ಪಾಲನೆ ನ್ಯೂಸ್
ಮಂಡ್ಯ: ಜಿಲ್ಲೆಯ ಪಾಂಡವಪುರ ತಾಲ್ಲೂಕನ್ನು ಸಂಪೂರ್ಣ ಸಾವಯವ ತಾಲ್ಲೂಕನ್ನಾಗಿ ಪರಿವರ್ತಿಸಲು ಅಧಿಕೃತ ಸಾವಯವ ಪ್ರಮಾಣೀಕರಣ ವ್ಯವಸ್ಥೆಯನ್ನು ಜಾರಿಗೆ ತರುವುದು, ಇಎಸ್‌ಐ ಆಸ್ಪತ್ರೆಯನ್ನು ಉನ್ನತೀಕರಿಸುವುದು, ಬಹುನಿರೀಕ್ಷಿತ ಎಆರ್‌ಐಎ ಸ್ಥಾಪನೆಗೆ 100 ಎಕರೆ ಜಮೀನನ್ನು ರಾಜ್ಯ ಸರ್ಕಾರದಿಂದ ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆಯವ್ಯಯದಲ್ಲಿ ಘೋಷಿಸಿದ್ದಾರೆ.
ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ದಾಖಲೆಯ 17ನೇ ಬಜೆಟ್ ಅನ್ನು ಶುಕ್ರವಾರ ಮಂಡಿಸಿದ್ದು, ಮಂಡ್ಯ ಜಿಲ್ಲೆಗೆ ಹಲವು ಕೊಡುಗೆಗಳನ್ನು ನೀಡಿದ್ದಾರೆ. ಪಾಂಡವಪುರ ತಾಲ್ಲೂಕನ್ನು ಸಂಪೂರ್ಣ ಸಾವಯವ ತಾಲ್ಲೂಕನ್ನಾಗಿ ಪರಿವರ್ತಿಸುವುದು, ಮಂಡ್ಯ ನಗರದ ಇಎಸ್‌ಐ ಆಸ್ಪತ್ರೆಯ ಉನ್ನತೀಕರಣ, ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಆಟೋಮೋಟಿವ್ ರಿಸರ್ಚ್ ಅಸೋಸಿಯೇಷನ್ ಆಫ್ ಇಂಡಿಯಾರವರಿಂದ ಮಂಡ್ಯದಲ್ಲಿ 500 ಕೋಟಿ ರೂ. ವೆಚ್ಚದಲ್ಲಿ ಅತ್ಯಾಧುನಿಕ ನಿರ್ಮಾಣ ಮತ್ತು ಮೂಲಸೌಕರ್ಯ ಸಲಕರಣೆಗಳ ಪರೀಕ್ಷಾ ಘಟಕ ಸ್ಥಾಪಿಸುವುದಾಗಿ ಘೋಷಿಸಿದ್ದು, ಇದಕ್ಕೆ ರಾಜ್ಯ ಸರ್ಕಾರದಿಂದ 100 ಎಕರೆ ಜಮೀನು ನೀಡಲಾಗುವುದು ಎಂದು ತಿಳಿಸಿದ್ದಾರೆ.

ಅಲ್ಲದೆ, 6ರಿಂದ 12ನೇ ತರಗತಿವರೆಗೆ ವ್ಯಾಸಂಗ ಮಾಡುತ್ತಿರುವ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಮಕ್ಕಳಿಗೆ 2015-26ನೇ ಸಾಲಿನಲ್ಲಿ 42 ಶ್ರಮಿಕ ವಸತಿ ಶಾಲೆಗಳಿಗೆ ಅನುಮೋದನೆ ನೀಡಲಾಗಿತ್ತು. ಇದನ್ನು ಪ್ರಸ್ತುತ ವರ್ಷ ಅಂದರೆ 2026-27ನೇ ಸಾಲಿನಲ್ಲಿ ಮಂಡ್ಯ ನಗರದಲ್ಲೂ ಶ್ರಮಿಕ ವಸತಿ ಶಾಲೆ ಪ್ರಾರಂಭಿಸಲಾಗುವುದು ಎಂದು ಹೇಳಿದ್ದಾರೆ. ಆದರೆ, ಕಳೆದ ವರ್ಷದ ಬಜೆಟ್‌ನಲ್ಲಿ ಮಂಡ್ಯ ತಾಲ್ಲೂಕಿನ ಕೃಷಿವಿ.ಸಿ. ಫಾರಂನಲ್ಲಿ ಕೃಷಿ ವಿಶ್ವವಿದ್ಯಾಲಯ ನಿರ್ಮಾಣಕ್ಕೆ 25 ಕೋಟಿ ರೂ. ಗಳನ್ನು ನೀಡಿದ್ದರು. ಆದರೆ, ಇದರ ಇನ್ನುಳಿದ ಕಾಮಗಾರಿ ಹಾಗೂ ಅಭಿವೃದ್ಧಿಗೆ ಹಣವನ್ನು ನೀಡುವ ಬಗ್ಗೆ ಈ ಬಾರಿಯ ಬಜೆಟ್‌ನಲ್ಲಿ ತಿಳಿಸಿಲ್ಲ.
✅ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn
