ಪಾಲನೆ ನ್ಯೂಸ್
ಮಂಡ್ಯ: ಭೀಮಾ ಕೋರೆಂಗಾವ್ ವಿಜಯೋತ್ಸವ, ಮೀಸಲಾತಿಯಲ್ಲಿ ಕೆನೆಪದರ ಹಾಗೂ ಖಾಸಗಿ ಸಂಸ್ಥೆಗಳಲ್ಲೂ ಮೀಸಲಾತಿ ಕುರಿತು ರಾಜ್ಯಮಟ್ಟದ ವಿಚಾರ ಸಂಕಿರಣವನ್ನು ಜ.9 ರಂದು ಬೆಳಿಗ್ಗೆ 11.30ಕ್ಕೆ ಹಾಸನದ ಅಂಬೇಡ್ಕರ್ ಭವನದಲ್ಲಿ ಆಯೋಜಿಸಲಾಗಿದೆ ಎಂದು ಸಮಿತಿಯ ಜಿಲ್ಲಾಧ್ಯಕ್ಷ ಅಂದಾನಿ ಸೋಮನಹಳ್ಳಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಸ್ಪೃಶ್ಯರು ಮೀಸಲಾತಿ ಮೂಲಕ ಸಮಾಜದ ಮುಖ್ಯವಾಹಿನಿಗೆ ಬರುವುದು ಸಹಿಸದ ಮನುವಾದಿಗಳಿಂದ ಎಸ್ಸಿ/ಎಸ್ಟಿಗೆ ಮೀಸಲಾತಿ ಲಭಿಸದಂತೆ ಕೆನಪದರ ಅಳವಡಿಸಲು ಸರಕಾರಕ್ಕೆ ಆಗ್ರಹಿಸಿ ಪಿತೂರಿ ನಡೆಸುತ್ತಿದ್ದಾರೆ ಎಂದರು.
ಸುಪ್ರೀಂ ನ್ಯಾಯಮೂರ್ತಿ ಬಿ.ಆರ್. ಗವಾಯಿಗಳು ನಿವೃತ್ತಿಯ ಅಂಚಿನಲ್ಲಿದ್ದು ತಮ್ಮ ಸಂಬಂಧವಿಲ್ಲದ ಕೇಸಿನ ವಿಚಾರಣೆಯಲ್ಲಿ ಕೆನೆಪದರ ಅಳವಡಿಸಲು ತೀರ್ಪು ನೀಡಿ ದೇಶದಲ್ಲಿ ಮತ್ತೆ ಚರ್ಚೆ ಹುಟ್ಟು ಹಾಕಿದ್ದಾರೆ. ಇದರಿಂದ ಕೆನೆಪದರ ಅಳವಡಿಸಿದರೆ ಡಿ.ಗ್ರೂಪ್ ನೌಕರರ ಮಕ್ಕಳು ಅವಕಾಶ ವಂಚಿತರಾಗುತ್ತಾರೆ. ಆದ್ದರಿಂದ ಈ ತೀರ್ಪನ್ನು ಸಮಿತಿ ಖಂಡಿಸುತ್ತದೆ ಎಂದು ಹೇಳಿದರು.
ದೇಶದಲ್ಲಿ ಆಡಳಿತ ನಡೆಸಿದ ಕಾಂಗ್ರೆಸ್ ಹಾಗೂ ಜನತಾ ಪರಿವಾದ ಬಿಜೆಪಿ ಸರಕಾರಗಳಲ್ಲಿ ಮೀಸಲಾತಿ ವಿರೋಧಿಗಳು. ಅಧಿಕಾರ ನಡೆಸಿ ಶೇಕಡವಾರು ಉದ್ಯೋಗಗಳನ್ನು ಭರ್ತಿ ಮಾಡದ ಕಾರಣ ಎಸ್ಸಿ/ಎಸ್ಟಿ, ಒಬಿಸಿ ಯುವಕರು ಉದ್ಯೋಗ ವಂಚಿತರಾಗಿದ್ದಾರೆ. ಆದ್ದರಿಂದ ಅನ್ಯ ಸಮುದಾಯಗಳಿಗೆ ಅನ್ವಯಿಸದ ಕೆನೆಪದರವನ್ನು ಎಸ್ಸಿ/ಎಸ್ಟಿ ಸಮುದಾಯಕ್ಕೆ ಅಳವಡಿಸುವ ನಿರ್ಧಾರ ಕೈಬಿಟ್ಟು, ಖಾಸಗಿ ಸಂಸ್ಥೆಗಳಲ್ಲೂ ಉದ್ಯೋಗ ಮೀಸಲಾತಿ ನೀಡುವಂತೆ ಆಗ್ರಹಿಸಿದರು.
ಗೋಷ್ಠಿಯಲ್ಲಿ ಸಮಿತಿಯ ಮೈಸೂರು ವಿಭಾಗೀಯ ಅಧ್ಯಕ್ಷ ಟಿ.ಡಿ.ಬಸವರಾಜು, ನಿರಂಜನ್ ಬೌದ್ಧ, ಟಿ.ಕೆ.ಅಂಕಯ್ಯ, ಉಮೇಶ್, ಮುರುಗ ಇದ್ದರು.
