NEWS

ಸುತ್ತೂರು ಸಂಸ್ಥಾನ ಸಮಾಜದಲ್ಲಿ ಜನಪರ ಮೌಲ್ಯಗಳನ್ನು ಬಿತ್ತುತ ಬಂದಿದೆ: ಎಂ.ಪಿ. ನರೇಂದ್ರ ಸ್ವಾಮಿ

ಪಾಲನೆ ನ್ಯೂಸ್

ಮಂಡ್ಯ: ಸುತ್ತೂರು ಅತಿ ಪೂರತನ ಮಠಗಳಲ್ಲೊಂದು, ಸುತ್ತೂರು ಸಂಸ್ಥಾನ ಜನಪರ ಕಾಳಜಿ, ಮೌಲ್ಯ, ಶೈಕ್ಷಣಿಕವಾಗಿ ಅನೇಕ ಸುಧಾರಣೆಗಳನ್ನು ಮಾಡುತ್ತಾ ಬಂದಿದೆ ಎಂದು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧ್ಯಕ್ಷ ಹಾಗೂ ಮಳವಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕ ಎಂ.ಪಿ. ನರೇಂದ್ರ ಸ್ವಾಮಿ ಅವರು ಹೇಳಿದರು.

ಮಳವಳ್ಳಿ ಶಾಂತಿ ಕಾಲೇಜಿನ ಮುಂಭಾಗದಲ್ಲಿ ಸೋಮವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಆದಿ ಜಗದ್ಗುರು ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳ 1066 ನೇ ಜಯಂತಿ ಮಹೋತ್ಸವ ವಳವಳ್ಳಿಯಲ್ಲಿ ನಡೆಯುತ್ತಿರುವುದು ಸಂತಸದ ಸಂಗತಿ. ಸುತ್ತೂರು ಮಠ ಸಮಾಜದ ಮೂಢನಂಬಿಕೆಯನ್ನು ಹೋಗಲಾಡಿಸಿ ಅನೇಕರಿಗೆ ಆಶ್ರಯ ನೀಡಿದೆ. ಮಳವಳ್ಳಿಯ ಜನತೆಯ ಪರವಾಗಿ ನಾನು ಸುತ್ತೂರು ಶ್ರೀಗಳಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಹೇಳಿದರು.

ಇಂದು ಆದಿ ಜಗದ್ಗುರು ಶಿವರಾತ್ರೀಶ್ವರ ಶಿವಯೋಗಿಗಳ ಉತ್ಸವಮೂರ್ತಿಯು ಸುತ್ತೂರು ಕ್ಷೇತ್ರದಿಂದ ಟಿ.ನರಸೀಪುರ, ಬೆಳಕವಾಡಿ ಮಾರ್ಗವಾಗಿ ಮಳವಳ್ಳಿ ತಲುಪಲಿದೆ. ನಾಳೆ ನಡೆಯಲಿರುವ ಆದಿ ಜಗದ್ಗುರು ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳ 1066 ನೇ ಜಯಂತಿ ಮಹೋತ್ಸವ ಕಾರ್ಯಕ್ರಮವನ್ನು ಗೌರವಾನ್ವಿತ ರಾಷ್ಟ್ರಪತಿಗಳಾದ ದ್ರೌಪದಿ ಮುರ್ಮು ಹಾಗೂ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರು ಉದ್ಘಾಟನೆ ಮಾಡಲಿದ್ದಾರೆ. ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕಾ ಸಚಿವರಾದ ಹೆಚ್.ಡಿ. ಕುಮಾರಸ್ವಾಮಿ ಹಾಗೂ ರಾಜ್ಯ ಕೃಷಿ ಸಚಿವರಾದ ಚಲುವರಾಯಸ್ವಾಮಿ ಅವರು ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ ಎಂದರು.

ನಿರಂತರ 5 ದಿನಗಳ ಕಾಲ ನಡೆಯುವ ಕಾರ್ಯಕ್ರಮದಲ್ಲಿ ಅನೇಕ ನಾಟಕಗಳ ಪ್ರದರ್ಶನ, ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಕಾರ್ಯಕ್ರಮಕ್ಕೆ ಬರುವ ಸಾರ್ವಜನಿಕರಿಗೆ ಅನ್ನ ದಾಸೋಹ ನಡೆಸಲಾಗುವುದು. ದಾಸೋಹದಲ್ಲಿ ಯಾವುದೇ ಲೋಪ ದೋಷಗಳು ಉಂಟಾಗದಂತೆ ನೋಡಿಕೊಳ್ಳಲಾಗುವುದು ಎಂದು ತಿಳಿಸಿದರು.

ಡಿಸೆಂಬರ್ 21 ರ ಭಾನುವಾರದಂದು ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ಸಿದ್ದಗಂಗಾ ಮಠ, ಆದಿಚುಂಚನಗಿರಿ ಸಂಸ್ಥಾನ ಮತ್ತು ವಾಲ್ಮೀಕಿ ಪೀಠ ರಾಜನಹಳ್ಳಿ ಶ್ರೀಗಳು ಸಮ್ಮುಖದಲ್ಲಿ ಕಾರ್ಯಕ್ರಮ ಜರುಗಲಿದೆ. ಕಾರ್ಯಕ್ರಮದಲ್ಲಿ ಸಿ ಎಂ ಸಿದ್ದರಾಮಯ್ಯ ಹಾಗೂ ಕೇಂದ್ರ ಕಾರ್ಮಿಕ, ಉದ್ಯೋಗ, ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ರಾಜ್ಯ ಸಚಿವರಾದ ಶೋಭಾ ಕರಂದ್ಲಾಜೆ ಭಾಗವಹಿಸಲಿದ್ದಾರೆ ಎಂದರು.

ಸದರಿ ಕಾರ್ಯಕ್ರಮವೂ ಅತ್ಯಂತ ವಿಜೃಂಭಣೆಯಿಂದ ನಡೆಯಲಿದೆ. ಕಾರ್ಯಕ್ರಮದಲ್ಲಿ ಯಾವುದೇ ರಾಜಕೀಯ ಇಲ್ಲ, ಎಲ್ಲರೂ ಸಮಾನರು ಎಂದು ಭಾವಿಸಿ ಕಾರ್ಯಕ್ರಮವನ್ನು ವೈಶಿಷ್ಟ್ಯ ಪೂರ್ವವಾಗಿ ನಡೆಸಲಾಗುವುದು. ಸುತ್ತೂರು ಮಠದ ಭಕ್ತರೆ ಕಾರ್ಯಕ್ರಮದಲ್ಲಿ ಚಪ್ಪರ ಹಾಕಿದ್ದಾರೆ. ಮಳವಳ್ಳಿ ದೀಪಾಲಂಕಾರದಿಂದ ಕಂಗೊಳಿಸುತ್ತಿದೆ ಎಂದು ಹೇಳಿದರು.

ಕನಕಪುರದ ದೇಗುಲ ಮಠದ ಕಿರಿಯ ಶ್ರೀಗಳಾದ ಡಾ. ಶ್ರೀ ಚನ್ನಬಸವ ಸ್ವಾಮೀಜಿ ಅವರು ಮಾತನಾಡಿ, ಸಹಸ್ರಾರು ವರ್ಷಗಳಿಂದ ಸುತ್ತೂರು ಮಠ ಸಮಾಜದಲ್ಲಿ ಸಾಮಾಜಿಕ ಪರಿವರ್ತನೆ ತರಲು ಅನೇಕ ಕಾರ್ಯಕ್ರಮಗಳನ್ನು ರೂಪಿಸಿಕೊಂಡು ಬಂದಿದೆ. ಸಮಾಜಿಕ, ಶೈಕ್ಷಣಿಕ ಸೇರಿದಂತೆ ಇನ್ನೂ ಅನೇಕ ಪ್ರಗತಿಪರ ನಿಲುವಿನಲ್ಲಿ ಕ್ರಾಂತಿ ಮಾಡಿದೆ ಎಂದು ಹೇಳಿದರು.

ಸದರಿ ಕಾರ್ಯಕ್ರಮವನ್ನು ಪಕ್ಷಾತೀತವಾಗಿ ನಡೆಸೋಣ. ಜಿಲ್ಲಾಡಳಿತ ಮತ್ತು ತಾಲೂಕು ಆಡಳಿತ ಎಲ್ಲಾ ನಿಟ್ಟಿನಲ್ಲೂ ಅನೇಕ ಯೋಜನೆಗಳನ್ನು ರೂಪಿಸಿದೆ. ಸುತ್ತೂರು ಶ್ರೀಗಳ ಉತ್ಸವ ಮೂರ್ತಿ ಸುತ್ತೂರಿನಿಂದ ಮಳವಳ್ಳಿಯವರೆಗೂ ಇಂದು ಆಗಮಿಸಲಿದ್ದು ದಾರಿಯ ಎಲ್ಲಾ ಹಳ್ಳಿಗಳಲ್ಲೂ ಸಿಂಗಾರ ಮಾಡಿ ಆದಿ ಜಗದ್ಗುರು ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳ ಉತ್ಸವ ಮೂರ್ತಿಯನ್ನು ಸ್ವಾಗತಿಸಲಿದ್ದಾರೆ ಎಂದು ಹೇಳಿದರು.

ಆರು ತಿಂಗಳಿನಿಂದ ಸದರಿ ಕಾರ್ಯಕ್ರಮವನ್ನು ರೂಪಿಸಲೂ ಯೋಜನೆ ಮಾಡಲಾಗಿತ್ತು. ಎಲ್ಲಾ ಜಾತಿ ಧರ್ಮದ ಜನರು ಸಮಾನ ಮನಸ್ಕ ಭಾವನೆಯಿಂದ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ರೂಪಿಸಲು ಶ್ರಮಿಸಿದ್ದಾರೆ. ಶಾಸಕ ನರೇಂದ್ರ ಸ್ವಾಮಿಯವರು ವಿಶೇಷ ಮುತುವರ್ಜಿ ವಹಿಸಿ ಕಾರ್ಯಕ್ರಮಕ್ಕೆ ಬೆಂಬಲ ನೀಡಿದ್ದಾರೆ ಎಂದು ತಿಳಿಸಿದರು.  

ಜಿಲ್ಲಾಧಿಕಾರಿ ಡಾ. ಕುಮಾರ ಅವರು ಮಾತನಾಡಿ, ನಾಳೆ ಗೌರವಾನ್ವಿತ ರಾಷ್ಟ್ರಪತಿ ಗಳು ಕಾರ್ಯಕ್ರಮಕ್ಕೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಈಗಾಗಲೇ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಸಕಲ ಸಿದ್ಧತೆ ಮಾಡಿಕೊಂಡಿದೆ. ಮಾರೇನಹಳ್ಳಿ ಹೆಲಿಪ್ಯಾಡ್ ನಲ್ಲಿ 3 ಹೆಲಿಕಾಪ್ಟರ್ ನಿಲ್ಲಲ್ಲು ಜಾಗ ಗುರುತಿಸಲಾಗಿದೆ ಎಂದರು.

ಸದರಿ ಕಾರ್ಯಕ್ರಮಕ್ಕೆ ಇಬ್ಬರು ಎ.ಸ್ಪಿ, ಡಿವೈ.ಎಸ್.ಪಿಗಳು ಸೇರಿದಂತೆ 1000 ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ಭದ್ರತಾ ದೃಷ್ಟಿಯಿಂದ ನಿಯೋಜನೆ ಮಾಡಲಾಗಿದೆ. 100 ಮಳಿಗೆಗಳನ್ನು ಸ್ಥಾಪಿಸಲಾಗಿದೆ. 50 ಮಳಿಗೆಗಳನ್ನು ಮಹಿಳಾ ಸ್ವಸಹಾಯ ಗುಂಪುಗಳಿಗೆ ನೀಡಲಾಗಿದೆ. ಕಾರ್ಯಕ್ರಮಕ್ಕೆ ಬರುವ ಸಾರ್ವಜನಿಕರಿಗೆ ಶೌಚಾಲಯ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಮತ್ತು ಪ್ರತಿನಿತ್ಯ ದಾಸೋಹ ನೀಡಲಾಗುವುದು ಎಂದು ಹೇಳಿದರು.

ಸುತ್ತೂರು ಶ್ರೀ ಮಠದ ಕಾರ್ಯದರ್ಶಿ ಮಂಜುನಾಥ್ ಬುದ್ಧಿ ಅವರು ಮಾತನಾಡಿ, ಮಳವಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಜಿಲ್ಲಾಧಿಕಾರಿಗಳು ಸದರಿ ಕಾರ್ಯಕ್ರಮವನ್ನು ತಮ್ಮ ಕಾರ್ಯಕ್ರಮ ಎಂದು ಭಾವಿಸಿ ಅಚ್ಚುಕಟ್ಟಾಗಿ ನಿರ್ವಹಣೆ ಮಾಡಿದ್ದಾರೆ ಎಂದು ತಿಳಿಸಿದರು.

ಪತ್ರಿಕಾ ಗೋಷ್ಠಿಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಮಳವಳ್ಳಿ ತಾಲೂಕು ಆಡಳಿತ ಸಿಬ್ಬಂದಿ ಉಪಸ್ಥಿತರಿದ್ದರು.

Related posts

ವಿವಾದಕ್ಕೆ ಕಾರಣವಾದ ನಟ ಚೇತನ್ ಅಹಿಂಸಾ ಟ್ವಿಟ್

ಪರಿಚಯ ಮಕ್ಕಳ ಸಾಹಿತ್ಯ ಪ್ರಶಸ್ತಿ ಪ್ರದಾನ ಏ. 12ಕ್ಕೆ

ಟೈಟಾನ್ಸ್‌ಗೆ ಇದು 5 ಪಂದ್ಯಗಳಲ್ಲಿ 3ನೇ ಗೆಲುವು

Leave a Comment