NEWS

14ನೇ ದಿನಕ್ಕೆ ಕಾಲಿಟ್ಟ ಕೆಎಸ್‌ಐಸಿ ಕಾರ್ಮಿಕರ ಹೋರಾಟ

ಪಾಲನೆ ನ್ಯೂಸ್
ತಿ.ನರಸೀಪುರ: ಪಟ್ಟಣದ ಘಟಕದ ಆವರಣದಲ್ಲಿ ಕ್ರೀಡಾಂಗಣ ನಿರ್ಮಿಸುವುದನ್ನು ವಿರೋಧಿಸಿ ನಡೆಯು ತ್ತಿರುವ ಪ್ರತಿಭಟನೆ ಬುಧವಾರ 14ನೇ ದಿನಕ್ಕೆ ಕಾಲಿಟ್ಟಿದ್ದು, ಕನ್ನಡ ಸೇನೆ-ಕರ್ನಾಟಕ ಸದಸ್ಯರು ಬುಧವಾರ ಪ್ರತಿಭಟನೆಯಲ್ಲಿ ಪಾಲ್ಗೊಂಡು ಬೆಂಬಲ ಸೂಚಿಸಿದರು.


ಸಂಘಟನೆಯ ತಾಲ್ಲೂಕು ಅಧ್ಯಕ್ಷ ಕೆ.ರಾಚು ನೇತೃತ್ವದಲ್ಲಿ ನೂರಾರು ಮಂದಿ ಸದಸ್ಯರು ಕ್ರೀಡಾಂಗಣ ನಿರ್ಮಾಣಕ್ಕೆ ವಿರೋಧ ವ್ಯಕ್ತ ಪಡಿಸಿ ಕಾರ್ಖಾನೆ ಮುಂಭಾಗ ನಡೆಸುತ್ತಿರುವ ಧರಣಿಯಲ್ಲಿ ಪಾಲ್ಗೊಳ್ಳುವ ಮೂಲಕ ಕಾರ್ಮಿಕರಿಗೆ ಬೆಂಬಲ ಸೂಚಿಸಿದರು.
ಈ ವೇಳೆ ಮಾತನಾಡಿದ ಕೆ.ರಾಚು, ಪಟ್ಟಣದ ಕೆಎಸ್‌ಐಸಿ ಸಂಸ್ಥೆಯು ನಾಲ್ವಡಿ ಕೃಷ್ಣರಾಜ ಒಡೆಯರ್ ನಿರ್ಮಿಸಿರುವ ಆಧುನಿಕ ತಂತ್ರಜ್ಞಾನ ಒಳಗೊಂಡ ಕಾರ್ಖಾನೆಯಾಗಿದ್ದು, ಇಲ್ಲಿ ನೂರಾರು ಮಂದಿ ಉದ್ಯೋಗಿಗಳು ಬದುಕು ಕಟ್ಟಿಕೊಂಡಿದ್ದಾರೆ. ಈಗ ಸರ್ಕಾರ ಕಾರ್ಖಾನೆ ಆವರಣದಲ್ಲೇ ಕ್ರೀಡಾಂಗಣ ನಿರ್ಮಿಸಲು ಹೊರಟಿರುವ ಬೆಳವಣಿಗೆ ಸರಿಯಲ್ಲ. ಸರ್ಕಾರದ ನಡೆ ಅವೈಜ್ಞಾನಿಕವಾಗಿದ್ದು ಇಲ್ಲಿ ಕ್ರೀಡಾಂಗಣ ನಿರ್ಮಾಣ ಮಾಡುವುದರಿಂದ ಅನೇಕ ಸಮಸ್ಯೆಗಳು ಎದುರಾಗಲಿವೆ. ಮುಂದೆ ಫ್ಯಾಕ್ಟರಿಯನ್ನೇ ಮುಚ್ಚುವ ಪರಿಸ್ಥಿತಿ ಸಹ ಬರಬಹುದು. ಇದನ್ನೇ ನಂಬಿ ಜೀವನ ಸಾಗಿಸುತ್ತಿರುವ ಕಾರ್ಮಿಕರ ಭವಿಷ್ಯ ಬೀದಿಗೆ ಬೀಳಲಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಸರ್ಕಾರ ಈಗ ಕ್ರೀಡಾಂಗಣ ನಿರ್ಮಾಣಕ್ಕೆ ಗುರುತು ಮಾಡಿರುವ ಜಾಗದ ಮರು ಪರಿಶೀಲನೆ ಮಾಡಬೇಕು. ಸಾವಿರಾರು ಜನರಿಗೆ ಅನ್ನ ನೀಡಿದ ಹಾಗೂ ಮೈಸೂರು ರೇಷ್ಮೆ ಸೀರೆಗೆ ನೂಲು ಪೂರೈಸುವ ಫ್ಯಾಕ್ಟರಿಯನ್ನು ಮತ್ತಷ್ಟು ಪುನರುಜ್ಜಿವನಗೊಳಿಸುವ ಮೂಲಕ ಸಂಸ್ಥೆಗೆ ಕಾಯಕಲ್ಪ ನೀಡಬೇಕು. ಹೆಚ್ಚಿನ ಕಾರ್ಮಿಕರನ್ನು ನೇಮಕ ಮಾಡಿಕೊಳ್ಳುವ ಮೂಲಕ ಉತ್ಪಾದನೆ, ಗುಣ ಮಟ್ಟದ ಕಡೆ ಗಮನಹರಿಸಬೇಕು. ಆ ನಿಟ್ಟಿನಲ್ಲಿ ಸರ್ಕಾರ ಈ ಜಾಗದಲ್ಲಿ ಕ್ರೀಡಾಂಗಣ ನಿರ್ಮಿ ಸುವ ಯೋಜನೆ ಕೈಬಿಟ್ಟು ಬೇರೆಡೆ ಜಾಗ ಗುರುತಿಸಿ ಕ್ರೀಡಾಪಟುಗಳಿಗೆ ಅನುಕೂಲ ಕಲ್ಪಿಸಿಕೊಡಬೇಕು. ಕೆ.ರಾಚು, ಕನ್ನಡ ಸೇನೆ-ಕರ್ನಾಟಕ ಸಂಘಟನೆಯ ತಾಲ್ಲೂಕು ಅಧ್ಯಕ್ಷ. ಸಂಘಟನೆಯ ಮಂಡ್ಯ ಜಿಲ್ಲಾಧ್ಯಕ್ಷ ಮಂಜು ನಾಥ್ ಮಾತನಾಡಿ, ಕೆಎಸ್‌ಐಸಿ ಫ್ಯಾಕ್ಟರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಮಾಜ ಕಲ್ಯಾಣ ಸಚಿವ ಹೆಚ್.ಸಿ. ಮಹದೇವಪ್ಪರವರ ತವರು ಕ್ಷೇತ್ರ ವ್ಯಾಪ್ತಿಗೆ ಒಳಪಡುತ್ತದೆ. ಕ್ರೀಡಾಂಗಣ ನಿರ್ಮಾಣ ಮಾಡಲು ಸಾಕಷ್ಟು ಜಾಗಗಳಿವೆ.

ಸಚಿವರ ಕ್ಷೇತ್ರ ದಲ್ಲಿ ಹೆಣ್ಣು ಮಕ್ಕಳು ಬೀದಿಗಿಳಿದು ಹೋರಾಟ ಮಾಡುತ್ತಿದ್ದಾರೆ. ಕೂಡಲೇ ಅವರ ಸಮಸ್ಯೆ ಬಗೆಹರಿಸಬೇಕಿದೆ. ಕಾರ್ಮಿಕರ ಸಭೆ ಕರೆದು ಹಾಗೂ ಜನಾಭಿಪ್ರಾಯ ಸಂಗ್ರಹ ಮಾಡದೇ ಏಕಾ ಏಕಿ ಕ್ರೀಡಾಂಗಣ ನಿರ್ಮಾಣ ಮಾಡಲು ಆದೇಶ ಮಾಡಿರುವುದು ಖಂಡನೀಯ. ಕೂಡಲೇ ಆದೇಶ ಹಿಂಪಡೆದು ಕಾರ್ಖಾನೆ ಯನ್ನು ಉಳಿಸಿ ಬೇರೊಂದೆಡೆ ಜಾಗ ಗುರುತಿಸಿ ಕ್ರೀಡಾಂಗಣ ನಿರ್ಮಾಣ ಮಾಡಬೇಕೆಂದು ಅವರು ಒತ್ತಾಯಿಸಿದರು. ಅಗತ್ಯ ಬಿದ್ದರೆ ಮಂಡ್ಯ, ಮೈಸೂರಿನಲ್ಲಿ ಕಾರ್ಮಿಕರ ಪರವಾದ ಹೋರಾಟ ಮಾಡಲು ನಮ್ಮ ಸಂಘಟನೆ ಸಿದ್ದವಿದೆ. ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ಮಾಡಿ ಕಾರ್ಮಿಕರಿಗೆ ಸಂಪೂರ್ಣ ಬೆಂಬಲ ಸೂಚಿಸುತ್ತೇವೆ ಎಂದು ತಿಳಿಸಿದರು.


ಪ್ರತಿಭಟನೆ ನಂತರ ಸಂಘಟನೆಯ ಸದಸ್ಯರು ತಾಲ್ಲೂಕು ಕಚೇರಿಗೆ ತೆರಳಿ ಶಿರಸ್ತೆದಾರ್ ಮಂಜುಳಾರಿಗೆ ಮನವಿ ಸಲ್ಲಿಸಿದರು. ಪ್ರತಿ ಭಟನೆಯಲ್ಲಿ ಸಂಘಟನೆಯ ಜಿಲ್ಲಾಧ್ಯಕ್ಷ ಹೆಚ್. ಎಸ್.ರಾಚಪ್ಪಾಚಾರಿ, ಮೈಸೂರು ಜಿಲ್ಲಾಧ್ಯಕ್ಷೆ ಶೈಲಜಾ, ಜಿಲ್ಲಾ ಕಾರ್ಮಿಕ ಘಟಕದ ಅಧ್ಯಕ್ಷ ಆರ್.ಸಿದ್ದರಾಜು, ಗೌರವಾಧ್ಯಕ್ಷೆ ದಾಕ್ಷಾಯಿಣಿ, ಯಶೋಧಮ್ಮ, ಗೀತಾ, ಜಿಲ್ಲಾ ಉಪಾಧ್ಯಕ್ಷ ಎಂ.ಮಲ್ಲೇಶ್, ಪ್ರಕಾಶ್, ಕಾಳಸ್ವಾಮಿ, ನಾಗರಾಜು, ಪುಟ್ಟ ಸುಂದರ, ತುಂಬಲ ಗಣೇಶ್, ತಬಲಾ ರಾಚಪ್ಪ, ಕೇಬಲ್ ಸ್ವಾಮಿ, ಸೋಮಣ್ಣ ಮತ್ತಿತರರು ಭಾಗವಹಿಸಿದ್ದರು.

✅ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn

Related posts

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ IPL ಪಂದ್ಯ ನಡೆಸಲು RCB ಹಿಂಜರಿಯುತ್ತಿದೆ: ವೆಂಕಟೇಶ್ ಪ್ರಸಾದ್

ವರನಟ ಡಾ. ರಾಜ್‌ಕುಮಾರ್ ಅವರಿಗೆ ಮರಣೋತ್ತರ ‘ಭಾರತ ರತ್ನ’ ನೀಡಲು ಮನವಿ ಮಾಡಿ

ಪೂರ್ಣಪ್ರಜ್ಞಶಾಲೆಯ ವಿದ್ಯಾರ್ಥಿಗಳು ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆ

Leave a Comment