ಪಾಲನೆ ನ್ಯೂಸ್
ಮೈಸೂರು: ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಕೊಡಮಾಡುವ 2024-25ನೇ ಸಾಲಿನ ರತ್ನಾಕರವರ್ಣಿ ಮುದ್ದಣ್ಣ ಪ್ರಶಸ್ತಿಗೆ ಸಾಹಿತಿ ಡಾ.ನೀ.ಗೂ ರಮೇಶ್ ಅವರ ‘ಗಾಂಧೀಮರ’ ಕವನ ಸಂಕಲನ ಆಯ್ಕೆಯಾಗಿದೆ.
ಡಾ.ಕೆ.ಮರುಳಸಿದ್ದಪ್ಪ ಅಧ್ಯಕ್ಷತೆಯಲ್ಲಿ ನಡೆದ ಆಯ್ಕೆ ಸಮಿತಿ ಸಭೆಯಲ್ಲಿ ಗಾಂಧೀಮರ ಕಾವ್ಯವನ್ನು ಈ ಬಾರಿಯ ರತ್ನಾಕರವರ್ಣಿ-ಮುದ್ದಣ್ಣ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.


ಮಂಡ್ಯ ಜಿಲ್ಲೆ ನಾಗಮಂಗಲ ತಾಲ್ಲೂಕಿನ ನೀಲಕಂಠನಹಳ್ಳಿ ಗ್ರಾಮದಲ್ಲಿ ಜನಿಸಿದ ಡಾ.ನೀ. ಗೂ.ರಮೇಶ್ ಅವರು, ಪ್ರಸ್ತುತ ಹುಣಸೂರಿನ ಬಾಲಕರ ಪದವಿಪೂರ್ವ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಉಪನ್ಯಾಸಕ ವೃತ್ತಿಯ ಜೊತೆಗೆ ಸಾಹಿತ್ಯ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿರುವ ಡಾ.ನೀ.ಗೂ.ರಮೇಶ್ ಅವರು ಕಾವ್ಯ, ವಿಮರ್ಶೆ, ಪ್ರಬಂಧ, ಅಂಕಣ ಬರಹ, ಸಂಶೋಧನೆ, ಸಂಪಾದನ ಕ್ಷೇತ್ರದಲ್ಲಿ ತಮ್ಮ ಬರಹದ ಛಾಪು ಮೂಡಿಸಿದ್ದಾರೆ.
ಈಗಾಗಲೇ 18 ಕೃತಿಗಳನ್ನು ಪ್ರಕಟಿಸಿರುವ ಇವರು, ಗಾಂಧೀಮರ, ದೀಪ ದ್ವೀಪಗಳ ನಡುವೆ, ಗುಲಗಂಜಿ ಮತ್ತಿತರ ಹಲವಾರು ಕಾವ್ಯಗಳನ್ನು ಪ್ರಕಟಿಸಿದ್ದಾರೆ. ಸಂಶೋಧನಾ ಕ್ಷೇತ್ರದಲ್ಲಿ ಕನ್ನಡದಲ್ಲಿ ಮುಕ್ತಕ ಸಾಹಿತ್ಯ, ಮಹಾಕಾವ್ಯ, ಖಂಡ ಕಾವ್ಯ, ಕಥನ ಗೀತೆ, ಹೊಸಗನ್ನಡ ಕಾವ್ಯ-ಜಲ ಸಂವರ್ಧನೆಯನ್ನು ಹೊರತಂದಿದ್ದು, ಸಾಹಿತ್ಯಾಸಕ್ತರ ಗಮನ ಸೆಳೆದಿದ್ದಾರೆ. ನಾಡಿನ ಅನೇಕ ಪತ್ರಿಕೆಗಳಲ್ಲಿ ಅಂಕಣ ಬರಹಗಾರರಾಗಿ ಗುರುತಿಸಿಕೊಂಡಿರುವ ಡಾ.ನೀ.ಗೂ.ರಮೇಶ್ ಅವರು ನಾಲ್ವಡಿ ಕೃಷ್ಣರಾಜ ಒಡೆಯರ್, ಕುವೆಂಪು ಕನ್ನಡ ಕಾಯಕ, ನೌಕರರ ಸೇವಾ ರತ್ನ, ಕನ್ನಡ ವಿಕಾಸ ರತ್ನ, ಕಾವ್ಯಶ್ರೀ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.
ಮಂಡ್ಯದ ಮಾಂಡವ್ಯ ಗೆಳೆಯರ ಬಳಗ, ಪಾಲನೆ ಮಾಧ್ಯಮ ಸಂಸ್ಥೆ, ಸಹೋದ್ಯೋಗಿಗಳು ಹಾಗೂ ಗೆಳೆಯರು ಪ್ರಶಸ್ತಿ ಪುರಸ್ಕೃತರಿಗೆ ಶುಭ ಕೋರಿ ಅಭಿನಂದಿಸಿದ್ದಾರೆ.

ಸೃಜನಶೀಲ, ಕ್ರಿಯಾಶೀಲ, ಸಮಾಜಮುಖಿ ಚಿಂತನೆಯ ಬರಹಗಾರರಾದ ಡಾ. ನೀ.ಗೂ. ರಮೇಶ್ ಅವರ ‘ಗಾಂಧಿ ಮರ’ ಕವನ ಸಂಕಲನಕ್ಕೆ ಕನ್ನಡ ಸಾಹಿತ್ಯ ಪರಿಷತ್ ಪ್ರಶಸ್ತಿ ಸಂದಿರುವುದು ಸಂತೋಷಕರ ವಿಚಾರ. ಅಭಿನಂದನೆಗಳು. ಅವರ ಲೇಖನಿಯಿಂದ ಮತ್ತಷ್ಟು ಮೌಲಿಕ ಕೃತಿಗಳು ಬೆಳಕು ಕಾಣಲಿ ಎಂದು ಆಶಿಸುತ್ತೇನೆ.
-ಪಾಸಿಟಿವ್ ತಮ್ಮಯ್ಯ, ನೈಸರ್ಗಿಕ ಕೃಷಿಕರು ಹಾಗೂ ಯೋಗ ಗುರು, ಚೌಡಿ ಕಟ್ಟೆ, ಹುಣಸೂರು.
ಡಾ. ನೀ.ಗೂ. ರಮೇಶ್ ಅವರ ಕೃತಿಗೆ ಪ್ರಶಸ್ತಿ ಬಂದಿರುವುದಕ್ಕೆ ಅಭಿನಂದನೆಗಳು. ರಮೇಶ್ ಅವರು ಪ್ರಕೃತಿ ಚಿಕಿತ್ಸೆ ಹಾಗೂ ಸಹಜ ಆಹಾರದಂತಹ ಜನೋಪಯೋಗಿ ವಿಷಯಗಳ ಬಗ್ಗೆ ಸಾಹಿತ್ಯ ರಚಿಸಿ ಓದುಗರಿಗೆ ನೀಡಿದ್ದು ವಿಶೇಷವೆನಿಸಿದೆ.
-ಕೆ.ಎಸ್ .ಗಿರಿರಾಜು, ಪ್ರಕೃತಿ ಚಿಕಿತ್ಸೆ ಪ್ರಚಾರಕರು, ಬೆಂಗಳೂರು.
ಬರಹವಲ್ಲದೆ ಉತ್ತಮ ವಾಗ್ಮಿಗಳೂ ಆದ ಮಿತ್ರರಾದ ಡಾ. ನೀ.ಗೂ. ರಮೇಶ್ ಅವರ ಕೃತಿ ಪ್ರಶಸ್ತಿಗೆ ಆಯ್ಕೆ ಆಗಿರುವುದಕ್ಕೆ ಅಭಿನಂದನೆಗಳು. ಸೃಜನಶೀಲೇತರ ಕ್ಷೇತ್ರದಲ್ಲಿಯೂ ಕೆಲಸ ಮಾಡಿರುವ ಅವರು ಉತ್ತಮ ಕೃತಿಗಳನ್ನು ರಚಿಸಿದ್ದಾರೆ. ಆರೋಗ್ಯಕರ ಜೀವನದ ಬಗ್ಗೆಯೂ ಅರಿವು ಮೂಡಿಸುತ್ತಾ ಮಾದರಿ ಉಪನ್ಯಾಸಕರಾಗಿದ್ದಾರೆ.
-ಚಂದ್ರಶೇಖರ ದ.ಕೋ.ಹಳ್ಳಿ, ಪತ್ರಕರ್ತರು ಮತ್ತು ಲೇಖಕರು, ಮಂಡ್ಯ.
ಉಪನ್ಯಾಸಕ ವೃತ್ತಿಯ ಜೊತೆಗೆ ಬರಹ ಮತ್ತು ಆರೋಗ್ಯ ಅಭಿಯಾನದಲ್ಲಿ ತೊಡಗಿಸಿಕೊಂಡಿರುವ ಡಾ. ನೀ.ಗೂ. ರಮೇಶ್ ಅವರ ಕೃತಿ ಪ್ರಶಸ್ತಿಗೆ ಆಯ್ಕೆ ಆಗಿರುವುದಕ್ಕೆ ಅಭಿನಂದನೆಗಳು. ಅವರಿಂದ ಮತ್ತಷ್ಟು ಮೌಲಿಕ ಕೃತಿಗಳು ಓದುಗರ ಕೈ ಸೇರಲಿ.
-ಡಾ. ದೊಡ್ಡೇಗೌಡ ಬಿ.ಸಿ., ಶಿಕ್ಷಣ ಇಲಾಖೆ, ಮೈಸೂರು.
✅ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn

