NEWS

ಸೊಪ್ಪುಗಳೆಂಬ ಸರ್ವಶ್ರೇಷ್ಠ ಸಹಜ ಆಹಾರ

ಪಾಲನೆ, ದ್ವಿಭಾಷಾ ಮಾಸಿಕ | ಸಂಪುಟ 4, ಸಂಚಿಕೆ 10‌

ನಮ್ಮ ಸುತ್ತ ಮುತ್ತ ತಲೆತಲಾಂತರಗಳಿಂದ ಉಳಿದು ಬಂದಿರುವ ಹಲವು ಬಗೆಯ ಸಹಜ ಆಹಾರಗಳಿವೆ. ಹಣ್ಣುಗಳು, ಕಾಳುಗಳು, ಗೆಡ್ಡೆಗೆಣಸುಗಳು, ಧಾನ್ಯಗಳು… ಇವುಗಳ ಜೊತೆಗೆ ಹೆಸರಿಸಲೇಬೇಕಾದ ಮತ್ತೊಂದು ಪ್ರಮುಖವಾದ ಆಹಾರವೇ ಸೊಪ್ಪುಗಳು. ಅಸಂಖ್ಯಾತ ಸೊಪ್ಪುಗಳು ಮನುಷ್ಯರ ಆಹಾರವಾಗಿ ಬಳಕೆಗೆ ಯೋಗ್ಯವಾಗಿವೆ.


ಸೊಪ್ಪುಗಳನ್ನು ಕುರಿತ ಜ್ಞಾನ ಕೂಡ ಅರಿತಷ್ಟೂ ವಿಸ್ತಾರ, ನಡೆದಷ್ಟೂ ನಿಗೂಢ! ಸೊಪ್ಪುಗಳ ಬಗೆಗೆ ತಿಳಿಯುತ್ತಾ ಹೋದಂತೆ ಅದೊಂದು ಸುಂದರ ಲೋಕ ಕಣ್ಣ ಮುಂದೆ ತೆರೆದುಕೊಳ್ಳುತ್ತದೆ. ನಿಂತಲ್ಲಿ ನಡೆಯುವಲ್ಲೆಲ್ಲ ಕಾಣಿಸಿಕೊಳ್ಳುವ ಸೊಪ್ಪುಗಳೇ ನಮ್ಮನ್ನು ಕರೆದಂತೆ, ಮಾತನಾಡಿಸಿದಂತೆ ಭಾಸವಾಗುತ್ತದೆ! ಹೊಲದಲ್ಲೋ ಮಾರುಕಟ್ಟೆಯಲ್ಲೋ ಯಾವುದಾದರೂ ತಾಜಾ ಸೊಪ್ಪು ಕಂಡರಂತೂ ಕಂಡ ತಕ್ಷಣ ಬಾಯಲ್ಲಿ ನೀರೂರುತ್ತದೆ, ಮನಸಲ್ಲಿ ಆಸೆ ಹುಟ್ಟುತ್ತದೆ, ಮನೆಗೆ ಕರೆದುಕೊಂಡು ಹೋಗಬೇಕೆನಿಸುತ್ತದೆ! ಅವುಗಳ ಗುಣಗಳ ಬಗ್ಗೆ ತಿಳಿದುಕೊಂಡ ಮೇಲಂತೂ ಆತ್ಮೀಯ ಸ್ನೇಹಿತನಂತಾಗುತ್ತವೆ. ಕಂಡ ಮೇಲೆ ಬಿಟ್ಟು ಹೋಗಲು ಮನಸಾಗುವುದೇ ಇಲ್ಲ!


ನಮ್ಮ ಯಾವ ಶ್ರಮ, ಸಹಾಯವಿಲ್ಲದೆ ಸಹಜವಾಗಿ ತಮ್ಮಷ್ಟಕ್ಕೆ ತಾವೇ ಹೊಲಗಳಲ್ಲಿ, ತೋಟಗಳಲ್ಲಿ ಹುಟ್ಟಿ ಬೆಳೆಯುವ ಸಹಜ ಆಹಾರ ಈ ಸೊಪ್ಪು. ಇನ್ನು ಕೆಲವು ಸೊಪ್ಪುಗಳು ಮಾತ್ರ ಅವುಗಳ ಬೀಜಗಳು ನೆಲದಲ್ಲಿ ಸೇರದೇ ಇರುವ ಕಾರಣದಿಂದಾಗಿ ನಾವು ಬಿತ್ತಿ ಬೆಳೆಸಬೇಕಾಗುತ್ತದೆ. ನಮ್ಮ ಸುತ್ತಮುತ್ತ ನಾವು ತಿನ್ನಬಹುದಾದ ನೂರಾರು ಬಗೆಯ ಸೊಪ್ಪುಗಳಿವೆ. ಆದರೆ, ಎಷ್ಟೋ ಸೊಪ್ಪುಗಳನ್ನು ತಿನ್ನಬಹುದು ಎಂಬ ಅರಿವು ನಮಗೆ ಇರುವುದಿಲ್ಲವಷ್ಟೇ. ೩೦-೪೦ ಕಿ.ಮೀ. ದೂರ ಹೋದರೆ ಸಾಕು ನಮಗೆ ತಿಳಿದಿರುವ ತಿನ್ನಬಹುದಾದ ಎಷ್ಟೋ ಸೊಪ್ಪುಗಳು ಅಲ್ಲಿನವರಿಗೆ ತಿಳಿದಿರುವುದಿಲ್ಲ, ಹಾಗೆಯೇ, ಅವರು ತಿನ್ನುವ ಹಲವು ಸೊಪ್ಪುಗಳನ್ನು ನಾವು ‘ಕಳೆ’ ಎಂದು ಕಿತ್ತು ಹಾಕುತ್ತಿರುತ್ತೇವೆ! ಇನ್ನೂ ಕೆಲವು ಅನುಭವಿಗಳು ಹೇಳುವಂತೆ ಸಾಕು ಪ್ರಾಣಿಗಳು ತಿನ್ನುವ ಬಹುತೇಕ ಎಲ್ಲ ಸೊಪ್ಪುಗಳನ್ನು ನಾವೂ ತಿನ್ನಬಹುದು. ಆದರೆ ಕೆಲವು ಸೊಪ್ಪುಗಳ ರುಚಿ ನಮಗೆ ಇಷ್ಟವಾಗುವುದಿಲ್ಲವಷ್ಟೇ. ಬಹುಶಃ ಪ್ರಾಣಿಗಳನ್ನು ಅನುಸರಿಸಿಯೇ ಮನುಷ್ಯನೂ ಪ್ರಾಚೀನ ಕಾಲದಿಂದಲೂ ತಿನ್ನಬಹುದಾದ ಸೊಪ್ಪುಗಳನ್ನು ಗುರುತಿಸಿಕೊಂಡಿರಲೂಬಹುದು.


ಸೂರ್ಯನ ಬೆಳಕಿನ ಸಹಾಯದಿಂದ ಇಡೀ ಸಸ್ಯಕ್ಕೆ ಬೇಕಾದ ಆಹಾರ ತಯಾರಿಸುವ ಸಸ್ಯದ ಏಕೈಕ ಅಂಗವೆಂದರೆ ಅದು ಎಲೆಗಳು. ಚಿಕ್ಕ ಹುಲ್ಲಿನಿಂದ ದೊಡ್ಡ ಮರದವರೆಗೆ ಈ ಕ್ರಿಯೆ ಸರ್ವೆಸಾಧಾರಣವಾಗಿ ನಡೆಯುತ್ತದೆ, ಇನ್ನೂ ಮೈತುಂಬ ಎಲೆಯ ಅಂಶವನ್ನೇ ಹೊಂದಿರುವ ಸೊಪ್ಪುಗಳ ಶ್ರೀಮಂತಿಕೆಯೇ ಬೇರೆ. ಅವುಗಳು ಮೈತುಂಬಿಕೊಂಡಿರುವ ಜೀವಸತ್ವಗಳಿಂದಾಗಿ ಪ್ರಕೃತಿಯಲ್ಲಿ ಅವುಗಳಿಗೆ ಮಹತ್ವದ ಸ್ಥಾನವಿದೆ.


ಪ್ರಕೃತಿಯು ಬಡವ, ಶ್ರೀಮಂತರೆಲ್ಲರಿಗೂ ಸಮಾನವಾಗಿ ದೊರೆಯುವಂತೆ ನೀಡಿರುವ ಅಮೃತ ಆಹಾರವೇ ಸೊಪ್ಪುಗಳು. ನಮ್ಮ ಸುತ್ತ ಮುತ್ತ ಬೆಳೆಯುವ, ಮನುಷ್ಯರು ತಿನ್ನಬಹುದಾದ ಸೊಪ್ಪುಗಳನ್ನು ಗುರುತಿಸುವ ತಿಳಿವಳಿಕೆ ಇತ್ತೀಚಿನ ತಲೆಮಾರಿನವರಲ್ಲಿ ಕಡಿಮೆಯಾಗುತ್ತಿದೆಯಷ್ಟೇ. ತಿನ್ನುವ ಸೊಪ್ಪುಗಳನ್ನು ಗುರುತಿಸುವುದು, ಅವುಗಳಿಗಿರುವ ಹೆಸರು ಗುರುತಿಸುವುದು, ಅವುಗಳಿಗಿರುವ ಔಷಧೀಯ ಗುಣಗಳನ್ನು ಹೇಳಿಕೊಡುವುದು ಅದೊಂದು ಅಸಾಧಾರಣವಾದ ಜ್ಞಾನ ಜಗತ್ತು. ಅಹಾರವಾಗಿ ಔಷಧಿಯಾಗಿ ಸೊಪ್ಪುಗಳ ಗುಣಗಳನ್ನು ಗುರುತಿಸುವ ಮಟ್ಟದ ಅರಿವು ಇಂದು ಕೆಲವೇ ಮಂದಿಗೆ ಮಾತ್ರ ಸೀಮಿತವಾಗಿದೆ. ಮನುಷ್ಯರಿಗಾಗಲಿ, ಪ್ರಾಣಿಗಳಿಗಾಗಲಿ ಬಂದ ಆರೋಗ್ಯ ಸಮಸ್ಯೆಗಳಿಗೆ, ತುರ್ತು ಚಿಕಿತ್ಸೆಗೆ ಒದಗುತ್ತಿದ್ದ ಔಷಧಿ ಎಂದರೆ ಸೊಪ್ಪುಗಳು ಮಾತ್ರ. ಹಾಗಾಗಿಯೇ ತ್ರೇತಾಯುಗದಲ್ಲಿ ಹನುಮಂತ ತಂದು ಕೊಟ್ಟ ಸಂಜೀವಿನಿ ಸಸ್ಯವಿರಬಹುದು, ಆಯುರ್ವೇದ ಕಂಡುಕೊಂಡ ಗಿಡಮೂಲಿಕೆಗಳಿರಬಹುದು ಎಲ್ಲದರ ಮೂಲ ಈ ಸೊಪ್ಪುಗಳೇ! ಆಹಾರವಾಗಿ ಬಳಸದ ಹಲವು ಸೊಪ್ಪುಗಳು ಔಷಧಿಯಾಗಿ ದೇಹದ ಒಳಗಿನ ಹಾಗೂ ಹೊರಗಿನ ಚಿಕಿತ್ಸೆಗೆ ಬಳಕೆಯಾಗುತ್ತಿವೆ.


ಹಿಂದಿನಿAದಲೂ ಹಳ್ಳಿ ಗಳಲ್ಲಿ ಹೊಲಕ್ಕೆ ಹೋದ ರೈತ ಮಹಿಳೆಯರು ಕಂಡ ಸೊಪ್ಪುಗಳನ್ನೆಲ್ಲ ಕಿತ್ತು ಸೀರೆಯ ಮಡಿಲಲ್ಲಿ ಹಾಕಿಕೊಂಡು ಸಂಜೆಯ ವೇಳೆಗೆ ಹತ್ತಾರು ಬಗೆಯ ಸೊಪ್ಪುಗಳನ್ನು ಸಂಗ್ರಹಿಸುತ್ತಿದ್ದರು. ಪೌಷ್ಟಿಕವಾದ, ರುಚಿಯಾದ ಈ ‘ಬೆರಕೆ ಸೊಪ್ಪು’ ಎಂಬ ಅಮೃತವನ್ನು ನಾವು ಇಂದು ಕಳೆದುಕೊಂಡಿದ್ದೇವೆ. ಬದಲಿಗೆ, ಕೊಳಚೆ ನೀರು ಬಳಸಿ, ಔಷಧಿ ಸಿಂಪಡಿಸಿ, ರಾಸಾಯನಿಕ ಗೊಬ್ಬರ ಹಾಕಿ ಬೆಳೆದ ನಳನಳಿಸುವ ಸೊಪ್ಪುಗಳತ್ತ ಆಕರ್ಷಿತರಾಗಿದ್ದೇವೆ. ಇಂದಿನ ಸೊಪ್ಪು ಮನೆಗೆ ಬರುವಾಗಲೇ ಮೈಮೇಲೆ, ಮೈಯೊಳಗೆಲ್ಲ ಹಲವು ಬ್ಯಾಕ್ಟೀರಿಯಾ ಮತ್ತು ವಿಷಗಳನ್ನು ಮೈತುಂಬಿಕೊAಡೇ ಬರುತ್ತವೆ. ಎಷ್ಟು ತೊಳೆದರೂ ಅದು ಸಂಪೂರ್ಣ ಶುದ್ಧವಾಗುವ ಪ್ರಶ್ನೆಯೇ ಇಲ್ಲ.


ಇನ್ನೊಂದೆಡೆ ಹಳ್ಳಿಗಳಲ್ಲಿ, ಜಮೀನಿನ ಒಳಗೇ ಮನೆ ಕಟ್ಟಿಕೊಂಡು ವಾಸಿಸುತ್ತಿದ್ದರೂ ಮನೆಗೆ ಬೇಕಾದ ಒಂದೆರಡು ಬಗೆಯ ಸೊಪ್ಪುಗಳನ್ನು ಬೆಳೆದುಕೊಳ್ಳುವ ಸಂಯಮ ಇತ್ತೀಚೆಗೆ ಬಹುತೇಕ ಹಳ್ಳಿಗರಲ್ಲೂ ಇಲ್ಲವಾಗಿದೆ. ನೀರಿಲ್ಲ, ಸಮಯವಿಲ್ಲ, ಸೊಪ್ಪೇ ಸರಿಯಾಗಿ ಬೆಳೆಯುವುದಿಲ್ಲ ಎಂಬ ಹಲವು ನೆಪಗಳು ಬಾಯಿ ತುದಿಯಲ್ಲೇ ಇವೆ. ಹಾಗಾಗಿ. ಸೊಪ್ಪು, ತರಕಾರಿಗೂ ಪಟ್ಟಣಗಳತ್ತ ಮುಖ ಮಾಡುವ ಕೆಟ್ಟ ಸಂಸ್ಕೃತಿ ಈಗಾಗಲೇ ಹಳ್ಳಿಗಳಿಗೂ ವ್ಯಾಪಿಸಿದೆ. ತಮ್ಮ ಹೊಲ, ಹಿತ್ತಲಲ್ಲಿ ಬೆಳೆಯುವ ಸಹಜವಾದ, ನೈಸರ್ಗಿಕವಾದ ಸೊಪ್ಪುಗಳಿಗಿಂತ ಪಟ್ಟಣಗಳಲ್ಲಿ ಮಾರಾಟ ಮಾಡುವ ಸೊಪ್ಪುಗಳೇ ಆಕರ್ಷಕ ಎನಿಸುತ್ತಿವೆ. ನೋಡಲು ಚೆನ್ನಾಗಿ ಕಾಣುವ ಸೊಪ್ಪು, ತರಕಾರಿಗಳನ್ನು ಶ್ರೇಷ್ಠವೆಂದು ನಂಬುವ ನಗರದ ಮನೋಭಾವ ಹಳ್ಳಿಗಳಲ್ಲೂ ಬೆಳೆಯುತ್ತಿದೆ. “ವಾಸ್ತವವಾಗಿ ಹುಳುಕುಗಳಿಲ್ಲದ, ದಷ್ಟಪುಷ್ಟವಾಗಿ ಬೆಳೆದ ತರಕಾರಿಯಾಗಲಿ, ಸೊಪ್ಪುಗಳಾಗಲಿ ಸ್ವಾಭಾವಿಕವಾಗಿ ಬೆಳೆದಿರುವುದಿಲ್ಲ. ಹಾಗಾಗಿ ಅಂಗಡಿಯಲ್ಲಿ ಸಾಧಾರಣವಾಗಿ, ನಿಸ್ತೇಜವಾಗಿರುವ ತರಕಾರಿಗಳನ್ನೇ ಆಯ್ಕೆ ಮಾಡಿಕೊಳ್ಳಬೇಕು” ಎಂಬುದು ಶ್ರೀ ಪಾಸಿಟೀವ್ ತಮ್ಮಯ್ಯ ಅವರ ಸಲಹೆ.


ಸೊಪ್ಪುಗಳು ಖನಿಜಾಂಶಗಳ ಭಂಡಾರ. ಕ್ಯಾಲ್ಸಿಯಂನ ಸಮೃದ್ಧ ಮೂಲ ಆಹಾರ. ಇವು ದೇಹದ ಸಮತೋಲನವನ್ನು ಕಾಪಾಡುವ ಸಂಪೂರ್ಣ ಆಹಾರ. ಒಂದೊಂದು ಸೊಪ್ಪೂ ಒಂದೊಂದು ಔಷಧೀಯ ಗುಣವನ್ನು ಹೊಂದಿದೆ. ಕೆಲವು ಆಹಾರ ಸಮಸ್ಯೆಗಳಿಗೆ ಸೊಪ್ಪು ಪಥ್ಯ ಆಹಾರವಾಗಿಯೂ ಕೆಲಸ ಮಾಡುತ್ತದೆ. ಹಾಗಾಗಿ, ಸೊಪ್ಪು ಆಹಾರವೂ ಹೌದು, ಔಷಧಿಯೂ ಹೌದು. ರಕ್ತಹೀನತೆ, ಮಲಬದ್ಧತೆ, ಮಧುಮೇಹದಂತಹ ಕೆಲವು ಸಮಸ್ಯೆಗಳಿಗೆ ರ್ದೀರ್ಘಕಾಲೀನ ಪಥ್ಯವಾಗಿ ಸೊಪ್ಪುಗಳನ್ನು ಪ್ರತೀದಿನ ಬಳಸುವುದರಿಂದ ಸಮಸ್ಯೆ ನಿವಾರಣೆಯಾಗುತ್ತದೆ ಎಂಬುದು ಪ್ರಕೃತಿ ಚಿಕಿತ್ಸಾ ತಜ್ಞರಾದ ಶ್ರೀ ಗಿರಿರಾಜು ಅವರ ಅಭಿಪ್ರಾಯವಾಗಿದೆ.


ನಾವು ತಿನ್ನಬಹುದಾದ ಸೊಪ್ಪುಗಳ ಪಟ್ಟಿ ದೊಡ್ಡದು. ಕೆಲವು ಸಣ್ಣ ಸಸ್ಯರೂಪದವಾದರೆ, ಮತ್ತೆ ಕೆಲವು ಗಿಡಮರಗಳಲ್ಲಿ ಬೆಳೆಯುವಂಥವು. ಕೀರೆ, ಕಿಲಕೀರೆ, ದಂಟು, ಮೆಂತ್ಯ, ಸಬ್ಬಸಿಗೆ, ಪಾಲಾಕ್, ದೊಡ್ಡಪತ್ರೆ, ಪುದಿನ, ಕರಿಬೇವು, ನುಗ್ಗೆ, ಬಸಳೆ, ಚಕ್ರಮುನಿ, ಕೊಮ್ಮೆ, ಗಣಕೆ, ಹೊನ್ನಗೊನೆ, ತುಳಸಿ, ಗರಿಕೆ, ಮೂಲಂಗಿ, ಚಕ್ಕೋತ, ಈರುಳ್ಳಿ … ಹೀಗೆ ಹಲವು ಪ್ರಸಿದ್ಧವಾದ ಸೊಪ್ಪುಗಳಿವೆ. ಇತ್ತೀಚೆಗೆ ಸೊಪ್ಪುಗಳಲ್ಲಿ ಹಲವಾರು ಹೈಬ್ರಿಡ್ ತಳಿಗಳು ಅನ್ವೇಷಣೆಯಾಗಿದ್ದು ಗಾತ್ರದಲ್ಲಿ ದೊಡ್ಡದಾಗಿ, ನೋಡಲು ಆಕರ್ಷಕವಾಗಿ ಕಾಣುತ್ತವೆ. ನಮ್ಮಲ್ಲಿ ಹಲವರಿಗೆ ಇಂದಿಗೂ ದೇಸೀ (ನಾಟಿ)ಸೊಪ್ಪುಗಳನ್ನು ಗುರುತಿಸಲು ಬರುವುದಿಲ್ಲವಾಗಿ ಮಾರಾಟ ಮಾಡುವವರು ನಾಟಿ ಸೊಪ್ಪು ಎಂದು ಹೇಳಿದ್ದನ್ನೇ ತಂದು ಬಳಸುತ್ತಿದ್ದಾರೆ.


ಇಂದಿಗೂ ರಾಸಾಯನಿಕಗಳ ಸೋಂಕಿಲ್ಲದೆ ಸಹಜವಾಗಿ ಸರ್ವಋತುಗಳಲ್ಲೂ ಬೆಳೆಯುವ ನುಗ್ಗೆ, ಅಗಸೆ, ಬಸಳೆಯಂತಹ ಸಹಜ ದೇಸೀ ಸೊಪ್ಪುಗಳು ನಮ್ಮ ಸುತ್ತ ಮುತ್ತ ಇವೆ. ಅವುಗಳ ಬಳಕೆಗೆ ಮನಸ್ಸು ಮಾಡಬೇಕಿದೆ. ೧೦೦ ಗ್ರಾಂ ನುಗ್ಗೆ ಸೊಪ್ಪು ೧೨ ಕೋಳಿ ಮೊಟ್ಟೆಗಳ ಪೋಷಕಾಂಶಕ್ಕೆ ಸಮ! ಇದು ಸಂಧಿವಾತ, ಅಜೀರ್ಣದಂತಹ ಸಮಸ್ಯೆಗೆ ಪರಿಣಾಮಕಾರಿ ಔಷಧಿ. ಪ್ರತೀ ಮನೆಯ ಅಕ್ಕ ಪಕ್ಕದಲ್ಲಿ ಒಂದೆರಡು ನುಗ್ಗೆಗಿಡ ಬೆಳೆಸಿ, ಸಾಧ್ಯವಾದಾಗಲೆಲ್ಲ ಬಳಸಿ ಎಂಬುದು ಹಿರಿಯರ ಅನುಭವದ ಮಾತು. ಆದರೆ, ಇತ್ತೀಚೆಗೆ ಮನೆಯ ಹಿತ್ತಲಲ್ಲಿ ಬೆಳೆಸಬೇಕಾದ ಅಮೃತ ಸಮಾನವಾದ ನುಗ್ಗೆಯೂ ವಾಸ್ತು ದೋಷಕ್ಕೆ ಗುರಿಯಾಗಿ ಮನೆಯ ಕೆಲವು ಭಾಗಗಳಲ್ಲಿ ನುಗ್ಗೆ ಬೆಳೆಯಬಾರದು ಎಂಬ ಅಜ್ಞಾನವೂ ಕೆಲವರಲ್ಲಿ ಮನೆ ಮಾಡಿದ್ದು ಆಕಸ್ಮಾತ್ ಬೆಳೆದಿರುವವರಿಗೆ ಪುಕ್ಕಟ್ಟೆ ಸಲಹೆ ನೀಡಿ ತಮ್ಮ ಜ್ಞಾನ ಪ್ರದರ್ಶಿಸುತ್ತಾರೆ! ಪ್ರಕೃತಿಯಲ್ಲಿರುವ ಎಲ್ಲ ಸಸ್ಯಗಳೂ ಜೀವಪರವಾದವು. ಅವುಗಳಲ್ಲಿ ಶುಭ ಅಶುಭಗಳಿಲ್ಲ. ಅದೆಲ್ಲ ನಮ್ಮ ಮನಸ್ಸಿನ ಕೊಳಕು ಎಂಬುದು ಅರಿವಾಗಬೇಕಿದೆ.


ಅಗಸೆ ಸೊಪ್ಪು ಹೊಟ್ಟೆಗೆ ಸಂಬಂಧಿಸಿದ ಹಲವು ಸಮಸ್ಯೆಗಳಿಗೆ ದಿವ್ಯೌಷಧ. ‘ಅಗಸ ಬಟ್ಟೆ ಶುಚಿಗೊಳಿಸಿದಂತೆ ಅಗಸೆ ಹೊಟ್ಟೆ ಶುಚಿಗೊಳಿಸುತ್ತದೆ’ ಎಂದು ಈ ಸೊಪ್ಪನ್ನು ನಮ್ಮ ಹಿರಿಯರು ಗೌರವಿಸಿದ್ದಾರೆ. ವಿಶೇಷವಾಗಿ ಅಜೀರ್ಣ, ಗ್ಯಾಸ್ಟ್ರಿಕ್ ಸಮಸ್ಯೆಗಳಿಗೆ ಅಗಸೆ ಸೊಪ್ಪಿನ ರಸ ಉತ್ತಮ ಔಷಧ. ಅಗಸೆಯ ಎಲೆ, ಕಾಂಡ, ಕಾಯಿ, ಬೀಜ ಎಲ್ಲವೂ ಬಲಕೆಗೆ ಯೋಗ್ಯವಾಗಿದ್ದು ಇದೂ ಒಂದು ರೀತಿಯಲ್ಲಿ ಕಲ್ಪವೃಕ್ಷವಿದ್ದಂತೆ. ಉಪವಾಸದ ಮರುದಿನ ಅಗಸೆ ಸೊಪ್ಪು ಬಳಸುವ ಅಭ್ಯಾಸ ಇದೆ. ಅಗಸೆ ಸೊಪ್ಪನ್ನು ಕಿತ್ತು ಒಂದೆರಡು ದಿನ ಬಾಡಿಸಿ ಬಳಸುವುದು ಉತ್ತಮ. ನೇರವಾಗಿ ಪಲ್ಯ, ಸಾಂಬರ್‌ಗೆ ಬಳಸುವುದರ ಜೊತೆಗೆ ಒಣಗಿಸಿ ಪುಡಿ ಮಾಡಿ ಕಷಾಯ ರೂಪದಲ್ಲಿ ಬಳಸಬಹುದು.


ಕೊತ್ತಂಬರಿಯು ಸೊಪ್ಪುಗಳ ರಾಜನಿದ್ದಂತೆ. ಅದು ಕೇವಲ ಪರಿಮಳಕ್ಕಾಗಿ ಬಳಸುವ ಸೊಪ್ಪಲ್ಲ. ಇದರ ಎಲೆಗಳು ಆಂಟಿಮೈಕ್ರೋಬಿಯಲ್ ಗುಣಲಕ್ಷಣಗಳನ್ನು ಹೊಂದಿದ್ದು, ಆಹಾರದಿಂದ ಹರಡುವ ರೋಗಕಾರಕಗಳ ವಿರುದ್ಧ ಹೋರಾಡುತ್ತದೆ. ಅಲ್ಲದೆ, ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡಲು, ರೋಗನಿರೋಧಕ ಶಕ್ತಿ ಹೆಚ್ಚಿಸಲು, ಮೂಳೆಗಳನ್ನು ಬಲಪಡಿಸಲು, ಕರುಳು, ಚರ್ಮ ಮತ್ತು ಹೃದಯದ ಆರೋಗ್ಯಕ್ಕೂ ಉತ್ತಮ ಸೊಪ್ಪು ಎಂಬ ಕೀರ್ತಿ ಕೊತ್ತಂಬರಿಗಿದೆ. ರಕ್ತದಲ್ಲಿನ ಸಕ್ಕರೆಯ ಅಂಶವನ್ನು ಗಣನೀಯವಾಗಿ ಕಡಿಮೆ ಮಾಡುವ ಗುಣವನ್ನೂ ಹೊಂದಿದೆ. ಇನ್ನು ಸರ್ವರೋಗಕ್ಕೂ ಮದ್ದು ಎನಿಸಿರುವ ಬಸಳೆ ಸೊಪ್ಪು ರಕ್ತವೃದ್ಧಿ, ನೆನಪಿನ ಶಕ್ತಿ ವೃದ್ಧಿಯಂತಹ ಮಹತ್ವದ ಔಷಧೀಯ ಗುಣವುಳ್ಳದ್ದು. ಗರಿಕೆ, ಕರಿಬೇವು, ನುಗ್ಗೆ ಇವು ಖನಿಜಾಂಶಗಳ ತವರು.


ಹೀಗೆ ಪ್ರತಿಯೊಂದು ಸೊಪ್ಪಿಗೂ ಅದರದೇ ಆದ ವೈಶಿಷ್ಟ್ಯತೆಗಳಿವೆ. ಅದರ ಲಾಭಗಳಿವೆ. ನಮ್ಮ ಸುತ್ತಮುತ್ತ ಮತ್ತು ಕಾಡಿನಲ್ಲಿ ವಾಸಿಸುತ್ತಿರುವ ಬಹುತೇಕ ಜೀವಿಗಳ ಪ್ರಧಾನ ಆಹಾರ ಮತ್ತು ಔಷಧಿ ಸೊಪ್ಪು. ಆನೆಯಂತಹ ಬಲಿಷ್ಠ ಜೀವಿಯ ಆಹಾರ ಸೊಪ್ಪು ಎಂದರೆ ಈ ಸೊಪ್ಪುಗಳ ಮಹತ್ವ ಸುಲಭವಾಗಿ ಅರಿವಿಗೆ ಬಂದೀತು! ಸೊಪ್ಪುಗಳ ಬಗ್ಗೆ ಆಸಕ್ತಿ ಬಂದರೆ ಇಂದಿನ ಮಾಹಿತಿ ಯುಗದಲ್ಲಿ ಹೆಚ್ಚು ಮಾಹಿತಿ ತಿಳಿದುಕೊಳ್ಳುವುದು ಕಠಿಣವೇನಲ್ಲ. ಇಂದಿನ ಮಕ್ಕಳು, ಯುವ ಜನಾಂಗ ಸೊಪ್ಪುಗಳ ಬಗ್ಗೆ ತಾತ್ಸಾರ ಬೆಳೆಸಿಕೊಂಡಿರುವ ಕಾರಣವೂ ಇಂತಹ ಅರಿವಿನ ಕೊರತೆಯೇ ಆಗಿದೆ. ಪೋಷಕರು ಅಂತಹ ಅರಿವು ಮೂಡಿಸುವ ಮೂಲಕ ಸೊಪ್ಪುಗಳ ಪರಂಪರೆಯನ್ನು ಮುಂದುವರಿಸಬೇಕಾಗಿದೆ. ಇಲ್ಲದಿದ್ದರೆ ಅಂಗಡಿಯಲ್ಲಿ ಮಾರುವ ಸೊಪ್ಪುಗಳನ್ನಷ್ಟೇ ತಿನ್ನಬೇಕು ಎಂಬ ಸೀಮಿತ ವಿಚಾರ ಮುಂದಿನ ತಲೆಮಾರಿನವರದಾಗುತ್ತದೆ. ಸೊಪ್ಪಿನಿಂದ ಬಗೆಬಗೆಯ ವಿನೂತನವಾದ ಖಾದ್ಯಗಳನ್ನು ಮಾಡಬಹುದಾಗಿದ್ದು, ಹೊಸ ಪ್ರಯೋಗಗಳ ಮೂಲಕ ಮತ್ತಷ್ಟು ಬಳಕೆಯ ಸಾಧ್ಯತೆಗಳನ್ನು ಕಂಡುಕೊಳ್ಳಬಹುದಾಗಿದೆ. ಆ ಮೂಲಕ ಹೊಸ ತಲೆಮಾರಿನ ಮಕ್ಕಳಿಗೂ ಸೊಪ್ಪು ಹಿತವೆನಿಸುವಂತೆ ಮಾಡಬಹುದಾಗಿದೆ.
ಪ್ರತೀ ಸೊಪ್ಪಿನಲ್ಲೂ ಹಲವು ಪೋಷಕಾಂಶಗಳಿದ್ದು ಪ್ರತಿಯೊಬ್ಬರ ದೇಹದ ಅಗತ್ಯಕ್ಕೆ ತಕ್ಕಂತೆ ಅನುಕೂಲತೆಯನ್ನು ಒದಗಿಸುತ್ತವೆ. ಎಲ್ಲ ಸೊಪ್ಪುಗಳಲ್ಲಿಯೂ ಇರುವ ಸಾಮಾನ್ಯ ಅಂಶವೆಂದರೆ, ಕಬ್ಬಿಣ ಮತ್ತು ನಾರಿನ ಅಂಶಗಳು. ಇವು ನಮ್ಮ ಆರೋಗ್ಯಕ್ಕೆ ಬೇಕಾದ ಮೂಲ ಸರಕುಗಳು.


ವಿಶೇಷವೆಂದರೆ, ಒಂದು ಕಡೆ ಅಡುಗೆಗೆ ಬಳಸದ ಸೊಪ್ಪನ್ನು ಇನ್ನೊಂದು ಕಡೆ ಬಳಸಲಾಗುತ್ತದೆ. ಅವೆಲ್ಲವನ್ನು ಪರಿಚಯಿಸಿಕೊಂಡರೆ ನಮ್ಮ ಸುತ್ತಮುತ್ತ ಇರುವ ಬಹುತೇಕ ಸೊಪ್ಪುಗಳನ್ನು ತಿನ್ನಲು ಉಪಯೋಗಿಸಬಹುದಾಗಿದೆ. ಸೊಪ್ಪುಗಳ ಸುಂದರ ಲೋಕವನ್ನು ಪರಿಚಯಿಸಿಕೊಂಡು ಇನ್ನೂ ಹೆಚ್ಚಿನ ಪ್ರಯೊಜನ ಪಡೆದುಕೊಳ್ಳಬೇಕಾಗಿದೆ. ಸೊಪ್ಪುಗಳ ಇನ್ನೊಂದು ಸದ್ಗುಣವೆಂದರೆ ಯಾವುದೇ ಸೊಪ್ಪುಗಳನ್ನು ಕಿತ್ತು ತಿನ್ನುವುದರಿಂದ ಪರಿಸರಕ್ಕಾಗಲಿ, ಜೀವಿಗಳಿಗಾಗಲಿ ಯಾವುದೇ ನಷ್ಟವಿಲ್ಲ. ಬದಲಿಗೆ ಕಿತ್ತಷ್ಟು ಮತ್ತಷ್ಟು ಸಮೃದ್ಧವಾಗಿ ಬೆಳೆಯುವ ಗುಣ ಮತ್ತು ಮೌಲ್ಯವನ್ನು ಸೊಪ್ಪುಗಳಿಂದ ನಾವೂ ಕಲಿಯಬೇಕಾಗಿದೆ.

 ಡಾ. ನೀಗೂ ರಮೇಶ್
ಕವಿ ಮತ್ತು ಅಂಕಣಕಾರರು
೮೨೯೬೬ ೯೮೮೦೧

Related posts

ಪ್ರಧಾನಿಯಾಗಿ 8931 ದಿನಗಳ ಕಾಲ ಆಡಳಿತ ನಡೆಸಿದ ಮೋದಿ

ಸಾರ್ವಜನಿಕರಿಗೆ ಕ್ಷಯರೋಗ (ಟಿ.ಬಿ) ಕುರಿತು ಅರಿವು ಕಾರ್ಯಕ್ರಮ ಅಗತ್ಯ : ಡಾ. ಕುಮಾರ

ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ಅಭಿವ್ಯಕ್ತಿ ಸ್ವಾತಂತ್ರ್ಯಇದೆ: ಪ್ರಿಯಾಂಕಾ ಗಾಂಧಿ

Leave a Comment