NEWS

‘ಬಾಬಾ ಸಾಹೇಬ್ ಸಮತೆಯೆಡೆಗೆ ನಡಿಗೆ’ ಆಶಯದ ರಂಗಾಯಣ ಬೆಳ್ಳಿಹಬ್ಬ

ಬಹುರೂಪಿ ನಾಟಕೋತ್ಸವಕ್ಕೆ ಅದ್ಧೂರಿ ತೆರೆ

ಪಾಲನೆ ನ್ಯೂಸ್

ಮೈಸೂರು: ಬಾಬಾ ಸಾಹೇಬ್ ಸಮತೆಯೆಡೆಗೆ ನಡಿಗೆ ಆಶಯದ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವದ ಬೆಳ್ಳಿಹಬ್ಬ ಭಾನುವಾರ ಅದ್ದೂರಿಯಾಗಿ ತೆರೆಕಂಡಿತು.

ಜ.11ರಂದು ಆರಂಭವಾದ ನಾಟಕೋತ್ಸವವೂ ಬಾಬಾ ಸಾಹೇಬರ ಆಶಯವನ್ನು ಪಸರಿಸುವಲ್ಲಿ ಯಶಸ್ವಿಯಾಯಿತು. ನಾಟಕ, ಹೋರಾಟದ ಹಾಡು, ಕಲೆಗಳಲ್ಲಿ ಸಂವಿಧಾನ ಶಿಲ್ಪಿಯ ಸಮಗ್ರ ವ್ಯಕ್ತಿತ್ವ ಅನಾವರಣಗೊಂಡಿತು.

ಮಣಿಪುರದ ಹಿರಿಯ ರಂಗ ಕಲಾವಿದೆ ಹೈಸ್ನಾಂ ಸಾವಿತ್ರಿ ಅವರು ಬೆಳ್ಳಿಹಬ್ಬದ ರಂಗ ಗೌರವ ಸ್ವೀಕರಿಸಿ ಬಹುರೂಪಿ ಉದ್ಘಾಟಿಸಿದರು. ಜ.18 ರಂದು ನಾಟಕಕಾರ ರಾಮಯ್ಯ ಅವರು ವಿಚಾರ ಸಂಕೀರಣ ಸಮಾರೋಪದೊಂದಿಗೆ ಮುಕ್ತಾಯಗೊಂಡಿತು.

ಮಕ್ಕಳ ಬಹುರೂಪಿ ಸಂಭ್ರಮಿಸಿತು. ಕರಕುಶಲ, ಆಹಾರ ಮೇಳ, ಪುಸ್ತಕ ಮೇಳಕ್ಕೆ ಸಾವಿರಾರು ಜನರು ಭೇಟಿ ನೀಡಿದರು. ನಟ ಪ್ರಕಾಶ್ ರಾಜ್, ದುನಿಯಾ ವಿಜಯ್ ಪಾಲ್ಗೊಂಡು ಸಂಭ್ರಮವನ್ನು ಹೆಚ್ಚಿಸಿದರು. 8 ದಿನಗಳ ಬೆಳ್ಳಿಹಬ್ಬಕ್ಕೆ ಲಕ್ಷಾಂತರ ಜನರು ಸಾಕ್ಷಿಯಾದರು.

ಜಾತಿ ಜಾಗತಿಕ: ಸಮಾರೋಪ ಭಾಷಣ ಮಾಡಿದ ಚಿಂತಕ ಕೋಟಿಗಾನಹಳ್ಳಿ ರಾಮಯ್ಯ, ಜಾತಿ ಜಾಗತಿಕವಾಗುತ್ತಿದ್ದು, ಅದರ ವಿನಾಶಕ್ಕೆ ಪ್ರತಿರೋಧವಾಗಿ 70ರ ದಶಕದ ಹೋರಾಟಗಳು ಮತ್ತೆ ಎಂದು ಪ್ರತಿಪಾದಿಸಿದರು.

ನಮ್ಮ ದೇಶವನ್ನು ರಿಪಬ್ಲಿಕ್ ಎಂದು ಕರೆದು ಕೊಂಡಿದ್ದೇವೆ. ಆದರೆ, ಈಗ ಜಾತಿ ಗಟ್ಟಿಗೊಳಿಸುವ ರಿಪಬ್ಲಿಕ್ ಆಗುತ್ತಿದೆ. ಪ್ರಜಾಪ್ರಭುತ್ವದಲ್ಲಿ ಅಸಮಾನತೆಯನ್ನು ಸರಿಪಡಿಸುವುದು ಬಹಳ ಮುಖ್ಯವಾದ ಆದ್ಯತೆಯಾಗಿದೆ. ಆದರೆ, ಎಂದೆಂದೂ ಕೂಡ ಊಹಿಸಲಾಗದ ಅಸಮಾನತೆ ಭಾರತದಲ್ಲಿ ತಾಂಡವಾಡುತ್ತಿದೆ. ದೇಶದ ಶೇ.60ರಷ್ಟು ಸಂಪತ್ತು ಕೇವಲ ಶೇ.10ರಷ್ಟು ಜನರಲ್ಲಿ ಮಾತ್ರ ಇದೆ. ಬ್ರಾಹ್ಮಣ ದಿಗ್ವಿಜಯ ಹೊಸ್ತಿನಲ್ಲಿ ಭಾರತವಿದೆ ಎಂದು ಹೇಳಿದರು.

70ರ ದಶಕದಲ್ಲಿ ಸಾಮಾಜಿಕ ನ್ಯಾಯಕ್ಕೆ ನಡೆದ ಹೋರಾಟಗಳನ್ನು ಇಂದಿಗೆ ಕಟ್ಟಲು ಸಾಧ್ಯವಾಗುತ್ತಿಲ್ಲ. ಆ ಕಾಲಘಟ್ಟದಲ್ಲಿದ್ದ ದಲಿತ ಮತ್ತು ಮಧ್ಯಮ ವರ್ಗದ ಸಮುದಾಯಗಳು ಕಾಣಿಸಿಕೊಂಡವು. ಅಂದು ಸಣ್ಣ ಪ್ರಮಾಣದಲ್ಲಿದ್ದ ದಲಿತ ಮಧ್ಯಮ ವರ್ಗದವರ ಸಂಖ್ಯೆ ಇದೀಗ ಗಣನೀಯವಾಗಿ ಹೆಚ್ಚಾಗಿದೆ. ಈ ಮದ್ಯಮ ವರ್ಗ ತನ್ನ ಬೇರಿನಿಂದ ದೂರವಾಗಿ ತನ್ನ ಸೋದರರನ್ನು ತಿರುಗಿ ನೋಡದ ವಿಚಿತ್ರ ಮನೋಭಾವ ಬೆಳೆಸಿಕೊಂಡಿದೆ. ಇದರ ಅಪಾಯವನ್ನು ನಾವು ಮನಗಾಣಬೇಕಿದೆ ಎಂದು ಹೇಳಿದರು.

ಸಂವಿಧಾನದೊಂದಿಗೆ ಅಂಬೇಡ್ಕರ್ ಅವರನ್ನು ಸಮೀಕರಣ ಮಾಡುವ ಮೂಲಕ ಒಂದು ವರ್ಗ ಜಾಗೃತವಾಗುತ್ತಿದೆ. ಅವರ ಬೀದಿ ಹೋರಾಟದಲ್ಲಿ ಪ್ರಾಮಾಣಿಕತೆ ಇದುವೇ ಆತಂಕಕ್ಕೆ ಕಾರಣವಾಗುತ್ತಿದೆ. ಇಂದು ಅಂಬೇಡ್ಕರ್ ಎಲ್ಲರಿಗೂ ಕಾಮಧೇನು. ಹೋರಾಟ, ಚಿಂತನೆ, ಕೃತಿಯ ಮೂಲಕ ನುಡಿಗಳ ಹಾಲು ಕೊಡುತ್ತಿ ದ್ದಾರೆ. ಪುರಾಣದಂತೆ ಕಾಮಧೇನು ಅನ್ನು ಅಪಹರಣ ಮಾಡಲಾಗುತ್ತಿದೆ ಎಂದು ಹೇಳಿದರು.

ಸಮಾಜ ಕಲ್ಯಾಣ ಇಲಾಖೆಯ ಅಂಬೇಡ್ಕರ್ ತರಬೇತಿ ಸಂಶೋಧನೆ, ವಿಸ್ತರಣಾ ಕೇಂದ್ರದ ನಿರ್ದೇಶಕ ಡಾ. ಸಾಬೀರ್ ಅಹ್ಮದ್ ಮುಲ್ಲಾ, ರಂಗಾಯಣದ ನಿರ್ದೇಶಕ ಸತೀಶ ತಿಪಟೂರು, ಮೈವಿವಿ ಅಂಬೇಡ್ಕರ್ ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರದ ನಿರ್ದೇಶಕಿ ಪ್ರೊ. ಎಸ್. ನರೇಂದ್ರಕುಮಾರ್, ಪ್ರಾಧ್ಯಾಪಕ ಡಾ. ಜೆ. ಸೋಮಶೇಖರ್, ರಂಗಾಯಣ ಹಿರಿಯ ಕಲಾವಿದೆ ಕೆ.ಆರ್. ನಂದಿನಿ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಎಂ.ಡಿ. ಸುದರ್ಶನ್ ಹಾಜರಿದ್ದರು.

ಪಾಲನೆ.ಇನ್‌ ವಾಟ್ಸ್‌ ಆಪ್‌ ಗುಂಪಿಗೆ ಸೇರಿರಿ.

Related posts

ಪಾಸಿಟಿವ್ ತಮ್ಮಯ್ಯ @ 75‌

ಕುಸುಮ್-ಸಿ: ಮಂಡ್ಯ ಜಿಲ್ಲೆಯ ಮೊದಲ ಕಾಮಗಾರಿಗೆ ಚಾಲನೆ

ಹಳಿ ತಪ್ಪಿ ಮತ್ತೊಂದು ರೈಲಿಗೆ ಡಿಕ್ಕಿ ಹೊಡೆದ ಹೈಸ್ಪೀಡ್‌ ರೈಲು : 21 ಸಾವು

Leave a Comment