NEWS

ಹೆಚ್ಚಿನ ಜನರು ವಿದ್ಯಾಭ್ಯಾಸ ಪಡೆದಂತೆ ಜೀತ ಪದ್ಧತಿ ಪ್ರಮಾಣ ಕುಸಿಯುತ್ತಿದೆ

ಜೀತ ಪದ್ಧತಿ ಆಚರಿಸುವವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ: ಜೆ.ಎನ್ ಸುಬ್ರಹ್ಮಣ್ಯ

ಪಾಲನೆ ನ್ಯೂಸ್

ಮಂಡ್ಯ: ಹಳ್ಳಿಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ವಿದ್ಯಾಭ್ಯಾಸ ಪಡೆದಂತೆ ಜೀತ ಪದ್ಧತಿ ಕುಸಿಯುತ್ತಿದೆ ಎಂದು ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಜೆ.ಎನ್ ಸುಬ್ರಹ್ಮಣ್ಯ ಅವರು ಹೇಳಿದರು.

ಜಿಲ್ಲಾ ಪಂಚಾಯತ್ ಕಾವೇರಿ ಸಭಾಂಗಣದಲ್ಲಿ ಜೀತ ಪದ್ಧತಿ ರದ್ದತಿ ಕಾಯ್ದೆ 1976ರ ಕುರಿತು ಆಯೋಜಿಸಲಾಗಿದ್ದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಎಲ್ಲಿ ಬರಗಾಲ, ಪ್ರವಾಹ ಉಂಟಾಗುತ್ತದೆ ಅಲ್ಲಿ ಆಹಾರದ ಸಮಸ್ಯೆಯಿಂದ ಹಾಗೂ ಖಾಸಗಿ ಲೇವಾದೇವಿ ವ್ಯವಹಾರ ಮಾಡುವ ಪ್ರದೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜೀತ ಪದ್ಧತಿ ಜಾರಿಯಲ್ಲಿದೆ. ಇವತ್ತಿಗೂ ಜೀತ ಪದ್ಧತಿ ಜೀವಂತವಾಗಿ ಇರುವುದು ನಮ್ಮ ಗಮನಕ್ಕೆ ಬಂದಿದೆ ಎಂದರು.

ದೇಶದಲ್ಲಿ ಜೀತ ಪದ್ಧತಿಯನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ಸರ್ಕಾರದ ಪ್ರತಿಯೊಂದು ಅಂಗಗಳು ಕ್ರಮ ಕೈಗೊಳ್ಳಬೇಕು. ಜೀತ ಪದ್ಧತಿ ಮನಸ್ಥಿತಿ ಮತ್ತು ಜೀತ ಪದ್ಧತಿಯನ್ನು ಆಚರಿಸುತ್ತಿರುವವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಿ ಕೃಷ್ಣನ ಜನ್ಮ ಸ್ಥಳಕ್ಕೆ ಕಳುಹಿಸಿದರೆ ಉಳಿದವರಿಗೆ ಎಚ್ಚರಿಕೆ ನೀಡಿದಂತಾಗುತ್ತದೆ ಎಂದು ಹೇಳಿದರು.

ಜೀತ ಪದ್ಧತಿ ಆಚರಿಸುವವರು ಹಾಗೂ ಜೀತ ಪದ್ಧತಿಗೆ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಪ್ರಚೋದನೆ ನೀಡುವವರ ವಿರುದ್ಧ ಯಾವುದೇ ರೀತಿಯ ದಯೆ ದಾಕ್ಷಿಣ್ಯ ಇಲ್ಲದೆ ಕ್ರಿಮಿನಲ್ ಪ್ರಕರಣಗಳನ್ನು ದಾಖಲಿಸುವ ಮೂಲಕ ಜಾಗೃತಿ, ಜೀತ ಪದ್ಧತಿ ನಿರ್ಮೂಲನೆಗೆ ಅರಿವು ಮೂಡಿಸಬೇಕು‌ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾಧಿಕಾರಿ ಡಾ. ಕುಮಾರ ಅವರು ಜೀತ ಪದ್ಧತಿ ನಿರ್ಮೂಲನೆ ಸಾಮಾಜಿಕ ಜವಾಬ್ದಾರಿಯಾಗಿದೆ ಈ ನಿಟ್ಟಿನಲ್ಲಿ ಎಲ್ಲರೂ ಜೀತ ಪದ್ಧತಿಯನ್ನು ನಿರ್ಮೂಲನೆ ಮಾಡಲು ಪಣ ತೊಡಬೇಕು. ಸ್ವಾತಂತ್ರ್ಯ ಬಂದ ನಂತರ ಭಾರತದಲ್ಲಿ ಅನಕ್ಷರತೆ, ಮೂಢನಂಬಿಕೆ, ಬಡತನ, ಮೌಢ್ಯತೆ ಭಾರತದಲ್ಲಿ ಹೆಚ್ಚಿತ್ತು. ಅಂತಹ ಸಂದರ್ಭದಲ್ಲಿ ಜೀತ ಪದ್ಧತಿಯೂ ಕೂಡ ಹೆಚ್ಚಿತು. ಆದರೆ, ಇಂದು ದೇಶದಲ್ಲಿ ಸಾಕ್ಷರತೆ ಹೆಚ್ಚಿದರೂ ಭಾರತದಿಂದ ಜೀತ ಪದ್ಧತಿ ನಿರ್ಮೂಲನೆಯಾಗಿಲ್ಲ. ಇದು ನಾಗರೀಕ ಸಮಾಜ ತಲೆತಗ್ಗಿಸುವ ಸಂಗಾತಿಯಾಗಿದೆ ಎಂದು ಹೇಳಿದರು.

ಮನುಷ್ಯ ಮನುಷ್ಯನನ್ನು ಶೋಷಣೆಯಿಂದ ಕಾರ್ಯ ಮಾಡಿಸಿಕೊಳ್ಳುವುದು ಕಾನೂನು ಬಾಹಿರ ಹಾಗೂ ಅಮಾನವೀಯ ಕೃತ್ಯ. ಜೀತ ಪದ್ಧತಿಗೆ ಪ್ರಮುಖ ಕಾರಣವೆಂದರೆ ನಮ್ಮಲ್ಲಿರುವ ಸಾಮಾಜಿಕ ಮತ್ತು ಆರ್ಥಿಕ ಅಸಮಾನತೆ ಎಂದು ಹೇಳಿದರು.

ಕಳೆದ ಒಂದು ವರ್ಷದಿಂದ ಜಿಲ್ಲಾ ಪಂಚಾಯತ್ ಕಾರ್ಯನಿರ್ವಾಹಣ ಅಧಿಕಾರಿಗಳು ಜಿಲ್ಲೆಯನ್ನು ಜೀತ ವಿಮುಕ್ತಿಗೊಳಿಸಲು ಶ್ರಮ ವಹಿಸಿದ್ದಾರೆ. ಜೀತ ಪದ್ಧತಿಗೆ ಒಳಗಾದವರನ್ನು ಗುರುತಿಸಿ ಅವರಿಗೆ ವಿಶೇಷ ಗುರುತಿನ ಚೀಟಿ ನೀಡಿ ವಿವಿಧ ಸರ್ಕಾರಿ ಸೌಲಭ್ಯಗಳನ್ನು ತಲುಪಿಸುವ ಕಾರ್ಯವನ್ನು ಹಮ್ಮಿಕೊಂಡು ಬರುತ್ತಿದ್ದಾರೆ ಎಂದು ಹೇಳಿದರು.

ಜೀತ ಪದ್ಧತಿಗೆ ಪರೋಕ್ಷವಾಗಿ ಪ್ರಚೋದನೆ ನೀಡುವವರ ವಿರುದ್ಧ ಅಗತ್ಯ ಕ್ರಮ ಕೈಗೊಳ್ಳಬೇಕು. ಜೀತ ಪದ್ಧತಿಯ ಕುರಿತು ಅರಿವು ಮೂಡಿಸಬೇಕು. ಒಬ್ಬ ವ್ಯಕ್ತಿಯ ಬಡತನ, ಅನಕ್ಷರತೆ ಇನ್ನೊಬ್ಬರಿಗೆ ಬಂಡವಾಳ ಆಗಬಾರದು. ಸ್ವಾತಂತ್ರ್ಯದ ನಂತರ ಬಂದ ಸರ್ಕಾರಗಳು ದೇಶದ ಜನರನ್ನು ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಅಭಿವೃದ್ಧಿ ಪಡಿಸಲು ಅನೇಕ ಯೋಜನೆಗಳನ್ನು ರೂಪಿಸಿದೆ ಎಂದು ಹೇಳಿದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಆರ್. ನಂದಿನಿ ಅವರು ಮಾತನಾಡಿ, ಜೀತ ಪದ್ಧತಿಗೆ ಒಳಗಾದವರಿಗೆ ಹೇಗೆ ನೆರವು ನೀಡಬಹುದು, ಸಮಾಜದ ಮುಖ್ಯವಾಹಿನಿಗೆ ತರಬೇಕು ಹಾಗೂ ಆರ್ಥಿಕವಾಗಿ ಸ್ವಾವಲಂಬಿಗಳಾಗಿ ಮಾಡಬೇಕೆಂದರೆ ಮೊದಲು ಅವರಿಗೆ ಅರಿವು ಮೂಡಿಸುವ ಕೆಲಸವಾಗಬೇಕು. ಜಿಲ್ಲೆಯ ಎಲ್ಲಾ ಇಲಾಖೆಗಳ ಅಧಿಕಾರಿಗಳು ಕಾರ್ಯ ಪ್ರವೃತ್ತರಾಗಿ ಜಿಲ್ಲೆಯಲ್ಲಿ ಜೀತ ಪದ್ಧತಿಗೆ ಒಳಗಾದ 84 ಜನರಿಗೆ ಸರ್ಕಾರಿ ಸೌಲಭ್ಯಗಳನ್ನು ತಲುಪಿಸಲು ಸಹಕರಿಸಿದ್ದರಿಂದ “ನನ್ನ ಗುರುತು” ಯೋಜನೆ ಯಶಸ್ವಿಯಾಗಿದೆ ಎಂದು ಹೇಳಿದರು.

ಡಿ.ದೇವರಾಜು ಅರಸು ಹಿಂದುಳಿದ ವರ್ಗಗಳ ಇಲಾಖೆಯಿಂದ ಜೀತ ವಿಮುಕ್ತಿ ಹೊಂದಿದ ವ್ಯಕ್ತಿಗೆ ಸ್ವಾವಲಂಬಿ ಸಾರಥಿ ಯೋಜನೆಯಡಿ ಕಾರು ನೀಡಿ ಅವರ ಬದುಕಿಗೆ ನೆರವಾಗಿದೆ. ಅಧಿಕಾರಿಗಳು ಜೀತ ವಿಮುಕ್ತರಿಗೆ ಮಾನವೀಯ ನೆಲೆಯಿಂದ ಸ್ಪಂದಿಸಬೇಕು. ಜೀತ ಪದ್ಧತಿಯಿಂದ ವಿಮುಕ್ತಿಗೊಳಿಸುವುದರ ಜೊತೆಗೆ ಜೀತ ಪದ್ಧತಿ ಮನಸ್ಥಿತಿಯನ್ನು ಹೋಗಲಾಡಿಸಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಆನಂದ್ ಎಂ., ಸಮಾಲೋಚನ ಮನಶಾಸ್ತ್ರ ತಜ್ಞರಾದ ಪ್ರಥಮ್ ಸೇರಿದಂತೆ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.‌

✅ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ. ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn

Related posts

ಸಾರಾಯಿ ಕುಡಿಬೇಡ ಎಂದಿದ್ದಕ್ಕೆ 11ರ ಮಗಳನ್ನೇ ಕತ್ತು ಹಿಸುಕಿ ಕೊಂದ ತಾಯಿ!

ಕವಿತೆಯ ಆತ್ಮವನ್ನು ಅರಸುತ್ತಆಲಂಗಿಸಿಕೊಂಡ ಅಡಿಗರು

ಗಿಲ್ಲಿ ನಟನಿಗೆ ತವರಿನ ಸ್ವಾಗತ

Leave a Comment