ಹೊರೆಯಿಲ್ಲದೆ ಪೊರೆಯುವ ಸಂಜೀವಿನಿ.
ಪಾಲನೆ, ದ್ವಿಭಾಷಾ ಮಾಸಿಕ | ಸಂಪುಟ 4, ಸಂಚಿಕೆ 10
ನಮ್ಮಲ್ಲಿ ಚಾಲ್ತಿಯಲ್ಲಿರುವ ಹಲವು ಬಗೆಯ ಚಿಕಿತ್ಸಾ ಪದ್ಧತಿಗಳಲ್ಲಿ ಪ್ರಕೃತಿ ಚಿಕಿತ್ಸಾ ವಿಧಾನವೂ ಒಂದು. ಈ ವಿಧಾನವು ನಮ್ಮ ಜನಪದ ಮೂಲದಿಂದಲೇ ಹುಟ್ಟಿ ಬೆಳೆದಿರುವುದರಲ್ಲಿ ಯಾವ ಅನುಮಾನವೂ ಇಲ್ಲ. ಯಾವ ಚಿಕಿತ್ಸಾ ಸೌಲಭ್ಯಗಳು, ವೈದ್ಯಕೀಯ ಮಾರ್ಗದರ್ಶನಗಳು ಇರದೇ ಇದ್ದಾಗಲೂ ಗ್ರಾಮೀಣರು ಮತ್ತು ಜನಪದರು ತಮಗೆ ಗೊತ್ತಿದ್ದ ಪುರಾತನ ಶುಶ್ರುಷಾ ವಿಧಾನಗಳನ್ನೇ ಅನುಸರಿಸುತ್ತಾ ಬಂದಿದ್ದಾರೆ. ಆದರೆ, ವೈಜ್ಞಾನಿಕ ತಳಹದಿಯಲ್ಲಿ ಹೆಚ್ಚು ಶಿಸ್ತುಬದ್ಧವಾಗಿ ಪ್ರಕೃತಿ ಚಿಕಿತ್ಸಾ ವಿಧಾನವನ್ನು ಅನುಸರಿಸಿರುವುದು ಇತ್ತೀಚೆಗೆ. ಪ್ರಕೃತಿ ಚಿಕಿತ್ಸೆಯ ಮೂಲವನ್ನು ಹುಡುಕುತ್ತಾ ಹೋದಂತೆ ಇದು ನಮ್ಮನ್ನು ಪ್ರಾಚೀನ ಗ್ರೀಕ್ ಚಿಕಿತ್ಸಾ ಪದ್ಧತಿಗೆ ಕರೆದೊಯ್ಯುತ್ತದೆ. ಗ್ರೀಕ್‌ನ ಪ್ರಾಚೀನ ವೈದ್ಯ ಹಿಪ್ಪೊಕ್ರೆಟಿಸ್ ತನ್ನ ಬಳಿ ಬಂದ ರೋಗಿಗಳನ್ನು ಪ್ರಕೃತಿ ಚಿಕಿತ್ಸಾ ವಿಧಾನದ ಮೂಲಕವೇ ಉಪಚರಿಸುತ್ತಿದ್ದ ಎಂಬ ವಿವರಗಳಿವೆ. ಉತ್ತರ ಅಮೇರಿಕಾದಲ್ಲಿ ೧೬ ಮತ್ತು ೧೭ನೇ ಶತಮಾನಗಳಿಂದಲೇ ಹೆಚ್ಚು ವ್ಯಾಪಕ ಚಿಕಿತ್ಸಾ ಕ್ರಮವಾಗಿ ಬಳಕೆ ಮಾಡುತ್ತಾ ಬಂದಿರುವುದು ಕಂಡುಬರುತ್ತದೆ. ೧೮ನೇ ಶತಮಾನದಲ್ಲಿ ಜರ್ಮನಿ ಮತ್ತು ಆಸ್ಟ್ರೇಲಿಯಾಗಳಲ್ಲಿ ಕ್ರಮವನ್ನು ಅನುಸರಿಸಿದ್ದು ಕಂಡುಬರುತ್ತದೆ. ಜರ್ಮನಿಯ ವೈದ್ಯನಾದ ಜಾನ್ ಸ್ಕೀಲ್ ೧೮೯೫ರ ವೇಳೆಗೆ ಈ ಚಿಕಿತ್ಸಾ ಕ್ರಮಕ್ಕೆ ಒಂದು ಚೌಕಟ್ಟನ್ನು ರೂಪಿಸುವುದರೊಂದಿಗೆ ಮೊದಲಿಗೆ ‘ಪ್ರಕೃತಿ ಚಿಕಿತ್ಸೆ’ ಎಂದು ಕರೆಯುತ್ತಾನೆ. ಯುರೋಪಿನಲ್ಲಿ ಪ್ರಕೃತಿ ಚಿಕಿತ್ಸೆಯ ಬಗ್ಗೆ ತರಬೇತಿ ಪಡೆದು ಬಂದವರಿಂದ ಇದರ ಬಳಕೆಯ ಕ್ರಮಗಳು ಭಾರತದಲ್ಲಿ ನಂತರ ಪ್ರಚಾರಕ್ಕೆ ಬಂದಿರುವುದು ಕಂಡುಬರುತ್ತದೆ.
ಬ್ರಿಟಿಷ್ ನ್ಯಾಚುರೋಪತಿಕ್ ಅಸೋಶಿಯೇಷನ್‌ನವರು ಪ್ರಕೃತಿ ಚಿಕಿತ್ಸೆಯನ್ನು ಕುರಿತು ನೀಡಿರುವ ವ್ಯಾಖ್ಯಾನ ಈ ರೀತಿ ಇದೆ: “ಪ್ರಕೃತಿ ಚಿಕಿತ್ಸೆಯು ವ್ಯಕ್ತಿಯ ದೇಹವು ತನ್ನಲ್ಲೇ ಹೊಂದಿರುವ ರೋಗ ನಿರೋಧಕ ಶಕ್ತಿಯನ್ನು ಗುರುತಿಸಿ ರೋಗ ನಿವಾರಣೆಯಲ್ಲಿ ಪರಿಣಾಮಕಾರಿಯಾಗಿ ಬಳಸಿಕೊಳ್ಳುವ ಕ್ರಮವಾಗಿದೆ”. ಈ ವಿಧಾನದಲ್ಲಿ ರೋಗಕಾರಕ ಅಂಶಗಳನ್ನು ಮೊದಲು ಪತ್ತೆ ಮಾಡಲಾಗುತ್ತದೆ. ಅವುಗಳ ಉಪಶಮನಕ್ಕಾಗಿ, ದೇಹದಲ್ಲಿ ಈಗಾಗಲೇ ಶೇಖರಗೊಂಡಿರುವ ವಿಷಕಾರಕ ಅಂಶಗಳನ್ನು ಹೊರಹಾಕುವ ಕ್ರಿಯೆಗೆ ಆದ್ಯತೆ ನೀಡಲಾಗುತ್ತದೆ. ಪ್ರಕೃತಿಯಲ್ಲಿ ಮನುಷ್ಯನು ರೋಗ ನಿವಾರಿಸಿಕೊಂಡು ತನ್ನ ಸಹಜ ಚೈತನ್ಯವನ್ನು ಪಡೆದುಕೊಳ್ಳಲು ಸಾಧ್ಯವಿದೆ ಎಂಬುದನ್ನು ಪ್ರಕೃತಿ ಚಿಕಿತ್ಸಾ ವಿಧಾನ ನಂಬುತ್ತದೆ. ಪ್ರಕೃತಿಯಲ್ಲಿ ಮಾನವನನ್ನು ಹೊರತುಪಡಿಸಿ ಇತರೆಲ್ಲಾ ಜೀವಿಗಳು ಹೇಗೆ ಔಷಧಗಳ ಮೇಲಿನ ಅವಲಂಬನೆಯಿಲ್ಲದೆ ಬದುಕಬಲ್ಲವೋ ಹಾಗೆಯೇ ಮನುಷ್ಯನೂ ತನ್ನ ಆಹಾರವನ್ನೇ ಔಷಧವೆಂದು ಭಾವಿಸಿ ಸರಿಯಾದ ಆಹಾರವನ್ನು, ಸರಿಯಾದ ಕ್ರಮದಲ್ಲಿ ಸೇವಿಸುವುದರಿಂದಲೇ ಉತ್ತಮ ಆರೋಗ್ಯವನ್ನು ಹೊಂದಿ ಸದೃಢವಾಗಿ ಬದುಕಲು ಸಾಧ್ಯ ಎಂಬುದೇ ಪ್ರಕೃತಿ ಚಿಕಿತ್ಸೆಯ ಮೂಲ ತಿಳಿವಳಿಕೆಯಾಗಿದೆ.
ಆರೋಗ್ಯಕರವಾದ ಆಹಾರದ ಅಭ್ಯಾಸಗಳು ಮತ್ತು ಸರಳ ದೈಹಿಕ ಚಟುವಟಿಕೆಗಳ ಮೂಲಕ ಸ್ವಸ್ಥವಾದ ಆರೋಗ್ಯವನ್ನು ಹೊಂದಿ ಸಹಜವಾಗಿ ಮತ್ತು ಸಂತೋಷವಾಗಿ ಬದುಕುವುದು ಪ್ರಕೃತಿ ಚಿಕಿತ್ಸಾ ಕ್ರಮದ ಮೂಲ ಉದ್ದೇಶವಾಗಿದೆ. ನಮ್ಮ ಉತ್ತಮ ಜೀವನ ಶೈಲಿಯೇ ನಮ್ಮ ಆರೋಗ್ಯವನ್ನು ನಿರ್ಣಯಿಸುವ ಪ್ರಧಾನ ಸಂಗತಿಯಾಗುತ್ತದೆ. ಆದರೆ, ಅನಿರೀಕ್ಷಿತವಾಗಿ ನಾವು ರೋಗಗಳಿಗೆ ತುತ್ತಾದಾಗ ಯಾವುದೇ ರಾಸಾಯನಿಕ ಔಷಧಿಗಳನ್ನು ಬಳಸದೆ ಪ್ರಕೃತಿ ಮೂಲವಾದ ಸಾಮಗ್ರಿಗಳನ್ನೇ ಬಳಸಿ ರೋಗಿಯನ್ನು ಉಪಚರಿಸುವ ಕ್ರಮವಾಗಿದೆ. ನಿಸರ್ಗದತ್ತವಾಗಿ ಮನುಷ್ಯನಿಗೆ ಬಂದಿರುವ ಗುಣ ಹೊಂದುವ ಸಾಮರ್ಥ್ಯವನ್ನೇ ಬಳಸಿಕೊಂಡು ರೋಗಗಳಿಂದ ಮುಕ್ತವಾಗುವ ಕ್ರಮವೇ ಪ್ರಕೃತಿ ಚಿಕಿತ್ಸೆಯ ಮೂಲ ತಳಹದಿಯಾಗಿದೆ. ಚಿಕಿತ್ಸೆಯ ಕ್ರಮವಾಗಿ ಉತ್ತಮ ಗುಣಮಟ್ಟದ ಸಹಜ ಆಹಾರ ಸೇವನೆ, ಶುದ್ಧ ನೀರನ್ನು ಅವಶ್ಯವಿರುವಷ್ಟು ಸೇವಿಸುವುದು, ಸೂರ್ಯನ ಬೆಳಕಿಗೆ ಶರೀರವನ್ನು ಒಂದಷ್ಟು ಸಮಯ ಒಡ್ಡಿಕೊಳ್ಳುವುದು, ಸರಳ ಯೋಗ-ಪ್ರಾಣಾಯಾಮಗಳನ್ನು ಈ ವಿಧಾನದಲ್ಲಿ ಸೂಕ್ತ ರೀತಿಯಲ್ಲಿ ಬಳಕೆ ಮಾಡಲಾಗುತ್ತದೆ. ಇದು ಬಹಳ ವಿಶಾಲ ಅರಿವಿನ, ವ್ಯಾಪಕ ದೃಷ್ಟಿಕೋನದ ಆರೈಕೆಯ ಕ್ರಮವಾಗಿರುವುದರಿಂದ ವ್ಯಕ್ತಿ ಯಾವುದೇ ರೋಗದಿಂದ ಪೂರ್ಣ ಸ್ವರೂಪದಲ್ಲಿ ಗುಣವಾಗಲು ಸಾಧ್ಯವಿದೆ. ಪ್ರಕೃತಿಯ ಅಂಗವಾದ ಮನುಷ್ಯನಿಗೂ ಪಂಚಭೂತಗಳಾದ ಅಗ್ನಿ, ವಾಯು, ಆಕಾಶ, ಭೂಮಿ ಮತ್ತು ಜಲವೇ ಮೂಲವಾಗಿವೆ. ಈ ತತ್ವಗಳಲ್ಲಿ ಅಸಮತೋಲನ ಉಂಟಾದಾಗ ಮನುಷ್ಯ ರೋಗಗಳಿಗೆ ತುತ್ತಾಗುತ್ತಾನೆ. ಇವುಗಳನ್ನು ಸರಿಪಡಿಸಿಕೊಂಡರೆ ಸ್ವಸ್ಥನಾಗುತ್ತಾನೆ ಎಂಬುದನ್ನು ಪ್ರಕೃತಿ ಚಿಕಿತ್ಸಾ ತತ್ವ ಪ್ರಧಾನವಾಗಿ ನಂಬುತ್ತದೆ.
ಪ್ರಕೃತಿಯು ಭೂಮಿಯ ಮೇಲಿನ ಎಲ್ಲಾ ಚರಾಚರ ಜೀವಿಗಳಿಗೂ ಆಶ್ರಯ ನೀಡಿದ್ದು, ಅದೇ ನಮ್ಮನ್ನು ರಕ್ಷಿಸಬಲ್ಲುದಾಗಿದೆ. ಪ್ರಕೃತಿಯ ಸಹಜ ತತ್ವಗಳನ್ನು ಸರಿಯಾದ ಕ್ರಮದಲ್ಲಿ ಅನುಸರಿಸಿ ಬದುಕಿದರೆ ಮನುಷ್ಯ ಆನಂದ ಮತ್ತು ಆರೋಗ್ಯದ ಬದುಕನ್ನು ಬದುಕಲು ಸಾಧ್ಯವಿದೆ ಎಂಬುದು ಇಲ್ಲಿನ ಬಹಳ ದೊಡ್ಡ ತಿಳಿವಳಿಕೆ. ಏಕೆಂದರೆ ಪ್ರಕೃತಿಯಲ್ಲಿ ಮನುಷ್ಯರಷ್ಟೇ ಅಲ್ಲದೆ ವೈವಿಧ್ಯಮಯವಾದ ಇತರೆ ಜೀವಜಗತ್ತು ಪೊರೆಯಲ್ಪಡುತ್ತಿದೆ. ಎಂಥದೇ ವಿಷಮ ಪರಿಸ್ಥಿತಿಯಲ್ಲಿಯೂ ಇತರೆ ಜೀವಿಗಳು ಪರಿಸರದೊಂದಿಗೆ ಹೊಂದಿಕೊಂಡು ಬದುಕುತ್ತಾ ಬರುತ್ತಿವೆ. ಮನುಷ್ಯನೂ ಪ್ರಕೃತಿಯೊಂದಿಗೆ ತಾದಾತ್ಮವನ್ನು, ಹೊಂದಾಣಿಕೆಯನ್ನು ಸಾಧಿಸಿಕೊಂಡರೆ ಎಂತಹುದೇ ವಿಪತ್ತುಗಳು ಮತ್ತು ತೊಂದರೆಗಳಿಂದ ಬಚಾವಾಗಲು ಸಾಧ್ಯ ಎಂಬುದನ್ನು ಪ್ರಕೃತಿ ಚಿಕಿತ್ಸೆ ನಂಬುತ್ತದೆ.
ಇತ್ತೀಚಿಗೆ ಮನುಷ್ಯನ ಬೇಕಾಬಿಟ್ಟಿಯಾದ ಜೀವನಕ್ರಮಗಳು ಹಾಗೂ ಹದಗೆಟ್ಟ ಆರೋಗ್ಯ ಅಭ್ಯಾಸಗಳಿಂದಾಗಿ ಆತನಿಗೆ ಬರುವ ರೋಗಗಳಲ್ಲಿಯೂ ಅಗಾಧತೆ ಮತ್ತು ವೈವಿಧ್ಯತೆಗಳಿವೆ. ಇಂತಹ ರೋಗಗಳ ಮೂಲ ಗುಣ ಲಕ್ಷಣಗಳನ್ನು ಕಂಡುಹಿಡಿದು ಅವುಗಳಿಗೆ ತಕ್ಕುದಾದ ಚಿಕಿತ್ಸಾ ಕ್ರಮಗಳನ್ನು ಅನುಸರಿಸಬೇಕಾದರೆ ಒಂದಷ್ಟು ಸವಾಲುಗಳು ಎದುರಾಗುತ್ತವೆ. ಮೊದಲಿಗೆ ರೋಗ ಪತ್ತೆ, ಅದರ ತೀವ್ರತೆ, ದೇಹಕ್ಕೆ ಸಂಬಂಧಿಸಿದ ಸೂಕ್ಷ್ಮ ವಿಚಾರಗಳ ವಿಶ್ಲೇಷಣೆಗೆ ವಿಜ್ಞಾನದ ಸಹಾಯ ತೀರಾ ಅಗತ್ಯ. ದೇಹಕ್ಕೆ ಬೇಕಾದ ಪೋಷಕಾಂಶಗಳ ವಿವರಗಳು, ದೇಹದ ಒಳಭಾಗಗಳ ಕಾರ್ಯನಿರ್ವಹಣೆ, ದೇಹದ ರೋಗ ನಿರೋಧಕ ಶಕ್ತಿ, ದೇಹದ ಸ್ಥಿತಿಗತಿಗಳನ್ನು ಮೂಲಭೂತವಾಗಿ ತಿಳಿದುಕೊಳ್ಳುವ ಸಲುವಾಗಿ ಸಣ್ಣಪುಟ್ಟ ವೈಜ್ಞಾನಿಕ ಪರೀಕ್ಷಾ ವರದಿಗಳು ಬೇಕಾಗಬಹುದು. ಪ್ರಕೃತಿ ಚಿಕಿತ್ಸೆಯಲ್ಲಿಯೂ ವೈಜ್ಞಾನಿಕ ತಳಹದಿಯಲ್ಲಿಯೇ ರೋಗವನ್ನು ನಿವಾರಿಸಲು ಕ್ರಮವಹಿಸಲಾಗುತ್ತದೆ.
ಪ್ರಕೃತಿ ಚಿಕಿತ್ಸೆ ಎಂದಾಕ್ಷಣ ಯಾವುದೋ ಓಬಿರಾಯನ ಕಾಲದ ಚಿಕಿತ್ಸಾ ಕ್ರಮ ಎಂದು ಯಾರೂ ಮೂಗು ಮುರಿಯಬೇಕಾಗಿಲ್ಲ. ಇದೂ ಕೂಡ ತುಂಬಾ ಕ್ರಮಬದ್ಧವಾಗಿ ಮತ್ತು ವೈಜ್ಞಾನಿಕ ರೀತಿಯಲ್ಲಿ ಚಾಲನೆಗೊಳ್ಳುವ ಚಿಕಿತ್ಸಾ ಪದ್ಧತಿಯಾಗಿದೆ. ಮುಖ್ಯವಾದ ವ್ಯತ್ಯಾಸವೆಂದರೆ; ಪೃಕೃತಿಯ ಮೂಲ ತತ್ವವನ್ನು ಅನುಸರಿಸಿ, ನಿಸರ್ಗದಿಂದ ಮನುಷ್ಯನಿಗೆ ಸಿಗಬಹುದಾದ ಲಾಭಗಳನ್ನು ಪರಿಗಣಿಸುತ್ತಲೇ ಚಿಕಿತ್ಸೆಯನ್ನು ಒದಗಿಸಲಾಗುತ್ತದೆ. ಹಾಗೆಂದು ಪ್ರಕೃತಿ ಚಿಕಿತ್ಸೆ ಎಂಬ ಬ್ಯಾನರ್‌ನ ಅಡಿಯಲ್ಲಿ ಚಿಕಿತ್ಸೆ ನೀಡುತ್ತಿರುವವರೆಲ್ಲಾ ನೂರಕ್ಕೆ ನೂರರಷ್ಟು ಪ್ರಕೃತಿ ಚಿಕಿತ್ಸಾ ಪದ್ಧತಿಯನ್ನು ಕ್ರಮಬದ್ಧವಾಗಿ ಅನುಸರಿಸುತ್ತಾರೆ ಎಂದು ಹೇಳಲೂ ಸಾಧ್ಯವಿಲ್ಲ. ಇತ್ತೀಚೆಗೆ ಜನರ ಪರಿಸ್ಥಿತಿಯ ಲಾಭ ಪಡೆಯಲು ಸಾಕಷ್ಟು ಉಪಚಾರ ಕೇಂದ್ರಗಳು ಇದೇ ಹೆಸರಿನಲ್ಲಿ ಚಾಲನೆಗೊಳ್ಳುತ್ತಿವೆ. ಈ ಬಗ್ಗೆ ಸ್ಪಷ್ಟ ತಿಳಿವಳಿಕೆಯೊಂದಿಗೆ ಪ್ರಕೃತಿ ಚಿಕಿತ್ಸಾ ಕ್ರಮಗಳನ್ನು ಅಧಿಕೃತವಾಗಿ ಬಳಕೆ ಮಾಡುವವರ ಮೂಲಕ ಚಿಕಿತ್ಸೆ ಪಡೆದುಕೊಳ್ಳುವುದು ಅಗತ್ಯವಾಗಿದೆ. ಅದಕ್ಕಾಗಿ ಒಂದಷ್ಟು ಎಚ್ಚರ ನಮ್ಮಲ್ಲಿ ಇರಬೇಕಾಗುತ್ತದೆ. ಆದರೆ, ಆಸ್ಪತ್ರೆಗಳನ್ನು ಹುಡುಕಿ ಆಯ್ಕೆಮಾಡಲು, ಚಿಕಿತ್ಸೆ ಪಡೆದು ಸುಧಾರಿಸಿಕೊಳ್ಳಲು ಪಡಬೇಕಾದ ಶ್ರಮ ಇಲ್ಲಿ ಬೇಕಾಗಿಲ್ಲ. ಸಾಮಾನ್ಯವಾಗಿ ಆಸ್ಪತ್ರೆಗಳಲ್ಲಿ ದೇಹದ ಅಂಗಗಳು ಕೆಟ್ಟಿದ್ದಾಗ ಹೆಚ್ಚಿನ ಪ್ರಸಂಗಗಳಲ್ಲಿ ‘ಕತ್ತರಿಸಿ ಬಿಸಾಡು-ಉಳಿದುಕೋ’ ಎಂಬ ಸಾಮಾನ್ಯ ತತ್ವವನ್ನು ಅನುಸರಿಸಿದರೆ ಪ್ರಕೃತಿ ಚಿಕಿತ್ಸಾ ವಿಧಾನವು ‘ತೊಂದರೆಗೆ ಸಿಲುಕಿರುವುದನ್ನು ಸುಧಾರಿಸಿಕೋ-ಉಳಿದುಕೊ’ ಎಂಬ ತತ್ವದಡಿಯಲ್ಲಿ ಚಾಲನೆಗೊಳ್ಳುತ್ತದೆ ಎನ್ನಬಹುದು. ಜೊತೆಗೆ ಈ ವಿಧಾನದಲ್ಲಿ ರೋಗಿಗೆ ತಗುಲುವ ಖರ್ಚೂ ತೀರಾ ಕಡಿಮೆ ಪ್ರಮಾಣದ್ದಾಗಿರುವುದರೊಂದಿಗೆ ದೇಹದ ಮೇಲೆ ಆಗುವ ಅಡ್ಡ ಪರಿಣಾಮಗಳು ನಗಣ್ಯ.
ಪ್ರಕೃತಿ ಚಿಕಿತ್ಸೆಯನ್ನು ಆಧುನಿಕ ಸಂದರ್ಭದಲ್ಲಿ ನಮ್ಮ ನಡುವೆ ಅಳವಡಿಸಿಕೊಂಡು ಅದನ್ನು ಜೀವನದ ಭಾಗವಾಗಿಸಿಕೊಂಡಿದ್ದವರು ಮಹಾತ್ಮಾ ಗಾಂಧೀಜಿ. ಅವರು ಜರ್ಮನಿ ದೇಶದ ಪ್ರಕೃತಿ ಚಿಕಿತ್ಸಾ ತಜ್ಞ ಅಡಾಲ್ಫ್ ಜಸ್ಟ್ ಬರೆದ ‘ರಿಟರ್ನ್ ಟು ನೇಚರ್’ ಪುಸ್ತಕದಿಂದ ಬಹಳವಾಗಿಯೇ ಪ್ರಭಾವಿತರಾಗಿದ್ದರು. ಗಾಂಧೀಜಿ ಆಹಾರ ಕ್ರಮ ಮತ್ತು ಆರೋಗ್ಯ ಸುಧಾರಣೆಯ ದೃಷ್ಟಿಯಿಂದ ತುಸು ಹೆಚ್ಚೇ ಎನಿಸುವಷ್ಟು ಪ್ರಯೋಗ ಮಾಡಿದವರು. ಅವರು ಯಾವುದೇ ವಿಧಾನವನ್ನು ತಮ್ಮ ಮೇಲೆಯೇ ಪ್ರಯೋಗ ಮಾಡಿಕೊಂಡು ಅದರ ಆಗು ಹೋಗುಗಳನ್ನು ಕಂಡುಕೊಳ್ಳುತ್ತಿದ್ದರು. ಪ್ರಕೃತಿ ಚಿಕಿತ್ಸಾ ಪದ್ಧತಿಯ ಸರಳ ಅನುಸರಣಾ ಕ್ರಮಗಳು ಮತ್ತು ಲಾಭಗಳನ್ನು ಕಂಡು ಮಾರು ಹೋದ ಗಾಂಧೀಜಿಯವರು ತಮ್ಮ ಕೊನೆಯ ದಿನಗಳವರೆಗೂ ಅದನ್ನೇ ಜೀವನ ಮಾರ್ಗವಾಗಿ ರೂಢಿಸಿಕೊಂಡಿದ್ದರು. ಜೊತೆಗೆ ಜನರಿಗೆ ಈ ಬಗ್ಗೆ ತಿಳಿವಳಿಕೆ ನೀಡಿ ರೂಢಿಸಿಕೊಳ್ಳಲು ಪ್ರೇರೇಪಿಸುತ್ತಿದ್ದರು. ಕಾಯಿಲೆಯನ್ನು ಗುರುತಿಸಿಕೊಂಡ ನಂತರ ಅದನ್ನು ಮೂಲದಿಂದಲೇ ಹೊರಹಾಕಲು ಈ ವಿಧಾನದಿಂದ ಮಾತ್ರ ಸಾಧ್ಯವಿದೆ ಎಂಬುದೇ ಅವರ ಒಲವಿಗೆ ಮೂಲ ಕಾರಣ. ಏಕೆಂದರೆ ಗಾಂಧೀಜಿಗೆ ಅರಿವಿದ್ದಂತೆ ಬೇರೆ ಯಾವುದೇ ವೈದ್ಯ ಪದ್ಧತಿಗಳು ಕಾಯಿಲೆಯನ್ನು ಮೂಲದಿಂದಲೇ ಗುಣಪಡಿಸಬಲ್ಲವು ಅಗಿರಲಿಲ್ಲ. ಪ್ರಕೃತಿ ಚಿಕಿತ್ಸೆಯ ಪ್ರಮುಖ ಕ್ರಮಗಳಾದ ಸಹಜ ಆಹಾರ, ಉಪವಾಸ, ತಣ್ಣೀರು ಬಟ್ಟೆಯ ಬಳಕೆ ಮತ್ತು ಮಣ್ಣಿನ ಚಿಕಿತ್ಸೆಗಳನ್ನು ಸ್ವತಃ ಅನುಸರಿಸಿ ಅದರ ಲಾಭಗಳನ್ನು ಗಾಂಧೀಜಿ ಮನಗಂಡಿದ್ದರು. ಈ ವಿಧಾನದಲ್ಲಿ ಪಂಚಭೂತಗಳೇ ಪ್ರಧಾನ ಪರಿಕರಗಳಾಗಿರುವುದು ಅವರಿಗೆ ಹೆಚ್ಚು ಆಪ್ತವಾದ ಸಂಗತಿಯಾಗಿತ್ತು. ಈ ಕಾರಣದಿಂದಲೇ ಪುಣೆಯ ಬಳಿ ೧೯೪೫ರ ನವೆಂಬರ್ ೧೮ ರಂದು ಅಖಿಲ ಭಾರತ ಪ್ರಕೃತಿ ಚಿಕಿತ್ಸಾ ಟ್ರಸ್ಟ್ನ ಆಜೀವ ಸದಸ್ಯರಾಗಿ ನೇಮಕಗೊಂಡರು. ಈ ಟ್ರಸ್ಟ್ನ ಅಡಿಯಲ್ಲಿ ಒಂದು ಪ್ರಕೃತಿ ಚಿಕಿತ್ಸಾ ಕೇಂದ್ರವನ್ನು ತೆರೆದು ಸಾಮಾನ್ಯ ಜನರಿಗೆ ಚಿಕಿತ್ಸೆ ಒದಗಿಸುವ ವ್ಯವಸ್ಥೆ ಮಾಡಿದ್ದರು. ಯಾವುದೇ ಕಾಯಿಲೆಯನ್ನೂ ಪ್ರಕೃತಿ ಚಿಕಿತ್ಸಾ ವಿಧಾನದಲ್ಲಿಯೇ ಪರಿಹರಿಸಿ ಜನರನ್ನು ಸ್ವಸ್ಥರನ್ನಾಗಿ ಮಾಡಬಹುದು ಎಂಬುದು ಗಾಂಧೀಜಿಯವರ ದೃಢವಾದ ನಂಬಿಕೆಯಾಗಿತ್ತು.
ಇದಕ್ಕೂ ಮೊದಲು ಆಯುರ್ವೇದ ವೈದ್ಯ ಪದ್ಧತಿಯನ್ನು ಹೆಚ್ಚಾಗಿ ಅನುಸರಿಸುತ್ತಿದ್ದ ಗಾಂಧೀಜಿ ಪ್ರಕೃತಿ ಚಿಕಿತ್ಸಾ ಕ್ರಮವನ್ನು ಕ್ರಮಬದ್ಧವಾಗಿ ತರಬೇತಿಗೊಂಡ ತಜ್ಞರಿಂದ ತಿಳಿದುಕೊಂಡ ನಂತರ ಅದನ್ನೇ ಪ್ರಧಾನವಾದ ಚಿಕಿತ್ಸಾ ವಿಧಾನವಾಗಿ ರೂಢಿಸಿಕೊಂಡು ಅನುಸರಿಸಿದರು. ಈ ವಿಧಾನದಲ್ಲಿ ಚಿಕಿತ್ಸೆ ಪಡೆಯುವುದರಿಂದ ರೋಗಿಗೆ ಯಾವುದೇ ಹಾನಿಯಿಲ್ಲ ಮತ್ತು ಎಲ್ಲವೂ ಲಾಭವೇ ಎಂಬುದನ್ನು ಮನವರಿಕೆ ಮಾಡಿಕೊಂಡರು. ಪ್ರಕೃತಿ ಚಿಕಿತ್ಸೆಯ ವಿಧಾನ ಮತ್ತು ಅದರ ಲಾಭಗಳನ್ನು ತಾವು ನಡೆಸುತ್ತಿದ್ದ ‘ಹರಿಜನ’ ಮುಂತಾದ ನಿಯತಕಾಲಿಕೆಗಳ ಮೂಲಕ ಸರಳವಾಗಿ ವಿವರಿಸಿ ಹೇಳಿ ಜನಸಾಮಾನ್ಯರಲ್ಲಿ ಅರಿವು ಮತ್ತು ವಿಶ್ವಾಸ ಮೂಡಿಸುವ ಕೆಲಸವನ್ನು ಗಾಂಧಿ ಮಾಡುತ್ತಾ ಬಂದರು. ಗಾಂಧೀಜಿಯವರು ಆರಂಭಿಸಿದ ಇಂತಹ ಮಹತ್ವದ ಅಭಿಯಾನ ಕಾರ್ಯಗಳ ಸ್ಮರಣಾರ್ಥ ಪ್ರತಿ ವರ್ಷದ ನವೆಂಬರ್ ೧೮ನೇ ದಿನವನ್ನು ‘ಪ್ರಕೃತಿ ಚಿಕಿತ್ಸಾ ದಿನ’ವನ್ನಾಗಿ ಆಚರಿಸುತ್ತಾ ಬರಲಾಗುತ್ತಿದೆ.
ಪ್ರಕೃತಿ ಚಿಕಿತ್ಸೆಯ ಶ್ರೇಷ್ಠತೆಯಿರುವುದು ಆ ವಿಧಾನದ ಆಗು ಹೋಗುಗಳನ್ನು ರೋಗಿಗಳಿಗೆ ಮನವರಿಕೆ ಮಾಡಿಕೊಡುವ ಅದರ ಮಾರ್ಗದರ್ಶಕರು ಅಥವಾ ಶಿಕ್ಷಕರಲ್ಲಿ. ಪ್ರಕೃತಿ ಚಿಕಿತ್ಸೆ ನೀಡುವ ವೈದ್ಯನ ಸ್ಥಾನದಲ್ಲಿರುವ ವ್ಯಕ್ತಿ ರೋಗ ಬಾಧಿತನಿಗೆ ಒಬ್ಬ ಹಿತೈಷಿಯಾಗಿ, ಗೆಳೆಯನಾಗಿ ರೋಗ ಪರಿಹಾರಕ್ಕೆ ಮತ್ತು ಆತನ ಸ್ವಸ್ಥ ಸ್ಥಿತಿಗಾಗಿ ನೆರವಾಗಿ ನಿಲ್ಲುತ್ತಾನೆ. ಇದು ಹೆಚ್ಚು ತಿಳಿವಳಿಕೆ, ತಾಳ್ಮೆ ಮತ್ತು ಶ್ರಮವನ್ನು ಬೇಡುವ ಕಾರ್ಯವಾಗಿದೆ. ಏಕೆಂದರೆ ರೋಗದ ತೀವ್ರತೆಯ ಅನುಭವಗಳು ಮತ್ತು ರೋಗಿಯು ತಾನು ಒಳಗಾಗುತ್ತಿರುವ ಚಿಕಿತ್ಸಾ ಕ್ರಮಗಳ ಬಗ್ಗೆ ವಿಶ್ವಾಸವಿಟ್ಟು ಸ್ಪಂದಿಸುವುದು ಮತ್ತು ಸಹಕರಿಸುವುದು ಅಷ್ಟೇ ಮಹತ್ವದ ಜವಾಬ್ದಾರಿಯಾಗಿದೆ. ಏಕೆಂದರೆ ಪ್ರಕೃತಿ ಚಿಕಿತ್ಸೆ ಎಂದೂ ಏಕಮುಖವಾದ ಕ್ರಿಯೆಯಲ್ಲ. ಚಿಕಿತ್ಸೆ ಪಡೆದುಕೊಳ್ಳುವ ಕ್ರಿಯೆಯಲ್ಲಿ ರೋಗಿಯಾದವನ ಸ್ಪಂದನ ಮತ್ತು ಎಚ್ಚರದ ಸ್ಥಿತಿಯ ಪ್ರತಿಕ್ರಿಯಿಸುವಿಕೆಯೂ ಮಹತ್ವದ ಸಂಗತಿಯಾಗುತ್ತದೆ. ಹಾಗಾಗಿ ರೋಗಿಗೆ ಯಾವ ಹಂತಗಳಲ್ಲಿ ಎಂತಹ ಅನುಭವಗಳು ಆಗುತ್ತಿವೆ ಎಂಬ ಅಂಶಗಳು ರೋಗದ ಸ್ಥಿತಿಗತಿಗಳನ್ನು ಅರಿಯಲು ಮತ್ತು ಮುಂದಿನ ಚಿಕಿತ್ಸಾ ಕ್ರಮಗಳನ್ನು ಅನುಸರಿಸಲು ಸಹಾಯಕವಾಗುತ್ತದೆ. ಹಲವು ಬಗೆಯ ರೋಗಿಗಳನ್ನು ಉಪಚರಿಸಲು, ಅವರಲ್ಲಿ ಅರಿವು ಮತ್ತು ಅತ್ಮವಿಶ್ವಾಸ ಮೂಡಿಸಲು ಪ್ರಕೃತಿ ಚಿಕಿತ್ಸಕರನ್ನು ಬಹಳ ದೊಡ್ಡ ಮಟ್ಟದ ಸೇವಾ ಮನೋಭಾವ ಮತ್ತು ತಾಳ್ಮೆ ಮುನ್ನಡೆಸಬೇಕಾಗುತ್ತದೆ.
ಇಂದಿನ ವೈದ್ಯ ಪದ್ಧತಿಗಳು ಜನರ ಸೋಮಾರಿತನ, ರೋಗಗಳ ಬಗೆಗಿನ ಅಜ್ಞಾನ, ಅಬ್ಬೇಪಾರಿತನಗಳನ್ನೇ ಬಹಳ ದೊಡ್ಡ ಬಂಡವಾಳವನ್ನಾಗಿ ಮಾಡಿಕೊಂಡಿವೆ. ಜನರೂ ಅಷ್ಟೇ, ತಮಗೆ ಬಂದಿರುವ ಕಾಯಿಲೆಯನ್ನು ಪರಿಹರಿಸಿಕೊಳ್ಳಲು ಇರಬಹುದಾದ ಸಾಧ್ಯತೆಗಳು, ಪರಿಹಾರ ಕ್ರಮಗಳ ಬಗ್ಗೆ ಹೆಚ್ಚಿನ ಸಂದರ್ಭಗಳಲ್ಲಿ ಎರಡನೇ ಅಭಿಪ್ರಾಯ (ಸೆಕೆಂಡ್ ಒಪಿನಿಯನ್) ಪಡೆಯಲೂ ಪ್ರಯತ್ನಿಸುವುದಿಲ್ಲ. ಹಾಗೆಯೇ ಅಪಾಯಕಾರಿಯಲ್ಲದ, ದುಂದುವೆಚ್ಚಗಳಿಲ್ಲದ ಪರ್ಯಾಯ ಕ್ರಮಗಳ ಬಗ್ಗೆ ನಿರ್ಧಾರ ಮಾಡಲು ತಡಮಾಡುವ ಸ್ವಭಾವಗಳು ಜನಪ್ರಿಯ ವೈದ್ಯ ಕ್ರಮಗಳನ್ನೇ ಪೋಷಿಸುತ್ತಾ ಬರುತ್ತಿವೆ. ನಮ್ಮ ಆಧುನಿಕ ರೋಗ ನಿಧಾನ ಕ್ರಮಗಳನ್ನು ಗಮನಿಸುವಾಗ ರೋಗದ ಬಗ್ಗೆ ರೋಗಿಗೆ ಹೆಚ್ಚು ತಿಳಿಸದಿರುವುದು, ಮಾತನಾಡದಿರುವುದನ್ನೇ ಬಹಳ ದೊಡ್ಡ ಮೌಲ್ಯ ಎಂದು ವೈದ್ಯರು ಭಾವಿಸಿದಂತಿದೆ. ಸಾಮಾನ್ಯವಾಗಿ ಇಂತಹ ಸ್ಥಿತಿಯನ್ನು ನಿರ್ಮಾಣ ಮಾಡುವುದರಿಂದ ರೋಗಿ ಆತಂಕಕ್ಕೆ, ತುರ್ತಿಗೆ ಒಳಗಾಗಿ ಅದೇ ವೈದ್ಯರ ಬಳಿ ಹೇಳಿದಷ್ಟು ಕೊಟ್ಟು ತಕ್ಷಣ ಶಿಫಾರಸು ಮಾಡಿದ ಚಿಕಿತ್ಸೆಗೆ ಒಳಗಾಗಿ ಹಣ ತೆತ್ತು ಹೋಗಲಿ ಎಂಬ ಧೋರಣೆಯಿರುವಂತೆ ಕಾಣಿಸುತ್ತದೆ. ನಮ್ಮಲ್ಲಿ ಹೆಚ್ಚಿನ ಪಾಲು ರೋಗಿಗಳು ಬಡ ಮತ್ತು ಮಧ್ಯಮ ವರ್ಗದವರು. ಇತ್ತೀಚೆಗೆ ಹೆಚ್ಚಿನ ರೋಗಿಗಳು ತಮ್ಮ ಹತ್ತಿರದ ದೊಡ್ಡ ಸರ್ಕಾರಿ ಆಸ್ಪತ್ರೆಗಳಲ್ಲಿ ಉದ್ದೂದ್ದದ ಸಾಲುಗಳಲ್ಲಿ ನಿಂತು ಚಿಕಿತ್ಸೆ ಪಡೆಯುತ್ತಿರುವುದು ಸಾಮಾನ್ಯವಾಗಿ ಕಂಡುಬರುವ ಸಂಗತಿ. ಆದರೂ ಹೆಚ್ಚಿದ ಜನಸಂಖ್ಯೆ ಮತ್ತು ಆಧುನಿಕ ಜೀವನದ ಹಲವು ಕಾರಣಗಳಿಂದಾಗಿ ರೋಗಿಗಳ ಸಂಖ್ಯೆಯೂ ಅಷ್ಟೇ ಹೆಚ್ಚಾಗಿ ಕಂಡುಬರುತ್ತಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿಯೂ ಅಷ್ಟೊಂದು ಸಂಖ್ಯೆಯ ರೋಗಿಗಳನ್ನು ಅಲ್ಲಿನ ವೈದ್ಯರು ಎಷ್ಟರ ಮಟ್ಟಿಗೆ ನಿಭಾಯಿಸಲು ತಾನೇ ಸಾಧ್ಯ? ಇಂತಹ ಸಂದರ್ಭಗಳಲ್ಲಿ ತುರ್ತು ಪರಿಸ್ಥಿತಿ ಇರುವ ರೋಗಿಗಳು ಖಾಸಗಿ ಆಸ್ಪತ್ರೆಗಳ ಕಡೆಗೆ ಅನಿವಾರ್ಯವಾಗಿ ಮುಖಮಾಡಬೇಕಾಗುತ್ತದೆ.
ಆಧುನಿಕ ವೈದ್ಯ ಪದ್ಧತಿಗಳು ತಮ್ಮ ಒಡಲಲ್ಲಿ ಅಡಗಿಸಿಕೊಂಡಿರುವ ಲೋಪಗಳ ಕಾರಣದಿಂದಲೇ ಪ್ರಕೃತಿ ಚಿಕಿತ್ಸೆ ನಮ್ಮ ನಡುವೆ ಬೃಹತ್ತಾಗಿ ಬೆಳೆಯಲು ಸಾಧ್ಯವಾಗುತ್ತದೆ ಎಂದರೆ ತಪ್ಪಾಗಲಾರದು. ಇಂದಿನ ವೈದ್ಯಕೀಯ ಜಗತ್ತಿನಲ್ಲಿ ಇರುವ ಸಾಮಾನ್ಯ ನಡವಳಿಕೆಯಾದ; ಯಾವ ಸಣ್ಣ ಕಾಯಿಲೆಯಾದರೂ ಅದಕ್ಕೆ ಔಷಧ, ಗುಳಿಗೆಗಳನ್ನು ನೀಡುವುದು, ಶಸ್ತ್ರ ಚಿಕಿತ್ಸೆ ಅಗತ್ಯವಿಲ್ಲದಿದ್ದಾಗ್ಯೂ ರೋಗಿಗೆ ರೋಗದ ಸ್ಥಿತಿಗತಿಗಳನ್ನು ಅರಿವು ಮಾಡದೆ ಬಹಳ ದೊಡ್ಡ ಸಾಧನೆಗೈಯ್ಯುತ್ತಿರುವಂತೆ ತೋರಿಸಿಕೊಳ್ಳುತ್ತಾ ರೋಗಿ ಮತ್ತು ಆತನ ಸಂಬAಧಿಕರಲ್ಲಿ ಉದ್ವಿಗ್ನತೆಯನ್ನು ಹುಟ್ಟಿಸುವುದಲ್ಲದೆ ರೋಗಿಯನ್ನು ಅನಾಮತ್ತಾಗಿ ಬೇರ್ಪಡಿಸಿ ಐಸಿಯುಗಳಲ್ಲಿ ಸೇರಿಸಿಕೊಳ್ಳುವುದು, ಶಸ್ತçಚಿಕಿತ್ಸೆ ನೀಡುವ ಮೊದಲು ಹೇಳಿದ್ದ ವಿವರಗಳಿಗೂ ಶಸ್ತ್ರ ಚಿಕಿತ್ಸೆ ಆದ ನಂತರದ ವಿವರಗಳು ಮತ್ತು ಖರ್ಚುವೆಚ್ಚದ ಬಿಲ್ಲುಗಳಿಗೂ ಅಗಾಧ ವ್ಯತ್ಯಾಸಗಳಿರುವುದು. ರೋಗಿಯನ್ನು ಯಕಶ್ಚಿತ್ ಆಗಿ ಕಂಡು ತಮ್ಮ ಉಪಚಾರ, ಶಸ್ತ್ರ ಕ್ರಿಯೆಗಳನ್ನೇ ಜಗತ್ತಿನ ಅದ್ಭುತವೆಂಬಂತೆ ವಿಜೃಂಭಿಸುವುದು, ಯಾವುದೇ ಬಗೆಯ ಸಣ್ಣ ಸಣ್ಣ ಸಮಸ್ಯೆಗಳಿಗೂ ದೊಡ್ಡ ಪರೀಕ್ಷೆಗಳು, ವಿಪರೀತವಾದ ಕಾಯುವಿಕೆ, ಅನವಶ್ಯಕ ಪರೀಕ್ಷಾ ವೆಚ್ಚಗಳು, ರೋಗಿ, ರೋಗಿಯ ಕಡೆಯವರಿಗೂ ವೈದ್ಯರಿಗೂ ಮುಖಾಮುಖಿಯೇ ಇಲ್ಲದಿರುವುದು, ರೋಗಿಯ ಪರಿಸ್ಥಿತಿಯ ಬಗ್ಗೆ ಅಗತ್ಯವಿರುವಾಗ ಸರಿಯಾದ ಮಾಹಿತಿ ಒದಗಿಸದಿರುವುದು, ಕೆಲವೊಮ್ಮೆ ರೋಗಿ ಸತ್ತಿದ್ದರೂ ರೋಗಿಯ ಕಡೆಯವರಿಗೆ ಮಾಹಿತಿಯನ್ನೇ ನೀಡದಿರುವುದು. ಇಂತಹ ಅಕ್ಷಮ್ಯಗಳು ಅನಿವಾರ್ಯವಾಗಿ ಜನರ ಕಣ್ಣು ತೆರೆಸುವುದರೊಂದಿಗೆ ಪರ್ಯಾಯವನ್ನು ಹುಡುಕುವ ಕಡೆಗೂ ಕರೆದೊಯ್ಯಬಲ್ಲವಾಗಿವೆ. ನಮ್ಮ ಈಗಿನ ಪರಿಸ್ಥಿತಿಯಲ್ಲಿ ಬಹಳಷ್ಟು ರೋಗಿಗಳು ತಮ್ಮ ರೋಗಲಕ್ಷಣವನ್ನು ಗುರುತಿಸದೆ ಕಾಯಿಲೆ ಗಂಭೀರ ಸ್ಥಿತಿಗೆ ತಲುಪಿದಾಗ ಚಿಕಿತ್ಸೆಗೆ ಓಡಾಡುವುದರಿಂದ ಅಂತಹ ರೋಗಿಗಳನ್ನು ಸುಧಾರಿಸಲು ಅವರಿಗೆ ತಕ್ಷಣಕ್ಕೆ ವಿಶ್ವಾಸ ಬರಿಸಲು ಸಾಧ್ಯವಾಗುವಂತೆ ಚಿಕಿತ್ಸೆಯನ್ನು ನೀಡಲು ಪ್ರಕೃತಿ ಚಿಕಿತ್ಸಕರೂ ಸವಾಲನ್ನು ಎದುರಿಸಬೇಕಾಗುತ್ತದೆ.
ಪ್ರಕೃತಿ ಚಿಕಿತ್ಸೆಯಲ್ಲಿ ಸಹಜ ಆಹಾರ ತೆಗೆದುಕೊಳ್ಳುವ ಕ್ರಮವೇ ಅದರ ಪರಿಹಾರ ಕ್ರಮವೂ ಆಗುತ್ತದೆ. ಪ್ರಕೃತಿಯಲ್ಲಿ ಸಹಜವಾಗಿ ಬೆಳೆದ ಹಣ್ಣುಗಳು, ಸೊಪ್ಪು-ತರಕಾರಿಗಳು ಮತ್ತು ಮೊಳಕೆ ಕಾಳುಗಳನ್ನು ಸೇವಿಸಲು ತಿಳಿಸಲಾಗುತ್ತದೆ. ಹಾಗೆಯೇ ಹಸಿವನ್ನು ನೋಡಿ ತಿನ್ನುವುದು, ತಿನ್ನುವ ಆಹಾರವನ್ನು ಚೆನ್ನಾಗಿ ಜಗಿದು ರಸದ ರೂಪದಲ್ಲಿ ಕರುಳಿಗೆ ಸೇರಿಸುವುದೂ ಸೇರಿದೆ. ಆಗಾಗ ಉಪವಾಸ ಮಾಡುವುದೂ ಆರೋಗ್ಯ ಕಾಪಾಡಿಕೊಳ್ಳುವ ಉತ್ತಮ ಕ್ರಮಗಳಲ್ಲಿ ಒಂದು. ತಿಂದ ಆಹಾರವನ್ನು ದೇಹ ಸಹಜವಾಗಿ ಒಪ್ಪಿ, ಸ್ವೀಕರಿಸಿ ಜೀರ್ಣಿಸಿಕೊಳ್ಳುವಂತಾದರೆ ದೇಹಕ್ಕೆ ಯಾವ ಸಮಸ್ಯೆಗಳೂ ಇರುವುದಿಲ್ಲ. ಸಹಜ ಆಹಾರದಿಂದ ಮನಸ್ಸೂ ಪ್ರಫುಲ್ಲಿತವಾಗಿರುವುದರಿಂದ ದೇಹ ಮತ್ತು ಮನಸ್ಸುಗಳನ್ನು ಯಾವುದೇ ರೋಗಗಳು ಬಾಧಿಸಲಾರವು. ಹಾಗಾಗಿಯೇ ನಾವು ಆಹಾರವನ್ನು ತಿನ್ನುವಾಗ ಏನನ್ನು ತಿನ್ನಬೇಕು? ಎಷ್ಟು ತಿನ್ನಬೇಕು? ಹೇಗೆ ತಿನ್ನಬೇಕು? ಯಾವಾಗ ತಿನ್ನಬೇಕು? ಮುಂತಾದ ತಿಳಿವಳಿಕೆಯನ್ನು ಮೊದಲು ಹೊಂದಬೇಕು. ನಮ್ಮ ಒಳ್ಳೆಯ ಬದುಕಿಗಾಗಿ ಒಳ್ಳೆಯ ಅಭ್ಯಾಸಗಳನ್ನು ರೂಢಿಸಿಕೊಳ್ಳುವುದೇ ಆದರೆ ಅದಕ್ಕೆ ಮಾರ್ಗದರ್ಶನ ನೀಡುವ, ನಮ್ಮನ್ನು ಎಚ್ಚರಿಸುವ, ತಿದ್ದುವ ಹಲವು ಜನ ಸಹೃದಯರು ನಮ್ಮ ನಡುವೆ ಸಿಕ್ಕೇ ಸಿಗುತ್ತಾರೆ. ಆದರೆ, ಅವರ ವಿಚಾರಗಳನ್ನು ಅರಗಿಸಿಕೊಂಡು ಅಳವಡಿಸಿ, ಸುಧಾರಿಸಿಕೊಳ್ಳುವ ಯೋಗ್ಯತೆಯನ್ನು ಮಾತ್ರ ನಾವೇ ಸಂಪಾದಿಸಿಕೊಳ್ಳಬೇಕು ಅಷ್ಟೇ.
– ಡಾ. ದೊಡ್ಡೇಗೌಡ ಬಿ.ಸಿ.
ವಿಮರ್ಶಕರು-ಶಿಕ್ಷಣಾಧಿಕಾರಿ, ಹಾಸನ.
೮೭೨೨೫ ೦೫೧೪೬
