VIEWS

ದ್ವೇಷ ಮಾಡುವುದು ಜೀವನವೇ ಅಲ್ಲ

ಬದುಕಲು ಬೇಕು ಬದುಕುವ ಈ ಮಾತು | ಡಾ. ಪಾಟೀಲ್ ಪುಟ್ಟಪ್ಪ

ಪಾಲನೆ ಚಿಂತನೆ

ಮನುಷ್ಯನು ತಾನೇನನ್ನು ಪ್ರೀತಿಸುವನೋ ಅದರೊಂದಿಗೆ ಬದುಕಿರಬೇಕು. ಆದರೆ, ದ್ವೇಷದೊಂದಿಗೆ ಬದುಕಿರಬಾರದು. ಮನಸ್ಸಿನಲ್ಲಿ ದ್ವೇಷವನ್ನು ತುಂಬಿಕೊಂಡಿರುವವನು ರೋಗಗ್ರಸ್ತ ಮನುಷ್ಯನಾಗಿರುತ್ತಾನೆ. ದ್ವೇಷದಿಂದ ಬಳಲುವವನು ತಾನು ಮಾತ್ರ ದುಃಖಿ ಆಗಿರದೆ, ತನ್ನ ಸುತ್ತಲೂ ಇರುವ ಜನರನ್ನು ದುಃಖಿಗಳನ್ನಾಗಿ ಮಾಡಿರುತ್ತಾನೆ.

ದ್ವೇಷವು ದ್ವೇಷದಿಂದ ಉಪಶಮನಗೊಳ್ಳುವುದಿಲ್ಲ; ಅದು ಪ್ರೇಮದಿಂದ ಮಾತ್ರ ಉಪಶಮನಗೊಳ್ಳುವುದು ಎಂದು ಬುದ್ಧ ಹೇಳಿದ್ದಾನೆ. ಮನುಷ್ಯನು ತನ್ನ ಜೀವನದಲ್ಲಿ ಅನುಸರಿಸಬೇಕಾದ ಚಿರಂತನ ಸೂತ್ರ ಅದು. ಮನುಷ್ಯನು ದ್ವೇಷಿಸುತ್ತ ಬದುಕದೆ ಪ್ರೀತಿಸುತ್ತ ಬದುಕಬೇಕು. ಜನರನ್ನು ದ್ವೇಷ ಮಾಡುವುದು ಬೇರೆಯಲ್ಲ, ಇಲಿಯನ್ನು ಓಡಿಸಲು ಮನೆಗೆ ಬೆಂಕಿ ಇಕ್ಕುವುದು ಬೇರೆಯಲ್ಲ.



ದ್ವೇಷವು ಒಂದು ವಿಧದ ವಿಷ ಇದ್ದಂತೆ. ದ್ವೇಷ ಮಾಡುವವನು ಇನ್ನೊಬ್ಬರನ್ನು ಅಣಕಿಸುವುದಕ್ಕೋಸುಗ ತನ್ನ ಮುಖವನ್ನೇ ತಿರುಚಿ ವಿಕಾರ ಮಾಡಿಕೊಂಡಿರುತ್ತಾನೆ. ದ್ವೇಷ ಮನೋಭಾವನೆಯನ್ನು ಬೆಳೆಸಿಕೊಂಡ ಅವನು ಎಲ್ಲವನ್ನೂ ದ್ವೇಷಿಸತೊಡಗುತ್ತಾನೆ. ಅವನು ಪ್ರಭುತ್ವವನ್ನು ದ್ವೇಷಿಸುತ್ತ ತನ್ನ ದೇಶವನ್ನು ದ್ವೇಷಿಸುತ್ತಾನೆ. ಅಂಥ ಮನೋಭಾವನೆ ಬೆಳೆಯುವುದಕ್ಕೆ ದ್ವೇಷವೇ ಕಾರಣವಾಗಿದೆ. ದೇಶದ ಸಾರ್ವಜನಿಕವು ಈ ದ್ವೇಷದಿಂದಲೇ ವಿಷಪೂರಿತವಾಗಿದೆ.

ನಮ್ಮ ಜೀವನದಲ್ಲಿ ನಾವು ದ್ವೇಷದಿಂದ ಮಾರ್ಗದರ್ಶನ ಪಡೆದರೆ ನಮಗೆ ಯಾವುದೂ ಸರಿಯಾಗಿ ಕಾಣುವುದಿಲ್ಲ. ನೇರವಾಗಿ ಇರುವುದೂ ಕೂಡ ನಮ್ಮ ಕಣ್ಣಿಗೆ ವಕ್ರವಾಗಿ ಕಾಣಿಸುತ್ತದೆ. ನಮಗೆ ಸೇರಿಕೆ ಇಲ್ಲದಿರುವುದನ್ನು ನಾವು ಮೆಚ್ಚಬೇಕೆನ್ನುವುದೇನೂ ಇಲ್ಲ. ಆದರೆ, ನಮಗೆ ಮೆಚ್ಚುಗೆ ಆಗದೇ ಇರುವುದನ್ನು ನಾವು ದ್ವೇಷಿಸಬಾರದು.

ನಾವು ದ್ವೇಷಿಸಬೇಕಾದ ಸಂಗತಿಗಳಿವೆ. ನಾವು ಆಷಾಢಭೂತಿತನವನ್ನು ದ್ವೇಷಿಸಬೇಕು. ಅನ್ಯಾಯವನ್ನು ದ್ವೇಷಿಸಬೇಕು. ಶೋಷಣೆಗಳನ್ನು ದ್ವೇಷಿಸಬೇಕು. ಹಿಂಸೆಯನ್ನು ದ್ವೇಷಿಸಬೇಕು.

ಮನುಷ್ಯನು ತನ್ನನ್ನು ದ್ವೇಷಿಸಬಾರದು. ಇನ್ನೊಬ್ಬರನ್ನೂ ದ್ವೇಷಿಸಬಾರದು. ತನ್ನನ್ನು ದ್ವೇಷಿಸುತ್ತ ಅವನು ತನ್ನನ್ನೂ ಸುಧಾರಿಸಿಕೊಳ್ಳುವುದಿಲ್ಲ. ಇನ್ನೊಬ್ಬರನ್ನು ದ್ವೇಷಿಸುತ್ತ ಅವನು ಇನ್ನೊಬ್ಬರನ್ನೂ ಸುಧಾರಿಸುವುದಿಲ್ಲ.

(ಕೃಪೆ: ಡಾ. ಪಾಟೀಲ್ ಪುಟ್ಟಪ್ಪ ಅವರ ಕನ್ನಡದ ಬೈಬಲ್ ಎಂದೇ ಹೆಸರಾದ ಬದುಕಲು ಬೇಕು ಬದುಕುವ ಈ ಮಾತು ಕೃತಿಯಿಂದ.)


ಪಾಟೀಲ್ ಪುಟ್ಟಪ್ಪ (14 ಜನವರಿ 1921 – 16 ಮಾರ್ಚ್ 2020). ಪತ್ರಕರ್ತ, ಸಾಹಿತಿ, ಕನ್ನಡ ಪರ ಹೋರಾಟಗಾರ. ಕನ್ನಡಿಗರೆಲ್ಲರಿಗೂ `ಪಾಪು’ ಎಂದೇ ಚಿರಪರಿಚಿತರು. ವಿಶಾಲ ಕರ್ನಾಟಕ ದಿನಪತ್ರಿಕೆ, ನವಯುಗ ಮಾಸ ಪತ್ರಿಕೆ ಸಂಪಾದಕರಾಗಿದ್ದರು.1954ರಲ್ಲಿ ಪ್ರಪಂಚ ವಾರಪತ್ರಿಕೆಯನ್ನು ಪ್ರಾರಂಭಿಸಿದರು. 1957ರಲ್ಲಿ ಸಂಗಮ ಎಂಬ ಕನ್ನಡ ಡೈಜಸ್ಟ್ ಪ್ರಾರಂಭಿಸಿದರು. 1959ರಲ್ಲಿ ವಿಶ್ವವಾಣಿ ದೈನಿಕ, ಮನೋರಮಾ ಎಂಬ ಚಲನಚಿತ್ರ ಮಾಸಿಕ ಆರಂಭಿಸಿದರು.

Related posts

ದಿನಕ್ಕೊಂದು ಕವಿತೆ : ಒಂದು ಪುಸ್ತಕ

ಸ್ವರ್ಗದಲ್ಲಿ ಹುಟ್ಟಿದಾಕೆ…

ಮೋದಿ ಹೇಳಿದ ನವ ಸೇವೆ – ನವ ಸಂಕಲ್ಪ

Leave a Comment