NEWS

ನಿಮ್ಮ ಮಕ್ಕಳು ನಿಮ್ಮನ್ನೇ ಅನುಸರಿಸುತ್ತಾರೆ

ಪಾಲನೆ, ದ್ವಿಭಾಷಾ ಮಾಸಿಕ | ಸಂಪುಟ 4, ಸಂಚಿಕೆ 10

ನಮ್ಮಲ್ಲಿ ಪರಿಸರದ ಬಗ್ಗೆ, ಪ್ರಕೃತಿಯ ಬಗ್ಗೆ ಮೊದಲ ಪಾಠ ಆರಂಭವಾಗಬೇಕಾಗಿರುವುದು ಶಾಲೆಗಳಲ್ಲಿ. ಬಹುತೇಕ ಶಾಲೆಗಳಲ್ಲಿ ಇದರ ಬಗ್ಗೆ ಮಕ್ಕಳಿಗೆ ಅರಿವೇ ಇಲ್ಲ. ಕೇವಲ ತಮ್ಮ ಯೂನಿಫಾರ್ಮ್, ಪುಸ್ತಕ, ಪುಸ್ತಕದೊಳಗಿರುವ ಪಾಠ ಇಷ್ಟು ಬಿಟ್ಟರೆ ಮಕ್ಕಳಿಗೆ ಬಹುತೇಕ ಪರಿಸರ ಮತ್ತು ಪ್ರಕೃತಿಯ ಬಗ್ಗೆ ಹೇಳಿಕೊಡ್ತಾ ಇರೋದು ಬಹಳ ಕಡಿಮೆ. ಕೆಲವು ಶಾಲೆಗಳಂತೂ ಇದರ ಗೋಜಿಗೆ ಹೋಗುವುದಿಲ್ಲ. ಆಡಳಿತ ಮಂಡಳಿಗೆ ಫೀಸ್ ವಸೂಲು ಮಾಡೋದು, ಡೊನೇಷನ್ ತೆಗೆದುಕೊಳ್ಳುವುದು, ತಮ್ಮ ಶಾಲಾ ಕಟ್ಟಡವನ್ನು ಒಳ್ಳೊಳ್ಳೆಯ ಟೈಲ್ಸ್ಗಳಿಂದ, ಒಳ್ಳೊಳ್ಳೆ ಬಣ್ಣಗಳಿಂದ ಆಕರ್ಷಣೆಯಾಗಿ ಕಾಣುವಂತಹ ಪಾಂಪ್ಲೆಟ್‌ಗಳಲ್ಲಿ ಮುದ್ರಣ ಮಾಡಿ, ಒಳ್ಳೆಯ ಬಿಲ್ಡಿಂಗ್ ಅನ್ನು ತೋರಿಸಿ ಹಣ ವಸೂಲಿ ಮಾಡುವ ಪ್ರಾಮುಖ್ಯ ದಂಧೆಗಳಿಗೆ ಇಳಿದಿದ್ದಾರೆ. ಶೇ. ೯೯ರಷ್ಟು ಭಾಗ ವಿದ್ಯಾಸಂಸ್ಥೆಗಳು ವ್ಯಾಪಾರಿ ಸಂಸ್ಥೆಗಳೇ!


ಖಾಸಗಿ ಶಾಲೆಯವರು ಸರಕಾರ ದಿಂದ ತೆಗೆದುಕೊಳ್ಳುವ ಸೌಲಭ್ಯಗಳು ಹೆಚ್ಚು. ನಾವು ವ್ಯಾಪಾರ ಮಾಡೋದಿಲ್ಲ ಸೇವೆ ಅಂತ ಹೇಳುತ್ತಾರೆ. ಸೇವೆ ಅಂತೇಳಿ ಅನೇಕ ರೀತಿಯಲ್ಲಿ ಹಣ ತೆಗೆದುಕೊಳ್ಳುತ್ತಿದ್ದಾರೆ. ಆದರೆ, ಸದ್ಯಕ್ಕೆ ಅಲ್ಲಿ ಮಕ್ಕಳಿಗೆ ಪರಿಸರ ಮತ್ತು ಪ್ರಕೃತಿಯ ಬಗ್ಗೆ ಹೇಳಿಕೊಡುತ್ತಿರೋದು ಬಹಳ ಕಡಿಮೆ. ಹೇಳ್ ಕೊಡ್ತಾನೆ ಇಲ್ಲ ಅಂದ್ರೂನು ತಪ್ಪಾಗ್ಲಿಕ್ಕಿಲ್ಲ. ಆದರೆ, ಸರ್ಕಾರಿ ಶಾಲೆಯಲ್ಲಿ ಕೆಲವು ನೆಪ ಮಾತ್ರಕ್ಕೆ ಒಂಬತ್ತನೇ ಕ್ಲಾಸ್ ಮಕ್ಕಳಿಗೆ ‘ಇಕೋ ಕ್ಲಬ್’ ಅನ್ನು ಆರಂಭಿಸಿಕೊಂಡಿದ್ದಾರೆ. ಹಾಗೂ ಯಾವುದೋ ಒಂದು ಬ್ಯಾನರ್ ಹಿಡ್ಕೊಂಡು ಯಾವುದೋ ಒಂದು ಮರದ ಕೆಳಗೆ ನಿತ್ಕೊಂಡು, ಅಥವಾ ಯಾವುದೋ ಒಂದು ಮರಗಳನ್ನು ನೆಟ್ಟು ಫೋಟೋ ತೆಗೆದು ರಿಪೋರ್ಟ್ ಕಳಿಸಿದರೆ ಮುಗ್ದೋಯ್ತು.


ಬಹುತೇಕ ಸರಕಾರಿ ಶಾಲೆಗಳಲ್ಲಿ ಇದೇ ನಡಿತಾ ಇರೋದು. ಎಲ್ಲೋ ಒಂದು ವರ್ಷಕ್ಕೆ ಒಂದು ಎಂಟು-ಹತ್ತು ಶಾಲೆ ಮಕ್ಕಳು ನಮ್ಮ ತೋಟಕ್ಕೆ ಬರುವ ಒಂದು ಅಭ್ಯಾಸ ಇಟ್ಟುಕೊಂಡಿದ್ದಾರೆ. ಕೆಲವು ಕಾಲೇಜು ಮಕ್ಕಳು ಬರುತ್ತಿದ್ದಾರೆ. ಕೆಲವು ಯೂನಿವರ್ಸಿಟಿ ಮಕ್ಕಳು ಬರುತ್ತಿದ್ದಾರೆ. ಅದು ಒಂದು ಕಡೆ ಇರ್ಲಿ. ಅಲ್ಲಿ ಬಂದಾಗ ಏನೋ ಒಂದು ಬಲತ್ಕಾರಕ್ಕೆ ಸ್ವಂತ ಅವರಿಗೆ ಒಳಗಿಂದ ಇಚ್ಛೆ ಇಲ್ಲ. ಆ ಮಕ್ಕಳಿಗೆ ಒಳಗಿಂದ ಇಚ್ಛೆ ಬರಬೇಕಾದ್ರೆ. ನಾವು ಪ್ರತಿ ಶಾಲೆಯಲ್ಲೂ ಪರಿಸರ ಮತ್ತು ಪ್ರಕೃತಿಯ ಬಗ್ಗೆ ಅವರಿಗೆ ಕಡ್ಡಾಯವಾಗಿ ದಿನಕ್ಕೆ ಐದು ನಿಮಿಷನಾದ್ರೂ ವಿಚಾರವನ್ನು ತಿಳಿಸಬೇಕು ಅವರಿಗೆ. ಪಾಪ ಮಕ್ಕಳಿಗೆ ಏನು ಗೊತ್ತಿರುತ್ತದೆ?


ಮಕ್ಕಳಿಗೆ ನೀವೇನ್ ಹೇಳಿಕೊಡ್ತೀರ ಅದನ್ನ ಅವು ಪಾಲನೆ ಮಾಡುತ್ತವೆ. ಏನು ನಡೀತಿದೆ ಏನು ಮಾಡುತ್ತೀರಿ ಅದನ್ನ ನಿಮ್ಮ ಮಕ್ಕಳು ಅನುಸರಿಸುತ್ತಾರೆ. ನೀವು ನಿಮ್ಮ ಮನೆಯಲ್ಲಿ ಮಕ್ಕಳ ಮುಂದೆ ಪುಸ್ತಕ ಹಿಡ್ಕೊಂಡು ಓದಕ್ಕೆ ಕೂತ್ಕೊಂಡ್ರೆ, ನಿಮ್ಮ ಮಕ್ಕಳು ಪುಸ್ತಕ ಹಿಡ್ಕೋತಾರೆ. ನೀವು ನಿಮ್ಮ ಮನೆಯಲ್ಲಿ ಮಕ್ಕಳ ಮುಂದೆ ಮರ, ಗಿಡ, ಪರಿಸರ ಅಂದ್ರೆ ಅವ್ರು ನಿಮ್ಮ ಹಿಂದೆ ಬರುತ್ತಾರೆ. ನೀವು ಏನು ಮಾಡ್ತಿರೋ ಅದನ್ನ ನಿಮ್ಮ ಮಕ್ಕಳು ಪಾಲಿಸ್ತಾರೆ. ನೀವು ಮೊದಲು ಪಾಲನೆ ಮಾಡಿ, ಅಭ್ಯಾಸ ಮಾಡಿ. ಆಮೇಲೆ ಶಾಲಾ-ಕಾಲೇಜುಗಳಲ್ಲಿ ಇದು ಕಡ್ಡಾಯವಾಗಿ ಜಾರಿಗೆ ಬರದೇ ಇದ್ದರೆ ಮುಂದೆ ಎಲ್ಲಾ ಪ್ಲಾಸ್ಟಿಕ್‌ಮಯ. ನಾವು ನಮ್ಮ ಮಕ್ಕಳಿಗೆ ಮರಗಿಡಗಳನ್ನು ದಾಖಲೆಗಳಲ್ಲಿ ತೋರಿಸಬೇಕಾಗುತ್ತದೆ. ಪೇಪರ್, ಪುಸ್ತಕಗಳಲ್ಲಿ ತೋರಿಸಬೇಕಾಗುತ್ತದೆ. ಆದ್ದರಿಂದ ಮಕ್ಕಳಿಗೆ ಮೊದಲು ಪರಿಸರ ಮತ್ತು ಪ್ರಕೃತಿಯ ಬಗ್ಗೆ ತಿಳಿಸಬೇಕಾಗಿರುವುದು ಮನೆಯಲ್ಲಿ. ನಂತರ ಶಾಲೆಯಲ್ಲಿ.


ಅನೇಕ ಶಾಲೆಗಳಲ್ಲಿ ನೋಡಿ ಮರಗಿಡಗಳೇ ಇರೋದಿಲ್ಲ. ನೆಲಕ್ಕೆಲ್ಲಾ ಕಾಂಕ್ರಿಟ್ ಹಾಕಿ ಅವರ ಬಸ್ ಟೈಯರ್ ಮಣ್ಣಾಗಬಾರದು ಅನ್ನೋದೇ ವಿನಹ ಮಕ್ಕಳ ಮನಸ್ಸಿಗೆ ಹಸಿರು, ಪರಿಸರ, ಪ್ರಕೃತಿಯ ಬಗ್ಗೆ ತಿಳಿಸಬೇಕೆನ್ನೋ ಮನೋಭಾವನೆ ಬಹಳ ಕಾಲೇಜುಗಳಲ್ಲಿ ಇಲ್ಲವೇ ಇಲ್ಲ. ಎಲ್ಲೋ ಒಂದು ಎರಡು ಪರ್ಸೆಂಟ್ ಇರ್ಬೋದಷ್ಟೇ. ಈರೀತಿ ಆದ್ರೆ ಮಕ್ಕಳಿಗೆ ನಾವು ಪರಿಸರದ ಬಗ್ಗೆ ಏನು ಹೇಳಿಕೊಟ್ಟಂಗಾಗುತ್ತದೆ? ಯೋಚನೆ ಮಾಡಿ. ಆ ಎಳೆಯ ಮನಸ್ಸಿನ ಮಕ್ಕಳ ಮನಸ್ಸಿಗೆ ನಾವು ಪರಿಸರ ಮತ್ತು ಪ್ರಕೃತಿಯ ಬಗ್ಗೆ ತಿಳಿಸದೇ ಇದ್ರೆ, ಮುಂದೆ ನಾವು ದೊಡ್ಡ ಅನಾಹುತವನ್ನು ಎದುರಿಸಬೇಕಾಗುತ್ತದೆ. ಕಾಲೇಜಿನಲ್ಲಿ ಅವರಿಗೆ ಹೇಳಲು ಹೋದರೆ ಅವರಿಗೆ ಅರ್ಥವಾಗೋದಿಲ್ಲ.


ಕಾಲೇಜಿನಲ್ಲಿ ಹೇಳಬೇಕಾಗಿರುವುದು ಶಾಲೆಗಳಲ್ಲಿ ಹೇಳಬೇಕು. ಕನಿಷ್ಠ ಏಳನೇ ತರಗತಿಯಿಂದ ೧೦ನೇ ತರಗತಿ ಮಕ್ಕಳಿಗಾದರೂ ತಿಳಿಸಿದರೆ, ಅವರಿಗೆ ಅದು ಜ್ಞಾನೋದಯವಾಗುತ್ತದೆ. ಪುಟ್ಟ ಪುಟ್ಟ ಮಕ್ಕಳಿಗೂ ಹೇಳಿಕೊಡಿ. ಅದರ ಮೇಲೆ ಪ್ರೀತಿ ಬರುತ್ತದೆ. ಇದು ಮೊದಲು ಶಾಲೆಯಿಂದ ಆಗಬೇಕು. ಪ್ರತಿ ಶಾಲೆ ಆವರಣ ಹಸಿರಿನಿಂದ ಕಂಗೊಳಿಸಬೇಕು. ನೂರಾರು ಮಕ್ಕಳು, ಸಾವಿರಾರು ಮಕ್ಕಳು ಗಂಟೆಗಟ್ಟಲೆ ಇರುವ ವಾತಾವರಣದಲ್ಲಿ ಹಸಿರಿಲ್ಲ ಅಂದಮೇಲೆ ಅವರಿಗೆ ಉಸಿರು ಹೆಂಗೆ ಬರುತ್ತೆ ಹೇಳಿ? ಒಳ್ಳೆಯ ಗಾಳಿ ಹೇಗೆ ಸಿಗ್ಲಿಕ್ಕೆ ಸಾಧ್ಯ ಆಗುತ್ತೆ?


ಒಳ್ಳೆಯ ತಂಪಿನ ಅನುಭವ ಹೇಗೆ ಆಗುತ್ತದೆ? ನೋಡಿದರೆ ಫ್ಯಾನು, ಎಸಿ ಮಧ್ಯದಲ್ಲಿ ಕೂತು ಕುತ್ತಿಗೆ ಮಟ್ಟಕ್ಕೆ ಟೈ ಹಾಕಿ ಮಕ್ಕಳನ್ನು ಉಸಿರು ಕಟ್ಟಿಸುವ ವಾತಾವರಣದಲ್ಲಿ ಕೃತಕವಾಗಿ ಬೆಳೆಸಬಾರದು. ಸ್ವಾಭಾವಿಕವಾಗಿ ಬೆಳೆಸಬೇಕು. ಸ್ವಾಭಾವಿಕವಾಗಿ ಬೆಳೆಸಬೇಕು ಅಂದ್ರೆ, ಅವರನ್ನು ಪರಿಸರದಲ್ಲಿ ಬಿಡಬೇಕು. ಪ್ರಕೃತಿಯ ಅರಿವನ್ನು ಮೂಡಿಸಬೇಕು. ಆಗ ಅದು ಸಾಧ್ಯ. ‘ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು’. ಮಕ್ಕಳಿಗೆ ನೇರವಾಗಿ ಪಾಠದಲ್ಲಿ ತಿಳಿಸಿ, ಯಾಕೆ ಮುಚ್ಚಿಡುತ್ತೀರಿ. ಯಾಕೆ ಸಂಕೋಚ ಪಟ್ಕೋಳ್ತೀರಿ. ಯಾಕೆ ನಾಚಿಕೆ ಆಗುತ್ತಾ? ನಾವು ಮಾಡಿರುವ ತಪ್ಪುಗಳೆಲ್ಲಾ ಗೊತ್ತಾಗುತ್ತೆ ಅನ್ನುವ ಭಯವಾ? ೧೯೬೫ನೇ ಇಸವಿಯಿಂದ ಹಸಿರು ಕ್ರಾಂತಿ ಆದಮೇಲೆ ನಮ್ಮ ಪರಿಸರದಲ್ಲಿ ಎಷ್ಟು ದುಷ್ಪರಿಣಾಮ ಬೀರಿತು ಅನ್ನವುದನ್ನು ತಿಳಿಸಿ ಮಕ್ಕಳಿಗೆ. ಎಷ್ಟು ಜನ ರೋಗಿಗಳು ದೇಶದಲ್ಲಿ ಉದ್ಭವವಾದ್ರು. ೧೯೬೫ನೇ ಇಸವಿಯ ಮೊದಲು ನಮ್ಮಲ್ಲಿ ಸಕ್ಕರೆ ಕಾಯಿಲೆಯವರು ಎಷ್ಟು ಜನ ಇದ್ರು? ಹಸಿರು ಕ್ರಾಂತಿ ಆದ ಮೇಲೆ ಎಷ್ಟು ಜನ ಹೃದಯ ಕಾಯಿಲೆಯವರು, ಸಕ್ಕರೆ ಕಾಯಿಲೆಯವರು ಇನ್ನಿತರ ಕಾಯಿಲೆ ಜಾಸ್ತಿ ಆಯ್ತು, ಆಹಾರವನ್ನು ಹೆಚ್ಚು ಬೆಳೆಸುವ ನೆಪದಲ್ಲಿ ಕೀಟನಾಶಕ, ಕಳೆನಾಶಕ, ರಸಗೊಬ್ಬರದಿಂದ ಆದ ದುಷ್ಪರಿಣಾಮದ ವಿಚಾರವನ್ನು ತಿಳಿಸಿ ಮಕ್ಕಳಿಗೆ.


ಯಾಕೆ ನಾಚಿಕೆ ಪಟ್ಕೋತೀರಿ? ಯಾಕೆ ಸಂಕೋಚ, ಇವನ್ನೆಲ್ಲಾ ತಿಳಿಸಿ. ಸ್ವಾತಂತ್ರ‍್ಯ ಬಂದಾಗ ಎಷ್ಟು ಪರ್ಸೆಂಟ್ ನಮ್ಮಲ್ಲಿ ಅರಣ್ಯ ಇತ್ತು? ಎಷ್ಟು ಪರ್ಸೆಂಟ್ ಅರಣ್ಯ ನಾಶ ಮಾಡಿದ್ದೀವಿ? ಈ ಅರಣ್ಯ ನಾಶ ಮಾಡಿದಮೇಲೆ ಆದಂತಹ ದುಷ್ಪರಿಣಾಮಗಳು ಏನು? ಕಾಡಿನಲ್ಲಿರುವ ಪ್ರಾಣಿಗಳು ನಾಡಿಗೆ ಏಕೆ ಬಂದವು? ಎಂಬುದರ ಬಗ್ಗೆ ಯೋಚಿಸಿ, ಅರಿವು ಮೂಡಿಸಿ.
ನೋಡಿ, ನಮ್ಮ ಪೂರ್ವಿಕರು ಎಷ್ಟು ಒಳ್ಳೆಯ ಯೋಜನೆಗಳನ್ನು ಹಾಕಿದ್ರು. ಆವಾಗ ಯಾವುದೇ ಸರ್ಕಾರ ಇರಲಿಲ್ಲ. ಬ್ರಿಟಿಷ್‌ನವರು ಚಿನ್ನ, ಬೆಳ್ಳಿ, ವಜ್ರ ಎಲ್ಲವನ್ನು ಲೂಟ್ ಮಾಡಿರಬಹುದು. ಆದರೆ, ಪರಿಸರವನ್ನು ಮತ್ತು ಪ್ರಕೃತಿಯನ್ನು ಅವರು ಹಾಳು ಮಾಡ್ಲಿಲ್ಲ. ಸ್ವಾತಂತ್ರ್ಯ ಬಂದ ಮೇಲೆ ಆಗಿರುವಷ್ಟು ಪರಿಸರ, ಪ್ರಕೃತಿಯ ಮೇಲಿನ ದೌರ್ಜನ್ಯ, ನಾಶ ಯಾವತ್ತೂ ಆಗಿರಲಿಕ್ಕೆ ಇಲ್ಲ. ನಮ್ಮ ಪೂರ್ವಿಕರು ಎಷ್ಟು ಚೆನ್ನಾಗಿ ಪ್ರತಿ ಗ್ರಾಮದಲ್ಲೂ ದೇವರಕಾಡು, ಗೋಮಾಳ, ಮೀಸಲು ಅರಣ್ಯ ಅಂತ ಇಟ್ಟುಕೊಂಡಿದ್ದರು. ಯಾವ ಸರ್ಕಾರ ಇರಲಿಲ್ಲ.


ಆಗಲೇ ದೇವರಕಾಡು ಅಂತೇಳಿ, ಜನರಿಗೆ ಭಯ ಹುಟ್ಟಿಸಲಾಗಿತ್ತು. ದೇವರಕಾಡಲ್ಲಿ ಒಂದು ಮರ ಮುಟ್ಟಬಾರದು, ಒಂದು ಮರ ಕಡಿಬಾರದು, ಒಂದು ಸೌದೆ ತರಬಾರದು ಎಂಬ ನಿಯಮ ಮಾಡಲಾಗಿತ್ತು. ಹಾಗೇನಾದರೂ ನೀವು ದೇವರಕಾಡಿನಿಂದ ಒಂದು ಸೌದೆ ತಂದುಬಿಟ್ಟರೆ, ನಿಮ್ಮ ಮನೆಗೆ ದರಿದ್ರ ಬರುತ್ತದೆ, ದೇವರಕಾಡಿನಲ್ಲಿ ಮರ ಕಡಿದರೆ ನಿಮ್ಮ ಮನೆ ನಾಶ ಆಗತ್ತದೆ ಅನ್ನೋ ಒಂದು ಮೂಢನಂಬಿಕೆ , ಅಜ್ಞಾನದ ಮೂಲಕ ಏನೋ ಒಂದು ಭಯದಲ್ಲಿ ಕಾಡನ್ನು ಉಳಿಸಿಕೊಂಡಿದ್ದರು.
ರೈತರು ತಮ್ಮೆಲ್ಲಾ ಭೂಮಿ ಮೇಲೆ ಕೃಷಿ ಮಾಡಿದ ಮೇಲೆ ಗೋಮಾಳದಲ್ಲಿ ದನಗಳನ್ನು ಮೇಯಿಸಿಕೊಳ್ಳುತ್ತಿದ್ದರು. ಗೋಮಾಳ ರಿಸರ್ವ್ ಆಗಿತ್ತು. ಆಮೇಲೆ ಮೀಸಲು ಅರಣ್ಯಗಳು ಇದ್ದವು. ಇವೆಲ್ಲವನ್ನೂ ನಮ್ಮ ಪೂರ್ವಿಕರು ವ್ಯವಸ್ಥಿತವಾಗಿ ಕಾಪಾಡಿಕೊಂಡು ಬಂದಿದ್ರು. ಸ್ವಾತಂತ್ರ್ಯ ಬಂದ ಮೇಲೆ ಬಹುತೇಕ ಎಲ್ಲ ರಾಜಕಾರಣಿಗಳು ದೇವರಕಾಡುಗಳನ್ನು ನಾಶ ಮಾಡಿದರು, ಗೋಮಾಳಗಳನ್ನು ನುಂಗಿದರು. ಕೆರೆಗಳನ್ನು ನುಂಗಿದರು, ರಾಜಕಾಲುವೆಗಳನ್ನು ಮುಚ್ಚಿದ್ರು. ಇದೆಲ್ಲಾ ಮಾಡಿದಂತವರೇ ಇವತ್ತ್ತು ರಾಜಕಾರಣಿಗಳಾಗಿ, ಸಚಿವರಾಗಿ, ಎಂಎಲ್‌ಎಗಳಾಗಿ, ಎಂಪಿಗಳಾಗಿದ್ದಾರೆ. ಅಂತಹವರನ್ನೇ ನಾವು ಪರಿಸರ ದಿನಕ್ಕೆ ಮುಖ್ಯ ಅತಿಥಿಗಳಾಗಿ, ಅಧ್ಯಕ್ಷರಾಗಿ, ಸಲಹೆಗಾರರಾಗಿ, ಭಾಷಣಗಾರರಾಗಿ ಕರೆಯುವಂತಹ ದುಃಸ್ಥಿತಿ ಬಂದಿದೆ. ಅವರಿಗಾಗಿ ಗಂಟೆಗಟ್ಟಲೆ ಮಕ್ಕಳು ಕಾಯಬೇಕಾಗಿದೆ. ಪರಿಸರ ದಿನಾಚರಣೆಗೆ ರಾಜಕಾರಣಿಗಳು ಬರ್ತಾರೆ. ಅವರನ್ನು ಸ್ವಾಗತಿಸಲು ಗಂಟೆಗಟ್ಟಲೆ ಮಕ್ಕಳನ್ನು ಕಾಯಸ್ತಾರೆ.


ಯಾರು ಇವರೆಲ್ಲ? ದೇವರಕಾಡನ್ನು ನಾಶ ಮಾಡಿದೋರು, ಗೋಮಾಳವನ್ನು ನಾಶ ಮಾಡ್ದೋರು. ಮೀಸಲು ಅರಣ್ಯವನ್ನು ನಾಶ ಮಾಡುವವರು, ಮೀಸಲು ಅರಣ್ಯವನ್ನು ಮನಸೋಇಚ್ಛೆ ಜನರಿಗೆ ಮಂಜೂರು ಮಾಡ್ದೋರು. ಇವರನ್ನು ನಾವು ಪರಿಸರ ರಕ್ಷಣೆಗಾಗಿ ಅಂಬಾಸಿಡರ್ ಆಗಿ ಮಾಡುತ್ತೇವೆ. ಅನೇಕ ಚಿತ್ರ ನಟರು ತಮ್ಮ ಹಣವನ್ನು ರೆಸಾರ್ಟ್ನಲ್ಲಿ ವಿನಿಯೋಗಿಸ್ತಾ ಇದ್ದಾರೆ. ಮಾಧ್ಯಮಗಳು ಅವರನ್ನು ಮಾದರಿಯನ್ನಾಗಿ ತೋರಿಸುತ್ತಾರೆ. ಎಂಥಾ ವ್ಯವಸ್ಥೆ ಇದು. ಇದಕ್ಕಿಂತ ದುರಂತ ಬೇಕಾ? ಅಂದಹಾಗೆ ನಿರಾಶರಾಗುವುದು ಬೇಡ. ಎಲ್ಲರೂ ಸಕಾರಾತ್ಮಕವಾಗಿ ಇರಿ. ಎಲ್ಲವೂ ಸರಿಯಾಗುತ್ತದೆ. ಕರೋನದಂತ ವೈರಸ್‌ಗಳು ಇವರನ್ನೆಲ್ಲಾ ಹದ ಮಾಡುತ್ತದೆೆ. ಇವರಿಗೆ ಹೊಡೆದರೆ ಗಾಳಿ ಹೊಡಿಬೇಕು. ಗಾಳಿ ಅಂದ್ರೆ ಕಾಣದೆ ಇರುವ ಕೈ ಹೊಡೀಬೇಕು. ಕರೋನದಂತಹ ಪ್ಯಾಂಡೆಮಿಕ್ ಡಿಸೀಸ್ ಬಂದಾಗ ಇವರಿಗೆ ಎಚ್ಚರ ಆಗುತ್ತದೆ.


ಕೊರೊನಾ ಬಂದಾಗ್ಲೂ ಅನೇಕ ರಾಜಕಾರಣಿಗಳು ಸಂಪಾದನೆ ಮಾಡಿದರು. ಮನೆ ಉರಿದೋಗುತ್ತಿದೆ ಅಂದ್ರೆ ಅಲ್ಲಿ ಗಳ ಎಳೆಯೋ ರಾಜಕಾರಣಿಗಳು ನಮ್ಮಲ್ಲಿ ಇದ್ದಾರೆ. ‘ಉರ್ದೋಗಿರೋ ಮನೆಯಲ್ಲಿ ಹಿಡಿದಿದ್ದೇ ಲಾಭ’ ಅಂತೇಳಿ ಅಲ್ಲೂ ಲಾಭ ಮಾಡಿಕೊಂಡವರೆ. ಇವರನ್ನ ನಮ್ಮ ಆಪತ್ಬಾಂಧವರು ಎಂದು ನಂಬ್ಕೊAಡ್ ಇದೀವಲ್ಲ ಎಂಥಾ ದುರಂತ? ಆತ್ಮೀಯರೇ, ಇವರು ನಂಬಿಕೆಗೆ ಯೋಗ್ಯರಲ್ಲ. ಯಾರನ್ನ ನಂಬೇಕು, ಯಾರನ್ನ ನಂಬಬಾರದು ಎಂಬ ವಿವೇಚನೆಯಿರಲಿ. ನಿಮ್ಮ ತಂದೆ ತಾಯಿಯನ್ನ, ನಿಮ್ಮ ಗುರುವನ್ನ, ನಿಮ್ಮನ್ನ ನಂಬಿ. ನಿಮ್ಮ ಕೈಲಾದಷ್ಟು ಮರಗಿಡಗಳನ್ನು ಬೆಳಸಿ, ಪರಿಸರವನ್ನು ಉಳಿಸಿ, ಪ್ರಕೃತಿಯನ್ನು ಕಾಪಾಡಿ. ಇದು ನಿಮ್ಮಿಂದ ಮಾತ್ರ ಸಾಧ್ಯ. ಅದಕ್ಕೆ ಪ್ರತಿಯೊಬ್ಬನೂ ಈ ಪರಿಸರ, ಪ್ರಕೃತಿಯನ್ನು ಉಳಿಸಿಲಿಕ್ಕೆ ಸ್ವಯಂಯೋಧನಾಗಬೇಕು. ಯೋಧನಾಗಬೇಕಂದ್ರೆ, ಭಾಷಣಕಾರನಾಗೋದಲ್ಲ. ಪ್ರತಿವರ್ಷ ತಮ್ಮ ಹುಟ್ಟುಹಬ್ಬಕ್ಕೆ ತಲಾ ಒಂದೊಂದು ಅರಳಿ ಮರ, ಆಲದ ಮರ, ಬೇವಿನ ಮರ, ಬಿಲ್ವಪತ್ರೆ ಹಾಗೂ ಹೊಂಗೆ…ಹೀಗೆ ಒಂದೈದು ಗಿಡಗಳನ್ನು ನೆಡಿ.
ನೀವು ೧೨೦ ವರ್ಷ ಬದ್ಕಿದ್ರೆ, ಒಂದು ೬೦೦ ಗಿಡ ನೀವು ಭೂಮಿ ಮೇಲೆ ನೆಟ್ಟಂಗಾಗುತ್ತೆ. ಏಕೆ ಇದೇ ಗಿಡಗಳನ್ನು ಹೇಳ್ತಾ ಇದೀನಿ ಅಂದ್ರೆ, ಈ ಗಿಡಗಳನ್ನು ನೆಟ್ಟರೆ ಯಾರೂ ಕಡಿದು ಮಾರಲ್ಲ. ಕಡಿದು ಮಾರಿದ್ರು ಯಾರೂ ತಗೋಳಲ್ಲ. ಈ ಭೂಮಿಯಲ್ಲಿ ಮರಗಳು ಉಳಿಯುತ್ತವೆ. ಪ್ರತಿವರ್ಷ ಶಾಲಾ-ಕಾಲೇಜುಗಳಲ್ಲಿ ಪ್ರತಿ ಗ್ರಾಮದಲ್ಲೂ ಈ ಮರಗಳನ್ನು ನೆಟ್ಟು ಬೆಳೆಸುವಂತಾಗಲಿ. ಅರಣ್ಯ ಇಲಾಖೆಗಳು ಏನ್ ಮಾಡ್ತಾರೆ? ರಸ್ತೆ ಬದಿಯಲ್ಲಿ ಮರಗಳನ್ನು ನೆಡುತ್ತಾರೆ ಸಂತೋಷ. ನೆಡ್ಲಿ. ಎಲ್ಲಿ ನೆಡುತ್ತಾರೆ ಗೊತ್ತಾ ? ಅವರು ಟಾರ್ ರಸ್ತೆಯಿಂದ ಒಂದೆರಡು ಅಡಿ ಅಂತರದಲ್ಲಿ ನೆಡುತ್ತಾರೆ. ಯಾಕಂದ್ರೆ, ಅವರು ಗುಂಡಿ ತೆಗೆಯೋಕು ಅನುಕೂಲ ಆಗಬೇಕು, ತೆಕೊಂಡ ಹೋಗಿ ಗಾಡಿ ನಿಲ್ಸೋಕು ಅನುಕೂಲ ಆಗಬೇಕು.


ಗಿಡಗಳನ್ನು ನೆಟ್ಟ ನಾಲ್ಕೈದು ವರ್ಷಗಳಲ್ಲಿ ರಸ್ತೆ ವಿಸ್ತೀರ್ಣ ಆಗುವಾಗ ಆ ಮರಗಳು ಮಾಯ ಆಗ್ತವೆ. ನೀವೆಲ್ಲಾ ನೋಡಿ ಮೌನವಾಗಿ ರ‍್ತೀರಿ. ಯಾಕಂದ್ರೆ ನಮಗ್ಯಾಕೆ ಅದು, ಅರಣ್ಯ ಇಲಾಖೆ ಕೆಲಸ ಅದು ಅಂತ. ಅವರ ಕೆಲಸ ಅಲ್ಲ ನಮ್ಮ ಕೆಲಸ. ಪ್ರಶ್ನೆ ಮಾಡಬೇಕು ನಾವು. ಅಧಿಕಾರಿಗಳನ್ನು ಪ್ರಶ್ನೆ ಮಾಡಲೇಬೇಕು. ಪ್ರಶ್ನೆ ಮಾಡದೇ ಇದ್ರೆ, ಯಾರೂ ಈ ದೇಶವನ್ನ ಉಳಿಸಲ್ಲ. ಎಲ್ಲರೂ ನಾವೆಲ್ಲರೂ ಸ್ವಯಂಯೋಧರಾಗಿ ಕೆಲಸ ಮಾಡ್ಬೇಕು. ಯಾಕಂದರೆ ಮುಂದೆ ನಮ್ಗೆ ಏನ್ ಬೇಕಾದ್ರೂ ಸಿಗಬೋದು, ಆದ್ರೆ ಒಳ್ಳೆಯ ಗಾಳಿ ಸಿಕ್ಕೋದಿಲ್ಲ. ಆ ಒಳ್ಳೆಯ ಗಾಳಿಗಾಗಿ ನಮ್ಮ ಮಕ್ಕಳ ಉಳಿವಿಗಾಗಿ ನಮ್ಮ ಪರಿಸರ ಮತ್ತು ಪ್ರಕೃತಿಯನ್ನು ಉಳಿಸಬೇಕು. ಅದಕ್ಕೆ ನೀವೆಲ್ಲರೂ ಬದ್ಧರಾಗಿ, ನಿಮ್ಮೆಲ್ಲರಿಗೂ ಒಳ್ಳೆಯದಾಗ್ಲಿ. ಲೋಕಾ ಸಮಸ್ತ ಸುಖೀನೋ ಭವಂತು.

– ಪಾಸಿಟಿವ್ ತಮ್ಮಯ್ಯ
ಸಹಜ ಕೃಷಿಕರು, ಪ್ರಕೃತಿ ಚಿಕಿತ್ಸಕರು ಹಾಗೂ ಯೋಗ ಗುರು
೮೭೬೨೪ ೯೨೮೪೨

Related posts

ಅಪೌಷ್ಠಿಕ ಮಕ್ಕಳನ್ನು ಗುರುತಿಸಿ ಪುನರ್ವಸತಿ ಕೇಂದ್ರಕ್ಕೆ ದಾಖಲಿಸಲು ಆಶಾ ಮತ್ತು ಅಂಗನವಾಡಿ ಕಾರ್ಯಕರತೆಯರಿಗೆ ಕರೆ: ಜಿ.ಪಂ. ಸಿಇಓ

ಪೋಷಕರು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕು

ಈ ಸಚಿವೆ ಬೇರಾರೂ ಅಲ್ಲ ಜಡೇಜಾ ಪತ್ನಿ ರಿವಾಬಾ

Leave a Comment