ಪಾಲನೆ | ಲೇಖನ
ಸ್ತುತ ಸಮಾಜದಲ್ಲಿ ಒಂದು ಅನಿರೀಕ್ಷಿತ ಬದಲಾವಣೆಗಳು ಬಂದೋಗ್ತಾಯಿದೆ. ಆ ಬದಲಾವಣೆಗೆ ಸಾಮಾಜಿಕ ಜಾಲತಾಣ ಕಾರಣವಾಗ್ತಾಯಿದೆ. ಹೌದು ಈಗಿನ ಯುಗವನ್ನು ಕಂಪ್ಯೂಟರ್ ಯುಗ ಹಾಗೂ ಸೋಶಿಯಲ್ ಮೀಡಿಯಾ ಯುಗ ಎಂದರೆ ಆಶ್ಚರ್ಯ ಎಂದೆನಿಸುವುದಿಲ್ಲ. ಏಕೆಂದರೆ ಮಕ್ಕಳಿಂದ ಹಿಡಿದು ವೃದ್ಧರವರೆಗೂ ಮೊಬೈಲಿನ ಗೀಳು ಹೆಚ್ಚಾಗುತ್ತಿರುವುದನ್ನು ಕಾಣಬಹುದು.ಮೊದಲೆಲ್ಲ ಮಕ್ಕಳು ಗಿಲ್ಲಿ ದಾಂಡು, ಲಗೋರಿ, ಕುಂಟೆಬಿಲ್ಲೆ ಹೀಗೆ ಹಲವಾರು ದೇಶೀ ಆಟಗಳಲ್ಲಿ ಭಾಗಿಯಾಗುತ್ತಿದ್ದರು. ಶಾಲೆಗಳಿಗೆ ರಜೆಯಿದ್ದರೆ ಸಾಕು ಮನೆಯ ಹೊರಗೆ ಒಳಗೆ ಮಕ್ಕಳದ್ದೇ ಗದ್ದಲ ಆದರೆ, ಇಂದು ಮನೆಯಲ್ಲಿ ಮಕ್ಕಳಿದ್ದರು ಇಲ್ಲದ ಹಾಗೆ ಭಾಸವಾಗುತ್ತದೆ. ಇನ್ನಾ ಹಿರಿಯರ ವಿಷಯಕ್ಕೆ ಬಂದರೆ ಪ್ರಾರಂಭದಲ್ಲಿ ಕಿರಿಯರಿಗೆ ಮೊಬೈಲ್ ಹುಚ್ಚು ಹಿಡಿಯುತ್ತಿದೆ ಎಂದು ಮಾತನಾಡುತ್ತಿದ್ದವರು ಈಗ ಅವರ ಕೈಗೆ ಒಂದು ಮೊಬೈಲ್ ಬಂದ ತಕ್ಷಣ ಕಿರಿಯರನ್ನು ಮೀರಿಸುವ ಹಾಗೆ ಮೊಬೈಲ್ ಬಳಕೆ ಮಾಡುತ್ತಿದ್ದಾರೆ.
ಮೊಬೈಲ್ ಬಳಕೆಯಿಂದ ಸಮಯ ವ್ಯರ್ಥವಾಗುತ್ತಿದೆ ಎಂದು ನಾನು ಹೇಳುವುದಿಲ್ಲ ಅದು ಎಲ್ಲರಿಗೂ ತಿಳಿದಿರುವ ವಾಸ್ತವ. ಮೊದಲೆಲ್ಲ ವಿದ್ಯಾಭ್ಯಾಸ ಹಾಗೂ ಉದ್ಯೋಗದ ಜತೆಗೆ ನೃತ್ಯ, ಸಂಗೀತ ಹಾಗೂ ಕ್ರೀಡೆ ಎಂಬಂತೆ ಕೆಲವೊಂದು ಹವ್ಯಾಸಗಳು ಇದ್ದವೂ ಪ್ರಸ್ತುತ ಮೊಬೈಲ್ ನೋಡುವುದೇ ಒಂದು ಅವ್ಯಾಸ ಆಗಿ ಬದಲಾಗಿದೆ. ಪ್ರತಿಯೊಬ್ಬರಿಗೂ ಮನರಂಜನೆಯ ಅವಶ್ಯಕತೆ ಖಂಡಿತವಾಗಿಯೂ ಇದೆ ಆ ಕಾರಣಕ್ಕೆ ಸಮಾಜಿಕ ಜಾಲತಾಣವೂ ಕೇವಲ ಮನರಂಜನೆಯ ಅಸ್ತ್ರವಾಗಿ ಬಳಕೆಯಾಗ ಬೇಕೇ ವಿನಃ ನಮ್ಮ ಜೀವನವನ್ನೇ ಬದಲಾಯಿಸುವ ಅಸ್ತ್ರವಾಗಬಾರದು.
ಅತಿಯಾದ ಮೊಬೈಲ್ ಬಳಕೆಯಿಂದ ಸೋಮಾರಿಯಾಗುತ್ತಿವಾ? ಸಮಯ ವ್ಯರ್ಥವಾಗುತ್ತಿದೆಯಾ? ಅನಾರೋಗ್ಯಕ್ಕೆ ತುತ್ತಾಗುತ್ತಿದ್ದೆವಾ? ಸಮಾಜಮುಖಿಯಾಗಿ ಬದುಕೋದನ್ನ ಮರೆಯುತ್ತಾ ಇದ್ದೆವಾ? ಋಣಾತ್ಮಕ ಚಿಂತಕರಾಗಿ ಬದಲಾಗ್ತಾ ಇದ್ದೆವಾ? ಈ ರೀತಿ ಹತ್ತು ಹಲವು ಪ್ರಶ್ನೆಗಳು ಎಲ್ಲರಲ್ಲಿಯೂ ಕಾಡಿರುತ್ತದೆ. ಈಗಂತೂ ಸೋಷಿಯಲ್ ಮೀಡಿಯಾದಲ್ಲಿ ಮೊಟ್ಟೆ, ಬಟಾಣಿ, ಪನ್ನೀರ್ ತಿಂದರೆ ಕ್ಯಾನ್ಸರ್ ಬರುತ್ತದೆ, ಎಡಬದಿಯಲ್ಲಿ ಮಲಗಿ ನಿದ್ರಿಸಿದರೆ ಹೃದಯಕ್ಕೆ ಘಾಸಿಯಾಗುತ್ತದೆ, ಬಲಬದಿಯಲ್ಲಿ ಮಲಗಿ ನಿದ್ರಿಸಿದರೆ ಆಹಾರ ಜೀರ್ಣವಾಗುವುದಿಲ್ಲ ಈ ರೀತಿ ಆರೋಗ್ಯ, ಜೀವನ ಶೈಲಿಗೆ ಸಂಬಂಧಿಸಿದಂತೆ ಜನರಲ್ಲಿ ಮಾನಸಿಕವಾಗಿ ಭಯ ಹುಟ್ಟಿಸುವ ವಿಷಯಗಳನ್ನು ಅನೇಕರು ಪ್ರಸ್ತುತ ಪಡಿಸುತ್ತಿದ್ದಾರೆ. ಇದು ಸತ್ಯವೂ ಆಗಿರಬಹುದು ಅಥವಾ ಪ್ರಚಾರಕ್ಕಾಗಿ ಅವರು ಹುಟ್ಟು ಹಾಕುತ್ತಿರುವ ಅಪಪ್ರಚಾರವೂ ಆಗಿರಬಹುದು. ಇಂತಹ ವಿಷಯಗಳು ಸಹ ವ್ಯಕ್ತಿಗಳ ಚಿಂತನೆಯ ಮೇಲೆ ದುಷ್ಪಪರಿಣಾಮ ಬೀರುತ್ತಿದೆ.
ಸಾಮಾಜಿಕ ಜಾಲತಾಣದಿಂದ ಅನೇಕ ಮಾಹಿತಿಗಳನ್ನ ಪಡೆಯಬಹುದು, ಉತ್ತಮ ರೀತಿಯಲ್ಲಿ ನೋಡುಗರನ್ನ ಪ್ರೇರೇಪಿಸಬಹುದು, ಕೌಶಲ್ಯಗಳನ್ನ ಕಲಿಯಬಹುದು, ನೃತ್ಯ, ಕಲೆ, ಸಾಹಿತ್ಯ, ಸಂಗೀತಾ, ಶಿಕ್ಷಣ, ಇತಿಹಾಸ, ಸಂಸ್ಕೃತಿ, ಪ್ರವಾಸಿತಾಣ ಮುಂತಾದ ಹತ್ತು, ಹಲವು ವಿಷಯಗಳ ಬಗ್ಗೆ ಮಾಹಿತಿ ಪಡೆಯಬಹುದು ಇದರ ಬಗ್ಗೆ ಸಂಶಯವಿಲ್ಲ ಹಾಗೆಯೇ ಕೆಲವೊಂದು ಸಾಮಾಜಿಕ ಜಾಲತಾಣದ ಮೂಲಕ ಹಣವನ್ನು ಸಹ ಸಂಪಾದನೆ ಮಾಡುತ್ತಿರುವುದನ್ನು ಕಾಣುತ್ತಿದ್ದೇವೆ. ಈ ರೀತಿಯ ಧನಾತ್ಮಕ ಸಂಗತಿಗಿಂತಲೂ ಋಣಾತ್ಮಕ ಸಂಗತಿಗಳು ಹೆಚ್ಚಾಗಿ ಯುವಕರನ್ನು, ಮಕ್ಕಳನ್ನು ಸೆಳೆಯುತ್ತಿರುವುದು ವಿಪರ್ಯಾಸವಾಗಿದೆ.
ದೂರದೂರಿನಲ್ಲಿ ಇರುವವರ ಸಂಪರ್ಕಕ್ಕಾಗಿ ಎಂದು ಪ್ರಾರಂಭಿಸಿದ ಮೊಬೈಲ್ ಸಂಪರ್ಕ ಇಂದು ಹತ್ತಿರದವರನ್ನೇ ದೂರ ಮಾಡುತ್ತಿದೆ. ಕಾಲ ಕಾಲಕ್ಕೆ ಮೊಬೈಲಿನ ವಿಧಗಳು ಬದಲಾದವು, ಜನರ ಆಕರ್ಷಣೆಗಾಗಿ ಮೊಬೈಲ್ ನಲ್ಲಿ ತರ ತರಹದ ಆಪ್ ಗಳು ಸೇರಿಕೊಂಡವು. ಗೇಮ್ಸ್ ಆಪ್ ಗಳು ಮಕ್ಕಳ ಅಮೂಲ್ಯವಾದ ಬಾಲ್ಯದ ಜೀವನ ಕಸಿದುಕೊಳ್ಳುತ್ತಿದ್ದರೆ, ಸಾಮಾಜಿಕ ಜಾಲತಾಣ ಯುವಕ, ಯುವತಿಯರ ಮನಸ್ಥಿತಿ ಮೇಲೆ ಪರಿಣಾಮ ಬಿರುತ್ತಿದೆ. ನಮ್ಮ, ನಿಲುವು, ಸಂಕಲ್ಪ, ಚಿಂತನೆ, ನಿರ್ಧಾರ, ಆಸಕ್ತಿ, ಆಲೋಚನೆಗಳನ್ನು ನಮ್ಮನ್ನು ಹೊರತು ಪಡಿಸಿ ಯಾರು ಬದಲಾಯಿಸಲು ಸಾಧ್ಯವಿಲ್ಲ. ಇತರರು ನಮ್ಮನು ಪ್ರೇರೇಪಿಸಬಹುದೇ ಹೊರತು ಸಂಪೂರ್ಣವಾಗಿ ಬದಲಾಯಿಸಲು ಸಾಧ್ಯವಿಲ್ಲ. ನಮ್ಮ ಬದುಕಿನ ಒಳ್ಳೆಯ ಬದಲಾವಣೆಗೆ ಮತ್ತು ಕೆಟ್ಟ ಬದಲಾವಣೆಗೆ ನಾವೇ ಕಾರಣಿಭೂತರಾಗಿರುತ್ತೇವೆ. ಸಾಧಾರಣವಾದ ಮೊಬೈಲ್ ಎಂಬ ಸಣ್ಣ ವಸ್ತು ಇಂದು ಊಟ, ನಿದ್ದೆ, ಆರೋಗ್ಯ, ಆಸಕ್ತಿ, ಅವ್ಯಾಸ, ಎಲ್ಲವನ್ನು ನಿರ್ಧರಿಸುತ್ತಿದೆ. ಬದುಕೇ ಬದಲಾಗಿ ಹೋಗ್ತಾಯಿದೆ ಎಲ್ಲವನ್ನು ಸರ್ಚ್ ಮಾಡಿ ಮಾಹಿತಿ ತಿಳಿದು ಮುಂದಕ್ಕೆ ಹೆಜ್ಜೆ ಹಿಡುವಂತ್ತಾಗುತ್ತಿದೆ. ಅನೇಕರು ಸಾಮಾಜಿಕ ಜಾಲತಾಣದಲ್ಲಿ ಪ್ರೇರೇಪಿತವಾಗಿ ಸಾಮಾನ್ಯ ಬದುಕಿನ ಶೈಲಿಯನ್ನೇ ಬದಲಾಯಿಸಿಕೊಂಡು ಸಾಗ್ತಾಯಿದ್ದಾರೆ. ಸಾಮಾಜಿಕ ಜಾಲತಾಣದ ಮೂಲಕ ಏನ್ನನ್ನಾದರು ನಂಬುವ ಮುನ್ನ, ಪ್ರೇರೇಪಿತವಾಗುವ ಮುನ್ನ ಒಮ್ಮೆ ಸ್ವಂತ ಆಲೋಚನೆ ಮಾಡೋಣ…

– ಸಹನ ಪುರುಷೋತ್ತಮ್ ಮಂಡ್ಯ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ.
