ಪಾಲನೆ ನ್ಯೂಸ್
ಮಂಡ್ಯ: ದೇವರ ದಾಸಿಮಯ್ಯ ಅವರು ಸಮಾಜದಲ್ಲಿನ ಮೂಢನಂಬಿಕೆ ಸಮಾಜದ ಅಂಕುಡೊಂಕುಗಳನ್ನು ವಿರೋಧಿಸಿ, ಮೂಢನಂಬಿಕೆ ಮತ್ತು ಮೌಢ್ಯತೆ, ತಾರತಮ್ಯ ಹೋಗಲಾಡಿಸುವ ನಿಟ್ಟಿನಲ್ಲಿ ಹಲವು ವಚನಗಳ ಮೂಲಕ ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಕೆಲಸ ಮಾಡಿದ್ದಾರೆ. ಸತ್ಯ ಮತ್ತು ಅನುಭವಕ್ಕೆ ಪ್ರಾಮುಖ್ಯತೆ ನೀಡಿದವರು ಅವರು.ಸಾಮಾಜಿಕ ವ್ಯವಸ್ಥೆ ಮತ್ತು ಸಾಮಾಜಿಕ ಕ್ರಾಂತಿಗೆ ಅಡಿಪಾಯ ಹಾಕಿದವರು ಅವರ ಮೌಲ್ಯ ಆದರ್ಶ ಗಳನ್ನು ಯುವಜನತೆ ಬೆಳೆಸಿಕೊಳ್ಳಬೇಕು ಎಂದು ಕೈಮಗ್ಗ ಮತ್ತು ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ನಾಗೇಂದ್ರ ಕುಮಾರ್ ರವರು ಹೇಳಿದರು.
ಇಂದು ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಹಯೋಗದಲ್ಲಿ ನಗರದ ಗಾಂಧಿ ಭವನದಲ್ಲಿ ನಡೆದ ದೇವರ ದಾಸಿಮಯ್ಯ ಜಯಂತಿ ಆಚರಣೆ ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ದೇವರ ದಾಸಿಮಯ್ಯ (ಅಥವಾ ಜೇಡರ ದಾಸಿಮಯ್ಯ) 12ನೇ ಶತಮಾನದ ಆದಿ ವಚನಕಾರ, ಶಿವಶರಣ ಮತ್ತು ನೇಕಾರಿಕೆ ಕಾಯಕದವರು. ‘ರಾಮನಾಥ’ ಅಂಕಿತನಾಮದಲ್ಲಿ ವಚನಗಳನ್ನು ರಚಿಸಿದ ಇವರು, ಕನ್ನಡದ ಮೊದಲ ವಚನಕಾರರಲ್ಲಿ ಒಬ್ಬರು. ಸತಿ-ಪತಿ ಸಾಮರಸ್ಯ, ಕಾಯಕ ತತ್ವ ಮತ್ತು ವೈಚಾರಿಕತೆಯನ್ನು ತಮ್ಮ ವಚನಗಳ ಮೂಲಕ ಬೋಧಿಸಿದವರು ಎಂದು ಹೇಳಿದರು.

ಜಿಲ್ಲಾ ಉಪ ವಿಭಾಗ ಅಧಿಕಾರಿಗಳಾದ ಶಿವಮೂರ್ತಿ ರವರು ಮಾತನಾಡಿ ದಾಸಿಮಯ್ಯನವರ ವಚನಗಳು ಸಂಕ್ಷಿಪ್ತತೆ, ಸರಳತೆ ಮತ್ತು ಗಹನವಾದ ಅರ್ಥಪ್ರಚುರತೆಗೆ ಹೆಸರುವಾಸಿಯಾಗಿದ್ದು ಸಮಾಜದ ಅಂಕು ಡೊಂಕುಗಳನ್ನು, ಬಾಹ್ಯ ಆಚರಣೆಗಳನ್ನು ನೇರವಾಗಿ ಪ್ರಶ್ನಿಸುವ ವೈಚಾರಿಕ ಧೋರಣೆ ಇವರದ್ದಾಗಿತ್ತು ಎಂದು ತಿಳಿಸಿದರು.
ಬಸವಣ್ಣನಿಗಿಂತಲೂ ಮುಂಚಿನವರಾದ ಇವರು ವಚನ ಪ್ರಕಾರಕ್ಕೆ ಒಂದು ತಳಹದಿ ಹಾಕಿಕೊಟ್ಟವರು ಎಲ್ಲಾರು ದೇವರ ದಾಸಿಮಯ್ಯ ರವರ ಆದರ್ಶ ಮೌಲ್ಯಗಳನ್ನು ಬೆಳಿಸಿಕೊಳ್ಳಬೇಕು ಅವರು ಸಮಾಸಮಾಜವನ್ನು ನಿರ್ಮಾಣ ಮಾಡುವ ನಿಟ್ಟಿನಲ್ಲಿ ಅನೇಕ ವಚನಗಳ ಮೂಲಕ ಸಮಾಜಕ್ಕೆ ಕೊಡುಗೆ ನೀಡಿದ್ದಾರೆ ಎಂದು ಹೇಳಿದರು.
ಡಾ. ಶ್ರೀನಿವಾಸ ಶೆಟ್ಟಿ ರವರು ಉಪನ್ಯಾಸ ಮಾಡಿ ದೇವರ ದಾಸಿಮಯ್ಯ (ದೇವಲ ಮಹರ್ಷಿ) ಸರಿ ಸುಮಾರು 11ನೇ ಶತಮಾನದವರು. ಸುರಪುರ ಜಿಲ್ಲೆಯ ಮುದನೂರು ಎಂಬ ಹಳ್ಳಿಯಲ್ಲಿ ಜನನ. ಮುದನೂರು ಹಲವಾರು ದೇವಾಲಯಗಳಿಂದ ಕೂಡಿದ್ದು, ಅಲ್ಲಿನ ರಾಮನಾಥ ದೇವಸ್ಥಾನ ದೇವಲ ಮಹರ್ಷಿಯರ ಅಚ್ಚುಮೆಚ್ಚು. ರಾಮನಾಥ ಸ್ವಾಮಿಯ ಆರಾಧಕರು. ರಾಮನಾಥ ಎಂದರೆ ಶಿವ (ರಾಮನು ಪೂಜಿಸುತ್ತಿದ್ದಂತಹ ದೇವರು). ದೇವಲ ಮಹರ್ಷಿಯು ಶಿವನ ಅಪಾರ ಭಕ್ತರಾಗಿದ್ದು ‘ರಾಮನಾಥ’ ಇವರ ಅಂಕಿತನಾಮವಾಗಿತ್ತು.

ದಾಸಿಮಯ್ಯನು ವೃತ್ತಿ ನೇಕಾರಿಕೆ ವೃತ್ತಿಯಾಗಿದ್ದು ನೇಕಾರಿಕೆ ಕಾಯಕವನ್ನು ಮಾಡಿ ಅನೇಕ ಪವಾಡ ಗಳನ್ನು ಮಾಡಿದ್ದಾರೆ. ಸಾಕ್ಷತ್ ಪರಶಿವನಿಂದ ತವನಿಧಿಯನ್ನು ಪಡೆದ ಶರಣ. ಈ ಶರಣನು ಜ್ಞಾನಿಯೂ ಬೋಧೆಯಲ್ಲಿ ಬಲ್ಲಿದನೂ ಆದಂತೆ, ವಚನ ಸಾಹಿತ್ಯ ರಚನೆಯಲ್ಲಿಯೂ ಪ್ರಬಲನಾಗಿದ್ದನು. ಅಲಂಕಾರಿಕವಾದ ಸ್ವಲ್ಪ ಶಬ್ದಗಳ ನುಡಿಯಲ್ಲಿ ದಿವ್ಯವಾದ, ವಿಶಾಲವಾದ ಅರ್ಥ, ಯಾರೂ ತೆಗೆದು ಹಾಕದಂತಹ ಅಭಿಪ್ರಾಯ ಇಂತಹ ಅಮೃತ ಬಿಂದು ಮನೋಜ್ಞವಾಣಿ ಆತನ ವಚನಗಳಾಗಿವೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರು ಬಿ.ವಿ. ನಂದೀಶ್, ಜಿಲ್ಲಾ ನೇಕಾರ ಸಂಘದ ಅಧ್ಯಕ್ಷರು ಹರಿಪ್ರಸಾದ್, ಉಪಾಧ್ಯಕ್ಷರು ರಾಧಾಕೃಷ್ಣನ್, ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ ಅಧ್ಯಕ್ಷರು ಸಂದೇಶ್,ಮುಖಂಡರುಗಳಾದ ಸೌಮ್ಯ ಪ್ರಸಾದ್, ಸೂರ್ಯನಾರಾಯಣ,ರಾಮ ಕುಮಾರ್, ನೀಲಕಂಠ ಉಮಾಶಂಕರ್ ಉಪಸ್ಥಿತರಿದ್ದರು.
✅ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn
