ಲಿರುವ ಅಸ್ಪೃಶ್ಯತೆ, ಜಾತೀಯತೆ ಹಾಗೂ ಬಡತನವನ್ನು ಆಮೂಲಾಗ್ರವಾಗಿ ನಿರ್ಮೂಲನೆ ಮಾಡಬೇಕೆಂದು ಶ್ರಮಿಸಿದ ದೊಡ್ಡ ಬಂಡುಕೋರ. ಧರ್ಮ ಸಹಿಷ್ಣುತೆ  ಸಾರಿದ ಶ್ರೇಷ್ಠ ಸಂತನನ್ನು ಹಿಂದೂತ್ವ ವಾದಕ್ಕೆ ಬಳಸಬಾರದು.  ಗೌತಮ ಬುದ್ಧ  ಸ್ವಾಮಿ ವಿವೇಕಾನಂದರಿಗೆ ಆದರ್ಶವಾದರೆ ವಿವೇಕಾನಂದರು ಕುವೆಂಪುಗೆ ಆದರ್ಶ ಎಂದು ತಿಳಿಸಿದರು.

ಅಮೆರಿಕ ಯುದ್ಧಕೋರ ರಾಷ್ಟ್ರ. ವೆನಿಜುವೆಲ್ಲ ಹಂಗಾಮಿ ಅಧ್ಯಕ್ಷನನ್ನಾಗಿ ಘೋಷಿಸಿಕೊಂಡಿರುವ ಅಮೆರಿಕ ಅಧ್ಯಕ್ಷ ಟ್ರಂಪ್‌ ಮುಂದೊಂದು ದಿನ ಭಾರತದ ಅಧ್ಯಕ್ಷ ಎಂದು ಹೇಳಿಕೊಂಡರೂ ಆಶ್ಚರ್ಯವಿಲ್ಲ. ಅಂತಹ ಅಮೆರಿಕದಲ್ಲಿ 20 ಮಂದಿ ಬೌದ್ಧ ಬಿಕ್ಕುಗಳು ಶಾಂತಿಗಾಗಿ ಮೌನ ಪಾದಯಾತ್ರೆ ನಡೆಸುತ್ತಿದ್ದಾರೆ. ಆ ಗುಂಪಿನ ಮುಂಚೂಣಿಯಲ್ಲಿ ಬೀದಿನಾಯಿಯೊಂದು ನಡೆಯುತ್ತಾ ಸಾಗುತ್ತಿದೆ. ವಿಶ್ವಶಾಂತಿ, ಅಹಿಂಸೆ, ಕರುಣೆಯನ್ನು ಶ್ವಾನವೂ ಕೋರುತ್ತಿದೆ ಎಂದು ಹೇಳಿದರು.

ಎಂ.ಆರ್.ಎಂ. ಪ್ರಕಾಶನ ಪ್ರಶಸ್ತಿ ಸ್ವೀಕರಿಸಿದ ಕವಿತಾ ಪ್ರಕಾಶನದ ಗಣೇಶ ಅಮೀನಗಡ ಅವರು ಮಾತನಾಡಿ, ದೇವರು ರುಜು ಮಾಡಿದನು; ರಸವಶನಾಗುತ ಕವಿ ಅದ ನೋಡಿದನು ಎಂದು ಕುವೆಂಪು ಕವಿತೆಗಳ ಮಹತ್ವವನ್ನು ಸಾರಿ ಪ್ರತಿನಿತ್ಯ ಪ್ರತಿಯೊಬ್ಬರು ಕುವೆಂಪು ಸಾಹಿತ್ಯದ ಎರಡು ಸಾಲಗಳನ್ನು ಓದಬೇಕು. ಯಾಚೇನಹಳ್ಳಿಯಲ್ಲಿ ಕುವೆಂಪು ಸ್ಮಾರಕ ನಿರ್ಮಿಸುವ ಮೂಲಕ ಅವರ ವಿಚಾರಗಳನ್ನು ಹೂತಿಲ್ಲ ಭಿತ್ತಾರ ಎಂದು ತಿಳಿಸಿದರು.  

ಕಾರ್ಯಕ್ರಮದಲ್ಲಿ ʻಅವಧೂತ ಮಾದಪ್ಪʼ ಮತ್ತು ʻದಿ ಕಾಪಿʼ ಕೃತಿಗಳನ್ನು ಬಿಡುಗಡೆ ಮಾಡಿ ಆಶೀರ್ವನ ನೀಡಿದ ಬೆಂಗಳೂರು ಕೆಂಗೇರಿಯ ವಿಶ್ವ ಒಕ್ಕಲಿಗರ ಮಹಾಸಂಸ್ಥಾನಮಠದ ಪೀಠಾಧಿಪತಿ ಡಾ.ನಿಶ್ಚಲಾನಂದನಾಥ ಸ್ವಾಮೀಜಿ, ನಮಗೆ ಇಂದು ಮತ್ತೊಂದು ಧರ್ಮದ ಅವಶ್ಯಕತೆ ಇಲ್ಲ. ನಮಗೆ ಬೇಕಾಗಿರುವುದು ಮಾನವೀಯ ಧರ್ಮ. ವಸುದೈವ ಕುಟುಂಬಕಂ ಎಂಬುದು ಎಲ್ಲ ಧರ್ಮಗಳ ಸಾರ. ಸರ್ವೇಜನಾ ಸುಖಿನೋ ಭವಂತು ಎಂದು ಸ್ವಾಮಿ ವಿವೇಕಾನಂದರು ನಂಬಿದ್ದರು. ಧರ್ಮಗಳಲ್ಲಿರುವ ಅಂಕುಡೊಂಕುಗಳನ್ನು ಮೊದಲು ತೊಡೆದು ಹಾಕೋಣ. ಮೊದಲು ನಾವು ಪರಿವರ್ತನೆ ಆಗೋಣ. ಆಮೇಲೆ ಸಮಾಜವನ್ನು ಬದಲಾಯಿಸೋಣ. ಮಾನವೀಯ ಧರ್ಮದ, ದಯೆಯುಳ್ಳ, ರಾಷ್ಟ್ರಕವಿ ಕುವೆಂಪು ವಿಶ್ವಮಾನವ ಸಂದೇಶ ಅಳವಡಿಸಿಕೊಳ್ಳೋಣ ಎಂದು ಕರೆ ನೀಡಿದರು.

ಅವಧೂತ ಮಾದಪ್ಪ ಕೃತಿ ಕರ್ತೃ ಹಾಗೂ ಶ್ರೀರಾಮಕೃಷ್ಣ ಸೇವಾ ಕೇಂದ್ರದ ಅಧ್ಯಕ್ಷ ಶ್ರೀ ನಾದಾನಂದನಾಥ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿ, ವಿಶ್ವ ಮಾನವ ಧರ್ಮ ಒಂದು ವಿಶಿಷ್ಟ ಕಲ್ಪನೆ. ಅಲ್ಲಿ ಯಾವುದೇ ಭೌತಿಕ ರಚನೆಗಳು, ಆಚರಣೆಗಳು ಇರುವುದಿಲ್ಲ. ಕುವೆಂಪು ಅವರ ಪಂಚಶೀಲ ತತ್ವಗಳನ್ನು ಆಧರಿಸಿದ ಆಂತರಿಕ ಉದ್ದೀಪನವೇ ಹೊರತು ಬಾಹ್ಯ ಆಚರಣೆಯಲ್ಲ. ಕುವೆಂಪು ಪ್ರೇರಿತ ವಿಶ್ವಮಾನವ ಧರ್ಮ ಜಂಗಮವೇ ಹೊರತು ಸ್ಥಾವರವಲ್ಲ ಎಂದು ಸ್ಪಷ್ಟಪಡಿಸಿದರು.

ಯಾಚೇನಹಳ್ಳಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ವೈ.ಎನ್.ಶಂಕರೇಗೌಡ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಎಂ.ಆರ್‌.ಎಂ.ಪ್ರಕಾಶನ ಸಂಸ್ಥೆಯು ವಾರ್ಷಿಕೋತ್ಸವ ಹಾಗೂ ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ಗ್ರಾಮೀಣ ಪರಿಸರದಲ್ಲಿ ಆಯೋಜಿಸಿ ಇಲ್ಲಿನ ವಿದ್ಯಾರ್ಥಿಗಳಿಗೆ ಸ್ಫೂರ್ತಿ ತುಂಬಿದ್ದಾರೆ. ಇಬ್ಬರು ಸಾಧಕರಿಗೆ ಪ್ರಶಸ್ತಿ ನೀಡಿ ಉತ್ತಮ ಕೆಲಸ ಮಾಡಿದ್ದಾರೆ ಎಂದು ಹೇಳುತ್ತಾ, ಇಡೀ ಭಾರತಕ್ಕೆ, ಯುವಶಕ್ತಿಗೆ ಪ್ರೇರಣೆಯಾಗಿರುವ ಸ್ವಾಮಿ ವಿವೇಕಾನಂದರು ತಪಸ್ಸು ಮಾಡಿದ ಕನ್ಯಾಕುಮಾರಿ ವ್ಯಾಪಾರಿ ಕೇಂದ್ರವಾಗಿದ್ದು ಹಿಂದಿನಂತಿಲ್ಲ. ಅಲ್ಲಿ ಹಿಂದೆ ಆಗಿದ್ದ ರೋಮಾಂಚನ  ಇತ್ತೀಚೆಗೆ ತೆರಳಿದ್ದಾಗ ಆಗಲಿಲ್ಲ ಎಂದು ವಿಷಾದಿಸಿದರು.

 10 ಸಾವಿರ ರೂ. ಪುರಸ್ಕಾರ: ಎಂ.ಆರ್.ಎಂ. ಪ್ರಶಸ್ತಿ ಸ್ವೀಕರಿಸಿದ ಇಬ್ಬರೂ ಪ್ರಶಸ್ತಿ ಪುರಸ್ಕೃತರಿಗೂ ತಲಾ 10 ಸಾವಿರ ರು. ನಗದು ಪುರಸ್ಕಾರ, ಪ್ರಶಸ್ತಿ ಫಲಕ ನೀಡಿ ಗೌರವಿಸಲಾಯಿತು. ಇದೇ ಸಂದರ್ಭದಲ್ಲಿ ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ಯಾಚೇನಹಳ್ಳಿಯ  ಚನ್ನಾಜಮ್ಮ ಅವರನ್ನು ಸನ್ಮಾನಿಸಲಾಯಿತು. 

ಕಥೆಗಾರ ಅದೀಬ್ ಅಖರ್ ಪ್ರಶಸ್ತಿ ಪುರಸ್ಕೃತರನ್ನು ಅಭಿನಂದಿಸಿ ಮಾತನಾಡಿ, ಮಹಾಭಾರತದ ದ್ರೌಪದಿ ವಸ್ತ್ರಾಪಹರಣ ಪ್ರಸಂಗವನ್ನು ವಿವರಿಸಿ ಶ್ರೀ ಕೃಷ್ಣನು ದ್ರೌಪದಿಗೆ ನಾವು ಯಾರಿಗಾದರು ಸಹಾಯ ಮಾಡಿದರೆ ದೇವರು ನಮಗೆ ಸಹಾಯ ಮಾಡಲು ಯಾರ ರೂಪ ದಲ್ಲಾದರು ಬರುತ್ತಾನೆ ಎಂಬ ಶ್ರೀ ಕೃಷ್ಣನ ಸಂದೇಶವನ್ನು ಸ್ಮರಿಸಿದರು.

ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ನಿಧಿ ಎಸ್. ಪಿ. ಹಾಗೂ ಅನ್ಸಿತಾ ಮೆನನ್‌ ಅವರ ʻದಿ ಕಾಪಿʼ ಕೃತಿ ಕುರಿತು ಪ್ರಕಾಶಕ ಹಾಗೂ ಮಂಡ್ಯ ವಿವಿಯ ಕನ್ನಡ ಅಧ್ಯಾಪಕ ಉಮೇಶ್ ದಡಮಹಳ್ಳಿ ಮಾತನಾಡಿದರು. ಎಂಆರ್‌ಎಂ ಪ್ರಕಾಶನದ ಪ್ರಕಾಶಕ ಮಂಜು ಮುತ್ತೇಗೆರೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಲೇಖಕ ಹಾಗೂ ಪತ್ರಕರ್ತ ಚಂದ್ರಶೇಖರ ದ.ಕೋ. ಹಳ್ಳಿ  ಆಶಯ ನುಡಿಗಳನ್ನಾಡಿದರು.

ಮುಖ್ಯ ಅತಿಥಿಗಳಾಗಿ ಕವಯಿತ್ರಿ ಎಚ್.ಆರ್. ಕನ್ನಿಕ, ಬನ್ನೂರಿನ ಆಕಾಶ್ ಸ್ಟೀಲ್ಸ್ ಅಂಡ್ ಸಿಮೆಂಟ್ ಮಾಲೀಕರಾದ ಜಿ.ಸುರೇಶ್, ಕವಿ ಹಾಗೂ ಶಿಕ್ಷಕ ಕೊತ್ತತ್ತಿ ರಾಜು ಹಾಗೂ ನೇರಲಕೆರೆಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಿಇಒ ನೇರಲಕೆರೆ ಲೋಕೇಶ್ ಭಾಗವಹಿಸಿದ್ದರು. ಎಸ್‌ಎನ್‌ ಎಸ್‌ ಎಕ್ಸಲೆನ್ಸ್‌ ಪಿಯು ಕಾಲೇಜಿನ ಮಂಜೇಶ್‌ ಹಾಗೂ ಆಡಳಿತಾಧಿಕಾರಿ ಅವಿನಾಶ್‌, ಲೇಖಕಿ ನಿಧಿ ಅವರ ಪೋಷಕರಾದ ಪ್ರವೀಣ್‌ಕುಮಾರ್ ಹಾಗೂ ಪೂರ್ಣಿಮಾ ಹಾಜರಿದ್ದರು.

ಪಾಲನೆ.ಇನ್‌ ವಾಟ್ಸ್‌ ಆಪ್‌ ಗುಂಪಿಗೆ ಸೇರಿರಿ.

Related posts

ದೇಹ ಪಾಲನೆ

ಸಾರ್ವಜನಿಕರಿಗೆ ತೊಂದರೆಯಾಗದಂತೆ ಸೂಕ್ತ ಬಸ್ಸ್ ವ್ಯವಸ್ಥೆ ಕಲ್ಪಿಸಿ: ಚಿಕ್ಕಲಿಂಗಯ್ಯ

ರಾಜಸ್ಥಾನದ ನಿವೃತ್ತ ಯೋಧ 138 ಪದವಿಧರ

Leave a Comment