ಪಾಲನೆ ನ್ಯೂಸ್
ಮಂಡ್ಯ: ನಾಗಮಂಗಲ ತಾಲೂಕಿನಲ್ಲಿ ನಕಲಿ ದಾಖಲೆ ಸೃಷ್ಟಿಸಿ ಅರಣ್ಯ ಪ್ರದೇಶದ ಭೂಮಿಯನ್ನು ಅನ್ಯರಿಗೆ ಅಕ್ರಮವಾಗಿ ಕಲ್ಲುಗಣಿಗಾರಿಕೆಗೆ ಅನುಮತಿ ನೀಡಿದ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಸಾಮಾಜಿಕ ಕಾರ್ಯಕರ್ತ ಕೆ.ಆರ್.ರವೀಂದ್ರ ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾಗಮಂಗಲ ತಾಲೂಕಿನಲ್ಲಿ 80 ಸಾವಿರ ಎಕರೆಗೂ ಹೆಚ್ಚು ಅಕ್ರಮ ಖಾತೆ ಮಾಡಿ ಭೂ ಕಬಳಿಕೆ ನಡೆದಿದೆ. ಈ ಸಂಬಂಧ 8 ಅಧಿಕಾರಿಗಳ ವಿರುದ್ಧ ಭ್ರಷ್ಟಾಚಾರ ನಿಗ್ರಹದಳಕ್ಕೆ 2019ರಲ್ಲಿ ದೂರು ಸಲ್ಲಿಸಲಾಗಿದೆ ಎಂದರು.
ಪ್ರಕರಣದ ತನಿಖೆ ನಡೆಸಲು ಜಿಲ್ಲಾಧಿಕಾರಿಗಳು ಅಪರ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ತಂಡ ರಚಿಸಲಾಗಿತ್ತು. ತಂಡವು ಭ್ರಷ್ಟಾಚಾರ ನಿಗ್ರಹದಳಕ್ಕೆ ಸುಳ್ಳು ವರದಿ ನೀಡಿ, ಪ್ರಕರಣವನ್ನು ದಿಕ್ಕು ತಪ್ಪಿಸುವ ಹುನ್ನಾರ ನಡೆಯುತ್ತಿದ್ದು, ಪ್ರಕರಣವನ್ನು ಲೋಕಾಯುಕ್ತ ಪೊಲೀಸರಿಗೆ ಅಥವಾ ಸಿಬಿಐಗೆ ವಹಿಸಬೇಕು ಎಂದು ಅಗ್ರಹಿಸಿದರು.
ಸಿಬಿಐಗೆ ಹೆಚ್ಚು ಪ್ರಕರಣಗಳ ಒತ್ತಡವಿದೆ, ಸಿಬ್ಬಂದಿಗಳು ಲಭ್ಯವಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವರು ಹೇಳಿಕೆ ನೀಡಿದ್ದಾರೆ. ಸಿಬಿಐಗೆ ತನಿಖೆ ಮಾಡಲು ಪ್ರಕರಣಗಳೇ ಇಲ್ಲವಾಗಿದ್ದು, ಅವರ ಹೇಳಿಕೆ ಸುಳ್ಳಾಗಿದೆ ಎಂದು ಅವರು ಖಂಡಿಸಿದರು.
ಜಿಲ್ಲಾಧಿಕಾರಿ, ಅಪರ ಜಿಲ್ಲಾಧಿಕಾರಿ, ಉಪವಿಭಾಗಾಧಿಕಾರಿಗಳು ತಹಸೀಲ್ದಾರ್, ಉಪ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ಸಿಬ್ಬಂದಿ ರಕ್ಷಣೆಗೆ ಸುಳ್ಳು ವರದಿ ನೀಡಿದ್ದಾರೆ. ಈ ಸಂಬಂಧ ತನಿಖಾ ತಂಡ, ಉಪವಿಭಾಗಾಧಿಕಾರಿ ನಂದೀಶ್ ಅವರ ಸುಳ್ಳುವರದಿಯ ವಿರುದ್ಧ ಲೋಕಾಯುಕ್ತ ಎಡಿಜಿಪಿ, ಮಂಡ್ಯ ಲೋಕಾಯುಕ್ತ ಎಸ್ಪಿ ಅವರಿಗೆ ದೂರು ಸಲ್ಲಿಸುತ್ತಿದ್ದೇನೆ ಎಂದು ಹೇಳಿದರು.
ಅಕ್ರಮ ಮಾಂಸ ಸಾಗಾಟ

ನಾಗಮಂಗಲದಿಂದ ಕೇರಳ, ಮೈಸೂರು ಮತ್ತು ಬೆಂಗಳೂರಿಗೆ ದನ, ಎಮ್ಮೆ ಮಾಂಸ ಸಾಗಣೆ ಮಾಡಲಾಗುತ್ತಿದೆ.
ದಿನನಿತ್ಯ, ಸ್ಟೀಲ್ ಬಾಕ್ಸ್, ದೊಡ್ಡ ಪ್ಲಾಸ್ಟಿಕ್ ಡಬ್ಬಿಯಲ್ಲಿ ತುಂಬಿಕೊಂಡು ಸಾಗಣೆ ಮಾಡಲಾಗುತ್ತಿದೆ. ಅಲ್ಲಿನ ಸ್ಥಳೀಯರು ಪೊಲೀಸರಿಗೆ ದೂರಲು ತೆರಳಿದಾಗ ಪೊಲೀಸರಿಂದ ಧಮ್ಕಿ ಬೆದರಿಕೆ ಹಾಕಿದ ಘಟನೆ ನಡೆದಿದೆ. ಈ ಸಂಬಂಧ ಜಿಲ್ಲಾ ಪೊಲೀಸ್ ಎಸ್ಪಿ ಕ್ರಮ ವಹಿಸುವಂತೆ ಮನವಿ ಮಾಡಿದರು.
ನಾಗಮಂಗಲದಲ್ಲಿ ಭೂಕಬಳಿಕೆ ಸಂಬಂಧ ಇಲ್ಲಿಯವರೆಗೆ ನಡೆದ ತನಿಖೆ ಸಂಬಂಧ ಎಸ್ಪಿ ಅವರು ಪತ್ರಿಕಾಗೋಷ್ಠಿ ಕರೆದು ಮಾಹಿತಿ ನೀಡುವಂತೆ ಮನವಿ ಮಾಡಿದರು.
ಪಾಲನೆ.ಇನ್ ವಾಟ್ಸ್ ಆಪ್ ಗುಂಪಿಗೆ ಸೇರಿರಿ.


