NEWS

ಅಪೌಷ್ಠಿಕ ಮಕ್ಕಳನ್ನು ಗುರುತಿಸಿ ಪುನರ್ವಸತಿ ಕೇಂದ್ರಕ್ಕೆ ದಾಖಲಿಸಲು ಆಶಾ ಮತ್ತು ಅಂಗನವಾಡಿ ಕಾರ್ಯಕರತೆಯರಿಗೆ ಕರೆ: ಜಿ.ಪಂ. ಸಿಇಓ

ಪಾಲನೆ ನ್ಯೂಸ್

ಮಂಡ್ಯ: ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ತಮ್ಮ ವ್ಯಾಪ್ತಿಯಲ್ಲಿನ ಅಪೌಷ್ಠಿಕ ಮಕ್ಕಳನ್ನು ಗುರುತಿಸಲು ಒಟ್ಟಾಗಿ ಕಾರ್ಯನಿರ್ವಹಿಸುವಂತೆ ಮಂಡ್ಯ ಜಿ.ಪಂ. ಸಿಇಓ ನಂದಿನಿ ಕೆ.ಆರ್ ಅವರು ಆಶಾ ಕಾರ್ಯಕರ್ತೆಯರಿಗೆ ಕರೆ ನೀಡಿದರು.

ಸೋಮವಾರ ನಾಗಮಂಗಲ ತಾಲ್ಲೂಕು ಆಸ್ಪತ್ರೆಯ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಅಪೌಷ್ಠಿಕ ಮಕ್ಕಳ ಪುನರ್ವಸತಿ ಕೇಂದ್ರದಲ್ಲಿ ದೊರೆಯುವ ಸೌಲಭ್ಯಗಳ ಬಗ್ಗೆ ಮಕ್ಕಳ ಪೋಷಕರಿಗೆ ಅರಿವು ಮೂಡಿಸುವಂತೆ ಸಲಹೆ ನೀಡಿದರು.

ನಿರಂತರವಾಗಿ ತೂಕ ಮತ್ತು ಎತ್ತರವನ್ನು ಪರಿಶೀಲನೆ ಮಾಡುವುದು, ಪೂರಕ ಪೌಷ್ಠಿಕ ಆಹಾರವನ್ನು ಓದಗಿಸುವುದು, ಸಾಂಕ್ರಾಮಿಕ ಖಾಯಿಲೆಗಳಿಗೆ ತುತ್ತಾಗದಂತೆ ಎಚ್ಚರಿಕೆ ವಹಿಸುವುದು, ನಿಗಧಿತ ಸಮಯಕ್ಕೆ ಸರಿಯಾಗಿ ಲಸಿಕೆಗಳನ್ನು ಒದಗಿಸುವುದು, ಆಹಾರದಲ್ಲಿ ನಿಯಮಿತವಾಗಿ ವಿಟಮಿನ್, ಐರನ್, ಜಿಂಕ್ ಮತ್ತು ಅಗತ್ಯ ಪೋಷಕಾಂಶಗಳು ಲಭ್ಯವಿರುವಂತೆ ಮಾಡುವುದರಿಂದ ಮಧ್ಯಮ ಮಟ್ಟದ ಅಪೌಷ್ಠಿಕತೆ (MAM) ಯಿಂದ ತೀವ್ರ ಅಪೌಷ್ಠಿಕತೆ (SAM) ಯೆಡೆಗೆ ಹೋಗುವುದನ್ನು ತಪ್ಪಿಸಬಹುದಾಗಿದ್ದು, ಈ ನಿಟ್ಟಿನಲ್ಲಿ ಕೆಲಸ ನಿರ್ವಹಿಸಬೇಕು ಎಂದು ತಿಳಿಸಿದರು.

0-5 ವರ್ಷದೊಳಗಿನ ಎಲ್ಲಾ ಮಕ್ಕಳನ್ನು ಆಗಿಂದಾಗ್ಗೆ ತಪಾಸಣೆಗೆ ಒಳಪಡಿಸಬೇಕು.ಈ ಪೈಕಿ ಅಪೌಷ್ಠಿಕ ಮಕ್ಕಳನ್ನು ಗುರುತಿಸಿ ಅಪೌಷ್ಠಿಕತೆಯಿಂದ ಹೊರತರಲು ಪ್ರಯತ್ನಿಸಬೇಕು ಎಂದು ಆರೋಗ್ಯ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳಿಗೆ ಜಿ.ಪಂ. ಸಿಇಓ ಸೂಚಿಸಿದರು.

ಅಪೌಷ್ಠಿಕ ಮಕ್ಕಳನ್ನು ಪೌಷ್ಠಿಕ ಪುನರ್ವಸತಿ ಕೇಂದ್ರಕ್ಕೆ ದಾಖಲಿಸುವ ಮಕ್ಕಳ ಪೋಷಕರಿಗೆ ಸರ್ಕಾರದಿಂದ ದಿನ ಒಂದಕ್ಕೆ ರೂ.370/-ಗಳನ್ನು ನೀಡಲಾಗುತ್ತದೆ ಹಾಗೂ ಆನೇಕ ಸೌಲಭ್ಯಗಳು ದೊರೆಯುತ್ತದೆ ಎಂಬ ಬಗ್ಗೆ ಮಾಹಿತಿ ನೀಡಿ ಅಪೌಷ್ಠಿಕ ಮಕ್ಕಳನ್ನು ಪುನರ್ವಸತಿ ಕೇಂದ್ರಕ್ಕೆ ಸೇರ್ಪಡೆ ಮಾಡಲು ಕ್ರಮವಹಿಸಬೇಕು ಎಂದು ತಿಳಿಸಿದರು.

ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಪ್ರತ್ಯೇಕ ಅಂಕಿ ಅಂಶಗಳನ್ನು ನೀಡುತ್ತಿದ್ದು, ಯಾವ ಅಂಕಿ ಅಂಶಗಳು ತಾಳೆಯಾಗುತ್ತಿಲ್ಲ. ಆದ್ದರಿಂದ ಇಬ್ಬರು ಪರಿಶೀಲಿಸಿ ವರದಿ ಸಲ್ಲಿಸಬೇಕು.ಹೆಚ್ಚು ಅಪೌಷ್ಠಿಕ ಮಕ್ಕಳನ್ನು ಗುರುತಿಸಿದರೆ ಕೆಲಸ ಜಾಸ್ತಿಯಾಗುವುದೆಂಬ ಮನೋಭಾವನೆಯಿಂದ ಸರಿಯಾದ ವಿವರ ಸಲ್ಲಿಸದಿದ್ದರೆ ಅಂತಹ ಸಿಬ್ಬಂದಿಗಳ ವಿರುದ್ಧ ನಿಯಮಾನುಸಾರ ಶಿಸ್ತು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ತಾಲ್ಲೂಕು ವೈದ್ಯಾಧಿಕಾರಿಗಳು ಅಪೌಷ್ಟಿಕ ಮಕ್ಕಳ ವಿವರ ಪಡೆದು ಅದರಲ್ಲಿನ ಮಕ್ಕಳನ್ನು 3 ವರ್ಗಗಳಾಗಿ ವಿಂಗಡಿಸಬೇಕು. ಮೊದಲನೇ ವರ್ಗದಲ್ಲಿನ SAM ಮಕ್ಕಳನ್ನು ತುರ್ತಾಗಿ NRC ಗೆ ದಾಖಲು ಮಾಡಬೇಕು.ಎರಡನೇ ವರ್ಗದಲ್ಲಿನ ಮಕ್ಕಳು MAM ನಿಂದ SAM ಗೆ ಹೋಗದಂತೆ ತಡೆಯಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕು.ಮೂರನೇ ವರ್ಗದಲ್ಲಿನ ಮಕ್ಕಳನ್ನು ಅಂಗನವಾಡಿ ಕೇಂದ್ರದಲ್ಲಿಯೇ ನಿಗಾವಹಿಸಿ ಪೂರಕ ಪೌಷ್ಟಿಕ ಆಹಾರ ಒದಗಿಸುವ ಮೂಲಕ ಅಪೌಷ್ಟಿಕತೆಯಿಂದ ಹೊರತರಲು ಪ್ರಯತ್ನ ಮಾಡಬೇಕು ಎಂದು ಸೂಚಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಕುಷ್ಠ ರೋಗ ನಿಯಂತ್ರಣಾಧಿಕಾರಿ ಡಾ. ಸೋಮಶೇಖರ್, ಆರ್.ಸಿ.ಹೆಚ್. ಡಾ. ಅಶ್ವಥ್, ಟಿಹೆಚ್ಓ ಡಾ. ನಾರಾಯಣ್, ತಾಲ್ಲೂಕು ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಆದಿತ್ಯ, ಹಾಗೂ ಸಿಡಿಪಿಓ ಕೃಷ್ಣಮೂರ್ತಿ ಸೇರಿದಂತೆ ಇತರರು ಹಾಜರಿದ್ದರು.

Related posts

ಕೆಲಸ ಯಾವುದೇ ಆದರೂ ಸರಿ ಎಲ್ಲರೂ ಶಿಕ್ಷಣ ಪಡೆಯುವುದು ಕಡ್ಡಾಯವಾಗಿರಬೇಕು: ಗಂಗಾಧರಸ್ವಾಮಿ

ಕೆಆರ್ ಎಸ್  ಹಿನ್ನೀರು ಪ್ರದೇಶದಲ್ಲಿ  ಒತ್ತುವರಿ ತೆರವುಗೊಳಿಸಲು ಸರ್ವೆ ಸೂಚನೆ

ಎಪಿಎಂಸಿ ಪರ ಸುಪ್ರೀಂ ಕೋರ್ಟ್ ತೀರ್ಪು

Leave a Comment