NEWS

ಸಾಹಿತ್ಯ ಸಮ್ಮೇಳನದ ಸವಿನೆನಪಿನ ಕನ್ನಡ ಭವನ ನಿರ್ಮಾಣಕ್ಕೆ ಭವ್ಯ ಸ್ವಾಗತ

ಪಾಲನೆ ಅಭಿಮತ

ಸಾಹಿತ್ಯಾಭಿಮಾನಿಗಳೇ,

ಈ ಹಿಂದೆ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷರ ಹುದ್ದೆಗೆ ನಡೆದ ಚುನಾವಣೆಯಲ್ಲಿ ಸ್ಪರ್ದಿಸಿದ್ದ ಡಾ. ಮಹೇಶ್ ಜೋಶಿಯವರು ನನ್ನನ್ನು ಚುನಾವಣೆಯಲ್ಲಿ ಗೆಲ್ಲಿಸಿದರೆ ನನ್ನ ಅವಧಿಯಲ್ಲಿ ಮಂಡ್ಯದಲ್ಲಿ ಸಮ್ಮೇಳನ ನಡೆಸಲು ಸಹಕರಿಸುವುದಾಗಿ ಭರವಸೆ ನೀಡಿದ್ದರು. ಅದೇ ರೀತಿಯಲ್ಲಿ ಮಂಡ್ಯ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ, ಮತ್ತೇ ಎರಡನೇ ಬಾರಿಗೆ ಅಧ್ಯಕ್ಷರಾಗಲು ಚುನಾವಣೆಗೆ ಸ್ಪರ್ದಿಸಿದ್ದ ಸಿ. ಕೆ. ರವಿಕುಮಾರ್ ಚಾಮಲಾಪುರ ಸಹಾ,  ನನ್ನನ್ನು ಮಂಡ್ಯ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷನನ್ನಾಗಿ ಆಯ್ಕೆ ಮಾಡಿದಲ್ಲಿ, ರಾಜ್ಯದ ಎಲ್ಲಾ ಕಸಾಪ ಜಿಲ್ಲಾಧ್ಯಕರ ಸಹಕಾರ ಪಡೆದು ಮಂಡ್ಯದಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಲು ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದ್ದನ್ನು ಈ ಸಂದರ್ಭದಲ್ಲಿ ನೆನೆಯುತ್ತಾ, ಆಗ ನಡೆದ ಕಸಾಪ ಚುನಾವಣೆಯಲ್ಲಿ ಭರವಸೆ ನೀಡಿದ್ದ ಈ ಇಬ್ಬರೂ ಅಭ್ಯರ್ಥಿಗಳು ಜಯಗಳಿಸಿದರು. ಈ ಹಿಂದೆಯೇ ನಿಗದಿಯಾದಂತೆ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವು ಹಾವೇರಿಯಲ್ಲಿ ನಡೆಯಿತು. ಆ ಸಮ್ಮೇಳನದ ಎರಡನೇ ದಿನದಲ್ಲಿ ನಡೆದ ಕೇಂದ್ರ ಕಸಾಪ ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಮಂಡ್ಯದಲ್ಲಿ ನಡೆಸಲು ಅನುಮತಿ ದೊರೆಯಿತು. ಇದಕ್ಕೆ ಸಹಕಾರ ನೀಡಿದ ಎಲ್ಲಾ ಜಿಲ್ಲಾ ಕಸಾಪ ಅಧ್ಯಕ್ಷರು, ವಿಶೇಷ ಆಸಕ್ತಿವಹಿಸಿದ ರಾಜ್ಯಾಧ್ಯಕ್ಷರು ಹಾಗೂ ಮಂಡ್ಯ ಜಿಲ್ಲಾ ಕಸಾಪ ಅಧ್ಯಕ್ಷ ರವಿಕುಮಾರ್ ಚಾಮಲಾಪುರ ಅಭಿನಂದನಾರ್ಹರು.

ಸಮ್ಮೇಳನ ಘೋಷಣೆಯಾದ ಕೆಲವು ದಿನಗಳಲ್ಲಿಯೇ ಮಂಡ್ಯ ಜಿಲ್ಲಾ ಕಸಾಪ ಅಧ್ಯಕ್ಷ ರವಿಕುಮಾರ ಚಾಮಲಾಪುರ ಅಕಾಲಿಕ ಮರಣಕ್ಕೆ ತುತ್ತಾಗಿದ್ದು ನಿಜಕ್ಕೂ ದುರಂತ. ಸಮ್ಮೇಳನ ನಡೆಸುವ ಜಿಲ್ಲಾ ಕಸಾಪ ಅಧ್ಯಕ್ಷರು ಕಾರಣಾಂತರದಿಂದ ಮೃತರಾಗಿದ್ದರಿಂದ, ಬೇರೆ ಜಿಲ್ಲಾ ಕಸಾಪ ಅಧ್ಯಕ್ಷರು ಸದರಿ ಸಮ್ಮೇಳನ ನಮ್ಮ ಜಿಲ್ಲೆಗೆ ನೀಡಲು ಒತ್ತಾಯ ಮಾಡಿದ್ದರೂ  ಸಹಾ, ಕೇಂದ್ರ ಕಸಾಪ ಅಧ್ಯಕ್ಷರು ತಾವೇ ವಿಶೇಷ ಆಸಕ್ತಿ ವಹಿಸಿ ಸಹಕರಿಸಿ,  ಘೋಷಣೆ ಮಾಡಿದ್ದ ಸದರಿ ಸಮ್ಮೇಳನ ಬದಲಾವಣೆ ಮಾಡುವುದು ಸೂಕ್ತವಲ್ಲ ಎಂದು ನಿರ್ಧಾರ ಮಾಡಿ, ಸಮ್ಮೇಳನ ನಡೆಯುವವರೆಗೆ ಸಮಿತಿಯನ್ನು ನೇಮಕ ಮಾಡಿದರು. ಅದರಂತೆ 2024ನೇ ಡಿಸೆಂಬರ್ 20, 21ಹಾಗೂ 22ರಂದು ಸಮ್ಮೇಳನ ಅದ್ದೂರಿಯಾಗಿ ಜರುಗಿತು. ಈ ಸಮ್ಮೇಳನವು ಕರ್ನಾಟಕ ರಾಜ್ಯ ಸರ್ಕಾರ-ಮಂಡ್ಯ ಜಿಲ್ಲಾಆಡಳಿತ -ಕನ್ನಡ ಸಾಹಿತ್ಯ ಪರಿಷತ್ತು-ಸ್ವಾಗತ ಸಮಿತಿ (ಉಪ ಸಮಿತಿಗಳು ಸೇರಿದಂತೆ) -ಜನಪ್ರತಿನಿದಿನಗಳು -ಸಾಹಿತ್ಯಾಸಕ್ತರು, ಸಂಘ ಸಂಸ್ಥೆಗಳು -ಸರ್ಕಾರಿ ನೌಕರರು ಹಾಗೂ ಸಾರ್ವಜನಿಕರ ಸಂಪೂರ್ಣ ಸಹಕಾರದಿಂದ ಯಶಸ್ವಿಯಾಗಿ ಜರುಗಿತು.

ಸಮ್ಮೇಳನ ನಡೆಸಿಯೂ ಅದರಿಂದ ಒಂದಷ್ಟು ಹಣ ಉಳಿದಿದೆ, ಸರ್ಕಾರದಿಂದ ಮತ್ತಷ್ಟು ಅನುದಾನ ಜೊತೆಗೆ ಶಾಸಕರುಗಳ ಅನುದಾನದಿಂದ ಮಂಡ್ಯದ ಹೃದಯ ಭಾಗದಲ್ಲಿರುವ ಸಾಹಿತ್ಯಾಸಕ್ತರಿಗೆ ಅನುಕೂಲಕರವಾದ ಒಳಾಂಗಣ  ಕ್ರೀಡಾಂಗಣದ ಪಕ್ಕದ ಸ್ಥಳಾವಕಾಶದಲ್ಲಿ ’87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ’ದ ಸವಿನೆನಪಿಗಾಗಿ “ಕನ್ನಡ  ಭವನ” ನಿರ್ಮಾಣಕ್ಕೆ ಜಿಲ್ಲಾ ಆಡಳಿತ ಮುಂದಾಗಿರುವುದು ಸಂತಸದ ವಿಷಯ. ಇದು ಕೇವಲ ಕಟ್ಟಡವಾಗದೇ, ಪಾರಂಪರಿಕ ಕಟ್ಟಡವಾಗಲಿ.  ಕಾರ್ಯಕ್ರಮಕ್ಕೆ ಸುಸಜ್ಜಿತ ಆಡಿಟೋರಿಯಂ ಅಲ್ಲದೇ, ಸಣ್ಣದೊಂದು ಕಿರು ಸಭಾಂಗಣವೂ, ಕಚೇರಿ ಸೇರಿದಂತೆ ಪೂರಕ ಕೊಠಡಿ, ಕೆಳಗಡೆ ಪಾರ್ಕಿಂಗ್ ವ್ಯವಸ್ಥೆ, ಮೂಲಭೂತ ಸೌಕರ್ಯ ಒಳಗೊಂಡಂತೆ ನಿರ್ಮಾಣಗೊಂಡಲ್ಲಿ ಬಹುಪಯೋಗಿಯಾಗಬಲ್ಲದು. ಈ ಬಗ್ಗೆ ಅನುಭವಿ ಕಲಾವಿದರು -ಸಾಹಿತ್ಯ ಪ್ರೇಮಿಗಳು, ನುರಿತ ತಜ್ಞರು  ತಮ್ಮ ಅನುಭವಗಳನ್ನು ಸಂಬಂಧಪಟ್ಟವರ ಗಮನಕ್ಕೆ ತರಲು ಕೋರಿದೆ.

 ಈ ಸಂದರ್ಭದಲ್ಲಿಯೇ ಮಂಡ್ಯ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು “ನಾವಿಕ ನಿಲ್ಲದ ದೋಣಿ “ಯಂತಾಗಿರುವುದು ನಿಜಕ್ಕೂ ವಿಪರ್ಯಾಸ. ನೀವೆನಂತೀರಾ?

ಜಿ. ಧನಂಜಯ ದರಸಗುಪ್ಪೆ, ಕನ್ನಡ ಸಾಹಿತ್ಯ ಪರಿಷತ್ತಿನ ಆಜೀವ ಸದಸ್ಯ, ಮಂಡ್ಯ ಜಿಲ್ಲೆ.

Related posts

ಸುನಿತಾ ವಿಲಿಯಮ್ಸ್ ಭಾರತಕ್ಕೆ ಭೇಟಿ

ಆಪ್ತ ಸಂವಾದ: ವಿಶೇಷ ಸಾಹಿತ್ಯ ಕಾರ್ಯಕ್ರಮ

ಬಳ್ಳಾರಿ ಘರ್ಷಣೆ: ಸಿಬಿಐ ತನಿಖೆಗೆ ಆಗ್ರಹಿಸಿ ಇಂದು ಬಿಜೆಪಿ ಸಮಾವೇಶ

Leave a Comment