ಪಾಲನೆ ಕವಿತೆ
ಸ್ವರ್ಗದಲ್ಲಿ ಹುಟ್ಟಿದ್ದಾಕೆ
ನಿನಗೆ ಬೇರೆ ಹೆಸರು ಬೇಕೆ?
ಸದಾ ಇದ್ದರೆ ಸಾಕು ಲವಲವಿಕೆ
ನಿನ್ನಲ್ಲರಿಲಿ ಸ್ವಚ್ಛ ಚಟುವಟಿಕೆ
ಹಿರಿಯಕ್ಕನ ಚಾಳಿ ಮನೆ ಮಂದಿಗೆಲ್ಲ
ಅದಕ್ಕೆ ನೀನು ಹೊರತಲ್ಲ
ಮನೆ ಮಂದಿಗೂ ಯಾರಿಗೂ ಚಿಂತೆಯಿಲ್ಲ
ಹರುಷದ ಹೊನಲೇ ಎಲ್ಲ
ಅಕ್ಕನಂತಾಗು ಎಂದು ಹೇಳುವುದಿಲ್ಲ
ಅಕ್ಕರೆಯ ಸಿಹಿ ಹಂಚು ಸ್ನೇಹಿತರಿಗೆಲ್ಲ
ಜೇನಾಗು ಒಲವಾಗು ನಲಿವಾಗು ಬಂಧುಗಳಿಗೆಲ್ಲ
ಮೆಚ್ಚಿನ ಶಿಷ್ಯೆಯಾಗು ಗುರುಗಣಂಗೆಲ್ಲ
ಅರಿವೇ ಗುರು ಮರೆಯದಿರು ಸದಾ ಕಾಲ
ಜ್ಞಾನ ದೀಪ್ತಿಯಾಗಿ ಬೆಳಗು ಹಗಲು ಇರುಳೆಲ್ಲ
ನಗುನಗುತಾ ನಗಿಸುವ ನಗುವಿರಲಿ ಮುಖವೆಲ್ಲ
ಜಗ್ಗದಿರು ಕುಗ್ಗದಿರು ಬಂದದ್ದೆಲ್ಲ ಬರಲಿ ಬಾಳೆಲ್ಲ
ಅಕ್ಕ ತುಳಿದ ಹಾದಿ ಪಕ್ಕ ಇರಬಹುದು
ಯಾರೂ ತುಳಿಯದ ಹಾದಿಯಲ್ಲಿ ಕಲ್ಲು ಮುಳ್ಳುಗಳು
ತುಡಿತಕ್ಕೆ ಹರುಷಕ್ಕೆ ಅಡ್ಡಿಯಾದರೂ ಕೀಳದಿರು ಹೆಜ್ಜೆ
ಅದೇ ಬದುಕಿನ ಪುಟಗಳ ಮುನ್ನುಡಿ ಮುನ್ನಡೆ
-ಚಂದ್ರಶೇಖರ ದ.ಕೋ.ಹಳ್ಳಿ
(ಮಗಳು ದಿವಿಜ ದ.ಕೋ. ಹಳ್ಳಿಯ 15ನೇ ವರುಷದ ಹುಟ್ಟುಹಬ್ಬಕ್ಕೆ ಶುಭ ಕೋರಿ ಬರೆದ ಕವಿತೆಯನ್ನು ಹಾಡಾಗಿ ಪ್ರಕಟಿಸಿರುವುದು. 20-01-2026.)
