NEWS

ವಸತಿ ನಿಲಯಗಳಲ್ಲಿನ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳ ಪರೀಕ್ಷಾ ಫಲಿತಾಂಶ ಉತ್ತಮಗೊಳಿಸಲು ಸೂಚಿಸಿದ ಜಿ.ಪಂ. ಸಿಇಓ,

ಪಾಲನೆ ನ್ಯೂಸ್

ಮಂಡ್ಯ: ಸಮಾಜ ಕಲ್ಯಾಣ ಇಲಾಖೆ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣಗಳ ಇಲಾಖೆಯ ವಸತಿ ನಿಲಯಗಳಲ್ಲಿನ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳಿಗೆ ರಾತ್ರಿ ತರಗತಿ ನಡೆಸುವ ಮೂಲಕ ಪರೀಕ್ಷಾ ಫಲಿತಾಂಶವನ್ನು ಉತ್ತಮಗೊಳಿಸುವಂತೆ ವಾರ್ಡನ್ ಗಳಿಗೆ ಜಿ.ಪಂ. ಸಿಇಓ ನಂದಿನಿ ಕೆ.ಆರ್. ಅವರು ಸೂಚಿಸಿದರು.

ಶುಕ್ರವಾರ ಸಮಾಜ ಕಲ್ಯಾಣ ಇಲಾಖೆ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣಗಳ ಇಲಾಖೆಯ ಎಲ್ಲಾ ವಸತಿ ನಿಲಯಗಳ ವಾರ್ಡನ್ ಗಳಿಗೆ ಏರ್ಪಡಿಸಲಾಗಿದ್ದ ವಿಡಿಯೋ ಸಂವಾದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಎಲ್ಲಾ ವಾರ್ಡನ್ ಗಳು ಕಡ್ಡಾಯವಾಗಿ ವಸತಿ ನಿಲಯಗಳಲ್ಲಿ ವಾಸ್ತವ್ಯವಿರಬೇಕು, ಪ್ರತಿದಿನ ರಾತ್ರಿ ಮತ್ತು ಬೆಳಗ್ಗೆ ಹತ್ತನೇ ತರಗತಿ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿರುವ ಜಿಪಿಎಸ್ ಫೋಟೋವನ್ನು ಕಡ್ಡಾಯವಾಗಿ ವಾಟ್ಸಪ್ ಮೂಲಕ ಕಳುಹಿಸುವಂತೆ ಸೂಚಿಸಿದರು.‌


ಪೂರ್ವ ಸಿದ್ದತಾ ಪರಿಕ್ಷೆ-2ರಲ್ಲಿ ವಸತಿ ನಿಲಯಗಳಲ್ಲಿನ 438 ವಿದ್ಯಾರ್ಥಿಗಳ ಪೈಕಿ 370 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು 68 ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದರು, ಮುಂದಿನ 18 ದಿನಗಳಲ್ಲಿ ಹಾಸ್ಟೆಲ್ ಗಳ ಎಲ್ಲಾ ವಿದ್ಯಾರ್ಥಿಗಳು ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗುವಂತೆ ವಾರ್ಡನ್ ಗಳು ಶ್ರದ್ಧೆಯಿಂದ ಕರ್ತವ್ಯ ನಿರ್ವಹಿಸಬೇಕೆಂದು ಕಟ್ಟು ನಿಟ್ಟಾಗಿ ಸೂಚಿಸಿದರು.
ಸರ್ಕಾರದ ಸವಲತ್ತು ಸದುಪಯೋಗಪಡಿಸಿಕೊಂಡು ಉತ್ತಮ ಫಲಿತಾಂಶ ಪಡೆಯಲು ಕರೆ: ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಸರ್ಕಾರ ಆನೇಕ ಸವಲತ್ತುಗಳನ್ನು ನೀಡುತ್ತಿದ್ದು, ವಿದ್ಯಾರ್ಥಿಗಳು ಹೆಚ್ಚಿನ ಶ್ರಮವಹಿಸಿ ಉತ್ತಮ ಫಲಿತಾಂಶ ಪಡೆಯಬೇಕು. ಪ್ರಸಕ್ತ ಸಾಲಿನಲ್ಲಿ ಹಾಸ್ಟೆಲ್ ಗಳಲ್ಲಿನ ಎಲ್ಲಾ ವಿದ್ಯಾರ್ಥಿಗಳು ಉತ್ತೀರ್ಣರಾಗಬೇಕು ಎಂದು ತಿಳಿಸಿದರು.

ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಕನಿಷ್ಠ ಅಂಕಗಳಿಸಿ ಉತ್ತೀರ್ಣರಾಗಲು ಕಲಿಕಾ ಮಿತ್ರ ಪುಸ್ತಕವನ್ನು ಮಕ್ಕಳಿಗೆ ನೀಡಿ ಆತ್ಮವಿಶ್ವಾಸ ಹೆಚ್ಚಿಸುವ ಕೆಲಸ ನಿರ್ವಹಿಸಬೇಕೆಂದು ತಿಳಿಸಿದರು ಹಾಗೂ ಅನುತ್ತೀರ್ಣ ವಿದ್ಯಾರ್ಥಿಗಳಿಗೆ ಪ್ರತ್ಯೇಕ ತರಗತಿಗಳನ್ನು ನಡಸುವಂತೆ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸೂಚಿಸಿದರು.

ಗೈರು ಹಾಜರಾಗಿರುವ ವಿದ್ಯಾರ್ಥಿಗಳ ಪೋಷಕರಿಗೆ ಪತ್ರ ಬರೆಯುವಂತೆ ಹಾಗೂ ಶಾಲಾ ವಿಶೇಷ ತರಗತಿ ವೀಕ್ಷಣೆ ಜೊತೆಗೆ ಕಡಿಮೆ ಫಲಿತಾಂಶ ಬಂದಿರುವ ಪ್ರತಿ ವಸತಿ ನಿಲಯಗಳಿಗೆ ತಾಲ್ಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿರವರು ಭೇಟಿ ನೀಡಬೇಕು ಸೂಚನೆ ನೀಡಿದರು.

ಹಾಸ್ಟೆಲ್ ಗೆ ಅನಿರೀಕ್ಷಿತ ಭೇಟಿ : ಮಂಡ್ಯ ನಗರದಲ್ಲಿನ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಸತಿ ನಿಲಯಕ್ಕೆ ಅನಿರೀಕ್ಷಿತ ಭೇಟಿ ನೀಡಿ ವಿದ್ಯಾರ್ಥಿಗಳಿಗೆ ರಾತ್ರಿ ತರಗತಿ ನಡೆಸುತ್ತಿರುವ ಕುರಿತು ಜಿ. ಪಂ. ಸಿಇಓ ಪರಿಶೀಲನೆ ನಡೆಸಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.

ಈ ಸಂದರ್ಭದಲ್ಲಿ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಲೋಕೇಶ್ ಜಿ, ಡಯಟ್ ಪ್ರಾಂಶುಪಾಲರಾದ ಯೋಗೇಶ್, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರಾದ ಶ್ರೀನಿವಾಸ್, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಮಂಜುಳಾ, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರುಗಳು ಹಾಗೂ ಜಿಲ್ಲೆಯ ಎಲ್ಲಾ ಹಾಸ್ಟೆಲ್ ವಾರ್ಡನ್ ಗಳು ಹಾಜರಿದ್ದರು.

✅ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn

Related posts

ಅನುದಾನ ವ್ಯರ್ಥವಾಗದಂತೆ ಗುಣಮಟ್ಟದ ಕಾಮಗಾರಿಗಳನ್ನು ಅನುಷ್ಠಾನಗೊಳಿಸಲು ಜಿ.ಪಂ. ಸಿಇಒ ಸೂಚನೆ

ಏ.14ರಂದು ಅಂಬೇಡ್ಕರ್ ಜಯಂತಿ

ಭಾರತಕ್ಕೆ 300 ರನ್ ಟಾರ್ಗೆಟ್ ಕೊಟ್ಟರೂ ಕಡಿಮೆಯೇ: ಮಿಚೆಲ್ ಸ್ಯಾಂಟ್ಸರ್

Leave a Comment