NEWS

ಜಿಲ್ಲೆಯಲ್ಲಿ ನಿರುದ್ಯೋಗ ಹೋಗಲಾಡಿಸಲು ಉದ್ಯಮಗಳಿಗೆ ಒತ್ತು ನೀಡಿ

ಜಿಲ್ಲೆಯ ಜನರಿಗೆ ಶುದ್ಧ ಕುಡಿಯುವ ನೀರು ಪೂರೈಸಿ

ಮಂಡ್ಯ ಸುದರವಾದ ನಗರ ಸ್ವಚ್ಛತೆ ಕಾಪಾಡಿ -ಮನೋಜ್ ಕುಮಾರ್ ಮೀನಾ

ಪಾಲನೆ ನ್ಯೂಸ್

ಮಂಡ್ಯ: ಸದರಿ ವರ್ಷ ಜಿಲ್ಲೆಗೆ ಅಗತ್ಯವಿರುವ ನೀರಿನ ಪ್ರಮಾಣ ಲಭ್ಯವಿದೆ ಹಾಗಾಗಿ ಬೇಸಿಗೆ ಕಾಲದಲ್ಲಿ ಬೆಳೆ ಮತ್ತು ಕುಡಿಯುವ ನೀರಿನ ಸಮಸ್ಯೆ ಉಂಟಾಗುವುದಿಲ್ಲ ಎಂದು ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಹಾಗೂ ಉಸ್ತುವಾರಿ ಕಾರ್ಯದರ್ಶಿ ಅವರು ಹೇಳಿದರು.

ಇಂದು ಜಿಲ್ಲಾ ಪಂಚಾಯತ್ ಕಾವೇರಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಜಿಲ್ಲಾ ಅಭಿವೃದ್ಧಿ ಕಾರ್ಯಕ್ರಮಗಳ ಪ್ರಗತಿ ಪರಿಶೀಲನೆ ಹಾಗೂ ಜಿಲ್ಲಾ ಮಟ್ಟದ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ತಹಶೀಲ್ದಾರ್ ಗಳು ವಿಶೇಷ ಮುತುವರ್ಜಿ ಕೆರೆಗಳನ್ನು ತೆರವುಗೊಳಿಸಿ ನಂತರ ಸದರಿ ಕೆರೆಯ ಜಾಗದಲ್ಲಿ ಒತ್ತುವರಿಯಾಗದಂತೆ ತಂತಿ ಬೇಲಿ ಮತ್ತು ಸೂಚನಾ ಫಲಕ ಅಳವಡಿಸಿ. ಜಿಲ್ಲೆಯಲ್ಲಿ ಇದುವರೆಗೆ 232 ಗ್ರಾಮ ಪಂಚಾಯಿತಿಗಳಲ್ಲಿ ಪೌತಿ ಖಾತಾ ಆಂದೋಲನ ನಡೆಸಿ 67659 ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ ಎಂದು ಹೇಳಿದರು.

ಪಿ.ಎಂ. ಕಿಸಾನ್ ಯೋಜನೆಯಡಿಯಲ್ಲಿ 21 ಕಂತುಗಳಲ್ಲಿ ರೂ 892.08 ಕೋಟಿ ಹಣವನ್ನು ನೀಡಲಾಗಿದೆ. ಕೃಷಿ ಇಲಾಖೆ ಕೃಷಿ ವಿಶ್ವವಿದ್ಯಾನಿಲಯ ಹಾಗೂ ಸಂಬಂಧಪಟ್ಟ ಇಲಾಖೆಗಳ ಜೊತೆ ಕೈಜೋಡಿಸಿ ಜಿಲ್ಲೆಯ ನಿರುದ್ಯೋಗಿ ಯುವಕರಿಗೆ ಕೃಷಿಯಿಂದ ಉದ್ಯಮ ಹೇಗೆ ಪ್ರಾರಂಭಿಸಬೇಕು ಎಂಬುದರ ಕುರಿತಾಗಿ ತರಬೇತಿ ನೀಡಿ ಅರ್ಹ ಸೌಲಭ್ಯ ಕಲ್ಪಿಸಿ ಜಿಲ್ಲೆಯ ಯುವಕರನ್ನು ನಿರುದ್ಯೋಗದಿಂದ ಮುಕ್ತಗೊಳಿಸಿ ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಜನರಿಗೆ ಜಲ ಜೀವನ್ ಮಿಷನ್ ಮೂಲಕ ಶುದ್ಧ ಕುಡಿಯುವ ನೀರನ್ನು ಮನೆ ಮನೆಗೆ ತಲುಪಿಸಿ. ಪ್ರತಿ ವಾರ ನೀರಿನ ಗುಣಮಟ್ಟವನ್ನು ಪರಿಶೀಲಿಸಿ ಎಂದು ಸೂಚಿಸಿದರು.

ನಲ್ ಜಲ್ ಯೋಜನೆಯಡಿ ಜಿಲ್ಲೆಯ ಮೂರು ತಾಲೂಕುಗಳಲ್ಲಿ ಸ್ವ ಸಹಾಯ ಗುಂಪುಗಳಿಗೆ ತರಬೇತಿ ನೀಡಲಾಗಿದೆ. ಸದರಿ ಹೆಣ್ಣು ಮಕ್ಕಳಿಗೆ ಕೇವಲ ತರಬೇತಿ ನೀಡಿದರೆ ಸಾಲದು ತರಬೇತಿಗೆ ತಕ್ಕ ಹಾಗೆ ಕೆಲಸಗಳನ್ನು ನೀಡಿ ಆಗ ಮಾತ್ರ ತರಬೇತಿ ನೀಡಿದ್ದಕ್ಕೆ ಅರ್ಥ ದೊರೆಯುತ್ತದೆ ಎಂದು ಹೇಳಿದರು.

ಜಿಲ್ಲೆಯಲ್ಲಿ ಪ್ರಾಥಮಿಕದಲ್ಲಿಯೇ ಹಸಿ ಕಸ ಮತ್ತು ಒಣ ಕಸಗಳನ್ನು ಬೇರ್ಪಡಿಸುಲಯವಂತೆ ಅರಿವು ಮೂಡಿಸಿ. ಸರ್ಕಾರಿ ಕಚೇರಿಗಳಲ್ಲಿಯೇ ಹಸಿ ಕಸ ಮತ್ತು ಒಣ ಕಸವನ್ನು ಬೇರ್ಪಡಿಸಿ ಸಂಗ್ರಹಿಸಬೇಕು ಇಲ್ಲಿಂದಲೇ ಜಾಗೃತಿ ಶುರುವಾದರೆ ಸಾರ್ವಜನಿಕರಿಗೆ ಅರಿವು ಮೂಡಿಸಿದಂತಾಗುತ್ತದೆ. ಮಂಡ್ಯ ಸುಂದರವಾದ ನಗರ ಮಂಡ್ಯದಲ್ಲಿ ಸ್ವಚ್ಛತೆ ಕಾಪಾಡುವುದು ಎಲ್ಲರ ಹೊಣೆಯಾಗಿದೆ. ಜಿಲ್ಲೆಯಲ್ಲಿ ಕಸಗಳನ್ನು ಸಂಗ್ರಹಿಸಿ ಬೆಂಕಿ ಹಾಕದಿರುವಂತೆ ನೋಡಿಕೊಳ್ಳಬೇಕು. ಕಸ ವಿಲೇವಾರಿಯನ್ನು ವೈಜ್ಞಾನಿಕವಾಗಿ ನಡೆಸಿ ಎಂದು ಹೇಳಿದರು.

ಜಿಲ್ಲೆಯ ಅಂಗನವಾಡಿಗಳಲ್ಲಿ 61 ಸಾವಿರಕ್ಕೂ ಹೆಚ್ಚು ಮಕ್ಕಳು ಇದ್ದು ಸದರಿ ಮಕ್ಕಳಿಗೆ ಪೌಷ್ಟಿಕ ಕೊರತೆ ಉಂಟಾಗದಂತೆ ಕ್ರಮ ವಹಿಸಿ. ಗುಣಮಟ್ಟದ ಪೌಷ್ಟಿಕ ಆಹಾರಗಳನ್ನು ಮಕ್ಕಳಿಗೆ ನೀಡಿ. ಸದರಿ ವರ್ಷ ಎಸ್ ಎಸ್ ಎಲ್ ಸಿ ಪರೀಕ್ಷೆ ಬರೆಯಲಿರುವ ಮಕ್ಕಳಿಗೆ ವಿಶೇಷವಾಗಿ ಭಾಷಾ ವಿಷಯ ಹಾಗೂ ಗಣಿತ ವಿಷಯಗಳಲ್ಲಿ ಮೇಲೆ ಹೆಚ್ಚಿನ ಒತ್ತು ನೀಡಿ. ಶಾಲಾ ಶಿಕ್ಷಕರು ಮಕ್ಕಳಿಗೆ ಸೂಕ್ತವಾಗಿ ಪಾಠ ಪ್ರವಚನಗಳನ್ನು ನಡೆಸುತ್ತಿದ್ದಾರ ಎಂದು ಪರಿಶೀಲನೆ ನಡೆಸಿ ಎಂದು ಹೇಳಿದರು.

ಮಕ್ಕಳು ದೇಶದ ಭವಿಷ್ಯ ಅವರ ಶಿಕ್ಷಣಕ್ಕೆ ಕೊರತೆ ಉಂಟಾಗದಂತೆ ಅಧಿಕಾರಿಗಳು ಸೂಕ್ತ ಕ್ರಮ ವಹಿಸಬೇಕು ಹಾಗೂ ಜಿಲ್ಲೆಯಲ್ಲಿ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ಪರೀಕ್ಷೆ ಎದುರಿಸಲಿರುವ ಸಮಾಜ ಕಲ್ಯಾಣ ಇಲಾಖೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ವಿದ್ಯಾರ್ಥಿ ನಿಲಯಗಳ ಮಕ್ಕಳ ಫಲಿತಾಂಶವನ್ನು ಹೆಚ್ಚಿಸಿ ಎಂದು ಹೇಳಿದರು.

ಜಿಲ್ಲಾಧಿಕಾರಿ ಡಾ. ಕುಮಾರ ಅವರು ಮಾತನಾಡಿ ಆಸ್ತಿ ತೆರಿಗೆಯ ವಸೂಲಾತಿಯಲ್ಲಿ ಈಗಾಗಲೇ ಶೇ 89 ರಷ್ಟು ತೆರಿಗೆಯನ್ನು ಸಂಗ್ರಹಿಸಲಾಗಿದೆ. ಉಳಿದ ತೆರಿಗೆಯನ್ನು ಮಾರ್ಚ್ ಮಾಹೆಯ ಅಂತ್ಯದೊಳಗೆ ಸಂಗ್ರಹಿಸಲಾಗುತ್ತದೆ. ಹಸಿ ಕಸ ಮತ್ತು ಒಣ ಕಸ ಗಳನ್ನು ಪ್ರಾಥಮಿಕ ಹಂತದಲ್ಲಿಯೇ ಬೇರ್ಪಡಿಸುವಂತೆ ಈಗಾಗಲೇ ಸಾರ್ವಜನಿಕರಿಗೆ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ ಎಂದು ಹೇಳಿದರು.

ಶೇ 84 ರಷ್ಟು ಜಿಲ್ಲೆಯ ಜನರ ಆಧಾರ್ ಸೀಡಿಂಗ್ ಈಗಾಗಲೇ ಮಾಡಲಾಗಿದೆ. ಉಪ ವಿಭಾಗಾಧಿಕಾರಿಗಳು ಜವಾಬ್ದಾರಿ ವಹಿಸಿ ಒಂದು ವರ್ಷಕ್ಕಿಂತ ಹಳೆಯ ಕಂದಾಯ ಪ್ರಕರಣಗಳನ್ನು ವಿಲೇವಾರಿ ಮಾಡಿ. ನಮ್ಮಲ್ಲಿ ಬೇಸಿಗೆ ಕಾಲಕ್ಕೆ ಸಾಕಷ್ಟು ನೀರು ಲಭ್ಯವಿದ್ದು ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ಸೂಕ್ತ ಕ್ರಮ ವಹಿಸಲಾಗಿದೆ ಎಂದು ಹೇಳಿದರು.

ಎಂ ಎಲ್ ಎ ಮತ್ತು ಎಂ ಎಲ್ ಸಿ ಕಾಮಗಾರಿಗಳಲ್ಲಿ ಬಾಕಿ ಇರುವ ಶೀಘ್ರವಾಗಿ ಪೂರ್ಣಗೊಳಿಸಿ. ಸದರಿ ವರ್ಷ ಪಿ. ಎಂ.ಎಫ್ .ಎಂ ಇ ಯೋಜನೆಯಡಿ ಜಿಲ್ಲೆಯ 328 ಅರ್ಹ ರೈತ ಫಲಾನುಭವಿಗಳಿಗೆ 83.42 ಕೋಟಿ ಸಾಲ ಹಾಗೂ 27.72 ಕೋಟಿ ಸಹಾಯಧನವನ್ನು ನೀಡಲಾಗಿದೆ ಎಂದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ ಆರ್ ನಂದಿನಿ ಅವರು ಮಾತನಾಡಿ ಜಿಲ್ಲೆಯಲ್ಲಿ ಜಲಜೀವನ್ ಮಿಷನ್ ಯೋಜನೆಯಡಿ ಈಗಾಗಲೇ ಶೇ 79 ರಷ್ಟು ಕಾಮಗಾರಿ ಮುಗಿದಿದ್ದು ಅನುದಾನದ ಕೊರತೆಯಿಂದ ಬಾಕಿ ಕಾಮಗಾರಿಗಳನ್ನು ಪೂರ್ಣಗೊಳಿಸಲು ಸಾಧ್ಯಾವಾಗಿರುವುದಿಲ್ಲ ಎಂದು ಹೇಳಿದರು.

ಎನ್ ಆರ್ ಎಲ್ ಎಂ ಯೋಜನೆಯಡಿ ಜಿಲ್ಲೆಯ ಸ್ವ ಸಹಾಯ ಗುಂಪಿನ ಅರ್ಹ ಮಹಿಳಾ ಫಲಾನುಭವಿಗಳು ತಮ್ಮ “ಅಕ್ಕನ ಮೀನು ಊಟ” ಉದ್ಯಮದಲ್ಲಿ ಉತ್ತಮ ಲಾಭವನ್ನು ಪಡೆಯುತ್ತಿದ್ದಾರೆ. ಮೀನುಗಾರಿಕೆ ಇಲಾಖೆಯಿಂದ ಮೀನು ಸಾಕಾಣಿಕೆ ಮತ್ತು ಮೀನುಗಳಿಗೆ ನೀಡಬೇಕಾದ ಆಹಾರ ಕ್ರಮಗಳ ಕುರಿತು ತಿಳಿಸಿ ಮೀನುಗಾರರಿಗೆ ಪ್ರೋತ್ಸಾಹ ನೀಡಲಾಗುತ್ತಿದೆ ಎಂದು ಹೇಳಿದರು.

ನೂತನವಾಗಿ ಅಕ್ಕನ ಬುತ್ತಿ ಎಂಬ ಹೊಸ ಯೋಜನೆಯನ್ನು ಎನ್ ಆರ್ ಎಲ್ ಎಂ ಯೋಜನೆಯಡಿ ರೂಪಿಸಲಾಗಿದ್ದು ಉತ್ತಮ ಗುಣಮಟ್ಟದ ಆಹಾರವನ್ನು ಕ್ಯಾಟರಿಂಗ್ ಮೂಲಕ ಸರ್ಕಾರಿ ಕಚೇರಿಗಳು ಮತ್ತು ಇನ್ನಿತರ ಸಂಸ್ಥೆಗಳಿಗೆ ಶುಚಿತ್ವದ ಆಹಾರವನ್ನು ನೀಡಲಾಗುತ್ತಿದೆ. ಸ್ವ ಸಹಾಯ ಗುಂಪುಗಳ ಮಹಿಳೆಯರು ತಯಾರಿಸುವ ಮದ್ದೂರು ವಡೆ, ಮೇಲುಕೋಟೆ ಪುಳಿಯೋಗರೆ ಮತ್ತು ಮಂಡ್ಯ ಬೆಲ್ಲಕ್ಕೆ ಜಿ.ಐ ಟ್ಯಾಗ್ ಪಡೆಯಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಬಿ.ಸಿ ಶಿವಾನಂದ ಮೂರ್ತಿ, ಉಪವಿಭಾಗಾಧಿಕಾರಿಗಳಾದ ಶಿವಮೂರ್ತಿ ಮತ್ತು ಶ್ರೀನಿವಾಸ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

✅ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMH
n

Related posts

ವಿವಾದಕ್ಕೆ ಕಾರಣವಾದ ನಟ ಚೇತನ್ ಅಹಿಂಸಾ ಟ್ವಿಟ್

ಅತ್ಯಾಚಾರ ಎಸಗಲು ಬೆಂಬಲಿಸಿದ್ದ ನಾಲ್ಕು ಜನರಿಗೆ 20 ವರ್ಷ ಜೈಲು

ಭಾರತದಲ್ಲಿ ಸ್ತನ ಕ್ಯಾನ್ಸರ್ ಪ್ರಕರಣಗಳ ಸಂಖ್ಯೆಯಲ್ಲಿ ಶೇ. 477ರಷ್ಟು ಭಾರಿ ಏರಿಕೆ

Leave a Comment