NEWS

ಎರಡು ಸಾವಿರಕ್ಕೂ ಹೆಚ್ಚು ಜನ ಆಹಾರ ಸುರಕ್ಷತಾ ಹಾಗೂ ಗ್ರಾಹಕರ ದಿನಾಚರಣೆಯ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ‌

ಆಹಾರ ಸುರಕ್ಷತಾ ಹಾಗೂ ಗ್ರಾಹಕರ ದಿನಾಚರಣೆಯನ್ನು ಜ.9 ಕ್ಕೆ ಮುಂದೂಡಿಕೆ: ಹೆಚ್. ಕೃಷ್ಣ

ಪಾಲನೆ ನ್ಯೂಸ್

ಮಂಡ್ಯ: ಇಂದು ನಡೆಯಬೇಕಿದ್ದ ಆಹಾರ ಸುರಕ್ಷತಾ ಹಾಗೂ ರಾಷ್ಟೀಯ ಗ್ರಾಹಕರ ದಿನಾಚರಣೆಯನ್ನು ಕಾರಣಾಂತರದಿಂದ ಜನವರಿ 9 ಕ್ಕೆ ಮುಂದೂಡಿಕೆ ಮಾಡಲಾಗಿದೆ ಎಂದು  ರಾಜ್ಯ ಆಹಾರ ಆಯೋಗದ ಅಧ್ಯಕ್ಷ ಹೆಚ್. ಕೃಷ್ಣ ಅವರು ಹೇಳಿದರು.

ಅವರು ಇಂದು ಮಂಡ್ಯದ ಪ್ರವಾಸಿ ಮಂದಿರದಲ್ಲಿ ಅಧಿಕಾರಿಗಳೊಂದಿಗೆ ಪೂರ್ವಭಾವಿ ಸಭೆ ನಡೆಸಿ ಮಾತನಾಡಿದರು  ಸದರಿ ಕಾರ್ಯಕ್ರಮದಲ್ಲಿ ಆಹಾರದ ಮೌಲ್ಯ ಮತ್ತು ಆಹಾರದ ಮಹತ್ವದ ಕುರಿತು ಅರಿವು ಮೂಡಿಸಲಾಗುವುದು ಎಂದು ಹೇಳಿದರು.

ಜನವರಿ 9 ರಂದು ನಗರದ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಬೆಳಿಗ್ಗೆ 11 ಗಂಟೆಗೆ ಆಚರಿಸಲಾಗುವುದು ಅಧಿಕಾರಿಗಳು ಸಕಲ ಸಿದ್ಧತೆ ಮಾಡಿಕೊಳ್ಳಿ ಎಂದು ತಿಳಿಸಿದರು.

14 ಇಲಾಖೆಗಳು ಒಗ್ಗೂಡಿ ಸದರಿ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ. ಆಹಾರ ಸುರಕ್ಷತೆ ಕುರಿತು ಅರಿವು ಮೂಡಿಸುವ 14 ಮಳಿಗೆಗಳನ್ನು ತೆರೆಯಲಾಗುವುದು. ಪ್ರಮುಖವಾಗಿ ವಿದ್ಯಾರ್ಥಿ ನಿಲಯಗಳಲ್ಲಿ, ಮದುವೆ, ಸಮಾರಂಭಗಳಲ್ಲಿ ಮಕ್ಕಳು ಮತ್ತು ಸಾರ್ವಜನಿಕರು ಹೆಚ್ಚಾಗಿ ಆಹಾರ ವ್ಯರ್ಥ ಮಾಡುತ್ತಾರೆ, ಈ ಕುರಿತು ಹೆಚ್ಚಿನ ಜಾಗೃತಿ ಮೂಡಿಸಬೇಕಾಗಿದೆ ಎಂದು ಹೇಳಿದರು.

ಎರಡು ಸಾವಿರಕ್ಕೂ ಹೆಚ್ಚು ಜನ ಕಾರ್ಯಕ್ರಮದಲ್ಲಿ ಭಾಗವಹಿಸುವರು. ಎಲ್ಲರೂ ಸೇರಿ ಒಗ್ಗಟ್ಟಿನಿಂದ ಕಾರ್ಯ ನಿರ್ವಹಿಸಿದಾಗ ಮಾತ್ರ ಯಶಸ್ಸು ಕಾಣಲು ಸಾಧ್ಯ ಎಂದರು.

ಇತರೆ ಜಿಲ್ಲೆಗಳಿಗೆ ಮಾದರಿಯಾಗುವಂತೆ ಮಂಡ್ಯ ಜಿಲ್ಲೆಯಲ್ಲಿ ಆಹಾರ ಜಾಗೃತಿಯನ್ನು ಮೂಡಿಸಬೇಕು. ಅಧಿಕಾರಿಗಳು ರಾಷ್ಟೀಯ ಗ್ರಾಹಕರ ದಿನಾಚರಣೆ ಹಾಗೂ ಆಹಾರ ಜಾಗೃತಿ ಕಾರ್ಯಕ್ರಮ ಯಶಸ್ವಿಗೊಳಿಸಲು  ಕಾರ್ಯ ದಕ್ಷತೆಯಿಂದ ಕೆಲಸ ನಿರ್ವಹಿಸಿ ಎಂದು ಹೇಳಿದರು.

ಜಿಲ್ಲಾ ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಆನಂದ್ ಎಂ ಅವರು ಮಾತನಾಡಿ ಜಿಲ್ಲೆಯ ನ್ಯಾಯ ಬೆಲೆ ಅಂಗಡಿ ಮಾಲೀಕರಿಗೆ ಜಾಗೃತಿ ಕಾರ್ಯಾಗಾರ ಮಾಡಿ. ಕಡ್ಡಾಯವಾಗಿ ಎಲ್ಲಾ ನ್ಯಾಯಬೆಲೆ ಅಂಗಡಿಯ ಮಾಲೀಕರು ಕಾರ್ಯಕ್ರಮದಲ್ಲಿ ಹಾಜರಿರಬೇಕು ಎಂದು ಹೇಳಿದರು.

ಸಭೆಯಲ್ಲಿ ರಾಜ್ಯ ಆಹಾರ ಆಯೋಗದ ಕಾನೂನು ಸಲಹೆಗಾರರಾದ ಕುಮಾರ ಸ್ವಾಮಿ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಜಂಟಿ ನಿರ್ದೇಶಕ ಪ್ರತೀಕ್ ಹೆಗ್ಡೆ, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಶ್ರೀನಿವಾಸ್, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಲೋಕೇಶ್, ಜಿಲ್ಲಾ ವಿಕಲಚೇತನರು ಹಾಗೂ ಹಿರಿಯ ನಾಗರಿಕರ ಕಲ್ಯಾಣಾಧಿಕಾರಿ ಕೋಮಲ್ ಕುಮಾರ್ ಹಾಗೂ ಹಿಂದುಳಿದ ವರ್ಗಗಳ ಇಲಾಖೆಯ ಜಿಲ್ಲಾಧಿಕಾರಿ ಮಂಜುಳಾ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Related posts

14ನೇ ದಿನಕ್ಕೆ ಕಾಲಿಟ್ಟ ಕೆಎಸ್‌ಐಸಿ ಕಾರ್ಮಿಕರ ಹೋರಾಟ

ರೇಷನ್‌ ಗಾಗಿ ಪರದಾಟ

ಷೇರುಪೇಟೆ ತೀವ್ರ ವಹಿವಾಟು

Leave a Comment