NEWS

ಪ್ರಧಾನ ಮಂತ್ರಿ ಉದ್ಯೋಗ ಸೃಜನೆ ಯೋಜನೆಯ ಕುರಿತು ಜಿಲ್ಲೆಯ ಯುವ ಜನತೆಗೆ ಅರಿವು ಮೂಡಿಸಿ: ಡಾ.ಕುಮಾರ

ಪಾಲನೆ ನ್ಯೂಸ್

ಮಂಡ್ಯ: ನಿರುದ್ಯೋಗಿಗಳನ್ನು ಆರ್ಥಿಕವಾಗಿ ಸ್ವಾವಲಂಬಿಗಳಾಗಿಸಲು ಪ್ರಧಾನ ಮಂತ್ರಿ ಉದ್ಯೋಗ ಸೃಜನೆ ಯೋಜನೆಯನ್ನು ಜಾರಿಗೊಳಿಸಲಾಗಿದೆ ಸದರಿ ಯೋಜನೆಗಳ ಕುರಿತು ಜಿಲ್ಲೆಯ ನಿರುದ್ಯೋಗಿಗಳಿಗೆ ಅರಿವು ಮೂಡಿಸಿ ಎಂದು ಜಿಲ್ಲಾಧಿಕಾರಿ ಡಾ. ಕುಮಾರ ಅವರು ಹೇಳಿದರು.

ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಪ್ರಧಾನ ಮಂತ್ರಿಗಳ ಉದ್ಯೋಗ ಸೃಜನೆ ಕಾರ್ಯಕ್ರಮ(PMEGP) ಹಾಗೂ ಪ್ರಧಾನ ಮಂತ್ರಿಗಳ ವಿಶ್ವಕರ್ಮ ಕಾರ್ಯಕ್ರಮಗಳ ಸಂಬಂಧ ಜಿಲ್ಲಾಮಟ್ಟದ ಅನುಷ್ಠಾನ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಪ್ರಧಾನ ಮಂತ್ರಿಗಳ ಉದ್ಯೋಗ ಸೃಜನೆ ಯೋಜನೆಯನ್ನು ಸದರಿ ವರ್ಷ (2025-26) 102 ಅರ್ಹ ನಿರುದ್ಯೋಗಿಗಳಿಗೆ ತಲುಪಿಸುವ ಗುರಿ ಹೊಂದಿದ್ದು ಈಗಾಗಲೇ 70 ಅರ್ಹ ಫಲಾನುಭವಿಗಳನ್ನು ಗುರುತಿಸಿ 4.08 ಕೋಟಿ ಅನುದಾನವನ್ನು ಅರ್ಹ ಫಲಾನುಭವಿಗಳಿಗೆ ಬ್ಯಾಂಕ್ ಮುಖಾಂತರ ಸಬ್ಸಿಡಿ ದರದಲ್ಲಿ ನೀಡಲಾಗಿದೆ ಎಂದರು.

ಪ್ರಧಾನ ಮಂತ್ರಿಗಳ ಉದ್ಯೋಗ ಸೃಜನೆ ಯೋಜನೆಯಡಿ ನಗರ ಪ್ರದೇಶದ ಸಾಮಾನ್ಯ ವರ್ಗದ ನಿರುದ್ಯೋಗಿಗಳು ಉದ್ಯಮ ಪ್ರಾರಂಭಿಸಲು ಶೇ 15 ಮತ್ತು ಪರಿಶಿಷ್ಟ ವರ್ಗದವರಿಗೆ ಶೇ 25 ರಷ್ಟು ಸಬ್ಸಿಡಿ ದರದಲ್ಲಿ ಸಾಲ ಸೌಲಭ್ಯವನ್ನು ನೀಡಲಾಗುತ್ತದೆ. ಗ್ರಾಮೀಣ ಪ್ರದೇಶದ ಸಾಮಾನ್ಯ ವರ್ಗದ ನಿರುದ್ಯೋಗಿಗಳು ಉದ್ಯಮ ಪ್ರಾರಂಭಿಸಲು ಶೇ 25 ಮತ್ತು ಪರಿಶಿಷ್ಟ ವರ್ಗದವರಿಗೆ ಶೇ 35 ರಷ್ಟು ಸಬ್ಸಿಡಿ ದರದಲ್ಲಿ ಬ್ಯಾಂಕ್ ಮೂಲಕ ಸಾಲ ಸೌಲಭ್ಯವನ್ನು ನೀಡಲಾಗುತ್ತದೆ ಎಂದು ತಿಳಿಸಿದರು.

ವಿವಿಧ ಯೋಜನೆಗಳ ಮೂಲಕ ಉದ್ಯಮ ಪ್ರಾರಂಭಿಸಲು ಇಚ್ಛೆ ಪಟ್ಟ ಅಭ್ಯರ್ಥಿಗಳ ಹಾಗೂ ಉದ್ಯಮ ಪ್ರಾರಂಭಿಸಲು ಇಚ್ಚಿಸು ಅಭ್ಯರ್ಥಿಗಳ ಪಟ್ಟಿ ಸಿದ್ಧ ಪಡಿಸಿ ಅವರಿಗೆ ಸದರಿ ಯೋಜನೆಯ ಬಳಕೆಯ ಕುರಿತು ವಿಶೇಷ ಕಾರ್ಯಗಾರ ಏರ್ಪಡಿಸಿ. ಸದರಿ ಯೋಜನೆಯಲ್ಲಿ ಉತ್ಪಾದನಾ ಚಟುವಟಿಕೆ ಪ್ರಾರಂಭಿಸುವ ಅಭ್ಯರ್ಥಿಗಳಿಗೆ ಗರಿಷ್ಠ 50 ಲಕ್ಷ ಹಾಗೂ ಸೇವಾ ಚಟುವಟಿಕೆಯಲ್ಲಿ ಉದ್ಯಮ ಪ್ರಾರಂಭಿಸುವ ಅಭ್ಯರ್ಥಿಗಳಿಗೆ ಗರಿಷ್ಠ 20 ಲಕ್ಷದ ವರೆಗೂ ಸಾಲ ಸೌಲಭ್ಯವನ್ನು ನೀಡಲಾಗುತ್ತದೆ ಎಂದು ಮಾಹಿತಿ ನೀಡಿದರು.

ಪ್ರಧಾನಮಂತ್ರಿಗಳ ಉದ್ಯೋಗ ಸೃಜನ ಯೋಜನೆಯಲ್ಲಿ ಭಾಗಿಯಾಗಿರುವ ಮೂರು ಏಜೆನ್ಸಿ ಕಂಪನಿಗಳು ಸಮನ್ವಯ ಸಾಧಿಸಿ ಕಾರ್ಯನಿರ್ವಹಿಸಿ. ಸದರಿ ವರ್ಷದ ಯೋಜನೆಯಲ್ಲಿ ಬಾಕಿ ಇರುವ ಅರ್ಜಿಗಳನ್ನು ಪೂರ್ಣಗೊಳಿಸಿ. ಕಳೆದು ಎರಡು ವರ್ಷಗಳ ಹಿಂದೆ ಸದರಿ ಯೋಜನೆಯಿಂದ ಸೌಲಭ್ಯ ಪಡೆದ ಅಭ್ಯರ್ಥಿಗಳ ಪಟ್ಟಿ ಸಿದ್ದಪಡಿಸಿ ಅವರು ಪ್ರಧಾನಮಂತ್ರಿಗಳ ಉದ್ಯೋಗ ಸೃಜನ ಯೋಜನೆಯನ್ನು ಸಮರ್ಪಕವಾಗಿ ಬಳಸಿಕೊಂಡು ಆರ್ಥಿಕವಾಗಿ ಪಾವಲಂಬಿಗಳಾಗಿದ್ದಾರೆ ಎಂಬುದರ ಕುರಿತು ಪರಿಶೀಲಿಸಿ ವರದಿ ಸಲ್ಲಿಸಿ ಎಂದು ಸೂಚಿಸಿದರು.

ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆ

ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆಯು ಮುಖ್ಯವಾಗಿ ಕೈ ಮತ್ತು ಉಪಕರಣಗಳೊಂದಿಗೆ ಕೆಲಸ ಮಾಡುವ 18 ಸಾಂಪ್ರದಾಯಿಕ ವ್ಯಾಪಾರಗಳಲ್ಲಿ ತೊಡಗಿರುವ ಕರಕುಶಲಕರ್ಮಿಗಳಿಗೆ ಬೆಂಬಲ ನೀಡುವುದಾಗಿದೆ. ನಿಜವಾಗಿಯೂ ಆರ್ಥಿಕವಾಗಿ ಹಿಂದುಳಿದ ಕರಕುಶಲ ಕರ್ಮಿಗಳಿಗೆ ಉಪಯುಕ್ತವಾಗಲಿದೆ. ಸದರಿ
ಯೋಜನೆಯಡಿ ಈಗಾಗಲೇ ಜಿಲ್ಲೆಯಲ್ಲಿ 19 ಸಾವಿರಕ್ಕೂ ಹೆಚ್ಚು ಫಲಾನುಭವಿಗಳು ತರಬೇತಿ ಪಡೆದಿದ್ದು ಅದರಲ್ಲಿ 9600 ಜನರಿಗೆ ರೂ 15000 ಸಾವಿರ ಮೌಲ್ಯದ ಟೂಲ್ ಕಿಟ್ ವಿತರಣೆ ಮಾಡಲಾಗಿದೆ ಎಂದು ಹೇಳಿದರು.

ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಹೂ ಕಟ್ಟುವುದು. ಟೈಲರಿಂಗ್, ಬುಟ್ಟಿ ಹೆಣೆಯುವುದು ಸೇರಿದಂತೆ ವಿವಿಧ ಸಾಂಪ್ರದಾಯಿಕ ವ್ಯಾಪಾರಿಗಳಿಗೆ ಬೇಡಿಕೆ ಇದೆ. ಈ ಯೋಜನೆಯಲ್ಲಿ ಅರ್ಹ ಫಲಾನುಭವಿಗಳಿಗೆ 1 ಲಕ್ಷದವರೆಗೆ ಸಹಾಯಧನ ನೀಡಲಾಗುತ್ತದೆ. ಸದರಿ ಯೋಜನೆ ಅಡಿ ಶಿಲ್ಪಿಗಳಿಗೂ ಹೆಚ್ಚಿನ ಉತ್ತೇಜನ ನೀಡಿ ಎಂದು ಹೇಳಿದರು.

ವಿವಿಧ ಯೋಜನೆಗಳ ಮೂಲಕ ಅರ್ಹ ಅಭ್ಯರ್ಥಿಗಳನ್ನು ನೋಂದಣಿ ಮಾಡುವುದು ಹಾಗೂ ತರಬೇತಿ ನೀಡುವುದು ಅಷ್ಟೇ ಅಲ್ಲ. ಬ್ಯಾಂಕುಗಳ ಮೂಲಕ ಸಾಲ ಸೌಲಭ್ಯವನ್ನು ಒದಗಿಸುವುದು ಮುಖ್ಯ ತರಬೇತಿ ಪಡೆದ ಅಭ್ಯರ್ಥಿಗಳಿಗೆ ಸಾಲ ಸೌಲಭ್ಯ ದೊರಕಿಸಿಕೊಟ್ಟರೆ ಅದರಿಂದ ಉದ್ಯಮವನ್ನು ಪ್ರಾರಂಭಿಸಿ ಆರ್ಥಿಕವಾಗಿ ಸದೃಢರಾಗುತ್ತಾರೆ ಎಂದು ಹೇಳಿದರು.

ಪಿಎಂ ವಿಶ್ವಕರ್ಮ ಯೋಜನೆಯಡಿ ಟೂಲ್ ಕಿಟ್ ಪಡೆದಿರುವ ಅಭ್ಯರ್ಥಿಗಳು ಸದರಿ ಟೂಲ್ ಕಿಟ್ ಗಳನ್ನು ಸದ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಅಥವಾ ಟೂಲ್ ಕಿಟ್ ಗಳನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ ಎಂಬುದರ ಕುರಿತು ಪರಿಶೀಲನೆ ನಡೆಸಿ. ನಿಜವಾದ ಅರ್ಹರಿಗೆ ಸರ್ಕಾರಿ ಸೌಲಭ್ಯಗಳು ದೊರೆಯಬೇಕು. ಪಿಎಂ ವಿಶ್ವಕರ್ಮ ಯೋಜನೆಯ ಕುರಿತು ತಾಲೂಕು ಮಟ್ಟಗಳಲ್ಲಿ ವಿವಿಧ ಕಾರ್ಯಗಾರಗಳು ಮತ್ತು ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ರೂಪಿಸಿ ಎಂದು ಹೇಳಿದರು.

ಸಭೆಯಲ್ಲಿ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಟಿ. ದಿನೇಶ್. ಜಿಲ್ಲಾ ಕೌಶಲ್ಯ ಅಭಿವೃದ್ಧಿ ಅಧಿಕಾರಿ ನಾಗನಂದ್, ಜಿಲ್ಲಾ ಲೀಡ್ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ಅರುಣ್ ಕುಮಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Related posts

ಜಿಲ್ಲಾಧಿಕಾರಿಗಳಿಂದ ಕೆ.ಆರ್.ಪೇಟೆ ಪುರಸಭೆ ವ್ಯಾಪ್ತಿಯ ಘನ ತ್ಯಾಜ್ಯ ನಿರ್ವಹಣಾ ಘಟಕಕ್ಕೆ ಭೇಟಿ ಮತ್ತು ಪರಿಶೀಲನೆ

ಬಿಗ್‌ಬಾಸ್-12ರ ಕಿರೀಟ ಮುಡಿಗೇರಿಸಿಕೊಂಡ ಗಿಲ್ಲಿ ನಟ

ಮಹಾವೀರರ ತತ್ವ ಸಿದ್ಧಾಂತಗಳನ್ನು ಜೀವನದಲ್ಲಿ ರೂಡಿಸಿಕೊಳ್ಳಿ : ಪಿ. ರವಿಕುಮಾರ್

Leave a Comment