ಪಾಲನೆ ನ್ಯೂಸ್
ನಂಜನಗೂಡು: ಕಪಿಲಾ ತೀರದಲ್ಲಿ ಮರಗಳ ಹನನ ಕೊನೆಗೂ ಅರಣ್ಯ ಇಲಾಖೆಯಿಂದ ದೂರು ದಾಖಲಿಸಿದೆ. ನದಿ ದಂಡೆಯ ಮೇಲೆ ಕೃಷಿ ಭೂಮಿಯಲ್ಲಿನ ಬೆಳೆಗೆ ತೊಡಕಾಗಿದ್ದ 46 ಮರಗಳ ಹನನದ ಕುರಿತು ಸಾರ್ವಜನಿಕರೇ ಎಚ್ಚೆತ್ತು ಬೆಳಕಿಗೆ ತಂದರೂ ಪ್ರಕರಣ ದಾಖಲಾಗಿರಲಿಲ್ಲ. ಪರಿಸರ ನಾಶ, ಮರಗಳ ಹನನದ ಕುರಿತಂತೆ ಯಾರು ದೂರು ನೀಡಬೇಕು ಎನ್ನುವ ಜಿಜ್ಞಾಸೆ ಆರಣ್ಯ ಇಲಾಖೆ ಹಾಗೂ ಕಾವೇರಿ ನೀರಾಮ ಇಲಾಖೆ ಮಧ್ಯೆ ನಡೆದಿದ್ದು ಪರಸ್ಪರ ಜಾರಿಕೊಳ್ಳುವ ಹುನ್ನಾರವೂ ನಡೆದಿತ್ತು.
ಲಕ್ಷಾಂತರ ರೂ. ಬೆಲೆ ಬಾಳುವ ಮರಗಳ ನಾಶದ ಕುರಿತು ಈ ಇಲಾಖೆಗಳು ಜಾರಿಕೊಳ್ಳುವ ಪ್ರಯತ್ನ ನಡೆಸಿರುವಂತೆ ‘ಪರಿಸರಕ್ಕಾಗಿ ನಾವು’ ಸಂಘಟನೆ ನೇರವಾಗಿ ಪ್ರವೇಶ ಮಾಡಿದ್ದರಿಂದ ಅನಿವಾರ್ಯವಾಗಿ ಅರಣ್ಯ ಇಲಾಖೆ ನಂಜನಗೂಡು ಗ್ರಾಮಾಂತರ ಠಾಣೆಯಲ್ಲಿ ಮರ ಕಡಿದಿದ್ದಾರೆ ಎನ್ನಲಾದ ನಗರ್ಲೆ ಗ್ರಾಮದ ಆಯಾಜ್ ಅಹ್ಮದ್ ಎಂಬವರ ವಿರುದ್ಧ ದೂರು ದಾಖಲಿಸಿದೆ. 46 ಮರಗಳನ್ನು ಅಕ್ರಮವಾಗಿ ಕಡಿದು ಅದನ್ನು ಸಾಗಾಟ ಮಾಡಲು ಒಬ್ಬ ವ್ಯಕ್ತಿಯಿಂದ ಸಾಧ್ಯವೇ ಎಂಬುದೂ ದೂರುದಾರರಿಗೆ ತಿಳಿದಿದ್ದರೂ ಅವರ ಮೇಲೆ ಮಾತ್ರ ದೂರು ನೀಡಿದ್ದಾರೆ. ಕಳೆದ ವರ್ಷ ಕಪಿಲಾ ಬಲದಂಡೆ ನಾಲೆಯ ಕೋಟ್ಯಂತರ ರೂ. ಮೌಲ್ಯದ ನಾಲಾ ಮಣ್ಣನ್ನು ಖಾಸಗಿ ಜಾಗಕ್ಕೆ ಸಾಗಾಣಿಕೆ ಮಾಡಿದ ಕುರಿತಂತೆ ‘ಅಂದೋಲನ’ ದಲ್ಲಿ ಸುದೀರ್ಘವಾಗಿ ವರದಿ ಪ್ರಕಟವಾದಾಗ ನೀಡಿದ ಕಾಟಾಚಾರದ ದೂರಿನಂತೆ ಇದಾಗದಿರಲಿ ಎಂಬುದು ಸಾರ್ವಜನಿಕರ ಆಶಯ ವಾಗಿದೆ.

‘ಪರಿಸರಕ್ಕಾಗಿ ನಾವು’ ಸಂಘಟನೆಯ ಪರಶುರಾಮಗೌಡ ಮತ್ತು ಪಿಯುಸಿಲ್ ಸಂಘಟನೆಯ ಕಮಲ್ ಗೋಪಿನಾಥ್, ರೈತ ನಾಯಕ ಬಸವರಾಜು, ನಗರ್ಲೆ ವಿಜಯ ಕುಮಾರ್, ಮತ್ತಿತರರು ಮಂಗಳವಾರ ಸ್ಥಳಕ್ಕೆ ಭೇಟಿ ನೀಡಿ ಕಡಿದು ಉರುಳಿಸಿದ್ದ ಮರಗಳನ್ನು ಕಂಡು, ತಕ್ಷಣ ಸರ್ಕಾರ ಮರಗಳ್ಳರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು. ಲಕ್ಷಾಂತರ ರೂ. ಮೌಲ್ಯದ ಮರಗಳನ್ನು ರಾಜಾರೋಷವಾಗಿ ಕಡಿದು ಸಾಗಿಸಿದರೂ ಅರಣ್ಯ ಇಲಾಖೆ ಏನು ಮಾಡುತ್ತಿದೆ? ಎಂದು ಪ್ರಶ್ನಿಸಿದ ಅವರು, ಈ ಹಗಲು ದರೋಡೆ ಇಲ್ಲಿನ ಅಧಿಕಾರಿಗಳ ಗಮನಕ್ಕೆ ಬಂದಿಲ್ಲ ಎಂದರೆ ನಂಬಲು ಸಾಧ್ಯವೇ ಇಲ್ಲ. ಅಧಿಕಾರಿಗಳ ಬೆಂಬಲವಿಲ್ಲದೆ ಇಂಥ ಹೀನ ಕೃತ್ಯ ನಡೆಸಲು ಸಾಧ್ಯವೇ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಮರಗಳ ಹನನ ಹಾಗೂ ಸಾಗಾಟಕ್ಕೆ ಕಾರಣವಾದ ಆರೋಪಿ ತಲೆ ಮರೆಸಿಕೊಳ್ಳುವವರೆಗೂ ಕಾದು ನಂತರ ದೂರು ನೀಡಿರುವುದು ತಾಲ್ಲೂಕಿನ ಅಧಿಕಾರಿಗಳ ನಿಜ ಬಣ್ಣ ಬಯಲು ಮಾಡಿದೆ. 46 ಮರಗಳನ್ನು ಕಡಿದು ಸಾಗಿಸಿದ ಎಲ್ಲ ಆರೋಪಿಗಳನ್ನೂ ಬಂಧಿಸಿ ಎಲ್ಲರ ಮೇಲೆ ಉಗ್ರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
✅ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn
