ಪಾಲನೆ ನ್ಯೂಸ್
ಮಂಡ್ಯ: ಲಿಂಕ್ ಡಾಕ್ಯೂಮೆಂಟ್ ನಲ್ಲಿ 274 ಕಾಮಗಾರಿಗಳನ್ನು ತೆಗೆದುಕೊಳ್ಳಲಾಗಿದ್ದು, 161 ಕಾಮಗಾರಿಗಳು ಪೂರ್ಣಗೊಂಡಿದ್ದು, 88 ಕಾಮಗಾರಿಗಳು ಪ್ರಗತಿಯಲ್ಲಿವೆ, ಪ್ರಗತಿಯಲ್ಲಿರುವ ಎಲ್ಲಾ ಕಾಮಗಾರಿಗಳನ್ನು ತುರ್ತಾಗಿ ಪೂರ್ಣಗೊಳಿಸಬೇಕು ಎಂದು ಜಿ.ಪಂ. ಸಿಇಓ ನಂದಿನಿ ಕೆ.ಆರ್. ಅವರು ಅಧಿಕಾರಿಗಳಿಗೆ ಸೂಚಿಸಿದರು.
ಬುಧವಾರ ಜಿ.ಪಂ.ನಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಬದಲಾವಣೆ ಕಾಮಗಾರಿಗಳನ್ನು ಹೊರತುಪಡಿಸಿ ಉಳಿದ ಕಾಮಗಾರಿಗಳನ್ನು ಪೂರ್ಣಗೊಳಿಸಿ ಮಾರ್ಚ್ 10ನೇ ತಾರೀಖಿನೊಳಗೆ ವೆಚ್ಚ ಭರಿಸಬೇಕು ಎಂದು ಅಭಿಯಂತರರುಗಳಿಗೆ ಸೂಚಿಸಿದರು.
ಜಿ.ಪಂ. ಮತ್ತು ತಾ.ಪಂ. ಅಭಿವೃದ್ಧಿ ಅನುದಾನ: ಯಾವುದಾದರೂ ಕಾಮಗಾರಿಗಳಿಗೆ ಹೆಚ್ಚುವರಿ ಕಾಲಾವಕಾಶದ ಅವಶ್ಯಕತೆ ಇದ್ದಲ್ಲಿ, ಲಿಖಿತ ರೂಪದಲ್ಲಿ ಜಿಲ್ಲಾ ಪಂಚಾಯತ್ ಗೆ ಸಲ್ಲಿಸಬೇಕು. ಸದರಿ ಕಾಮಗಾರಿಗಳಿಗೆ ಎಷ್ಟು ಸಮಯಾವಕಾಶದ ಅವಶ್ಯಕತೆ ಎಂಬುದರ ಬಗ್ಗೆಯೂ ನಿಖರವಾಗಿ ತಿಳಿಸಬೇಕು, ಆ ಸಮಯದ ನಂತರ ಯಾವುದೇ ಕಾಲಾವಧಿ ವಿಸ್ತರಣೆ ಮಾಡಲಾಗುವುದುದಿಲ್ಲ ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಕಾಮಗಾರಿಗಳ ಅನುಷ್ಠಾನ ಸಂದರ್ಭದಲ್ಲಿ ಯಾವುದಾದರೂ ಸಮಸ್ಯೆ ಇದ್ದಲ್ಲಿ ಸರಿಪಡಿಸಲು ತುರ್ತಾಗಿ ಕ್ರಮವಹಿಸಬೇಕು, ಒಂದು ವೇಳೆ ಸಮಸ್ಯೆ ಬಗೆಹರಿಸಲು ಸಾಧ್ಯವಾಗದಿದ್ದಲ್ಲಿ ಅಂತಹ ಕಾಮಗಾರಿಯನ್ನು ಬದಲಾವಣೆ ಮಾಡಲು ನಿಯಮಾನುಸಾರ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಸೂಚಿಸಿದರು.

ಆಯಾ ಇಲಾಖೆಯ ಅಧಿಕಾರಿಗಳು ಕಾಮಗಾರಿಗಳ ಅನುಷ್ಟಾನಕ್ಕೆ ಸಂಬಂಧಿಸಿದಂತೆ ಪ್ರಗತಿ ಪರಿಶೀಲನೆ ಮಾಡಬೇಕು, ಕಾಮಗಾರಿಯ ಗುಣಮಟ್ಟದಲ್ಲಿ ಯಾವುದೇ ಸಮಸ್ಯೆಗಳು ಕಂಡುಬಂದಲ್ಲಿ ಕೂಡಲೇ ಸಂಬಂಧಪಟ್ಟ ಅಭಿಯಂತರರುಗಳ ಗಮನಕ್ಕೆ ತರಬೇಕು. ಯಾವುದೇ ಕಾಮಗಾರಿಗಳು ಬದಲಾವಣೆಯಾಗಬೇಕಿದ್ದಲ್ಲಿ ಸದರಿ ಕಾಮಗಾರಿಗಳನ್ನು ಆಯಾ ಇಲಾಖೆಯ ಮುಖ್ಯಸ್ಥರ ಗಮನಕ್ಕೆ ತಂದು ಬದಲಾವಣೆಗೆ ಪ್ರಸ್ತಾವನೆ ಸಲ್ಲಿಸಬೇಕು ಎಂದು ತಿಳಿಸಿದರು.
ತಾಲ್ಲೂಕು ಹಂತದಲ್ಲಿ ಕಾಮಗಾರಿವಾರು ಪ್ರಗತಿ ಪರಿಶೀಲಿಸಿ ವರದಿ ಸಲ್ಲಿಸಬೇಕು: ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿಗಳ ಅಧ್ಯಕ್ಷತೆಯಲ್ಲಿ ಎಲ್ಲಾ ಇಲಾಖೆಯ ತಾಲ್ಲೂಕುಮಟ್ಟದ ಅಧಿಕಾರಿಗಳು ಹಾಗೂ ಅಭಿಯಂತರರುಗಳ ಸಭೆ ಕರೆದು, ಕಾಮಗಾರಿವಾರು ಪರಿಶೀಲನೆ ನಡೆಸಿ ವರದಿ ಸಲ್ಲಿಸಬೇಕು. ಸದರಿ ವರದಿಯ ಆಧಾರದ ಮೇಲೆ ಮಾರ್ಚ್ 5ರಂದು ನಡೆಯುವ ಪ್ರಗತಿ ಪರಿಶೀಲನಾ ಸಭೆಯಲ್ಲಿ ಪರಿಶೀಲಿಸಲಾಗುವುದು ಎಂದು ತಿಳಿಸಿದರು.
ಕಾಮಗಾರಿ ಪೂರ್ಣಗೊಳಿಸದೇ ಬಿಲ್ ಪಾವತಿಸುವುದು, ಸಾಮಗ್ರಿ ಸರಬರಾಜು ಆಗದಿದ್ದರೂ ಬಿಲ್ ಪಾವತಿಸುವುದು ಹಾಗೂ ಕಾಮಗಾರಿಯ ಗುಣಮಟ್ಟ ಪರಿಶೀಲಿಸದೇ ಅನುದಾನ ಪಾವತಿಸಿದಲ್ಲಿ ಸಂಬಂಧಪಟ್ಟ ಎಲ್ಲರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವ ಜೊತೆಗೆ ನಿಯಮಾನುಸಾರ ಶಿಸ್ತು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಯಾವುದೇ ಕಾಮಗಾರಿಗಳನ್ನು ಸಕ್ಷಮ ಪ್ರಾಧಿಕಾರದಿಂದ ಅನುಮತಿ ಪಡೆಯದೇ ಅನುಷ್ಟಾನಗೊಳಿಸಬಾರದು, ಈ ನಿಟ್ಟಿನಲ್ಲಿ ಅವಶ್ಯಕತೆ ಇರುವ ಎಲ್ಲಾ ಅನುಮೋದನೆಗಳನ್ನು ಪಡೆಯುವ ಸಂಬಂಧ ಮುಖ್ಯ ಯೋಜನಾಧಿಕಾರಿಗಳ ಶಾಖೆಯಲ್ಲಿ ಅನುಸರಣೆ ಮಾಡಿ ಅನುಮೋದನೆಗಳನ್ನು ಪಡೆಯಬೇಕು, ಇಲ್ಲದಿದ್ದಲ್ಲಿ ಅಂತಹ ಇಲಾಖೆಯ ಅಧಿಕಾರಿಗಳನ್ನೇ ಜವಬ್ದಾರರನ್ನಾಗಿಸಲಾಗುವುದು ಎಂದು ಸೂಚಿಸಿದರು.
ತಾ.ಪಂ. ಅಭಿವೃದ್ಧಿ ಅನುದಾನವನ್ನು ಎಸ್.ಡಿ.ಎಂ.ಸಿಗಳಿಗೆ ವರ್ಗಾವಣೆ ಮಾಡಿದಲ್ಲಿ ಆಡಿಟ್ ಆಕ್ಷೇಪಣೆಯಾಗುವ ಸಂಭವವಿರುತ್ತದೆ ಎಂದು ಎಲ್ಲಾ ತಾಲ್ಲೂಕು ಪಂಚಾಯತ್ ಗಳ ಕಾರ್ಯನಿರ್ವಾಹಕ ಅಧಿಕಾರಿಗಳು ತಿಳಿಸಿದ್ದು, ಈ ಬಗ್ಗೆ ಎಲ್ಲಾ ಶಾಲೆಗಳಿಂದ ತುರ್ತಾಗಿ ಅಗತ್ಯವಿರುವ ಕಾಮಗಾರಿ ಅಥವಾ ಸಾಮಾಗ್ರಿಗಳ ಮಾಹಿತಿ ಪಡೆದು ವೆಚ್ಚ ಭರಿಸಲು ಸೂಚಿಸಲು ತಿಳಿಸಲಾಗಿದೆ.

ಶೇಕಡ 40ರಷ್ಟು ಸಿವಿಲ್ ಕಾಮಗಾರಿಗಳು ಪೂರ್ಣಗೊಂಡಿದ್ದು, ಉಳಿದ ಸಿವಿಲ್ ಕಾಮಗಾರಿಯನ್ನು ನಿಗದಿತ ಕಾಲಮಿತಿಯೊಳಗೆ ಗುಣಮಟ್ಟದ ಕಾಮಗಾರಿ ಅನುಷ್ಠಾನಗೊಳಿಸಬೇಕು ಹಾಗೂ ಒಂದು ಬಾರಿ ಕಾಮಗಾರಿ ಪೂರ್ಣಗೊಂಡ ನಂತರ ಪದೇ ಪದೇ ದುರಸ್ತಿ ಮಾಡುವಂತೆ ಕಾಮಗಾರಿ ನಿರ್ವಹಿಸಬಾರದು ಎಂದು ಸೂಚಿಸಿದರು.

ಮಿಡ್-ವೈಫರಿ ಲೆಡ್ ಕೇರ್ ಯುನಿಟ್ ಅನ್ನು ನಿರ್ಮಾಣ ಮಾಡುವ ಸಂಬಂಧ ಸ್ಥಳ ಅಂತಿಮಗೊಳಿಸಲಾಗಿದ್ದು, ಕಾಮಗಾರಿ ಪ್ರಾರಂಭಿಸಲಾಗಿದ್ದು, 25 ದಿನಗಳ ಕಾಲವಕಾಶ ಅವಶ್ಯಕತೆ ಇದೆ ಎಂದು ಕಾರ್ಯಪಾಲಕ ಅಭಿಯಂತರರು ಮಾಹಿತಿ ನೀಡಿದರು.
ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ವೈದ್ಯಕೀಯ ಅದೀಕ್ಷಕರು ಈ ಬಗ್ಗೆ ಕಾಲ ಕಾಲಕ್ಕೆ ಪರಿಶೀಲನೆ ಮಾಡಿ ಪ್ರಗತಿಯನ್ನು ಜಿ.ಪಂ.ಗೆ ಸಲ್ಲಿಸಬೇಕು ಎಂದು ಸೂಚಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ (ಅಡಳಿತ) ಶಿವಲಿಂಗಯ್ಯ, ಉಪಕಾರ್ಯದರ್ಶಿ (ಅಭಿವೃದ್ಧಿ) ಲಕ್ಷ್ಮಿ ಪಿ., ಮುಖ್ಯ ಯೋಜನಾಧಿಕಾರಿ ಧನುಷ್ ಎಸ್, ಯೋಜನಾ ನಿರ್ದೇಶಕರಾದ ಸುಂದರ್ ರಾಜ್, ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗದ ಕಾರ್ಯಪಾಲಕ ಅಭಿಯಂತರ ನಾಗರಾಜು ಸೇರಿದಂತೆ ಇತರೆ ಜಿಲ್ಲಾ ಮತ್ತು ತಾಲ್ಲೂಕುಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.
✅ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn
