NEWS

ಸಿರಿಧಾನ್ಯಗಳನ್ನು ಬಳಸಿ ಪೌಷ್ಟಿಕಾಂಶವನ್ನು ಹೆಚ್ಚಿಸುವ  ಆರೋಗ್ಯಕರವಾದ  ಶುಚಿಯಾದ ರುಚಿಕರವಾದ ಅಡಿಗೆ ತಯಾರಿಸಬಹುದು

ಪಾಲನೆ ನ್ಯೂಸ್

ಮಂಡ್ಯ: ಸಿರಿಧಾನ್ಯಗಳ ಕುರಿತು ಮುಂದಿನ ಪೀಳಿಗೆಗೆ ತಿಳಿಸುವುದು ಎಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಆರ್. ನಂದಿನಿ ಅವರು ಹೇಳಿದರು.

ಇಂದು ಕೃಷಿ ಇಲಾಖೆ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿಯ ಮುಂಭಾಗದಲ್ಲಿ ಆಹಾರ ಮತ್ತು ಪೌಷ್ಠಿಕ ಭದ್ರತೆ (ನ್ಯೂಟ್ರಿ ಸಿರಿಧಾನ್ಯ) ಯೋಜನೆಯಡಿ “ಸಿರಿಧಾನ್ಯ ರೋಡ್ ಶೋ” ಮೂಲಕ ಮುಂದಿನ ಪೀಳಿಗೆಗೆ ಸಿರಿಧಾನ್ಯ ಬೆಳೆಗಳ ಬಗ್ಗೆ ಅರಿವು ಮೂಡಿಸುವ ಸಂಬಂಧ  ಆಯೋಜಿಸಲಾಗಿದ್ದ “ಸಿರಿಧಾನ್ಯ ರೋಡ್ ಶೋ” ಕಾರ್ಯಕ್ರಮವನ್ನು ಹಸಿರು ಬಾವುಟ ಹಾರಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.

ಎಲ್ಲಾ ಹೆಣ್ಣು ಮಕ್ಕಳು ಸಿರಿಧಾನ್ಯಗಳನ್ನು ಬಳಸಿ ಆರೋಗ್ಯಕರವಾದ, ಪೌಷ್ಟಿಕತೆ ಹೆಚ್ಚಿಸುವ ಶುಚಿಯಾದ ರುಚಿಕರವಾದ ಅಡಿಗೆ ತಯಾರಿಸಬಹುದು ಎಂಬ ಪ್ರಯತ್ನ ನಡೆಯುತ್ತಿದೆ. ಹೊಸ ವರ್ಷಕ್ಕೆ ಸಿಹಿ ಹಂಚುವುದು ಪದ್ಧತಿ ಆ ದೃಷ್ಟಿಯಿಂದ ಮಂಡ್ಯ ಜಿಲ್ಲಾ ಪಂಚಾಯತ್, ರಾಷ್ಟ್ರೀಯ ಜೀವನೋಪಾಯ ವಿಷನ್, ಕೃಷಿ ಇಲಾಖೆ ಒಟ್ಟುಗೂಡಿ ಸಾವಯವ ಕೃಷಿಯಿಂದ ಬೆಳೆದ ಸಿರಿಧಾನ್ಯಗಳ ತಿನಿಸುಗಳು 100 ರೂಪಾಯಿಯ ಒಳಗಡೆ ಸಾರ್ವಜನಿಕರಿಗೆ ಸೇರಬೇಕು ಎಂಬ ಯೋಚನೆಯಿಂದ ವಿಭಿನ್ನ ಪ್ರಯತ್ನ ಮಾಡಲಾಗಿದೆ ಎಂದರು.

ನೆನ್ನೆ ಸರಿಸುಮಾರು 450 ಕ್ಕೂ ಹೆಚ್ಚು ಆರ್ಡರ್ ದೊರಕಿದೆ. ಸರ್ಕಾರಿ ಇಲಾಖೆಗಳೆ ಇಂದು ಸಿರಿಧಾನ್ಯಗಳ ಮಹತ್ವವನ್ನು ತಿಳಿಸಲು ಹೊರಟಿದೆ. ಇದರಿಂದ ಸ್ವಸಹಾಯ ಗುಂಪುಗಳ ಮಹಿಳೆಯರಿಗೆ ಸಹಾಯವಾಗಲಿದೆ. ನೈಸರ್ಗಿಕ ಕೃಷಿ ಮಾಡುತ್ತಿರುವ ರೈತರು ಒಗ್ಗೂಡಿದಾಗ, ಸಾಧಕ ಬಾಧಕಗಳನ್ನು ಹಂಚಿಕೆ ಮಾಡಿದಾಗ ಮಾತ್ರ ಸಾವಯವ ಕೃಷಿಗೆ ಪ್ರೇರಣೆ ದೊರೆಯುತ್ತದೆ. ಆತ್ಮಶ್ರೇಷ್ಠ ಕೃಷಿ ಪ್ರಶಸ್ತಿ ಪ್ರದಾನ ಮಾಡುವ ಸಂದರ್ಭದಲ್ಲಿ  ನೈಸರ್ಗಿಕ ಕೃಷಿ ಕೃಷಿಕರಿಗೆ ಹೆಚ್ಚಿನ ಮಹತ್ವವನ್ನು ನೀಡಲಾಗಿತ್ತು ಎಂದು ತಿಳಿಸಿದರು.

ನೈಸರ್ಗಿಕ ಕೃಷಿಕರ ಅನುಭವವನ್ನು ಇತರ ಕೃಷಿಕರಿಗೆ ತಿಳಿಸುವ  ಪ್ರಯತ್ನ ಮಾಡಲಾಗಿದೆ. ಸಾವಯವ ಕೃಷಿಕರನ್ನು ಸೇರಿಸಿ ಕೃಷಿ ಸಖಿಯರಿಂದ ತರಬೇತಿಯನ್ನು ನೀಡಲಾಗಿದೆ. ಇದರ ಮೂಲ ಉದ್ದೇಶ ಮಂಡ್ಯ ಜಿಲ್ಲೆಯಲ್ಲಿ ಸುಮಾರು 4250 ಎಕ್ಕರೆ ಪ್ರದೇಶವನ್ನೂ ನಾವು ಸಾವಯವ ನೈಸರ್ಗಿಕ ಕೃಷಿಯ ಪದ್ಧತಿ ಅಡಿಯಲ್ಲಿ ತರುವುದಾಗಿದೆ. ಇಂದು ಸಣ್ಣ ಪ್ರಮಾಣದಲ್ಲಿ ಸದರಿ ಯೋಜನೆ ಪ್ರಾರಂಭವಾಗಿದೆ ಮುಂದಿನ ದಿನಗಳಲ್ಲಿ ಬೃಹದಾಕಾರವಾಗಿ ಬೆಳೆಯಬೇಕು. ಮಂಡ್ಯ ಜಿಲ್ಲೆ ನೈಸರ್ಗಿಕ ಕೃಷಿ ಪದ್ಧತಿಯತ್ತ ಹೋದಾಗ ಮಾತ್ರ ನಾವು ಸುಸ್ಥಿರ ಅಭಿವೃದ್ಧಿ ಹೊಂದಲು ಸಾಧ್ಯ ಎಂದರು.

ನೀರು ಫಲವತ್ತಾದ ಮಣ್ಣು ಎಲ್ಲರಿಗೂ ಸಿಗುವಂತದಲ್ಲ ಜಿಲ್ಲೆಗೆ ದೊರೆತಿರುವ ನೀರು, ಮಣ್ಣು ದೈವದತ್ತವಾಗಿ ಸಿಕ್ಕಿರುವ ವರ ಎನ್ನಬಹುದು. ಇವುಗಳನ್ನು ಉಳಿಸಿ ಬೆಳಸಿ ಮುಂದಿನ ಪೀಳಿಗೆಗೆ ನೀಡಬೇಕು. ನಮ್ಮ ಅಗತ್ಯಕ್ಕನುಗುಣವಾಗಿ ಸುಸ್ಥಿರವಾಗಿ ಬಳಕೆ ಮಾಡಿಕೊಂಡು ಮುಂದಿನ ಪೀಳಿಗೆಗೆ ಉಳಿಸಬೇಕು ಎಂದು ಕಿವಿಮಾತು ಹೇಳಿದರು.

ಕೃಷಿ ಇಲಾಖೆ ಜಂಟಿ ನಿರ್ದೇಶಕ ಅಶೋಕ್  ಮಾತನಾಡಿ ದೇಶಕ್ಕೆ ಆಹಾರ ಭದ್ರತಾ ದೊರಕಿದರೂ ರೈತರಿಗೆ ಆದಾಯ ಭದ್ರತೆ ದೊರತಿಲ್ಲ. ರೈತರ ಆದಾಯ ಉತ್ಪಾದನೆಯ ನಂತರದ ಕೃಷಿಯಲ್ಲಿ ಅಡಗಿದೆ. ಕೃಷಿಕರು ಕೇವಲ ಉತ್ಪಾದನೆಗೆ ಸೀಮಿತವಾಗದೆ ಕೃಷಿಯನ್ನು ಉದ್ಯಮ ಮಾಡಿಕೊಳ್ಳಬೇಕು ಎಂಬ ಉದ್ದೇಶದಿಂದ ಪ್ರಪ್ರಥಮವಾಗಿ ರಾಜ್ಯದಲ್ಲಿ ಮಂಡ್ಯ ರೈತ ಉತ್ಪಾದಕ ಕಂಪನಿಗಳು 500-600 ಟನ್ ಭತ್ತವನ್ನು ಖರೀದಿ ಮಾಡಿ “ರೈತರ ನಡೆ ಮಾರಾಟದ ಕಡೆ” ಎಂಬ ಘೋಷವಾಕ್ಯದ ಮುಖಾಂತರ ರೈತರಿಗೆ ಮಾರಾಟದ ಕಲೆಯನ್ನು ಕಲಿಸುವ ನಿಟ್ಟಿನಲ್ಲಿ ಹೆಜ್ಜೆ ಇಡಲಾಗಿದೆ ಎಂದು ಹೇಳಿದರು.

ಸದರಿ ಕಾರ್ಯಕ್ರಮದಲ್ಲಿ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕರಾದ ಸುನಿತಾ, ಪ್ರತಿಭಾ, ಹರ್ಷ, ಗಿರೀಶ್ ಗೌಡ ಹಾಗೂ ಮುಖಂಡರುಗಳಾದ ಸೋಮಶೇಖರ್ ಗೌಡ, ಕಾರಸವಾಡಿ ಮಹದೇವ, ಮಹೇಶ್ ಚಂದ್ರಗುರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Related posts

ಅಲಿಪುರ್ ದ್ವಾರ್ ಹುಬ್ಬಳ್ಳಿ ವಿಶೇಷ ಎಕ್ಸ್‌ಪ್ರೆಸ್ ರೈಲು

ಪರಿಸರವನ್ನು ಸ್ವಚ್ಛತೆಯಿಂದ ನೋಡಿಕೊಳ್ಳುವುದು ಸಾಮಾಜಿಕ ಜವಾಬ್ದಾರಿ‌ – ಡಾ. ಕುಮಾರ

ಬೇಸಿಗೆ ಸಂದರ್ಭದಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ ಕ್ರಮವಹಿಸಿ : ಜಿ.ಪಂ ಸಿಇಓ ಸೂಚನೆ

Leave a Comment