ಪಾಲನೆ ನ್ಯೂಸ್
ಮಂಡ್ಯ: ಮದ್ದೂರು ತಾಲ್ಲೂಕಿನ ಶಿವಪುರ ಸತ್ಯಾಗ್ರಹ ಸೌಧಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿ ಡಾ. ಕುಮಾರ ಅವರು ಸತ್ಯಾಗ್ರಹ ಸೌಧದ ಅಭಿವೃದ್ಧಿ ನೀಲನಕ್ಷೆ ತಯಾರಿ ಸಂಬಂಧ ಪರಿಶೀಲನೆ ನಡೆಸಿದರು.

ಶಿವಪುರ ಸತ್ಯಾಗ್ರಹ ಸೌಧವು ದೇಶದ ಸ್ವಾತಂತ್ರ್ಯ ಹೋರಾಟದ ಪ್ರಮುಖ ಐತಿಹಾಸಿಕ ಸ್ಮಾರಕವಾಗಿದ್ದು, ಇದರ ಸಂರಕ್ಷಣೆ ಹಾಗೂ ಅಭಿವೃದ್ಧಿಗಾಗಿ ಸರ್ಕಾರದಿಂದ ರೂ. 2.00 ಕೋಟಿ ಅನುದಾನವನ್ನು ಮಂಜೂರು ಮಾಡಲಾಗಿದೆ.
ಈ ಅನುದಾನದಡಿ ಶಿವಪುರ ಸತ್ಯಾಗ್ರಹ ಸೌಧದ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ನಿರ್ಧರಿಸಲಾಗಿದ್ದು, ಈ ಸಂಬಂಧ ಸ್ಥಳ ಪರಿಶೀಲನೆ ನಡೆಸಿದ ಜಿಲ್ಲಾಧಿಕಾರಿ ಸಂಬಂಧಪಟ್ಟ ಅಧಿಕಾರಿಗಳಿಗೆ ಕೆಳಕಂಡ ಅಗತ್ಯ ಮಾರ್ಗಸೂಚಿಗಳನ್ವಯ ಕ್ರಮವಹಿಸುವಂತೆ ಸೂಚನೆ ನೀಡಿದರು.
1. ಮದ್ದೂರು ಪಟ್ಟಣದ ಶಿವಪುರ ಸತ್ಯಾಗ್ರಹ ಸೌಧದ ಅನೆಕ್ಸ್ ಕಟ್ಟಡದಲ್ಲಿರುವ ಶೌಚಾಲಯಗಳ ದುರಸ್ತಿ ಹಾಗೂ ಒಂದು ಬೋರ್‌ವೆಲ್ ಕೊರೆಸುವ ಕಾಮಗಾರಿ.
2. ಸತ್ಯಾಗ್ರಹ ಸೌಧಕ್ಕೆ ನಾಮಫಲಕ ಹಾಗೂ ಶಿಲಾಫಲಕ ಅಳವಡಿಕೆ ಮತ್ತು ಆರ್ಚ್ ಗೇಟ್ ನಿರ್ಮಾಣ.
3. ಸತ್ಯಾಗ್ರಹ ಸೌಧಕ್ಕೆ ಬಣ್ಣ ಬಳಿಯುವುದು, ಆವರಣದ ತಗ್ಗು ಪ್ರದೇಶಗಳನ್ನು ಎತ್ತರಿಸುವುದು ಹಾಗೂ ಇಂಟರ್‌ಲಾಕ್ ಪೇವರ್ಸ್ ಅಳವಡಿಕೆ.
4. ಸೌಧದ ಒಳಭಾಗದಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕದ ಸುತ್ತ ಕಾಂಪೌಂಡ್ ವಾಲ್ ನಿರ್ಮಾಣ.
5. ಕಬ್ಬಿಣದ ಬಾಗಿಲುಗಳನ್ನು ಅಳವಡಿಸುವುದು ಹಾಗೂ ಅಗತ್ಯ ಸ್ಟ್ಯಾಂಡ್‌ಗಳನ್ನು ನಿರ್ಮಿಸುವುದು.
6. ಸೌಧದ ಒಳಭಾಗದಲ್ಲಿ ಸ್ವಾತಂತ್ರ್ಯ ಹೋರಾಟಗಾರರು ಮತ್ತು ಸತ್ಯಾಗ್ರಹಕ್ಕೆ ಸಂಬಂಧಿಸಿದ ಏಳು ಭಾವಚಿತ್ರಗಳನ್ನು ಅಳವಡಿಸುವುದು.
7. ಸತ್ಯಾಗ್ರಹ ಸೌಧಕ್ಕೆ ಕಾವಲುಗಾರರ ನೇಮಕ.
8. ಸತ್ಯಾಗ್ರಹ ಸೌಧದ ಬಲಭಾಗದಲ್ಲಿ ಅನೆಕ್ಸ್ ಕಟ್ಟಡ ನಿರ್ಮಿಸಿ, ಶಿವಪುರದ ಸ್ವಾತಂತ್ರ್ಯ ಹೋರಾಟ ಸೇರಿದಂತೆ ರಾಜ್ಯ ಹಾಗೂ ದೇಶದಾದ್ಯಂತ ನಡೆದ ಸ್ವಾತಂತ್ರ್ಯ ಹೋರಾಟಗಳ ಮಾಹಿತಿ ಮತ್ತು ಮಹಾತ್ಮ ಗಾಂಧೀಜಿಯವರ ಕುರಿತು ಸಾಕ್ಷ್ಯಚಿತ್ರಗಳನ್ನು ಪ್ರದರ್ಶಿಸುವ ವ್ಯವಸ್ಥೆ.
9. ಸತ್ಯಾಗ್ರಹ ಸೌಧದ ಆವರಣದಲ್ಲಿ ಇರುವ ಸಂಗೀತ ಕಾರಂಜಿಯನ್ನು ಪುನರುಜ್ಜೀವನಗೊಳಿಸುವುದು.
ಮೇಲ್ಕಂಡ ಎಲ್ಲಾ ಕಾಮಗಾರಿಗಳನ್ನು ಅತೀ ತುರ್ತಾಗಿ ಪ್ರಾರಂಭಿಸಿ, ಉತ್ಕೃಷ್ಟ ದರ್ಜೆಯಲ್ಲಿ ನಿಗದಿತ ಅವಧಿಯೊಳಗೆ ಪೂರ್ಣಗೊಳಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ಸ್ಪಷ್ಟ ನಿರ್ದೇಶನ ನೀಡಿದರು. ಈ ಸಂದರ್ಭದಲ್ಲಿ ಜಿಲ್ಲಾ ನಗರಾಭಿವೃದ್ಧಿ ಕೋಶ ಯೋಜನಾ ನಿರ್ದೇಶಕರು, ಜಿಲ್ಲಾ ನಗರಾಭಿವೃದ್ಧಿ ಕೋಶ ಕಾರ್ಯನಿರ್ವಾಹಕ ಅಭಿಯಂತರರು, ಮದ್ದೂರು ಪೌರಾಯುಕ್ತರು , ಮದ್ದೂರು ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು, ಹಾಗೂ ಇತರೆ ಸಂಬಂಧಪಟ್ಟ ಅಧಿಕಾರಿಗಳು ಹಾಜರಿದ್ದರು.
