ಪಾಲನೆ ನ್ಯೂಸ್
ಮಂಡ್ಯ: ಮದ್ದೂರು ತಾಲ್ಲೂಕಿನಲ್ಲಿ ಬೈರನ್ ನಾಲೆ, ಚಾಮನಹಳ್ಳಿ ಹಾಗೂ ವೈದ್ಯಾನಾಥಪುರ ನಾಲೆಗಳ ಅಭಿವೃದ್ಧಿ ಕುರಿತು ರೈತರೊಂದಿಗೆ ಸಮಾಲೋಚನಾ ಸಭೆ ನಡೆಸಲಾಯಿತು.

ಮದ್ದೂರು ಪ್ರವಾಸಿ ಮಂದಿರದಲ್ಲಿ ಸಭೆ ನಡೆಸಿ ಬೈರನ್, ಚಾಮನಹಳ್ಳಿ ಹಾಗೂ ವೈದ್ಯನಾಥಪುರ ನಾಲೆಗಳ ಆಧುನೀಕರಣ ಕಾಮಗಾರಿಗಳು ಪೂರ್ಣಗೊಳ್ಳಲು ಸಂಬಂಧಿಸಿದ ರೈತರು ಅಗತ್ಯ ಸಹಕಾರ ನೀಡಬೇಕೆಂದು ತಿಳಿಸಲಾಯಿತು.
ದೇಶಹಳ್ಳಿ ಗ್ರಾಮದಲ್ಲಿರುವ ಮದ್ದೂರಮ್ಮನವರ ಕೆರೆಯ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುತ್ತಿದ್ದು, ಒತ್ತುವರಿ ತೆರವು ಕಾರ್ಯಾಚರಣೆ ನಡೆಯುತ್ತಿದೆ. ನಂತರ ಹೂಳೆತ್ತುವ ಕಾರ್ಯಕ್ಕೂ ಕ್ರಮವಹಿಸಲಾಗುವುದು. ಇದರಿಂದ ಹೆಚ್ಚಿನ ಪ್ರಮಾಣದಲ್ಲಿ ನೀರು ಸಂಗ್ರಹಿಸಲು ಸಾಧ್ಯವಾಗಲಿದೆ.
ಕೆಮ್ಮಣ್ಣು ನಾಲೆಯ ಆಧುನೀಕರಣ ಕೆಲಸವು ಉತ್ತಮವಾಗಿ ನಡೆಯುತ್ತಿದೆ ಎಂಬುದು ಎಲ್ಲರಿಗೂ ತಿಳಿದ ವಿಚಾರ. ಬೈರನ್, ಚಾಮನಹಳ್ಳಿ ಹಾಗೂ ವೈದ್ಯನಾಥಪುರ ನಾಲೆಗಳ ರೈತರು ಕೆಲವು ತಿಂಗಳುಗಳ ಕಾಲ ಸಹಕರಿಸಿದರೆ ಆಧುನೀಕರಣ ಕಾಮಗಾರಿಗಳು ಯಶಸ್ವಿಯಾಗಿ ಪೂರ್ಣಗೊಳ್ಳಲಿವೆ. ಕಾಮಗಾರಿ ವೇಳೆ ಕೆಲವರಿಗೆ ತಾತ್ಕಾಲಿಕ ತೊಂದರೆಗಳು ಎದುರಾಗಬಹುದಾದರೂ, ಶಾಶ್ವತ ಅಭಿವೃದ್ಧಿಗೆ ಇದು ನೆರವಾಗಲಿದೆ. ಮುಂದಿನ 75ರಿಂದ 100 ವರ್ಷಗಳವರೆಗೆ ಸಮೃದ್ಧ ಬೆಳೆ ಬೆಳೆಯಲು ಅನುಕೂಲವಾಗುವಂತೆ ಈ ಯೋಜನೆ ರೂಪಿಸಲಾಗಿದೆ.
ಬೇಸಿಗೆ ಬೆಳೆಯ ವಿಚಾರದಲ್ಲಿ ರೈತರು ನೀರಾವರಿ ಇಲಾಖೆಯ ಅಧಿಕಾರಿಗಳೊಂದಿಗೆ ಸಹಕರಿಸಿದರೆ ಮುಂದಿನ ಹಂಗಾಮಿನಲ್ಲಿ ಸಮರ್ಪಕವಾಗಿ ನೀರು ಹರಿಸಲು ಅನುಕೂಲವಾಗಲಿದೆ. ಇದರಿಂದ ಈ ಭಾಗದ ರೈತರಿಗೆ ಶಾಶ್ವತ ನೀರಾವರಿ ಪರಿಹಾರ ದೊರೆಯಲಿದೆ.

ಸಭೆಯಲ್ಲಿ ರೈತರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡು, ಕೆಮ್ಮಣ್ಣು ನಾಲೆಯ ಅಭಿವೃದ್ಧಿ ಕೆಲಸವು ಶೇ. 75ರಿಂದ 100 ವರ್ಷಗಳವರೆಗೆ ಉಪಯೋಗವಾಗುವ ಉತ್ತಮ ಕಾಮಗಾರಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಇಂತಹ ಅಭಿವೃದ್ಧಿ ಕಾರ್ಯವನ್ನು ಎಷ್ಟು ವರ್ಷಗಳಾದರೂ ಮರೆಯುವುದಿಲ್ಲ ಎಂದರು.
ಕಾಮಗಾರಿಯನ್ನು ಗುಣಮಟ್ಟದಿಂದ ನಡೆಸಿ ರೈತರಿಗೆ ಅನುಕೂಲವಾಗುವಂತೆ ಕ್ರಮವಹಿಸಬೇಕು ಎಂದು ಮನವಿ ಮಾಡಿದರು. ಈಗಾಗಲೇ ಇರುವ ಬೆಳೆಗಳಿಗೆ ಹಾಗೂ ವಿಶೇಷವಾಗಿ ತೆಂಗಿನ ಬೆಳೆಗೆ ನೀರಿನ ತೊಂದರೆಯಾಗದಂತೆ ನೋಡಿಕೊಳ್ಳಬೇಕೆಂದು ಬೈರನ್ ಹಾಗೂ ಚಾಮನಹಳ್ಳಿ ನಾಲಾ ಅಚ್ಚುಕಟ್ಟು ಪ್ರದೇಶದ ರೈತರು ಆಗ್ರಹಿಸಿದರು.
ಈ ಸಭೆಯಲ್ಲಿ ಜಿಲ್ಲಾ ಕಿಸಾನ್ ಕಾಂಗ್ರೆಸ್ ಜಿಲ್ಲಾಧ್ಯಕ್ಷ ದೇಶಹಳ್ಳಿ ಮೋಹನ್ ಕುಮಾರ್, ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಲುವರಾಜು, ತಾಲೂಕು ಬ್ಲಾಕ್ ಕಾಂಗ್ರೆಸ್ ಮಹಿಳಾಧ್ಯಕ್ಷೆ ಮಮತಾ ಶಂಕರೇಗೌಡ, ನಗರಸಭೆಯ ಮಾಜಿ ಉಪಾಧ್ಯಕ್ಷ ಟಿ.ಆರ್. ಪ್ರಸನ್ನಕುಮಾರ್, ನೀರಾವರಿ ಇಲಾಖೆಯ ಅಧಿಕಾರಿಗಳಾದ ನಂಜುಂಡೇಗೌಡ, ನಾಗರಾಜು ಸೇರಿದಂತೆ ಅಚ್ಚುಕಟ್ಟು ಪ್ರದೇಶಗಳ ರೈತರು ಉಪಸ್ಥಿತರಿದ್ದರು.
✅ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ. ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn
