ಪಾಲನೆ ನ್ಯೂಸ್
ಮಂಡ್ಯ: ಜಿಲ್ಲಾ ಪಂಚಾಯಿತಿಯ ಕಾವೇರಿ ಸಭಾಂಗಣದಲ್ಲಿ ಕೃಷಿ ಉತ್ಪನ್ನಗಳ ಸಂಸ್ಕರಣೆ ಮತ್ತು ಮೌಲ್ಯವರ್ಧನೆ ಕಾರ್ಯಗಾರವನ್ನು ಆಯೋಜಿಸಲಾಯಿತು. ಮಹಿಳಾ ಸಬಲೀಕರಣಕ್ಕೆ ಆರ್ಥಿಕ, ಸಾಮಾಜಿಕ ಹಾಗೂ ಕೌಟುಂಬಿಕ ಕ್ಷೇತ್ರಗಳಲ್ಲಿ ಅವಕಾಶಗಳನ್ನು ಒದಗಿಸುವುದು ಅತ್ಯಗತ್ಯ ಎಂದು ಮಾನ್ಯ ಜಿಲ್ಲಾಧಿಕಾರಿಯವರಾದ ಡಾ. ಕುಮಾರ್ ರವರು ತಿಳಿಸಿದರು.
ಮಹಿಳೆಯರು ಕೃಷಿ ಹಾಗೂ ಎಲ್ಲಾ ಚಟುವಟಿಕೆಗಳಲ್ಲಿ ಪ್ರಮುಖ ಪಾತ್ರವಹಿಸುತ್ತಿದ್ದು, ಮೌಲ್ಯವರ್ಧನೆ, ಬ್ರಾಂಡಿಂಗ್ ಮತ್ತು ಮಾರುಕಟ್ಟೆ ಸಂಪರ್ಕದ ಮೂಲಕ ರೈತರಿಗೆ ಉತ್ತಮ ಆದಾಯ ಸಿಗಲು ಸಾಧ್ಯವಿದೆ ಎಂದು ಹೇಳಿದರು.
ರೈತ ಉತ್ಪಾದಕ ಸಂಘಗಳು ಇನ್ನಷ್ಟು ಬಲಿಷ್ಠವಾಗಬೇಕಿದ್ದು, “ಸಿರಿ ಸಮೃದ್ಧಿ” ಯಂತಹ ಬ್ರಾಂಡ್‌ಗಳ ಮೂಲಕ ಸ್ಥಳೀಯ ಉತ್ಪನ್ನಗಳಿಗೆ ಮಾರುಕಟ್ಟೆಯಲ್ಲಿ ಉತ್ತಮ ಸ್ಥಾನ ಸಿಗಬೇಕು. ಕೃಷಿ ಕ್ಷೇತ್ರವು ಲಾಭದಾಯಕವಾಗಿದ್ದು, ತಾಂತ್ರಿಕ ಜ್ಞಾನ ಮತ್ತು ಮೌಲ್ಯವರ್ಧನೆಯಿಂದ ಸ್ಥಿರ ಆದಾಯ ಗಳಿಸಬಹುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಶ್ರೀಮತಿ ಕೆ.ಆರ್. ನಂದಿನಿ ರವರು ಮಾತನಾಡಿ, ಮಹಿಳಾ ದಿನಾಚರಣೆಯನ್ನು ಅರ್ಥಪೂರ್ಣಗೊಳಿಸುವ ನಿಟ್ಟಿನಲ್ಲಿ ವಿವಿಧ ವಿನೂತನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಲಿಂಗತ್ವ ದೌರ್ಜನ್ಯ ತಡೆ ಕುರಿತ ಕಾನೂನು ಅರಿವು, FNHW ಕಾರ್ಯಾಗಾರ ಹಾಗೂ ಮಹಿಳೆಯರ ಆತ್ಮರಕ್ಷಣಾ ತರಬೇತಿ ಸೇರಿದಂತೆ ಹಲವಾರು ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಲಾಗಿದೆ ಎಂದು ವಿವರಿಸಿದರು.
ಇಂದಿನ ಕಾರ್ಯಗಾರವು ಕೃಷಿ ಉತ್ಪನ್ನಗಳ ಮೌಲ್ಯವರ್ಧನೆ, ಸಂಸ್ಕರಣೆ ಮತ್ತು ಮಾರುಕಟ್ಟೆ ಸಂಪರ್ಕದ ಮೂಲಕ ಮಹಿಳೆಯರ ಆರ್ಥಿಕ ಸ್ವಾವಲಂಬನೆಯನ್ನು ಹೆಚ್ಚಿಸುವ ದಿಟ್ಟ ಹೆಜ್ಜೆಯಾಗಿದ್ದು, ಕೃಷಿ ಸಖಿ ಹಾಗೂ ಪಶು ಸಖಿಯರ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದು ತಿಳಿಸಿದರು.

ಕೃಷಿ ಉತ್ಪನ್ನಗಳನ್ನು ನೇರವಾಗಿ ಮಾರಾಟ ಮಾಡುವುದಕ್ಕಿಂತ ಮೌಲ್ಯವರ್ಧನೆ, ಬ್ರಾಂಡಿಂಗ್ ಮತ್ತು ಪ್ಯಾಕೇಜಿಂಗ್ ಮಾಡುವ ಮೂಲಕ ಹೆಚ್ಚಿನ ಆದಾಯ ಗಳಿಸಬಹುದು ಎಂದು ತಿಳಿಸಿದರು.
ಸಿ.ಎಫ್.ಟಿ.ಆರ್.ಐ ಸಂಸ್ಥೆಯಿಂದ ಆಗಮಿಸಿದ ಡಾ. ಉಷಾ ಧರ್ಮರಾಜ್ ಹಾಗೂ ಡಾ. ರೇವತಿ ಭಾಸ್ಕರ್ ರವರು ಧಾನ್ಯ, ಸಿರಿಧಾನ್ಯ, ಹಣ್ಣು-ತರಕಾರಿ ಸಂಸ್ಕರಣೆ, ಪ್ಯಾಕೇಜಿಂಗ್ ಹಾಗೂ ಶೆಲ್ಫ್ ಲೈಫ್ ವೃದ್ಧಿ ಕುರಿತ ತಾಂತ್ರಿಕ ಮಾಹಿತಿಯನ್ನು ನೀಡಿದರು.
ಕೃಷಿ – ಪಶು ಸಖಿ ತರಬೇತಿ ಪಡೆದುಕೊಂಡು ಗ್ರಾಮ ಮಟ್ಟದಲ್ಲಿ ರೈತರು ಮತ್ತು ಮಹಿಳಾ ಸಂಘಗಳಿಗೆ ಕಾರ್ಯಾಗಾರದ ಸದುಪಯೋಗವನ್ನು ತಿಳಿಸುವಂತೆ ಸೂಚಿಸಿದರು.

ಇತ್ತೀಚೆಗೆ ನಡೆದ ಕೃಷಿ ಮೇಳದಲ್ಲಿ ಎನ್‌ಆರ್‌ಎಲ್‌ಎಂ ಮಹಿಳಾ ಪೆವಿಲಿಯನ್‌ಗೆ ಉತ್ತಮ ಪ್ರತಿಕ್ರಿಯೆ ದೊರೆತಿದ್ದು, ಮಹಿಳೆಯರು 60ಕ್ಕೂ ಹೆಚ್ಚು ಸ್ಟಾಲ್‌ಗಳನ್ನು ನಿರ್ವಹಿಸಿರುವುದು ಗಮನಾರ್ಹ ಸಾಧನೆ ಎಂದು ಹೇಳಿದರು. ಮಹಿಳೆಯರು ಉದ್ಯೋಗ ಬೇಡುವವರಾಗಿರದೆ, ಉದ್ಯೋಗ ಸೃಷ್ಟಿಸುವವರಾಗಬೇಕು ಎಂಬುದು ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಯೋಜನಾ ನಿರ್ದೇಶಕರಾದ ಎಸ್.ಸುಂದರ್ ರಾಜ್, ಸಹಾಯಕ ಯೋಜನಾಧಿಕಾರಿಗಳಾದ ಶ್ರೀಹರ್ಷ, ವಿಜ್ಞಾನಿಗಳಾದ ಡಾ. ಉಷಾ ಧರ್ಮರಾಜ್ ಹಾಗೂ ಡಾ. ರೇವತಿ ಭಾಸ್ಕರನ್, ಉಪ ಕಾರ್ಯದರ್ಶಿ(ಆಡಳಿತ), ಶಿವಲಿಂಗಯ್ಯ, ಎನ್‌ಆರ್‌ಎಲ್‌ಎಂ ಸಿಬ್ಬಂದಿಗಳು, ಕೃಷಿ ಸಖಿ, ಪಶು ಸಖಿ ಉಪಸ್ಥಿತರಿದ್ದರು.
✅ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn
