NEWS

ಗ್ರಾಪಂನ 590 ಜನಕ್ಕೆ ಉದ್ಯೋಗ ಭದ್ರತೆ

ಪಾಲನೆ ನ್ಯೂಸ್

ಮಂಡ್ಯ: ಗ್ರಾಪಂಗಳಲ್ಲಿ ಕಳೆದ 20 ವರ್ಷಗಳಿಂದ ವಿದ್ಯಾರ್ಹತೆ ಕೊರತೆಮತ್ತು ತಾಂತ್ರಿಕದಾಖಲೆಗಳ ಅಲಭ್ಯತೆಯಿಂದ ಕನಿಷ್ಠ ವೇತನಕ್ಕೆ ದುಡಿಯುತ್ತಿದ್ದ 590 ನೌಕರರಿಗೆ ಉದ್ಯೋಗ ಭದ್ರತೆ ದೊರಕಿದೆ. ಎಲ್ಲಾ ಅಡೆ-ತಡೆಗಳ ನಡುವೆ ಮಂಡ್ಯ ಜಿಲ್ಲಾ ಪಂಚಾಯ್ತಿ ಮಾದರಿ ನಡೆಯನ್ನು ಅನುಸರಿಸಿದೆ.

ಸರ್ಕಾರವು 2017ರ ಅಕ್ಟೋಬರ್ 31ಕ್ಕಿಂತ ಮೊದಲು ನೇಮಕಗೊಂಡವರಿಗೆ ಅನುಮೋದನೆ ನೀಡಲು ಮುಂದಾಗಿದ್ದರೂ, ಅಲ್ಲಿ ಒಂದು ದೊಡ್ಡ ತಾಂತ್ರಿಕ ಅಡ್ಡಿಯಿತ್ತು. ಹೆಚ್ಚಿನ ಶ್ರಮಿಕರಿಗೆ ಕನಿಷ್ಠ ವಿದ್ಯಾರ್ಹತೆಯ ದಾಖಲೆಗಳಿರಲಿಲ್ಲ. ಅಕ್ಷರ ಜ್ಞಾನವಿಲ್ಲದ, ಕೇವಲ ಕೈಯಲ್ಲಿ ಆಧಾರ್‌ಕಾರ್ಡ್ ಮಾತ್ರ ಹಿಡಿದು ದಶಕಗಳಿಂದ ದುಡಿಯುತ್ತಿದ್ದ ಈ ವರ್ಗಕ್ಕೆ ನ್ಯಾಯಯುತವಾಗಿ ಅನುಮೋದನೆ ನೀಡುವುದು ದೊಡ್ಡ ಸವಾಲಾಗಿತ್ತು.

15-20 ವರ್ಷಗಳಿಂದ ಕನಿಷ್ಠ ವೇತನಕ್ಕೆ ದುಡಿಯುತ್ತಿದ್ದ ಇವರಿಗೆ ಉದ್ಯೋಗ ಭದ್ರತೆ ಎಂಬುದು ಕೇವಲ ಕನಸಾಗಿತ್ತು. ಸರ್ಕಾರಗಳು ಭರವಸೆ ನೀಡುತ್ತಿದ್ದರೂ, ವಿದ್ಯಾರ್ಹತೆಯ ಕೊರತೆ ಮತ್ತು ತಾಂತ್ರಿಕ ದಾಖಲೆಗಳ ಅಲಭ್ಯತೆಯ ಕಾರಣದಿಂದ ಇವರ ಸೇವೆ ಅನುಮೋದನೆಗೊಳ್ಳದೆ ನೆನೆಗುದಿಗೆ ಬಿದ್ದಿತ್ತು.

ಮಂಡ್ಯ ಜಿಲ್ಲೆಯೊಂದರಲ್ಲೇ ಸುಮಾರು 727 ಹುದ್ದೆಗಳಿದ್ದವು (550 ನೀರುಗಂಟಿಗಳು, 41 ಅಟೆಂಡರ್ ಹಾಗೂ 138 ಸ್ವಚ್ಛತಾಗಾರರು). ದಾಖಲೆಗಳ ಕೊರತೆಯಿಂದಾಗಿ ಇವರ ಬದುಕು ಅತಂತ್ರ ವಾಗಿತ್ತು. ಈ ಸಮಸ್ಯೆಯನ್ನು ಅರಿತ ಜಿಲ್ಲಾ ಪಂಚಾಯ್ತಿ ಕೇವಲ ಅಂಕಪಟ್ಟಿಗಳನ್ನು ನೋಡುವ ಬದಲು, ಅವರು ಕೆಲಸ ಮಾಡಿದ ದಿನಗಳ ಹಾಜರಾತಿ, ಪಾವತಿಯಾದ ವೇತನದ ವಿವರ ಮತ್ತು ಗ್ರಾಪಂ ಸಭೆಯ ನಿರ್ಣಯಗಳನ್ನು ಪ್ರಮುಖ ಮಾನದಂಡವಾಗಿ ಪರಿಗಣಿಸಲು ನಿರ್ಧರಿಸಿತು. ಇದು ಕೇವಲ ತಾಂತ್ರಿಕ ಪ್ರಕ್ರಿಯೆಯಾಗಿರದೆ, ಹಕ್ಕಿಗಾಗಿ ಕಾಯುತ್ತಿದ್ದ ಶ್ರಮಿಕರ ಪರವಾಗಿನಿಂತ ನ್ಯಾಯದ ನಡೆಯಾಗಿದೆ.

ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾಗಿ ಎನ್.ಚಲುವರಾಯಸ್ವಾಮಿ ಅವರು ಅಧಿಕಾರ ವಹಿಸಿಕೊಂಡ ಸಂದರ್ಭದಲ್ಲಿ ಜಿಲ್ಲೆಯ ನೂರಾರು ಕುಟುಂಬಗಳು ದಶಕಗಳಿಂದ ಈ ಉದ್ಯೋಗ ಅನುಮೋದನೆಗಾಗಿ ಕಾಯುತ್ತಿರುವ ವಿಷಯ ಗಮನಕ್ಕೆ ಬಂತು. ಈ ಪ್ರಕ್ರಿಯೆಯಲ್ಲಿ ಜಾತಿ, ಧರ್ಮ ಅಥವಾ ಲಿಂಗ ತಾರತಮ್ಯಕ್ಕೆ ಆಸ್ಪದ ನೀಡದೆ ಅರ್ಹರನ್ನು ಗುರುತಿಸುವಲ್ಲಿ ಯಾವುದೇ ರಾಜಕೀಯ ಹಸ್ತಕ್ಷೇಪ ಇರಬಾರದು ಮತ್ತು ಸಂಪೂರ್ಣ ದಕ್ಷತೆಯಿಂದ ಕಾರ್ಯ ಪೂರೈಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದರು.

ಜಿಲ್ಲಾ ಪಂಚಾಯ್ತಿಯ ಆಡಳಿತ ವಿಭಾಗದಿಂದ ಜಿಲ್ಲಾ ಮಟ್ಟದ ಪರಿಶೀಲನಾ ಸಮಿತಿ ಹಾಗೂ ತಾಲೂಕು ಮಟ್ಟದ ಪರಿಶೀಲನಾ ಸಮಿತಿಯನ್ನು ರಚಿಸಿ, ಸೇವೆ ಸಲ್ಲಿಸುತ್ತಿರುವ ನೌಕರರ ಅರ್ಹತೆಯನ್ನು ಮೌಲ್ಯಮಾಪನ ಮಾಡಿ ಪಂಚಾಯತ್ ರಾಜ್ ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆಯು ಜಿಲ್ಲೆಯಾದ್ಯಂತ ಗುರುತಿಸಲ್ಪಟ್ಟ ಒಟ್ಟು 727 ಹುದ್ದೆಗಳ ಪೈಕಿ 651 ನೌಕರರನ್ನು ಜಿಲ್ಲಾ ಮಟ್ಟದ ಪರಿಶೀಲನಾ ಸಮಿತಿ ಹಾಗೂ ತಾಲೂಕು ಮಟ್ಟದ ಪರಿಶೀಲನಾ ಸಮಿತಿಯವರು ಎಲ್ಲಾ ಹಂತಗಳಲ್ಲಿಯೂ ಪರಿಶೀಲನೆ ನಡೆಸಿ 590 ನೌಕರರ ಪ್ರಸ್ತಾವನೆಗಳು ಅರ್ಹವೆಂದು ಸಾಬೀತಾಯಿತು. ಪ್ರತಿಯೊಬ್ಬರಿಗೂ ತಮ್ಮವಾದ ಮಂಡಿಸಲು ಅವಕಾಶ ನೀಡಿದ್ದರಿಂದ, ಇಡೀ ಪ್ರಕ್ರಿಯೆ ಯಾವುದೇ ಗೊಂದಲವಿಲ್ಲದೆ ಅತ್ಯಂತ ಕಾನೂನುಬದ್ದವಾಗಿ ಪೂರ್ಣಗೊಂಡಿತು.

ಪಾಲನೆ.ಇನ್‌ ವಾಟ್ಸ್‌ ಆಪ್‌ ಗುಂಪಿಗೆ ಸೇರಿರಿ.

Related posts

‘ಇ-ಟಿಂಗ್ ಮತ್ತು ಇ-ನೋಸ್’ ನಿಂದ ತಿರುಪತಿ ತುಪ್ಪದ ಗುಣಮಟ್ಟ ಪರೀಕ್ಷೆ

ಟಿ-20 ವಿಶ್ವಕಪ್ ಭಾರತಕ್ಕೆ ದಕ್ಷಿಣ ಆಫ್ರಿಕಾ ವಿರುದ್ಧ ಸೋಲು

ಮುಖ್ಯಮಂತ್ರಿ ಬದಲಾವಣೆ ;‌ ಕುರ್ಚಿ ಕದನ

Leave a Comment