NEWS

cj roy: ಅಚ್ಚರಿ ವ್ಯಕ್ತಿಯನ್ನ ಸಿ ಜೆ ರಾಯ್‌ ಉತ್ತರಾಧಿಕಾರಿಯನ್ನಾಗಿ ಘೋಷಿಸಿದ ಕಾನ್ಫಿಡೆಂಟ್‌ ಗ್ರೂಪ್‌

ಕಾನ್ಫಿಡೆಂಟ್‌ ಗ್ರೂಪ್ ಯಾವುದೇ ಸಾಲ ಮಾಡದೇ ಉದ್ಯಮ ನಡೆಸುತ್ತಿದೆ ಸಿ.ಜೆ. ರಾಯ್ ಅವರಿಗೂ ಯಾವುದೇ ಆರ್ಥಿಕ ಬಾಧ್ಯತೆಗಳಿರಲಿಲ್ಲ

ಪಾಲನೆ ನ್ಯೂಸ್

cj roy company new Heir : ಕಾನ್ಫಿಡೆಂಟ್‌ ಗ್ರೂಪ್‌ ಸಂಸ್ಥಾಪಕ ಸಿ.ಜೆ. ರಾಯ್ ಅವರ ದುರಂತ ಸಾವಿನ ಬಳಿಕ, ಸಾವಿರಾರು ಕೋಟಿ ರೂಪಾಯಿ ವ್ಯವಹಾರ ನಡೆಸುವ ಕಂಪನಿಯ ಮುಂದಿನ ನಾಯಕತ್ವ ಯಾರ ಕೈಗೆ ಸಿಗಲಿದೆ ಎಂಬ ಪ್ರಶ್ನೆಗೆ ಇದೀಗ ಕುಟುಂಬ ಸ್ಪಷ್ಟ ಉತ್ತರ ನೀಡಿದೆ.

ಸಿ.ಜೆ. ರಾಯ್ ಅವರ ಅಕಾಲಿಕ ನಿಧನದ ನಂತರ ಕಾನ್ಫಿಡೆಂಟ್‌ ಗ್ರೂಪ್‌ನ ಭವಿಷ್ಯ ಕುರಿತು ಹಲವು ಚರ್ಚೆಗಳು ನಡೆಯುತ್ತಿತ್ತು. ರಿಯಲ್ ಎಸ್ಟೇಟ್‌ ಕ್ಷೇತ್ರದಲ್ಲಿ ಚಾಕಚಕ್ಯತೆ ಮತ್ತು ದೃಢ ನಿರ್ಧಾರಗಳ ಮೂಲಕ ಕಂಪನಿಯನ್ನು ಬೆಳೆಸಿದ್ದ ಸಿ.ಜೆ. ರಾಯ್ ಅವರ ಬಳಿಕ ಯಾರು ಹೊಣೆ ಹೊರುತ್ತಾರೆ ಎಂಬ ಕುತೂಹಲಕ್ಕೆ ಕುಟುಂಬ ತೆರೆ ಎಳೆದಿದೆ. ಈ ಕುರಿತು ಸಿ.ಜೆ. ರಾಯ್ ಸಹೋದರ ಸಿ.ಜೆ. ಬಾಬು ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ.

ಕಾನ್ಫಿಡೆಂಟ್‌ ಗ್ರೂಪ್‌ನ ಮುಂದಿನ ಜವಾಬ್ದಾರಿ ಸಿ.ಜೆ. ರಾಯ್ ಪುತ್ರ ರೋಹಿತ್ ರಾಯ್ ಮತ್ತು ಕಂಪನಿಯ ಕೇರಳ ಉಸ್ತುವಾರಿ ಹಾಗೂ ನಿರ್ದೇಶಕರಾಗಿರುವ ಜೊಸೆಫ್ ಅವರಿಗೆ ವಹಿಸಲಾಗಿದೆ. ಕಂಪನಿಯ ಎಲ್ಲಾ ಯೋಜನೆಗಳು ಈಗಾಗಲೇ ನಿಗದಿಪಡಿಸಿದಂತೆ ಮುಂದುವರಿಯಲಿವೆ ಎಂದು ಸಿ.ಜೆ. ಬಾಬು ಸ್ಪಷ್ಟಪಡಿಸಿದ್ದಾರೆ.

ಈ ವೇಳೆ ಮಾತನಾಡಿದ ಸಿ.ಜೆ. ಬಾಬು, “ಕಾನ್ಫಿಡೆಂಟ್‌ ಗ್ರೂಪ್ ಯಾವುದೇ ಸಾಲ ಮಾಡದೇ ಉದ್ಯಮ ನಡೆಸುತ್ತಿದೆ. ಸಿ.ಜೆ. ರಾಯ್ ಅವರಿಗೂ ಯಾವುದೇ ಆರ್ಥಿಕ ಬಾಧ್ಯತೆಗಳಿರಲಿಲ್ಲ. ಹೀಗಾಗಿ ಅವರ ಸಾವಿನ ಹಿಂದಿನ ಕಾರಣಗಳು ಇನ್ನೂ ಪ್ರಶ್ನೆಯಾಗಿ ಉಳಿದಿವೆ. ಈ ಬಗ್ಗೆ ಪೊಲೀಸರಿಗೆ ಕುಟುಂಬದ ಆತಂಕವನ್ನು ತಿಳಿಸಲಾಗಿದೆ” ಎಂದು ಹೇಳಿದರು. ಕರ್ನಾಟಕ ಪೊಲೀಸರ ತನಿಖೆ ಬಗ್ಗೆ ತೃಪ್ತಿ ವ್ಯಕ್ತಪಡಿಸಿದ ಅವರು, ತನಿಖಾಧಿಕಾರಿಗಳು ಮೂರು ಬಾರಿ ಕರೆ ಮಾಡಿದ್ದರು ಎಂದಿದ್ದಾರೆ.

ಇನ್ನು ತಂದೆಯ ನಿಧನದ ಕುರಿತು ಮಾತನಾಡಿದ ರೋಹಿತ್ ರಾಯ್, “ನನ್ನ ತಂದೆಯ ಅಗಲಿಕೆಯಿಂದಾದ ನಷ್ಟವನ್ನು ಪದಗಳಲ್ಲಿ ಹೇಳಲು ಸಾಧ್ಯವಿಲ್ಲ. ಅವರು ಒಬ್ಬ ಮಹಾನ್ ವ್ಯಕ್ತಿ. ಮಾಧ್ಯಮಗಳು ಈ ಸಂದರ್ಭದಲ್ಲಿ ನೀಡಿದ ಬೆಂಬಲಕ್ಕೆ ನಾನು ಕೃತಜ್ಞ” ಎಂದು ಭಾವುಕರಾಗಿ ಹೇಳಿದರು. ಆದಾಯ ತೆರಿಗೆ ಇಲಾಖೆ ಒತ್ತಡದ ಬಗ್ಗೆ ತಂದೆ ಯಾವುದೇ ವಿಷಯವನ್ನು ತಮ್ಮ ಬಳಿ ಹೇಳಿರಲಿಲ್ಲ ಎಂದೂ ಅವರು ಸ್ಪಷ್ಟಪಡಿಸಿದರು.

ಸಿ.ಜೆ. ರಾಯ್ ಅವರಿಗೆ ಬೆಂಗಳೂರಿನ ಬನ್ನೇರುಘಟ್ಟ ರಸ್ತೆಯಲ್ಲಿರುವ ನೇಚರ್ಸ್ ಲಕ್ಸುರಿ ಕ್ಯಾಸ್ಕೇಡ್‌ನಲ್ಲಿ ಅಂತಿಮ ವಿದಾಯ ನೀಡಲಾಯಿತು. ಸಾರ್ವಜನಿಕ ದರ್ಶನದ ವೇಳೆ ಸ್ಥಳೀಯರು, ಉದ್ಯಮ ಕ್ಷೇತ್ರದ ಗಣ್ಯರು, ಸಿನಿಮಾ ಲೋಕದ ಪ್ರಮುಖರು ಸೇರಿದಂತೆ ಸಾವಿರಾರು ಜನರು ಕಣ್ಣೀರಿನ ನಮನ ಸಲ್ಲಿಸಿದರು. ನಂತರ ಸಂಜೆ ನಾಲ್ಕೂವರೆ ಸುಮಾರಿಗೆ ಅಂತ್ಯಸಂಸ್ಕಾರ ನೆರವೇರಿತು.

ಪಾಲನೆ.ಇನ್‌ ವಾಟ್ಸ್‌ ಆಪ್‌ ಗುಂಪಿಗೆ ಸೇರಿರಿ.

Related posts

ಡಿಜಿಟಲ್ ಮೋಡ್ ನಲ್ಲಿ ನಡೆಯುತ್ತಿರುವ ಮೊದಲ ಜನಗಣತಿ

ಪರಿಚಯ ಮಕ್ಕಳ ಸಾಹಿತ್ಯ ಪ್ರಶಸ್ತಿ ಪ್ರದಾನ ಏ. 12ಕ್ಕೆ

ಫೆಬ್ರವರಿ 21 ರಂದು ಜಿಲ್ಲಾ ಮಟ್ಟದ ಉದ್ಯೋಗ ಮೇಳ

Leave a Comment