ಪಾಲನೆ ಅಭಿಮತ
ಪ್ರಿಯ ಸಂಪಾದಕರೇ, ದಿನಾಂಕ: 28.02.2026 ರಂದು ತಮ್ಮ ಪ್ರಜಾವಾಣಿ ಸಂಪಾದಕೀಯ ಅಂಕಣದಲ್ಲಿ “ಮದುವೆಗಳಿಗೆ ಸರ್ಕಾರದ ಕಣ್ಗಾವಲು ಪ್ರತಿಗಾಮಿ ಕೋಮುವಾದಿ ಚಿಂತನೆ” ಈ ಒಂದು ತಲೆಬರಹದ ಅಡಿಯಲ್ಲಿ “ಮದುವೆಗಳ ನೋಂದಣಿಗೆ ಪೋಷಕರ ಸಮ್ಮತಿಯನ್ನು ಕಡ್ಡಾಯಗೊಳಿಸಲು ಗುಜರಾತ್ ಸರ್ಕಾರ ಪ್ರಯತ್ನಿಸುತ್ತಿದೆ. ಇದು ಸಾಂವಿಧಾನಿಕ ತತ್ವಗಳಿಗೆ ವಿರುದ್ಧವಾಗಿದೆ ಹಾಗೂ ಪ್ರತಿಗಾಮಿ ಚಿಂತನೆಯಾಗಿದೆ” ಎಂಬ ಅಭಿಪ್ರಾಯವನ್ನು ತಾವು ವ್ಯಕ್ತಪಡಿಸಿದ್ದೀರಿ. ಇದಕ್ಕೆ ಪೂರಕವಾಗಿ ಕೆಲವೊಂದು ನ್ಯಾಯಾಲಯದ ತೀರ್ಪುಗಳನ್ನು ಸಹ ಉಲ್ಲೇಖಿಸಿದ್ದೀರಿ.
ಇದನ್ನು ಓದಿದ ನನಗೆ ನಿಮ್ಮ ಸಂಪಾದಕೀಯ ಚಿಂತನೆಯ ಮೇಲೆಯೇ ಅನುಮಾನ ಮೂಡುತ್ತಿದೆ. ಕಾರಣ ಕಾನೂನುಗಳು ಸಮಾಜದ ಸ್ವಾಸ್ಥ್ಯವನ್ನು ಆರೋಗ್ಯವನ್ನ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ರಚನೆಯಾಗುತ್ತವೆ ಮತ್ತು ಸೃಷ್ಟಿಯಾಗುತ್ತವೆ. ನಂತರ ಕಾನೂನಿನ ಮೂಲ ಉದ್ದೇಶಕ್ಕೆ ಅನುಗುಣವಾಗಿ ನ್ಯಾಯಾಲಯದ ತೀರ್ಪುಗಳು ಬರುತ್ತವೆ. ಒಂದು ವೇಳೆ ಕಾನೂನುಗಳು ಸಮಾಜದ ಸ್ವಾಸ್ಥ್ಯಕ್ಕೆ ವಿರುದ್ಧವಾಗಿದ್ದಾಗಲೂ ನ್ಯಾಯಾಲಯದ ತೀರ್ಪುಗಳು ಸಮಾಜದ ಸ್ವಾಸ್ಥ್ಯದ ಬಗ್ಗೆ ಅನಿಸಿಕೆಯನ್ನು ವ್ಯಕ್ತಪಡಿಸಬಹುದೇ ವಿನಹ ಕಾನೂನನ್ನೇ ಬದಲಾಯಿಸಿ ತೀರ್ಪು ನೀಡಲು ಸಾಧ್ಯವಿಲ್ಲ.
ಈಗ ವಿಷಯಕ್ಕೆ ಬರೋಣ. ಸಂವಿಧಾನದ ಮೂಲ ಪೀಠಿಕೆಯಲ್ಲಿ ಸೌಹಾರ್ದತೆ, ಸಹೋದರತ್ವ ಎಂಬ ಪದಗಳನ್ನು ಹೇಳುತ್ತದೆ. ಅಂದರೆ ತಮ್ಮ ಪ್ರಕಾರ ಈ ಪದಗಳ ಆಳ, ಅಗಲ, ಉದ್ದ, ವಿಸ್ತಾರಗಳೇನು? ಗಂಡಿರಲಿ ಹೆಣ್ಣಿರಲಿ ಕುಟುಂಬಕ್ಕೆ ಒಂದೇ ಮಗು ಇರಲಿ ಎನ್ನುವ ಅವಿವೇಕಿ ಪ್ರಕಟಣೆಗಳನ್ನ ಪಾಲಿಸುತ್ತಾ ಒಂದೊಂದು ಮಗುವನ್ನು ಸಾಕಿಕೊಂಡು ಬರುತ್ತಿರುವ ತಂದೆ ತಾಯಿಗಳು ಈ ಸಮಾಜದಲ್ಲಿ ಇದ್ದಾರೆ. ಅಂತಹ ತಾಯಿ ತಂದೆಗಳ ಮಕ್ಕಳು ಪ್ರೀತಿ ಪ್ರೇಮ ಎಂದು ಹೇಳಿ 18 ವರ್ಷ ದಾಟುತ್ತಿದ್ದ ಹಾಗೆ ಅವರ ಇಷ್ಟಾನುಸಾರ ಸ್ವೇಚ್ಛಾಚಾರವಾಗಿ ಪ್ರಿಯತಮ, ಪ್ರೇಯಸಿಗಳನ್ನು ಆರಿಸಿಕೊಂಡು ಅವರ ಕುಟುಂಬವನ್ನು ಶೋಕದಲ್ಲಿ ಮುಳುಗಿಸಿ ಹೋಗುತ್ತಿದ್ದಾರೆ.
ಹೀಗಿರುವಾಗ ತಮ್ಮ ಸಂವಿಧಾನದ ಮೂಲ ಪೀಠಿಕೆಯಲ್ಲಿ ಬರುವ ಸೌಹಾರ್ದತೆ, ಸಹೋದರತ್ವ, ಭ್ರಾತೃತ್ವ ಎನ್ನುವ ಪದಗಳ ಅರ್ಥ ಎಲ್ಲಿ ಉಳಿದೀತು? ಕುಟುಂಬದ ಸೌಹಾರ್ದತೆಯನ್ನು ಮಾತೃತ್ವವನ್ನು ಪಿತೃತ್ವವನ್ನು ಉಳಿಸಲಾಗದವರಿಂದ ದೇಶದ ಸಾರ್ವಭೌಮತ್ವ, ಸೌಹಾರ್ದತೆ, ಸಹೋದರತ್ವ ಉಳಿಸಲು ಸಾಧ್ಯವೇ?
ಈ ಹಿನ್ನೆಲೆಯಲ್ಲಿ ಗುಜರಾತ್ ಸರ್ಕಾರ ಮದುವೆಗಳ ನೋಂದಣಿಗೆ ಪೋಷಕರ ಸಮ್ಮತಿಯನ್ನು ಕಡ್ಡಾಯಗೊಳಿಸುವ ಕಾನೂನನ್ನು ತರುತ್ತಿರುವುದು ಪ್ರಸ್ತುತ ಸಮಾಜಕ್ಕೆ ಕುಟುಂಬದ ಸೌಹಾರ್ದತೆ ಕಾಪಾಡುವುದಕ್ಕೆ ಅತ್ಯವಶ್ಯಕವಾಗಿದೆ.
ಕೇವಲ ವ್ಯಕ್ತಿಗತ ಹಕ್ಕನ್ನು ಆಧರಿಸಿ ನಿಮ್ಮ ಚಿಂತನೆ ವ್ಯಕ್ತವಾಗಿರುವುದು ಶೋಚನೀಯ. ಹಾಗೂ ನಿಮ್ಮ ಕೃತಿಗೂ ಮತ್ತು ಹೇಳಿಕೆಗೂ ಸಾಕಷ್ಟು ಅಜಗಜಾಂತರವಿದೆ ಎಂಬ ಮತ್ತೊಂದು ವಂಶ ಅದೇ ದಿನ ನಿಮ್ಮ ಅಭಿಮತ ಪುಟದಲ್ಲಿ ಪ್ರಕಟಿಸಿರುವ ಸುಭಾಷಿತ ಸ್ಪಷ್ಟಪಡಿಸುತ್ತದೆ.
ಅದೇನೆಂದರೆ, “ಕರ್ತವ್ಯವನ್ನು ಕುರಿತು ಮೊದಲು ಯೋಚನೆ ಮಾಡಿ, ಹಕ್ಕುಗಳು ಆಮೇಲೆ ಬರಲಿ” -ಡಿ.ವಿ.ಗುಂಡಪ್ಪ.
ಆದರೆ, ನಿಮ್ಮ ಸಂಪಾದಕೀಯ ಅಂಕಣದಲ್ಲಿ ಗುಜರಾತ್ ಸರ್ಕಾರ ಮದುವೆಗಳ ನೋಂದಣಿಗೆ ಪೋಷಕರ ಸಮ್ಮತಿಯನ್ನು ಕಡ್ಡಾಯಗೊಳಿಸಲು ಕಾನೂನು ಮಾಡುತ್ತಿರುವ ಬಗ್ಗೆ ಕೇವಲ ನೀವು ಹಕ್ಕುಗಳನ್ನು ಯೋಚಿಸಿ ಅಭಿಪ್ರಾಯವನ್ನು ವ್ಯಕ್ತಪಡಿಸಿರುವುದು ನಿಮ್ಮ ಸಂಪಾದಕೀಯ ಚಿಂತನೆಯೇ ದೋಷಪೂರಿತವಾಗಿದೆ ಅನಿಸುತ್ತಿದೆ. ಇದು ನನ್ನ ಅಭಿಪ್ರಾಯ.

-ರವೀಶ್ ಎಂ.ಜಿ., ವಕೀಲರು, ಬೆಂಗಳೂರು. 99861 52261
