ಪಾಲನೆ ನ್ಯೂಸ್
ಬೆಂಗಳೂರು: ಯಲಹಂಕ ಸಮೀಪದ ಜಕ್ಕೂರಿನಲ್ಲಿರುವ ವಿಲ್ಲಾವೊಂದರಲ್ಲಿ ಡ್ರಗ್ಸ್ ಸೇವಿಸಿ ಕಾಲೇಜು ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಮಾಡಿದ್ದ ಪ್ರಕರಣ ಸಂಬಂಧ ಮತ್ತೆ ಮೂವರನ್ನು ಅಮೃತಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದು, ರೇವ್ ಮಾದರಿ ಪಾರ್ಟಿ ನಡೆದಿರುವ ಶಂಕೆ ವ್ಯಕ್ತಪಡಿಸಿದ್ದಾರೆ. ಹೊರ ರಾಜ್ಯದ ಯುವತಿ ನೀಡಿದ್ದ ದೂರಿನ ಮೇಲೆ ತನಿಖೆ ಕೈಗೊಂಡಿರುವ ಪೊಲೀಸರು, ಈವರೆಗೆ 5 ಮಂದಿಯನ್ನು ಬಂಧಿಸಿದ್ದಾರೆ.
ಅತ್ಯಾಚಾರ ಘಟನೆಗೆ ಸಹಕರಿಸಿರುವ ಆರೋಪದಡಿ ಶಿವಮೊಗ್ಗದ ಶ್ರವಣ್ (21), ದಾವಣಗೆರೆಯ ಅನಿರುದ್ಧ (33) ಹಾಗೂ ಗುಜರಾತ್ ಮೂಲದ ಮೋಹಿತ್ ಜೈನ್ (23) ಎಂಬುವರನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ಏಳು ಸಾಕ್ಷಿದಾರರನ್ನು ಈಗಾಗಲೆ ವಿಚಾರಣೆ ನಡೆಸಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ. ಸ್ನೇಹ ಬೆಳೆಸಿ ಕೃತ್ಯ ಆರೋಪಿಗಳು ಇನ್ ಸ್ಟಾಗ್ರಾಂ ಮೂಲಕ ಯುವತಿಯರ ಸ್ನೇಹ ಬೆಳೆಸಿ ನಂತರ ಫೋಟೋಶೂಟ್, ಮಾಡೆಲಿಂಗ್ ಹಾಗೂ ಪಾರ್ಟಿ ನೆಪದಲ್ಲಿ ಆಹ್ವಾನಿಸುತ್ತಿದ್ದರು. ಆರಂಭದಲ್ಲಿ ಅವರ ನಂಬಿಕೆ ಗಳಿಸಲು ಪಬ್ ಮತ್ತು ಕೆಫೆಗಳಲ್ಲಿ ಭೇಟಿಯಾಗಿ ಸಭ್ಯರಂತೆ ವರ್ತಿಸುತ್ತಿದ್ದರು. ಬಳಿಕ ಸ್ನೇಹ ಮುಂದುವರಿಸಿ ಪಾರ್ಟಿ ನೆಪದಲ್ಲಿ ವಿಲ್ಲಾಗಳಿಗೆ ಕರೆದೊಯ್ಯುತ್ತಿದ್ದರು.
ಇದೇ ರೀತಿ ಹಲವು ಯುವತಿಯರನ್ನು ಪಾರ್ಟಿಗಳಿಗೆ ಕರೆದು ಮತ್ತು ಬರುವ ಡ್ರಗ್ಸ್, ಮಾತ್ರೆ ನೀಡಿ ಇಂತಹ ಕೃತ್ಯ ಎಸಗುತ್ತಿದ್ದರು ಎನ್ನಲಾಗಿದೆ. ಪ್ರಮುಖ ಆರೋಪಿಗಳಾದ ಪಶ್ಚಿಮ ಬಂಗಾಳದ ಡಿಕ್ಷನ್ ಸಾಂತ್ರಾ, ಸಕಲೇಶಪುರದ ನಿಖಿಲ್‌ನನ್ನು ಈ ಹಿಂದೆಯೇ ಬಂಧಿಸಲಾಗಿದೆ. ಡ್ರಗ್ಸ್ ಪೂರೈಕೆ ಬಗ್ಗೆ ತನಿಖೆ: ಅನಿರುದ್ಧ ಪ್ರಭಾವಿಗಳೊಂದಿಗೆ ನಂಟು ಹೊಂದಿದ್ದು, ನಿಖಿಲ್‌ಗೂ ಸ್ನೇಹಿತ ಪಾರ್ಟಿಯಲ್ಲಿ ಮಾದಕವಸ್ತು ಬಳಕೆ ಮಾಡಲಾಗಿದೆ. ಆದರೆ, ಡ್ರಗ್ಸ್ ಎಲ್ಲಿಂದ ಬಂತು, ಹೇಗೆ ಬಂತು ಎಂಬ ಬಗ್ಗೆ ಪೊಲೀಸರ ತಂಡ ತೀವ್ರ ವಿಚಾರಣೆ ನಡೆಸುತ್ತಿದೆ.

ವಿದ್ಯಾರ್ಥಿಗಳಿಗೆ ಮಾತ್ರೆ ಮಾದರಿಯ ಡ್ರಗ್ಸ್ ಪೂರೈಕೆಯಾಗಿರುವುದು ಪೊಲೀಸರಲ್ಲಿ ಹಲವು ಸಂಶಯ ಹುಟ್ಟುಹಾಕಿದೆ. ಆರೋಪಿಗಳ ರಕ್ತದ ಮಾದರಿ ಸಂಗ್ರಹಿಸಿ, ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ವರದಿಯಲ್ಲಿ ಮಾದಕ ವಸ್ತು ಸೇವನೆ ದೃಢಪಟ್ಟರೆ ಆರೋಪಿಗಳ ವಿರುದ್ಧ ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಯಲಿದೆ. ನಿಖಿಲ್ ಐ-ಫೋನ್ ನಾಪತ್ತೆ ! ಪ್ರಮುಖ ಆರೋಪಿ ನಿಬಿಲ್ ಬಳಸುತ್ತಿದ್ದ ಐಫೋನ್ ನಾಪತ್ತೆಯಾಗಿದೆ.
ಈ ಹಿಂದೆ ಕೆಲ ಯುವತಿಯರನ್ನು ಜಾಲತಾಣಗಳ ಮೂಲಕ ಪರಿಚಯಿಸಿಕೊಂಡು ವಂಚಿಸಿರುವ ಬಗ್ಗೆ ಕೆಲವೊಂದು ಸಾಕ್ಷಿಗಳು ಇದರಲ್ಲಿದ್ದವು ಎಂದು ಹೇಳಲಾಗಿದೆ. ರೇವ್ ಪಾರ್ಟಿಗಳನ್ನು ಆಯೋಜಿಸುತ್ತಿದ್ದ ನಿಖಿಲ್, ಕೆಲ ಪ್ರಭಾವಿಗಳನ್ನು ಆಹ್ವಾನ ಮಾಡುತ್ತಿದ್ದನು ಎಂಬುದಾಗಿ ಪೊಲೀಸರು ಶಂಕಿಸಿದ್ದಾರೆ. ಪಾರ್ಟಿ ನಡೆದಿರುವ ವಿಲ್ಲಾ, ಹಿರಿಯ ಐಪಿಎಸ್ ಅಧಿಕಾರಿಗೆ ಸೇರಿದ್ದು ಎಂಬುದು ತಿಳಿದಿದೆ. ಆದರೆ, ಆ ಅಧಿಕಾರಿಯು ಕೆಲವರ್ಷಗಳ ಹಿಂದೆಯೇ ಕಂಪನಿಯೊಂದಕ್ಕೆ ವಿಲ್ಲಾವನ್ನು ಗುತ್ತಿಗೆಗೆ ನೀಡಿದ್ದರು ಎಂದು ಮೂಲಗಳು ತಿಳಿಸಿವೆ.
✅ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn
