ಬಾಲಕಾರ್ಮಿಕ ಪದ್ಧತಿ ಒಂದು ಸಾಮಾಜಿಕ ಪಿಡುಗು: ಡಾ.ಕುಮಾರ
ಪಾಲನೆ ನ್ಯೂಸ್
ಮಂಡ್ಯ: ಬಾಲಕಾರ್ಮಿಕ ಪದ್ಧತಿಯನ್ನು ಹೋಗಲಾಡಿಸುವುದು ಪ್ರತಿಯೊಬ್ಬ ನಾಗರೀಕರ ಜವಾಬ್ದಾರಿ ಮತ್ತು ಹೊಣೆಗಾರಿಕೆ. ಎನ್ ಫೋರ್ಸ್ ಅಧಿಕಾರಿಗಳು ತಾವು ದಿನನಿತ್ಯ ಓಡಾಡುವ ಜಾಗಗಳಲ್ಲಿ ಸೂಕ್ಷ್ಮವಾಗಿ ಪರಿಶೀಲನೆ ನಡೆಸಿ ಬಾಲಕಾರ್ಮಿಕರನ್ನು ಪತ್ತೆ ಹಚ್ಚಬೇಕು ಎಂದು ಜಿಲ್ಲಾಧಿಕಾರಿ ಡಾ. ಕುಮಾರ ಅವರು ಹೇಳಿದರು.

ಇಂದು ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಬಾಲ ಕಾರ್ಮಿಕ ಹಾಗೂ ಕಿಶೋರ ಕಾರ್ಮಿಕ (ನಿಷೇಧ ಮತ್ತು ನಿಯಂತ್ರಣ) ಕಾಯ್ದೆ-1986, ನಿಯಮಗಳು 2017 (ಕೇಂದ್ರ/ರಾಜ್ಯ)ಗಳ ಕುರಿತು ಬಾಲ ಕಾರ್ಮಿಕ ಹಾಗೂ ಕಿಶೋರ ಕಾರ್ಮಿಕ(ನಿಷೇಧ ಮತ್ತು ನಿಯಂತ್ರಣ) ಕಾಯ್ದೆ-1986,ರ ತರಬೇತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಬಾಲಕಾರ್ಮಿಕ ಪದ್ಧತಿಯನ್ನು ಕೇವಲ ಅನಿಷ್ಟ ಪದ್ಧತಿ ಎಂದು ಪರಿಗಣಿಸಿದರೆ ಸಾಲದು. ಸದರಿ ಪದ್ಧತಿಯನ್ನು ಹೋಗಲಾಡಿಸಲು ಸೂಕ್ತ ಕ್ರಮವನ್ನು ವಹಿಸಬೇಕು. ಬಾಲಕಾರ್ಮಿಕ ಪದ್ಧತಿಯನ್ನು ನಿರ್ಮೂಲನೆ ಮಾಡುವಲ್ಲಿ ಅಧಿಕಾರಿಗಳಷ್ಟೇ ಹೊಣೆಗಾರಿಕೆ ಸಾರ್ವಜನಿಕರದ್ದು ಆಗಿರುತ್ತದೆ. ಅಧಿಕಾರಿಗಳು ಮತ್ತು ಸಾರ್ವಜನಿಕರು ಬದ್ಧತೆ ಮತ್ತು ಪರಿಪಕ್ವತೆಯಿಂದ ಕಾರ್ಯನಿರ್ವಹಿಸಿದರೆ ಬಾಲ ಕಾರ್ಮಿಕ ಪದ್ಧತಿಯನ್ನು ಹೋಗಲಾಡಿಸಬಹುದು ಎಂದು ಹೇಳಿದರು.
ಸದರಿ ವರ್ಷ (2025) ಜಿಲ್ಲೆಯಲ್ಲಿ 35ಕ್ಕೂ ಹೆಚ್ಚು ಬಾಲ ಕಾರ್ಮಿಕರನ್ನು ರಕ್ಷಿಸಲಾಗಿದೆ ಹಾಗೂ ಎಂಟು ಪ್ರಕರಣಗಳಲ್ಲಿ ಎಫ್ ಐ ಆರ್ ದಾಖಲಿಸಲಾಗಿದೆ. ಬಾಲಕಾರ್ಮಿಕರ ಪ್ರಕರಣಗಳ ಸಂಖ್ಯೆ ಕಡಿಮೆ ಇದ್ದರೆ ಅಂತಹ ಜಿಲ್ಲೆಗಳಲ್ಲಿ ಬಾಲಕಾರ್ಮಿಕರು ಕಮ್ಮಿ ಇದ್ದಾರೆ ಎಂದು ಅರ್ಥವಲ್ಲ. ಅಧಿಕಾರಿಗಳು ಕೈಗಾರಿಕೆ ಹೋಟೆಲ್ ಹಾಗೂ ಕ್ರಷರ್ ಗಳಲ್ಲಿ ಬಾಲಕಾರ್ಮಿಕರು ಇರುವುದನ್ನು ಪರಿಶೀಲನೆ ನಡೆಸಬೇಕು ಎಂದು ಸೂಚಿಸಿದರು.
ಬಾಲಕಾರ್ಮಿಕ ಪದ್ಧತಿಯನ್ನು ಪತ್ತೆ ಹಚ್ಚುವಲ್ಲಿ ಶಿಕ್ಷಣ ಇಲಾಖೆ ಮಹತ್ವದ ಪಾತ್ರ ವಹಿಸುತ್ತದೆ. ಶಾಲೆಯ ಹೆಡ್ ಮಾಸ್ಟರ್ ಗಳು ಶಾಲೆಗೆ ನಿರಂತರ ರಜೆ ಹಾಕಿರುವ ವಿದ್ಯಾರ್ಥಿಗಳು ಹಾಗೂ ಅರ್ಧಕ್ಕೆ ಶಾಲೆ ಬಿಟ್ಟ ವಿದ್ಯಾರ್ಥಿಗಳ ಪಟ್ಟಿ ತೆಗೆದುಕೊಂಡು ಅವರ ಹಿನ್ನೆಲೆಯನ್ನು ಪರಿಶೀಲನೆ ನಡೆಸಿ ಸದರಿ ಮಕ್ಕಳು ಪ್ರಸ್ತುತ ಏನು ಮಾಡುತ್ತಿದ್ದಾರೆ ಎಂದು ತಿಳಿದುಕೊಳ್ಳಬೇಕು.
ಶಾಲೆಗಳಲ್ಲಿ ಮಕ್ಕಳ ಕುರಿತಾಗಿ ಹೆಚ್ಚು ಗಮನಹರಿಸಿದರೆ ಬಾಲಕಾರ್ಮಿಕ ಪದ್ಧತಿಯನ್ನು ಸಾಧ್ಯವಾದಷ್ಟು ತಡೆಯಬಹುದು. ಅಧಿಕಾರಿಗಳು ದಾಳಿಗೆ ಹೋಗುವ ಸಂದರ್ಭದಲ್ಲಿ ಯಾರಿಗೂ ಮಾಹಿತಿ ನೀಡದೆ ಸರ್ಪ್ರೈಸ್ ವಿಸಿಟ್ ಮಾಡಬೇಕು. ಬಾಲಕಾರ್ಮಿಕ ಪದ್ಧತಿಗೆ ಒಳಗಾದ ಹಾಗೂ ಶಿಕ್ಷಣದಿಂದ ವಂಚಿತರಾದ ಮಕ್ಕಳು ಸಮಾಜಕ್ಕೆ ಮಾರಕವಾಗುವ ಸಾಧ್ಯತೆ ಇರುತ್ತದೆ. ಇದರಿಂದ ಅಧಿಕಾರಿಗಳು ವಿಶೇಷ ನಿಗವಹಿಸಿ ಬಾಲಕಾರ್ಮಿಕ ಪದ್ಧತಿಯಿಂದ ಮಕ್ಕಳನ್ನು ರಕ್ಷಿಸಬೇಕು ಎಂದು ಹೇಳಿದರು.
ಬಚ್ಪನ್ ಬಚಾವೋ ಆಂದೋಲನ ಸಂಸ್ಥೆಯ ರಾಜ್ಯ ಸಂಯೋಜಕರಾದ ವೇಣು ವರ್ಗಿಸ್ ಅವರು ಮಾತನಾಡಿ, ಅಧಿಕಾರಿಗಳು ಬಾಲಕಾರ್ಮಿಕರನ್ನು ಪತ್ತೆಹಚ್ಚಲು ಹೋಗುವ ಸಂದರ್ಭದಲ್ಲಿ ಇಎಸ್ಐ ವೈದ್ಯರನ್ನು ರೈಡ್ ನಲ್ಲಿ ಭಾಗಿಯಾಗಿಸಿಕೊಳ್ಳಬೇಕು. ಮಗುವನ್ನು ರಕ್ಷಣೆ ಮಾಡಿದ ನಂತರ ಬುದ್ಧಿವಾದ ಹೇಳಿ ಮಗುವನ್ನು ಅಲ್ಲೇ ಬಿಟ್ಟು ಬರುವಂತಿಲ್ಲ. ಮಗುವನ್ನು ಮಕ್ಕಳ ಆಪ್ತ ಸಲಹಾ ಸಮಿತಿಗೆ ನೀಡಬೇಕು ಎಂದರು.
ಬಾಲಕಾರ್ಮಿಕ ಪದ್ಧತಿಗೆ ಒಳಗಾದ ಯಾವುದೇ ಮಗುವಿಗೆ ಗಾಯಗಳು ಆಗಿದ್ದ ಸಂದರ್ಭದಲ್ಲಿ ಸದರಿ ಮಕ್ಕಳಿಗೆ 3 ಲಕ್ಷದ ವರೆಗೂ ಪರಿಹಾರವನ್ನು ನೀಡಬಹುದು. ಬಾಲ ಕಾರ್ಮಿಕರನ್ನು ಪತ್ತೆಹಚ್ಚಲು ವಿವಿಧ ಇಲಾಖೆಗಳು ಸಹಕಾರ ನೀಡಬೇಕು. ಬಾಲ ಕಾರ್ಮಿಕರನ್ನು ಪತ್ತೆಹಚ್ಚಲು ಹೋಗುವಾಗ ಸದರಿ ಅಧಿಕಾರಿಗಳಿಗೆ ವಾಹನದ ವ್ಯವಸ್ಥೆ ಕಲ್ಪಿಸಬೇಕು ಎಂದು ತಿಳಿಸಿದರು.
ಎಲ್ಲಾ ಅಧಿಕಾರಿಗಳು ಸಮನ್ವಯ ಸಾಧಿಸಿ ಕಾರ್ಯನಿರ್ವಹಿಸಿದರೆ ಬಾಲಕಾರ್ಮಿಕ ಪದ್ಧತಿಯನ್ನು ನಿರ್ಮೂಲನೆ ಮಾಡಬಹುದಾಗಿದೆ. ಅಧಿಕಾರಿಗಳು ಪಣತೊಟ್ಟು ಕನಿಷ್ಠ ಒಂದು ತಾಲೂಕನ್ನಾದರೂ ಬಾಲ ಕಾರ್ಮಿಕ ಪದ್ಧತಿ ಮುಕ್ತ ತಾಲೂಕನ್ನಾಗಿಸಲು ಶ್ರಮ ವಹಿಸಬೇಕು. ಮುಂದಿನ ದಿನಗಳಲ್ಲಿ ಬಾಲ ಕಾರ್ಮಿಕ ಪದ್ಧತಿಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಅಧಿಕಾರಿಗಳು ವಹಿಸಬೇಕಾದ ಕ್ರಮಗಳ ಕುರಿತು ತರಬೇತಿ ಕಾರ್ಯಕ್ರಮವನ್ನು ದೊಡ್ಡದಾಗಿ ಮಾಡಬೇಕು ಎಂದು ಹೇಳಿದರು.
ಸಭೆಯಲ್ಲಿ ಕಾರ್ಮಿಕ ಇಲಾಖೆಯ ಉಪ ನಿರ್ದೇಶಕಿ ಸವಿತಾ, ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಸಿ ಚಲುವಯ್ಯ, ನಗರಸಭೆ ಪೌರಾಯುಕ್ತ ಪಂಪಶ್ರೀ, ಸಮಾಜ ಕಲ್ಯಾಣ ಇಲಾಖೆಯ ನಿರ್ದೇಶಕ ಶ್ರೀನಿವಾಸ್, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಮಂಜುಳಾ ಸೇರಿದಂತೆ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.
