‘ಎ’ ಖಾತಾ ಮಾಡಲು ಅಧಿಕಾರಿಗಳಿಂದ ಲಂಚ: ಆರೋಪ ದಾಖಲೆ ಸಹಿತ ಲೋಕಾಕ್ಕೆ ಎನ್.ಆರ್.ರಮೇಶ್ ದೂರು
ಪಾಲನೆ ನ್ಯೂಸ್
ಬೆಂಗಳೂರು : ಬೆಂಗಳೂರು ಅಭಿವೃದ್ಧಿಪ್ರಾಧಿಕಾರದ (ಜಿಬಿಎ) ವ್ಯಾಪ್ತಿಯ ಪಶ್ಚಿಮ ನಗರ ಪಾಲಿಕೆ ವ್ಯಾಪ್ತಿಗೆ ಸೇರಿದ ಹೆಮ್ಮಿಗೆಪುರ ವಾರ್ಡ್ ಉತ್ತರಹಳ್ಳಿ ಹೋಬಳಿ ಮಲ್ಲಸಂದ್ರದ ಗ್ರಾಮದಲ್ಲಿ ಚೆನ್ನೈ ಮೂಲದ ಕಟ್ಟಡ ನಿರ್ಮಾಣ ಸಂಸ್ಥೆಗೆ ಸೇರಿದ 10.20 ಎಕರೆ ವಿಸ್ತೀರ್ಣದ ಜಾಗಕ್ಕೆ ಅಧಿಕಾರಿಗಳು ₹5 ಕೋಟಿ ಲಂಚ ಪಡೆದು ನಕಲಿ ಪಿಐಡಿ (ಪ್ರಾಪರ್ಟಿ ಐಡೆಂಟಿಫಿಕೇಶನ್ ನಂಬರ್) ಸಂಖ್ಯೆ ಸೃಷ್ಟಿಸಿ ‘ಎ’ ಖಾತಾ ಮಾಡಿಕೊಡಲು ಮುಂದಾಗಿರುವ ಗಂಭೀರ ಆರೋಪ ಕೇಳಿ ಬಂದಿದೆ.
ಬಿಬಿಎಂಪಿ ಆಡಳಿತ ಪಕ್ಷದ ಮಾಜಿ ನಾಯಕ ಎನ್.ಆರ್.ರಮೇಶ್ ಈ ಆರೋಪ ಮಾಡಿದ್ದು, ಜಿಬಿಎ ಪಶ್ಚಿಮ ನಗರ ಪಾಲಿಕೆ ಆಯುಕ್ತ ಮತ್ತು ಲೋಕಾಯುಕ್ತಕ್ಕೆ ದಾಖಲೆ ಸಹಿತ ದೂರು ನೀಡಿದ್ದಾರೆ. ಈ ಅಕ್ರಮದಲ್ಲಿ ಭಾಗಿಯಾಗಿರುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

ಉತ್ತರಹಳ್ಳಿ ಹೋಬಳಿ ಮಲ್ಲಸಂದ್ರ ಗ್ರಾಮದ ಸರ್ವೆ ನಂಬರ್18/1ಎ4, 18/125, 18/126, 18/127, 18/128 ಮತ್ತು 18/1ಎ9ಕ್ಕೆ ಸೇರಿದ 10.20 ಎಕರೆ ಕಂದಾಯ ಸ್ವತ್ತು ಚೆನ್ನೈ ಮೂಲದ ಸಿ.ಜಿ.ಸತೀಶ್ ಮಾಲೀಕತ್ವದ ‘ಕ್ಯಾಸಾಗ್ರಾಂಡ್ ಲೋಟಸ್ ಪ್ರೈವೇಟ್ ಲಿಮಿಟೆಡ್’ ಎಂಬ ಕಟ್ಟಡ ನಿರ್ಮಾಣ ಸಂಸ್ಥೆಗೆ ಸೇರಿದೆ.
ಐದು ಕೋಟಿ ರೂ. ಲಂಚದ ಆರೋಪ: ಈ ಸ್ವತ್ತಿಗೆ ಅಕ್ರಮವಾಗಿ ‘ಎ’ ಖಾತೆ ಮಾಡಿಕೊಡಲು ವಾರ್ಡ್ ಸಂಖ್ಯೆ 198ರ ಕಂದಾಯ ಪರಿವೀಕ್ಷಕ ಶಿವಕುಮಾರ್, ಸಹಾಯಕ ಕಂದಾಯ ಅಧಿಕಾರಿ ರಮೇಶ್ ರಾಥೋಡ್, ಉಪ ಆಯುಕ್ತ ಅಬ್ದುಲ್ ರಬ್ ಮತ್ತು ಜಂಟಿ ಆಯುಕ್ತ ಆರತಿ ಆನಂದ್ ಅವರು ಸ್ವತ್ತಿನ ಮಾಲೀಕ ಸಿ.ಜಿ.ಸತೀಶ್ ಅವರಿಂದ ಲಂಚ ರೂಪದಲ್ಲಿ 5 ಕೋಟಿ ರೂ.ಗೂ ಅಧಿಕ ಹಣ ಎಂದು ಪಡೆದಿದ್ದಾರೆ ಆರೋಪಿಸಿದ್ದಾರೆ.
ಪಾಲಿಕೆಗೆ ಹತ್ತಾರು ಕೋಟಿ ರೂ. ನಷ್ಟ: ಬಳಿಕ ಈ 10.20 ಎಕರೆ ಪೈಕಿ 30 ಅಡಿ ವಿಸ್ತೀರ್ಣದ ಸ್ವತ್ತಿಗೆ ನಕಲಿ ಪಿಐಡಿ ಸಂಖ್ಯೆ ನೀಡಿ, ‘ಎ’ ಖಾತಾ ಮಾಡಿಕೊಟ್ಟಿದ್ದಾರೆ. ಈಗ ಮತ್ತೆ ಅದೇ ಸ್ವತ್ತಿನ 4.36 ಲಕ್ಷ ಚದರ ಅಡಿ ಮತ್ತು 40,519 ಚ.ಮೀ. ವಿಸ್ತೀರ್ಣದ ಸ್ವತ್ತಿಗೆ ತಿದ್ದುಪಡಿ ಮಾಡುವ ಸಂಬಂಧ ಟಿಪ್ಪಣಿ ಹಾಳೆಗಳನ್ನು ಸಿದ್ದಪಡಿಸಿದ್ದಾರೆ. ಇದಕ್ಕೆ ‘ಎ’ ಖಾತಾ ಮಾಡಲು ನಮೂನೆ-ಎ ಸಿದ್ದಪಡಿಸಿದ್ದಾರೆ. ಈ ಮೂಲಕ ನಗರ ಪಶ್ಚಿಮ . ಉಂಟು ಮಾಡಿದ್ದಾರೆ. ಈ ಅಧಿಕಾರಿಗಳು ಈಗಾಗಲೇ ನೂರಾರು ನಕಲಿ ಪಿಐಡಿಗಳನ್ನು ಸೃಷ್ಟಿಸಿ, ಲಕ್ಷಾಂತರ ರೂ. ಲಂಚ ಪಡೆದು ಪಾಲಿಕೆಗೆ ವಂಚಿಸಿದ್ದಾರೆ ಎಂದು ಆಪಾದಿಸಿದ್ದಾರೆ.
✅ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn
