ಸಬ್ಬನಹಳ್ಳಿ ಶಶಿಧರ ಅವರ ಕಾವ್ಯೋತ್ಸವ ಕವನ ಸಂಕಲನ ಬಿಡುಗಡೆ ಮಾಡಿ ಸಬ್ಬನಹಳ್ಳಿ ನಾಗರಾಜು

ಪಾಲನೆ ನ್ಯೂಸ್
ಮಂಡ್ಯ: ಪ್ರತಿಭೆಯ ಜೊತೆಗೆ ವಿದ್ವತ್ತು ಬೆಳೆಸಿಕೊಂಡ ಪರಿಣಾಮವಾಗಿ ರಾಷ್ಟ್ರಕವಿ ಕುವೆಂಪು ಅವರು ವಿಶ್ವಮಾನ್ಯರಾಗಲು ಸಾಧ್ಯವಾಯಿತು ಎಂದು ಮಂಡ್ಯ ವಿಶ್ವವಿದ್ಯಾಲಯ ಉಪನ್ಯಾಸಕ ಸಬ್ಬನಹಳ್ಳಿ ನಾಗರಾಜು ಅಭಿಪ್ರಾಯಪಟ್ಟರು.
ಮಂಡ್ಯದ ಕನ್ನಿಕ ಶಿಲ್ಪ ನವೋದಯ ತರಬೇತಿ ಕೇಂದ್ರದಲ್ಲಿ ತಗ್ಗಹಳ್ಳಿ ಕುವೆಂಪು ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ಭಾನುವಾರ ಆಯೋಜಿಸಿದ್ದ ಸಬ್ಬನಹಳ್ಳಿ ಶಶಿಧರ ಅವರ ಕಾವ್ಯೋತ್ಸವ ಕವನ ಸಂಕಲನ ಬಿಡುಗಡೆ ಹಾಗೂ ಕವಿಗೋಷ್ಠಿಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಪದವಿ ಕಲಿಕೆಯ ಹಂತದಲ್ಲಿಯೇ ವಿಶ್ವದ ಅಗ್ರಮಾನ್ಯ ಚಿಂತಕರ, ಸಾಹಿತಿಗಳ, ತತ್ವಜ್ಞಾನಿಗಳ ಬಗ್ಗೆ ಓದಿಕೊಂಡಿದ್ದ ಕುವೆಂಪು ಅವರು ಅನೇಕ ಶ್ರೇಷ್ಠ ಕೃತಿಗಳನ್ನು ರಚಿಸಿದರು. ಕುವೆಂಪು ಅವರ ಪ್ರತಿಭೆ ಮತ್ತು ವಿದ್ವತ್ತು ಬೆಸಗೊಂಡ ಪರಿಣಾಮವಾಗಿ ಉತ್ಕೃಷ್ಟ ಕಾವ್ಯಗಳು ಜಗತ್ತಿನಾದ್ಯಂತ ಪಸರಿಸಿದವು. ಸಮಾಜದ ಎಲ್ಲಾ ಸ್ತರದವರು ಸಾಹಿತ್ಯ ಕ್ಷೇತ್ರದಲ್ಲಿ ಬೆಳೆಯಬಹುದು ಎಂಬುದನ್ನು ತೋರಿಸಿಕೊಟ್ಟರು. ಶೂದ್ರರಿಗೆ ವಿದ್ಯೆಯನ್ನು ನಿರಾಕರಿಸಿದ ಸಂದರ್ಭದಲ್ಲಿಯೇ ಮಹಾಕಾವ್ಯಗಳನ್ನು ಸೃಷ್ಟಿಸಿದರು ಎಂದು ತಿಳಿಸಿದರು.
ಸಾಮಾಜಿಕ, ಧಾರ್ಮಿಕ, ಆರ್ಥಿಕ, ಶೈಕ್ಷಣಿಕ, ಸಾಂಸ್ಕೃತಿಕ ಸಮಸ್ಯೆಗಳ ಪರಿಹಾರಕ್ಕಾಗಿ ವಿಶ್ವ ಮಾನವ ಪ್ರಜ್ಞೆಯನ್ನು ರೂಪಿಸಿದರು. ಅವರ ಆದರ್ಶಗಳನ್ನು ಮಾದರಿಯಾಗಿ ಇಟ್ಟುಕೊಂಡು ಇಂದಿನ ಯುವ ಪೀಳಿಗೆ ವಿದ್ವತ್ತನ್ನು ಬೆಳೆಸಿಕೊಳ್ಳುವುದರ ಮೂಲಕ ಸಾಹಿತ್ಯ ಕ್ಷೇತ್ರದಲ್ಲಿ ಕ್ರಿಯಾಶೀಲರಾಗಬೇಕು ಎಂದು ಕರೆ ನೀಡಿದರು.
ಕವಯಿತ್ರಿ ಎಚ್.ಆರ್ ಕನ್ನಿಕ ಕೃತಿ ಬಿಡುಗಡೆ ಮಾಡಿ, ಮಾತನಾಡಿದರು. ಕವಿ ಸಬ್ಬನಹಳ್ಳಿ ಶಶಿಧರ ಸ್ವಾಗತಿಸಿದರು. ಗಾಯಕಿ ನೇತ್ರಾವತಿ ಕಾರ್ಯಕ್ರಮ ನಿರೂಪಿಸಿದರು.
ಕವಿಗೋಷ್ಠಿಯಲ್ಲಿ ಡಾ. ಎಂ.ಎಸ್ ಅನಿತಾ ಮಂಗಲ, ರಾಣಿ ಉಮೇಶ್, ರೇಖಾ ಶಶಿಧರ, ಅಭಿಜ್ಞಾ.ಪಿ.ಗೌಡ ಇತರರು ಸ್ವ ರಚಿತ ಕವನಗಳ ವಾಚನ ಮಾಡಿದರು.
ಕಾರ್ಯಕ್ರಮವನ್ನು ಕರ್ನಾಟಕ ಸಂಘಟನೆ ರಾಜ್ಯಾಧ್ಯಕ್ಷ ನಾರಾಯಣ ಉದ್ಘಾಟಿಸಿದರು. ಕಡಿಲುವಾಗಿಲು ಮಂಚ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಶೋಷಿತರ ಧ್ವನಿ ದಿನಪತ್ರಿಕೆ ಸಂಪಾದಕ ಎಲ್.ಶಿವಶಂಕರ, ಕವಯಿತ್ರಿ ಗೀತಾ ಬನ್ನೂರು, ತಗ್ಗಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಎಸ್.ಡಿ.ಎಂ.ಸಿ ಅಧ್ಯಕ್ಷ ಸಿದ್ದೇಗೌಡ, ಸಬ್ಬನಹಳ್ಳಿ ಮಕ್ಕಳ ಮನೆ ಅಧ್ಯಕ್ಷ ದೊರೆಸ್ವಾಮಿ, ಕರವೇ ಮುಖಂಡ ಕಮ್ಮನಾಯಕನಹಳ್ಳಿ ಮಂಜು ಇತರರು ಇದ್ದರು.
