ಪಾಲನೆ ಅಭಿಮತ
ಮಾನ್ಯರೇ,
ಕಷ್ಟ ಪಟ್ಟು ವಿದ್ಯಾಭ್ಯಾಸ ಮಾಡಿ ಶಿಕ್ಷಣ ಪಡೆದವರು, ಸರ್ಕಾರದಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಕರೆಯಬಹುದೆಂದು ಜಾತಕ ಪಕ್ಷಿಗಳಂತೆ ಸುಮಾರು ವರ್ಷಗಳಿಂದ ಕಾಯುತ್ತಲೇ ಬಂದಿರುತ್ತಾರೆ. ಹೀಗಿದ್ದೂ ಸರ್ಕಾರದಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗಾಗಿ ಯಾವುದೇ ನೋಟಿಫಿಕೇಟಿನ್ ಆಗಲಿ, ಇನ್ನ್ಯಾವುದೇ ಆಯೋಗದ ವತಿಯಿಂದಲೇ ಆಗಲಿ ಪ್ರಕ್ರಿಯೆ ಕೈಗೊಳ್ಳಲೇ ಇಲ್ಲ.
ಈ ಹಿಂದೆ ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಸಿ ಪರೀಕ್ಷೆಗಳನ್ನು ಬರೆದವರೂ ಸಹಾ ನೇಮಕಾತಿ ಆದೇಶಕ್ಕಾಗಿ ಕಾಯುತ್ತಿದ್ದಾರೆ. ಈ ರೀತಿಯಲ್ಲಿ ಹುದ್ದೆಗಳ ನೇಮಕಾತಿಗಾಗಿ ಪರೀಕ್ಷೆ ಬರೆದಿರುವ ಹಾಗೂ ಅರ್ಜಿ ಸಲ್ಲಿಸಲು ಸಿದ್ದರಿರುವ ಸಾಕಷ್ಟು ನಿರುದ್ಯೋಗಿಗಳ ವಯೋಮಿತಿ ಈಗಾಗಲೇ ಮೀರಿ ಹೋಗಿದೆ ಹಾಗೂ ಹೋಗುತ್ತಿದೆ. ಕೆಲವರು ವಯೋಮಿತಿ ಮೀರುವ ಹಂತಕ್ಕೆ ತಲುಪಿದ್ದಾರೆ. ಹಾಗಿದ್ದರೂ, ಈ ಹಿಂದೆ ಪರೀಕ್ಷೆ ನಡೆಸಿರುವ ಹುದ್ದೆಗಳ ನೇಮಕಾತಿಗೆ ಮೀಸಲಾತಿ – ನ್ಯಾಯಾಲಯದಲ್ಲಿ ಮೊಕದ್ದಮೆ ಇನ್ನಿತರೇ ಕಾರಣಗಳನ್ನು ಹೇಳಿಕೊಂಡು ಬಹಳಷ್ಟು ವರ್ಷಗಳಿಂದ ಆಯ್ಕೆಯಾದ ಅಭ್ಯರ್ಥಿಗಳಿಗೂ ಉದ್ಯೋಗ ನೀಡಿರುವುದಿಲ್ಲ. ಇದರಿಂದ ಇವರ ಸೇವಾವಧಿಯೂ ಕಡಿಮೆಯಾಗುತ್ತಿದೆ ಎಂಬುದು ಇವರ ಕಳಕಳಿ.
ಇನ್ನೂ ಶಿಕ್ಷಣ ಪಡೆದು ವಯೋಮಿತಿ ಮೀರುತ್ತಿದ್ದೂ, (ಒಂದು ಬಾರಿಗೆ ಸೀಮಿತಗೊಳಿಸಿ ಸರ್ಕಾರ ವಯೋಮಿತಿ ಸಡಿಲಗೊಳಿಸಿರಬಹುದು ) ಸರ್ಕಾರ ಖಾಲಿಯಿರುವ ಹುದ್ದೆಗಳಿಗೆ ಕ್ರಮ ತೆಗೆದುಕೊಳ್ಳದಿದ್ದರೆ, ಶಾಶ್ವತವಾಗಿ ನಿರುದ್ಯೋಗೀಗಳಾಗುವರಲ್ಲದೆ, ಶಿಕ್ಷಣಕ್ಕೆ ಮಾಡಿದ ಸಾಲ ಮತ್ತು ಬಡ್ಡಿ ದುಪ್ಪಟಾಗುತ್ತದೆ. ತಂದೆ-ತಾಯಿ ಕುಟುಂಬದ ನಿರ್ವಹಣೆ ಕಷ್ಟಸಾಧ್ಯವಾಗುತ್ತದೆ. ಹಾಗಾಗಿ ನಿರುದ್ಯೋಗಿಗಳು ತಮ್ಮ ಭವಿಷ್ಯದ ಹಾಗೂ ರಾಜ್ಯದ ತಲಾದಾಯ ಹಾಗೂ ಸುಗಮ ಆಡಳಿತ ವ್ಯವಸ್ಥೆಗಾಗಿ, ತಕ್ಷಣವೇ ರಾಜ್ಯ – ಕೇಂದ್ರ ಸರ್ಕಾರಗಳು ಖಾಲಿ ಇರುವ ಹುದ್ದೆಗಳ ಭರ್ತಿಗೆ ಕ್ರಮವಹಿಸಲು ನಿನ್ನೆ ಧಾರವಾಡದ ಶ್ರೀನಗರ ವೃತ್ತದಲ್ಲಿ ಬೃಹತ್ ಪ್ರತಿಭಟನಾ ರ್ಯಾಲಿ ಹಮ್ಮಿಕೊಂಡು ಸರ್ಕಾರದ ಗಮನ ಸೆಳೆದರು. ನೇತೃತ್ವ ವಹಿಸಿದ್ದ ಮುಖಂಡರನ್ನು ಪೊಲೀಸರು ವಶಕ್ಕೆ ಪಡೆದಾಗ ಪ್ರತಿಭಟನೆಕಾರರ ಆಕ್ರೋಶ ಬುಗಿಲೆದ್ದಿತು.
ಉದ್ಯೋಗಾಂಕ್ಷಿಗಳು ಸರ್ಕಾರದ ‘ಉಚಿತ ಭಾಗ್ಯಗಳು ಬೇಡವೇ ಬೇಡ ನಮಗೆ ಮೊದಲು ಉದ್ಯೋಗ ಕೊಡಿ’ ಎಂಬ ಘೋಷಣೆ ಕೂಗಿ ಸರ್ಕಾರಕ್ಕೆ ಎಚ್ಚರಿಕೆ ಗಂಟೆಯನ್ನು ಮೊಳಗಿಸಿದರು. ಒಂದು ವೇಳೆ ತಕ್ಷಣವೇ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗಾಗಿ ಅಧಿಸೂಚನೆ ಹೊರಡಿಸಬೇಕು. ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಒತ್ತಾಯಿಸಿ “ಬೆಂಗಳೂರು ಪಾದಯಾತ್ರೆ” ಹಮ್ಮಿಕೊಳ್ಳಲಾಗುವುದಾಗಿ ಘೋಷಿಸಿದ್ದಾರೆ.
ಒಂದು ಪಕ್ಷದ ನಾಯಕರು ಸದರಿ ಪ್ರತಿಭಟನೆಯಲ್ಲಿ ಭಾಗವಹಿಸಿ, ಬೆಂಬಲ ನೀಡುವುದಲ್ಲದೇ, ಮಾರ್ಚ್ 6ರಂದು ನಡೆಯುವ ಬಜೆಟ್ ಅಧಿವೇಶನದಲ್ಲಿ ಈ ಬಗ್ಗೆ ಸರ್ಕಾರದ ಗಮನ ಸೆಳೆದು ಖಾಲಿ ಇರುವ ಹುದ್ದೆಗಳ ಭರ್ತಿಗಾಗಿ ಹಕ್ಕೊತ್ತಾಯ ಮಾಡುವುದಾಗಿ ಘೋಷಿಸಿತು. ಆದರೆ, ಈ ವಿಚಾರದಲ್ಲಿ ರಾಜಕೀಯ ಮಾಡಬೇಡಿ. ನಿಮ್ಮ ಪ್ರಯತ್ನ ನೀವು ಮಾಡಿ, ಆದರೆ ನೀವು ಇಲ್ಲಿಂದ ಜಾಗ ಖಾಲಿ ಮಾಡಿ ಎಂಬುದಾಗಿ ಸಭೆಯಲ್ಲಿ ಕೂಗು ಕೇಳಿ ಬಂದಿತಂತೆ.
ಅದೇನೇ ಆಗಲಿ ಈ ಹಿಂದಿನ ನಮ್ಮ ಸರ್ಕಾರದಲ್ಲಿ ಸಾಕಷ್ಟು ನೇಮಕಾತಿಗಳನ್ನು ನಾವು ಮಾಡಿದ್ದೇವೆ. ಬೇಕಿದ್ದರೆ ಅಂಕಿ ಅಂಶ ನೀಡೋಣ ಎಂದು ವಿರೋಧ ಪಕ್ಷದವರು ಹೇಳುತ್ತಾರೆ. ಆದರೆ, ಆಡಳಿತ ಪಕ್ಷದ ಸರ್ಕಾರವು, ಹಿಂದಿನ ಸರ್ಕಾರ ಸರಿಯಾಗಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡದ ಕಾರಣ ಖಾಲಿ ಹುದ್ದೆಗಳ ಸಂಖ್ಯೆ ಹೆಚ್ಚಾಗಲು ಕಾರಣವಾಗಿದೆ. ಆದರೆ, ಈಗ ನಮ್ಮ ಸರ್ಕಾರ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು, ಕಾಲ ಮಿತಿಯೊಳಗೆ, ಪಾರದರ್ಶಕವಾಗಿ, ಆಡಳಿತಾತ್ಮಕ ಮತ್ತು ನೀತಿ ನಿರೂಪಣಾ ಮಾನದಂಡಗಳ ಮೂಲಕ ನೇಮಕಾತಿ ಸಂಸ್ಥೆ ಗಳನ್ನು ಬಲಪಡಿಸಿ ಪ್ರಕ್ರಿಯೆಗೆ ಮುಂದಾಗಿದ್ದು ಪ್ರಕ್ರಿಯೆ ಪ್ರಗತಿಯಲ್ಲಿದೆ. ನಮ್ಮ ಸರ್ಕಾರ ಖಾಲಿ ಇರುವ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯಲ್ಲಿ ವಿಶ್ವಾಸಾರ್ಹತೆ, ಪಾರದರ್ಶಕತೆ ಮತ್ತು ಸ್ಥಿರತೆಯನ್ನು ಮರುಸ್ಥಾಪಿಸಲು ಬದ್ಧವಾಗಿದೆ ಎಂದು ಭರವಸೆ ನೀಡಿದೆ.
ಅದೇನೇ ಇರಲಿ, ಕೇಂದ್ರ – ರಾಜ್ಯ ಸರ್ಕಾರಗಳು ಪರಸ್ಪರ ಬೆಟ್ಟು ಮಾಡಿ ತೋರಿಸಲಿ, ರಾಜ್ಯ ಸರ್ಕಾರ ಹಾಗೂ ವಿರೋಧ ಪಕ್ಷಗಳು ಒಬ್ಬರ ಮೇಲೊಬ್ಬರು ಆರೋಪಗಳನ್ನೇ ಮಾಡಲಿ. ನಮಗೆ ಬೇಕಿರುವುದು ಉದ್ಯೋಗ. ಶಾಶ್ವತ ಉದ್ಯೋಗಗಳೇ ಹೊರತು ನಿಮ್ಮ ಮೂಗಿಗೆ ತುಪ್ಪ ಸವರುವ ತಾತ್ಕಾಲಿಕ “ಉಚಿತ ಗ್ಯಾರಂಟಿ”ಗಳಲ್ಲ. ರಾಜ್ಯ ನೀತಿಯ ನಿರ್ದೇಶಕ ತತ್ವಗಳಂತೆ, ಸರ್ವರಿಗೂ ಶಿಕ್ಷಣ -ಆರೋಗ್ಯ ಸೇವೆ ನೀಡುವುದು. ದುಡಿಯುವ ಕೈಗಳಿಗೆ ಉದೋಗ. ನೀವೇನಂತೀರಾ?

-ಜಿ. ಧನಂಜಯ ದರಸಗುಪ್ಪೆ, ಮಂಡ್ಯ., 98440 57781
