ಪಾಲನೆ ನ್ಯೂಸ್
* ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು*

ಆದಿ ಜಗದ್ಗುರು ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳ 1066 ನೇ ಜಯಂತಿ ಮಹೋತ್ಸವ ಮಳವಳ್ಳಿಯಲ್ಲಿ ನಡೆಯುತ್ತಿರುವುದು ಮಳವಳ್ಳಿ ಜನತೆಯ ಭಾಗ್ಯ. ಮಳವಳ್ಳಿ ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ಬರೆದಿಡಬೇಕಾದ ಕಾರ್ಯಕ್ರಮ ಇದಾಗಿದೆ. ಆದಿ ಜಗದ್ಗುರು ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳು ಲೋಕ ಕಲ್ಯಾಣಕ್ಕಾಗಿ ಮಾಡಿದ ಕಾರ್ಯಗಳು ನಿರಂತರವಾಗಿ ನಡೆಯಬೇಕು ಎಂದು ಸುತ್ತೂರು ಜಗತ್ ಗುರು ಶ್ರೀ ವೀರ ಸಿಂಹಾಸನ ಮಹಾ ಸಂಸ್ಥಾನಧೀಶರಾದ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು ಹೇಳಿದರು.
ಮಂಗಳವಾರ ಮಳವಳ್ಳಿಯಲ್ಲಿ ಆಯೋಜಿಸಲಾಗಿದ್ದ ಆದಿ ಜಗದ್ಗುರು ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳ 1066 ನೇ ಜಯಂತಿ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಆದಿ ಜಗದ್ಗುರು ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳ ಜಯಂತಿ ಮಹೋತ್ಸವ ನಾನ ಜಿಲ್ಲೆಗಳಲ್ಲಿ ನಡೆದುಕೊಂಡು ಬರುತ್ತಿದೆ. ಆದಿ ಜಗದ್ಗುರು ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳು ಸಾವಿರಾರು ವರ್ಷಗಳ ಹಿಂದೆ ಎರಡು ರಾಜ ಮನೆತನಗಳ ನಡುವೆ ಇದಂತಹ ವೈಷಮ್ಯವನ್ನು ಹೋಗಲಾಡಿಸಿ ಸಮಾರಸ್ಯದ, ಪ್ರೀತಿಯ, ಸ್ನೇಹದ ಬೀಜವನ್ನು ಬಿತ್ತಿ ನಾಡಿಗೆ ಕಲ್ಯಾಣ ತಂದವರು ಎಂದು ಹೇಳಿದರು.
ಅವರ ಹಾದಿಯಲ್ಲಿ ಬಂದಂತಹ ಎಲ್ಲಾ ಸುತ್ತೂರು ಮಠದ ಸ್ವಾಮಿಗಳು ಸುತ್ತೂರು ಮಠವನ್ನು ಮುನ್ನಡೆಸಿಕೊಂಡು ಬಂದಿದ್ದಾರೆ. ಸುಮಾರು 6 ವರ್ಷಗಳ ಹಿಂದೆಯೇ ಸದರಿ ಜಯಂತೋತ್ಸವ ಕಾರ್ಯಕ್ರಮ ಮಳವಳ್ಳಿಯಲ್ಲಿ ನಡೆಯಬೇಕಿತ್ತು ಆದರೆ ಕಾರಣಾಂತರಗಳಿಂದ ಸಾಧ್ಯವಾಗಿಲಿಲ್ಲ. ಬಹುಶಃ 6 ವರ್ಷಗಳ ಹಿಂದೆ ಆಗಿದ್ದರೆ ಇಂದು ರಾಷ್ಟ್ರಪತಿಗಳು ಸದರಿ ಕಾರ್ಯಕ್ರಮವನ್ನು ಉದ್ಘಾಟಿಸುತ್ತಿರಲಿಲ್ಲ ಇದು ದೈವ ಸಂಕಲ್ಪ ಎಂದರು.
ಕೇಂದ್ರ ಸಚಿವ ಹೆಚ್.ಡಿ. ಕುಮಾರ ಸ್ವಾಮಿ ಅವರಿಂದಲೇ ಮಳವಳ್ಳಿಯಲ್ಲಿ ಆದಿ ಜಗದ್ಗುರು ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳ 1066 ನೇ ಜಯಂತಿ ಮಹೋತ್ಸವ ಕಾರ್ಯಕ್ರಮ ನಡೆಯುತ್ತದೆ ಹಾಗೂ ರಾಷ್ಟ್ರಪತಿಗಳು ಆಗಮಿಸಲು ಅವರೇ ಕಾರಣ. ನರೇಂದ್ರ ಸ್ವಾಮಿ ಅವರು ಕಾರ್ಯಕ್ರಮವನ್ನು ತಮ್ಮ ಮನೆಯ ಕಾರ್ಯಕ್ರಮದಂತೆ ಮುತುವರ್ಜಿ ವಹಿಸಿ ಅಚ್ಚುಕಟ್ಟಾಗಿ ಕಾರ್ಯಕ್ರಮವನ್ನು ರೂಪಿಸಿದ್ದಾರೆ ಮಳವಳ್ಳಿಯ ಎಲ್ಲಾ ಸಂಘ ಸಂಸ್ಥೆಗಳೂ ಹಾಗೂ ಮುಖಂಡರುಗಳು ಸದರಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಜವಾಬ್ದಾರಿ ವಹಿಸಿದ್ದಾರೆ ಎಂದು ಹೇಳಿದರು.
ಯುಗಯುಗಾಂತರಗಳಲ್ಲಿ ಸಂತರು ತಮ್ಮ ಬುದ್ಧಿವಂತಿಕೆ ಮತ್ತು ಕರುಣೆಯ ಮೂಲಕ ಮಾನವೀಯತೆಯನ್ನು ಬೆಳಗಿಸಿದ್ದಾರೆ ನಿಜವಾದ ಶ್ರೇಷ್ಠತೆ ಅಧಿಕಾರ ಅಥವಾ ಸಂಪತ್ತಿನಲ್ಲಿಲ್ಲ, ಬದಲಿಗೆ ತ್ಯಾಗ, ಸೇವೆ ಮತ್ತು ಆಧ್ಯಾತ್ಮಿಕ ಬಲದಲ್ಲಿದೆ ಎಂಬುದನ್ನು ಅವರ ಜೀವನವು ನಮಗೆ ನೆನಪಿಸುತ್ತದೆ. ಅಂತಹ ಶ್ರೇಷ್ಠ ಸಂತರಲ್ಲಿ, ಆದಿ ಜಗದ್ಗುರು ಶ್ರೀ ಶಿವರಾತ್ರೀಶ್ವರ ಶಿವಯೋಗಿ ಮಹಾಸ್ವಾಮೀಜಿ ಸ್ಫೂರ್ತಿಯ ದೀಪವಾಗಿ ಬೆಳಗುತ್ತಾರೆ ಎಂದು ಭಾರತದ ಘನತ್ತೆವೆತ್ತ ರಾಷ್ಟ್ರಪತಿಗಳಾದ ದ್ರೌಪದಿ ಮುರ್ಮು ತಿಳಿಸಿದರು.
ಅವರು ಮಂಗಳವಾರ ಮಂಡ್ಯ ಜಿಲ್ಲೆಯ ಮಳವಳ್ಳಿಯಲ್ಲಿ ಆದಿ ಜಗದ್ಗುರು ಶ್ರೀ ಶಿವರಾತ್ರೀಶ್ವರ ಶಿವಯೋಗಿ ಮಹಾಸ್ವಾಮಿಜಿಯವರ 1066 ನೇ ಜಯಂತಿ ಆಚರಣೆಯನ್ನು ಉದ್ಘಾಟಿಸಿ ಮಾತನಾಡಿದರು. ಮಠದ ಮಾರ್ಗದರ್ಶನ ಮತ್ತು ಪೋಷಣೆಯಡಿಯಲ್ಲಿ ಜೆಎಸ್‌ಎಸ್ ಮಹಾವಿದ್ಯಾಪೀಠವು ಪ್ರಪಂಚಾದ್ಯಂತ ಭಾರತದ ವಿಶಿಷ್ಟ ಸಂಸ್ಥೆಗಳಲ್ಲಿ ಒಂದಾಗಿ ಹೊರಹೊಮ್ಮಿದೆ, ಇದು ಆರೋಗ್ಯ ರಕ್ಷಣೆ, ಮಹಿಳೆಯರ ಸಬಲೀಕರಣ, ಗ್ರಾಮೀಣ ಸಮುದಾಯಗಳನ್ನು ಉನ್ನತೀಕರಿಸುವುದು, ಸಂಸ್ಕೃತಿಯನ್ನು ಸಂರಕ್ಷಿಸುವುದು ಮತ್ತು ಸಮಗ್ರ ಸಮಾಜದ ಅಡಿಪಾಯವನ್ನು ಬಲಪಡಿಸುವಲ್ಲಿ ಯುವ ಮನಸ್ಸುಗಳನ್ನು ರೂಪಿಸುವಲ್ಲಿ ತೊಡಗಿಸಿಕೊಂಡಿದೆ ಎಂದರು.
ತ್ವರಿತ ಬದಲಾವಣೆ ಮತ್ತು ಅನಿಶ್ಚಿತತೆಯ ಯುಗದಲ್ಲಿ, 2047 ರ ವೇಳೆಗೆ ವೀಕ್ಷಿತ ಭಾರತದ ದೃಷ್ಟಿಕೋನದತ್ತ ಸಾಗುತ್ತಿರುವಾಗ, ಸಾಮಾಜಿಕ ಸಾಮರಸ್ಯ, ನೈತಿಕ ನಾಯಕತ್ವ, ಯುವ ಸಬಲೀಕರಣ ಮತ್ತು ಆಂತರಿಕ ಸ್ಥಿತಿಸ್ಥಾಪಕತ್ವವನ್ನು ಪೋಷಿಸಲು ಆಧ್ಯಾತ್ಮಿಕ ಮಾರ್ಗದರ್ಶನ ಅತ್ಯಗತ್ಯ ಜೊತೆಗೆ ತಂತ್ರಜ್ಞಾನದ ಶಕ್ತಿ ಮತ್ತು ಮೌಲ್ಯಗಳ ಬಲ ಎರಡೂ ನಮಗೆ ಅಗತ್ಯವಿದೆ. ಅಭಿವೃದ್ಧಿ ಹೊಂದಿದ ಆರ್ಥಿಕತೆ ಹೊಂದಲು ಭಾರತಕ್ಕೆ ನೈತಿಕ ಬುದ್ಧಿವಂತಿಕೆಯೊಂದಿಗೆ ಆಧುನಿಕ ಶಿಕ್ಷಣದ ಏಕೀಕರಣ, ಪರಿಸರ ಜವಾಬ್ದಾರಿಯೊಂದಿಗೆ ನಾವೀನ್ಯತೆ, ಸಾಮಾಜಿಕ ಸೇರ್ಪಡೆಯೊಂದಿಗೆ ಆರ್ಥಿಕ ಬೆಳವಣಿಗೆ ಮತ್ತು ಸಹಾನುಭೂತಿಯೊಂದಿಗೆ ಪ್ರಗತಿಯ ಅಗತ್ಯವಿದೆ. ಭಾರತ ಸರ್ಕಾರವು ಈ ಸಮಗ್ರ ದೃಷ್ಟಿಕೋನದೊಂದಿಗೆ ಕಾರ್ಯನಿರ್ವಹಿಸುತ್ತಿದೆ. ಸುತ್ತೂರು ಮಠದಂತಹ ಸಂಸ್ಥೆಗಳು ಈ ರಾಷ್ಟ್ರೀಯ ಪ್ರಯತ್ನದಲ್ಲಿ ಗಣನೀಯ ಪಾತ್ರವನ್ನು ವಹಿಸಲಿದೆ.
ಭಾರತದ ಭವಿಷ್ಯವು ಅವರ ಕೌಶಲ್ಯ ಮತ್ತು ಜ್ಞಾನದಿಂದ ಮಾತ್ರವಲ್ಲದೆ ಅವರ ನೈತಿಕತೆಯ ಪ್ರಜ್ಞೆಯಿಂದ ರೂಪುಗೊಳ್ಳುತ್ತದೆ. ಸುತ್ತೂರು ಮಠದಂತಹ ಸಂಸ್ಥೆಗಳು ಯುವ ಮನಸ್ಸುಗಳನ್ನು ಪ್ರೇರೇಪಿಸುವುದನ್ನು, ಜವಾಬ್ದಾರಿಯುತ ನಾಗರಿಕರನ್ನು ಪೋಷಿಸುವುದನ್ನು ಮತ್ತು ನಾಳಿನ ಭಾರತದ ವಾಸ್ತುಶಿಲ್ಪಿಗಳಿಗೆ ಮಾರ್ಗದರ್ಶನ ನೀಡುವುದನ್ನು ಮುಂದುವರಿಸಬೇಕೆಂದು ತಿಳಿಸಿದರು.
