NEWS

ಎಸ್.ಎಸ್.ಎಲ್.ಸಿ. ಪೂರ್ವ ಸಿದ್ದತಾ ಪರೀಕ್ಷೆ ಪರಿಶೀಲಿಸಿದ ಜಿ.ಪಂ. ಸಿಇಓ

ಪಾಲನೆ ನ್ಯೂಸ್

ಮಂಡ್ಯ: ಜನವರಿ 27ರಿಂದ ಪ್ರಾರಂಭವಾಗಿರುವ ಎಸ್.ಎಸ್.ಎಲ್.ಸಿ. ಪೂರ್ವ ಸಿದ್ದತಾ ಪರೀಕ್ಷೆ ಹಿನ್ನೆಲೆಯಲ್ಲಿ ಮಂಡ್ಯ ತಾಲ್ಲೂಕಿನ ಸೂನಗನಹಳ್ಳಿ ಮತ್ತು ತಗ್ಗಹಳ್ಳಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿನ ಪರೀಕ್ಷಾ ಕೇಂದ್ರಗಳಿಗೆ ಜಿ.ಪಂ. ಸಿಇಓ ನಂದಿನಿ ಕೆ.ಆರ್. ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಸೋಮವಾರ ಶಾಲೆಗೆ ಭೇಟಿ ನೀಡಿದ ಸಿಇಓ ಅವರು ಕಳೆದ ಮಾಹೆ ನಡೆದ ಮೊದಲನೇ ಪೂರ್ವ ಸಿದ್ದತಾ ಪರೀಕ್ಷೆಯಲ್ಲಿ ಫಲಿತಾಂಶ ಕಡಿಮೆಯಾಗಲು ಕಾರಣಗಳೇನು ಎಂಬ ಬಗ್ಗೆ ಶಾಲೆಯ ಮುಖ್ಯೋಪಾಧ್ಯಾಯರಿಂದ ಮಾಹಿತಿ ಪಡೆದರು.

ಮುಖ್ಯ ಪರೀಕ್ಷೆಗೆ ಇನ್ನು ಕೆಲವೇ ದಿನಗಳು ಮಾತ್ರ ಬಾಕಿ ಇದ್ದು, ವಿದ್ಯಾರ್ಥಿಗಳಲ್ಲಿ ಆತ್ಮ ಸ್ಥೈರ್ಯ ತುಂಬುವ ಕೆಲಸವನ್ನು ಶಿಕ್ಷಕರು ಮಾಡಬೇಕು. ಪೋಷಕರಿಗೂ ಸಹ ಸೂಕ್ತ ಮಾಹಿತಿ ನೀಡಿ ಮಕ್ಕಳಿಗೆ ಮನೆಯಲ್ಲಿಯೂ ಕಲಿಕಾ ವಾತಾವರಣ ನಿರ್ಮಾಣ ಮಾಡುವಂತೆ ತಿಳಿಸಲು ಶಿಕ್ಷಕರಿಗೆ ಸೂಚಿಸಿದರು.

ಕಲಿಕಾ ಮಿತ್ರ ಪರೀಕ್ಷಾ ಮಾರ್ಗದರ್ಶಿ ನೀಡಿದ ನಂತರ ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಲು ಸ್ವಲ್ಪ ಅನುಕೂಲವಾಗಿದೆ ಹಾಗೂ ಸಿ.ಎಸ್.ಆರ್. ಅನುದಾನದಡಿ ನೀಡಲಾಗಿರುವ ನೋಟ್ ಬುಕ್ ಗಳನ್ನು ಬಳಕೆ ಮಾಡಿಕೊಂಡು ವಿದ್ಯಾರ್ಥಿಗಳಿಗೆ ವಿಶೇಷ ತರಗತಿಗಳನ್ನು ನಡೆಸಿ ಹೆಚ್ಚಿನ ಅಭ್ಯಾಸ ಮಾಡಿಸಲು ಸಹಾಯಕವಾಗಿದೆ ಎಂದು ಶಿಕ್ಷಕರು ಮಾಹಿತಿ ನೀಡಿದರು.

ಕಳೆದ ಮಾಹೆಯಿಂದ ಭಾನುವಾರವೂ ಸಹ ತರಗತಿಗಳನ್ನು ನಡೆಸಲಾಗುತ್ತಿದೆ. ವಿದ್ಯಾರ್ಥಿಗಳು ಕೂಡ ಆಸಕ್ತಿಯಿಂದ ಹಾಜರಾಗುತ್ತಿದ್ದಾರೆ. ಆದರೆ ಕೆಲವು ವಿದ್ಯಾರ್ಥಿಗಳು ಗೈರುಹಾಜರಾಗುತ್ತಿದ್ದು, ಸದರಿ ವಿದ್ಯಾರ್ಥಿಗಳ ಪೋಷಕರಿಗೂ ಈ ಬಗ್ಗೆ ಮಾಹಿತಿ ನೀಡಲಾಗುತ್ತಿದೆ ಎಂದು ಶಿಕ್ಷಕರೊಬ್ಬರು ತಿಳಿಸಿದರು. ಕೆಲವು ಬಾಲಕರು ಶಾಲೆಗೆ ಗೈರು ಹಾಜರಾಗುತ್ತಿದ್ದು, ಬಾಲಕರಿಂದಲೇ ಫಲಿತಾಂಶ ಕುಂಠಿತವಾಗುತ್ತಿದೆ ಎಂದು ತಿಳಿಸಿದರು.

ಈ ಬಗ್ಗೆ ಜಿಲ್ಲೆಯ ಎಲ್ಲಾ ಶಾಲೆಗಳಲ್ಲಿ ಬಾಲಕರ ಪೋಷಕರ ಸಭೆ ನಡೆಸಿ ಶಿಕ್ಷಣದ ಮಹತ್ವ, ಅದರಲ್ಲಿಯೂ ಎಸ್.ಎಸ್.ಎಲ್.ಸಿ. ಉತ್ತೀರ್ಣರಾಗುವುದರಿಂದ ಆಗುವ ಪ್ರಯೋಜನಗಳ ಕುರಿತು ಮನವರಿಕೆ ಮಾಡಿಕೊಡುವಂತೆ ಕ್ರಮವಹಿಸಲು ಉಪನಿರ್ದೇಶಕರು, ಸಾರ್ವಜನಿಕ ಶಿಕ್ಷಣ ಇಲಾಖೆರವರಿಗೆ ಸೂಚಿಸಿದರು.

ಶಾಲಾ ಆವರಣದಲ್ಲಿ ಸಂಜೆಯಾಗುತ್ತಿದ್ದಂತೆ ಗ್ರಾಮದ ಕೆಲವು ಯುವಕರು ಆಟ ಆಡಲು ಬರುವ ಕಾರಣ ಸಂಜೆಯ ನಂತರ ವಿಶೇಷ ತರಗತಿ ನಡೆಸಲು ಕಷ್ಟವಾಗುತ್ತಿದೆ, ಈ ಬಗ್ಗೆ ಗ್ರಾ.ಪಂ.ಗೂ ಮಾಹಿತಿ ನೀಡಲಾಗಿದೆ ಎಂದು ತಿಳಿಸಿದರು. ಈ ಬಗ್ಗೆ ಪಿಡಿಓ ರವರು ಅಗತ್ಯ ಕ್ರಮವಹಿಸುವಂತೆ ಸಿಇಓ ಅವರು ಸೂಚಿಸಿದರು.

ಜಿಲ್ಲೆಯ ಎಲ್ಲಾ ಪ್ರೌಢಶಾಲೆಗಳಲ್ಲಿ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಭಾನುವಾರವೂ ಸೇರಿದಂತೆ ರಜಾ ದಿನಗಳಲ್ಲಿಯೂ ವಿಶೇಷ ತರಗತಿಗಳನ್ನು ನಡೆಸುವಂತೆ ಹಾಗೂ ಸದರಿ ದಿನಗಳಂದು ಸಾರ್ವಜನಿಕರು ಶಾಲಾ ಆವರಣಕ್ಕೆ ಪ್ರವೇಶಿಸಿ ವಿದ್ಯಾರ್ಥಿಗಳ ಅಭ್ಯಾಸಕ್ಕೆ ತೊಂದರೆಯಾಗದಂತೆ ವರ್ತಿಸಲು ಕೋರುವ ಬಗ್ಗೆ ಸುತ್ತೋಲೆಯನ್ನು ಹೊರಡಿಸುವಂತೆ ಉಪನಿರ್ದೇಶಕರು, ಸಾರ್ವಜನಿಕ ಶಿಕ್ಷಣ ಇಲಾಖೆರವರಿಗೆ ಸೂಚಿಸಿದರು.

ಮಂಡ್ಯ ತಾಲ್ಲೂಕಿನ ತಗ್ಗಹಳ್ಳಿ ಸರ್ಕಾರಿ ಪ್ರೌಢಶಾಲೆಗೂ ಭೇಟಿ ನೀಡಿ ಪೂರ್ವಸಿದ್ದತಾ ಪರೀಕ್ಷೆ ಬಗ್ಗೆ ಪರಿಶೀಲಿಸಿ ಶಿಕ್ಷಕರಿಂದ ಮಾಹಿತಿ ಪಡೆದರು.

ತಗ್ಗಹಳ್ಳಿ ಗ್ರಾ.ಪಂ.ಗೆ ಭೇಟಿ: ಎಸ್.ಎಸ್.ಎಲ್.ಸಿ. ಪೂರ್ವಸಿದ್ದತಾ ಪರೀಕ್ಷೆ ಸಂಬಂಧ ಶಾಲೆಗಳಿಗೆ ಭೇಟಿ ನೀಡುವ ಮಾರ್ಗ ಮಧ್ಯೆ ತಗ್ಗಹಳ್ಳಿ ಗ್ರಾಮ ಪಂಚಾಯತ್ ಗೆ ಕಚೇರಿಯ ಹತ್ತಿರ ಸಾರ್ವಜನಿಕರು ಜಮಾವಣೆಗೊಂಡಿದ್ದನ್ನು ಗಮನಿಸಿದ ಸಿಇಓ ಅವರು ಗ್ರಾ.ಪಂ.ಗೆ ಭೇಟಿ ನೀಡಿ ಸಾರ್ವಜನಿಕರ ಅಹವಾಲು ಸ್ವೀಕರಿಸಿದರು. ಈ ಸಂದರ್ಭದಲ್ಲಿ ಸಾರ್ವಜನಿಕರು 15ನೇ ಹಣಕಾಸು ಯೋಜನೆಯಡಿ ರೂ. 40.00 ಲಕ್ಷಕ್ಕೂ ಹೆಚ್ಚು ಮೊತ್ತವನ್ನು ಅಕ್ರಮವಾಗಿ ಪಾವತಿ ಮಾಡಿದ್ದಾರೆ ಎಂದು ಆರೋಪಿಸಿ ದೂರು ಸಲ್ಲಿಸಿದರು. ಸ್ಥಳದಲ್ಲಿಯೇ ಮಂಡ್ಯ ತಾ.ಪಂ. ಇಓ ಅವರಿಗೆ ಕರೆ ಮಾಡಿ ಈ ಬಗ್ಗೆ ಪರಿಶೀಲಿಸಿ ವರದಿ ಸಲ್ಲಿಸುವಂತೆ ಸೂಚಿಸಿದರು. ಹಾಗೂ ಈ ಬಗ್ಗೆ ನಿಯಮಾನುಸಾರ ಪರಿಶೀಲಿಸಿ ಅಗತ್ಯ ಕ್ರಮ ತೆಗೆದುಕೊಳ್ಳಲಾಗುವುದೆಂದು ಸಿಇಓ ಅವರು ತಿಳಿಸಿದರು.

ಈ ಸಂದರ್ಭದಲ್ಲಿ ಮಂಡ್ಯ ದಕ್ಷಿಣ ಕ್ಷೇತ್ರ ಶಿಕ್ಷಣಾಧಿಕಾರಿ ಮಹದೇವ್, ಸೂನಗಹಳ್ಳಿ ಸರ್ಕಾರಿ ಪ್ರೌಢಶಾಲೆಯ ಮುಖ್ಯೋಪಾದ್ಯಾಯರಾದ ವೀಣಾ, ತಗ್ಗಹಳ್ಳಿ ಸರ್ಕಾರಿ ಪ್ರೌಢಶಾಲೆಯ ಮುಖ್ಯೋಪದ್ಯಾಯರಾದ ಪ್ರತಿಭಾ ಸೇರಿದಂತೆ ಇತರರು ಹಾಜರಿದ್ದರು.

ಪಾಲನೆ.ಇನ್‌ ವಾಟ್ಸ್‌ ಆಪ್‌ ಗುಂಪಿಗೆ ಸೇರಿರಿ.

Related posts

ಕೇಂದ್ರ ಬಜೆಟ್ ನಲ್ಲಿ ರಾಜ್ಯಕ್ಕೆ ಏನೂ ಕೊಟ್ಟಿಲ್ಲ: ಸಿಎಂ ಸಿದ್ದರಾಮಯ್ಯ

ಮೋದಿಜೀ ಕರೆ ನೀಡಿದ ಮಿತ ಬಳಕೆ, ಮನವಿಯೇ ಹೊರತು ಕಾನೂನಲ್ಲಾ, ವಿರೋಧವೇಕೇ?

ವಿಶ್ವಮಾನವ ದಿನಾಚರಣೆ ಹಾಗೂ ಅಮರಶಿಲ್ಪಿ ಜಕಣಾಚಾರಿ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಿ:ಬಿ.ಸಿ ಶಿವಾನಂದ ಮೂರ್ತಿ

Leave a Comment