NEWSVIEWS

ಮೇ 1 ಬುದ್ಧ ಪೂರ್ಣಿಮೆ ; ಕರುಣಾಮೂರ್ತಿಗೆ ಕಾವ್ಯ ನಮನ

ಗೌತಮ ಬುದ್ಧನ ಜನ್ಮ, ಜ್ಞಾನೋದಯ ಮತ್ತು ಮಹಾಪರಿನಿಬ್ಬಾಣದ ನೆನಪಿಗೆ ಕಾವ್ಯ ಮಾಲೆ

ಪಾಲನೆ ನ್ಯೂಸ್ & ವ್ಯೂಸ್

ಬುದ್ಧ ಪೂರ್ಣಿಮೆ(ಮೇ 1)ಯು ಬೌದ್ಧ ಧರ್ಮದ ಸ್ಥಾಪಕರಾದ ಗೌತಮ ಬುದ್ಧನ ಜನ್ಮ, ಜ್ಞಾನೋದಯ ಮತ್ತು ಮಹಾಪರಿನಿಬ್ಬಾಣದ (ಮರಣ) ನೆನಪಿಗಾಗಿ ಆಚರಿಸಲಾಗುವ ಅತ್ಯಂತ ಪವಿತ್ರ ಹಬ್ಬವಾಗಿದೆ. ಇದನ್ನು ಬುದ್ಧ ಜಯಂತಿ ಅಥವಾ ವೆಸಕ್ ಎಂದೂ ಕರೆಯುತ್ತಾರೆ.

ಇದು ವೈಶಾಖ ಮಾಸದ ಹುಣ್ಣಿಮೆಯ ದಿನದಂದು ಬರುತ್ತದೆ. ಈ ದಿನದಂದು ಬುದ್ಧನಿಗೆ ವಿಶೇಷ ಪೂಜೆ ಹಾಗೂ ಶಾಂತಿಯ ಸಂಕೇತವಾಗಿ ಧ್ಯಾನ ಮತ್ತು ದಾನ ಕಾರ್ಯಗಳನ್ನು ಮಾಡಲಾಗುತ್ತದೆ.

ಬೌದ್ಧ ದೇವಾಲಯಗಳಲ್ಲಿ (ವಿಹಾರಗಳಲ್ಲಿ) ವಿಶೇಷ ಪ್ರಾರ್ಥನೆಗಳು ನಡೆಯುತ್ತವೆ. ಭಕ್ತರು ಬಿಳಿ ಬಟ್ಟೆಯನ್ನು ಧರಿಸಿ, ಬುದ್ಧನ ಬೋಧನೆಗಳನ್ನು ಸ್ಮರಿಸುತ್ತಾರೆ. ಬಡವರಿಗೆ ಆಹಾರ ವಿತರಿಸುವುದು ಮತ್ತು ಪ್ರಾಣಿಗಳಿಗೆ ಹಿಂಸೆ ನೀಡದಿರುವುದು ಈ ದಿನದ ಮುಖ್ಯ ಉದ್ದೇಶಗಳಲ್ಲಿ ಒಂದಾಗಿದೆ.

ಮಂಡ್ಯದ ಕವಿ ಮನಸ್ಸುಗಳು ಆಚಾರ್ಯ ಗೌತಮ ಬುದ್ಧನಿಗೆ ಕಾವ್ಯಮಾಲೆಯನ್ನು ಹೆಣೆದು ಭಗವಾನ್ ಬುದ್ಧನ ಜೀವನ ಕೊಡುಗೆಯನ್ನು ಸ್ಮರಿಸಿದ್ದಾರೆ.

ಬರಲಿರುವ ನಾಳೆಗೆ
ಈ ಸರಿ ರಾತ್ರಿಯ ಹೊತ್ತಿನೊಳ್
ಎಲ್ಲವನು ತೊರೆದು ಹೊರಟಿಹೆನು ಎನ್ನ ಎದೆಯಾಳಿದ ಪ್ರಿಯ ದೇವತೆ ಹೇಮ ರೂಪಿಸಿ…
ಪಾದವ ಮುಟ್ಟಿ ಕೋಮಲ ಮುಖಾರವಿಂದವ ಮನ ತುಂಬುವಂತೆ ನಿಟ್ಟಿಸಿ ನಿನಗರಿವಲ್ಲದಂತೆ ಸಾಗುತಿಹೆನು ಕೋಣೆಯೊಳಗೊಂದು ದೀಪವು ಹೊತ್ತಿಸಿ…
-ದೊ.ಚಿ.ಗೌಡ, ರೈತಕವಿ

ನುಡಿ ನಮನ

ಶತಶತಮಾನಗಳುರುಳುತಲಿದ್ದರು
ಬದಲಾಗದೆ ಜನ ಮೆರೆದಿರು
ಆಸೆ ದುಃಖಕ್ಕೆ ಮೂಲ ಎಂದರು
ಆಸೆ ಹಿಂದೆಯೇ ಅಲೆದಿಹರು

ಲೋಭ ಮೋಹಗಳ ಬಲೆಗಳಲಿ
ಜೇಡಗಳಾಗುತ ಸಿಲುಕುವರು
ನಿಮ್ಮನ್ನೋದದೆ ಅಲ್ಪವು ಅರಿಯದೆ
ಸ್ವಾರ್ಥದ ದಾರಿಯ ಹಿಡಿದಿಹರು

ನೆಪಕೆ ನಿಮ್ಮನು ನೆನೆಯುವ ಹಾಗೆ
ನಿಮ್ಮುಪದೇಶವ ಸ್ಮರಿಸುವರು
ಏನೇ ಬಂದರು ಯಾರೂ ನಿಮ್ಮಯ
ಹಾದಿಯನೆಂದು ಹಿಡಿಯರು

ಮನಗಳೆಲ್ಲವ ಮಲೀನ ಮಾಡಿ
ಮೇಲಿನ ತೊಗಲ ತೊಳೆಯುವರು
ಸಾಧು ಸಜ್ಜನರ ಹಾಗೆ ನಟಿಸಿ
ಹಿಂಸೆ ಮಾಡಿಯೇ ಬದುಕುವರು

ಮುಂದೆ ಎಷ್ಟೇ ಶತಮಾನ ಬಂದರು
ನಿಮ್ಮಂತೆ ಯಾರು ಇರರು
ನಿಮಗೆ ನೀವೆ ಸಮ ಗೌತಮ ಬುದ್ಧರೆ
ಚಿರಾಯು ಎಂದಿಗು ನಿಮ್ಮ ಹೆಸರು

    – ಸಬ್ಬನಹಳ್ಳಿ ಶಶಿಧರ

ನಿದ್ದೆ
ಬುದ್ಧನ ಬೆಳಕಲ್ಲಿ
ಮಿಂದೆದ್ದ ಮೇಲೆ ದಿನರಾತ್ರಿ
ಕಣ್ತುಂಬ ನಿದ್ದೆ
-ಕೊತ್ತತ್ತಿ ರಾಜು

ಶಾಂತಿಯ ಬೆಳಕು

ಹೊನ್ನ ಬಣ್ಣದ ಬೆಳಗು ಮೂಡಲಿ
ಮನದ ಕತ್ತಲೆ ಸರಿಯಲಿ
ಆಸೆಯೆಂಬ ಮರೀಚಿಕೆಯಲಿ
ಬೆಂದು ನೊಂದ ಜೀವ ತಣಿಯಲಿ |

ಅರಮನೆ ಸಿರಿಯನು ಅರಿತು ತೊರೆದವನು
ಅರಿವಿನ ಹಾದಿಯ ಹಿಡಿದವನು
ಬೋಧಿವೃಕ್ಷದ ಸುಖದ ನೆರಳಲಿ
ಶಾಂತಿ ಮಂತ್ರವ ಹರಿಸಿದವನು |

ಕ್ರೌರ್ಯದ ಕಿಚ್ಚನು ಪ್ರೀತಿಯಲಿ ಆರಿಸಿದ
ಹಿಂಸೆಯ ಹಾದಿಯ ಅಳಿಸಿದವನು
ಕರುಣೆಯ ಕಡಲಲಿ ಜಗವನು ನಂದಿಸಿ
ಬಾಳಿಗೆ ಹೊಸ ದಾರಿ ತೋರಿಸಿದವನು |

ತೃಷ್ಣೆಯ ಸಂಕೋಲೆ ಕಳಚಿದ ಜ್ಯೋತಿ
ಮೋಹದ ಪಾಶವ ಗೆದ್ದವನು
ಜಗದ ಜಂಜಾಟಕೆ ಉತ್ತರವಾಗಿ
ಅಹಿಂಸೆಯ ಹೂವನು ಅರಳಿಸಿದವನು |

ಬುದ್ಧಂ ಶರಣಂ ಗಚ್ಛಾಮಿ
ಧರ್ಮಂ ಶರಣಂ ಗಚ್ಛಾಮಿ
ಸಂಘಂ ಶರಣಂ ಗಚ್ಛಾಮಿ…

– ಹೆಚ್.ಆರ್. ಕನ್ನಿಕ

ಜಂ(ಟ್ರಂ)ಪ್
ಬುದ್ಧನ ಶಾಂತಿ ನೀತಿಯ
ಮಾಡಿದ್ದಾನೆ
ಜಂಪ್
ನೊಬೆಲ್ ಶಾಂತಿ ಪುರಸ್ಕಾರ
ಬೇಕೆನ್ನುತ
ವಿಶ್ವದೆಲ್ಲೆಡೆ ಅಶಾಂತಿ ಬಿತ್ತಿದ್ದಾನೆ
ಟ್ರಂಪ್
-ರೋಷನ್ ಚೋಪ್ರಾ

ಆ(ರಿದ)ರ್ಯ ಸತ್ಯ

ಆಸೆಯೇ ದುಃಖಕ್ಕೆ ಮೂಲ
ಜ್ಞಾನಿ ಗೌತಮ ಬುದ್ಧ
ಕಂಡು ಎರೆದ ಅಮೃತಧಾರೆ

ಹಿಂಸೆಯೇ ದುಃಖಕ್ಕೆ ಮೂಲ
ರಾಜಕುಮಾರ ಸಿದ್ಧಾರ್ಥ
ಸಿದ್ಧಿಸಿದ ಚಿರಕಾಲ ಸತ್ಯ

ಆಲಸ್ಯ-ಅಸಡ್ಡೆಯೂ ದುಃಖಕ್ಕೆ ಮೂಲ
ಶುದ್ಧೋದನ ತನಯ
ಸೃಜಿಸಿದ ಚೈತನ್ಯದ ಚಿಲುಮೆ

ಪ್ರೀತಿ-ವ್ಯಾಮೋಹ ದುಃಖಕ್ಕೆ ಮೂಲ
ಸಂಸಾರಿ ಯಶೋಧರ ಪ್ರಿಯ
ಸಾಕ್ಷಾತ್ಕಾರದ ಮೂಲಮಂತ್ರ

ಅಜ್ಞಾನವೂ ದುಃಖಕ್ಕೆ ಮೂಲ
ಕಪಿಲವಸ್ತುವಿನ ಶಾಕ್ಯಮುನಿ
ತತ್ತ್ಪೋಪದೇಶ ಬೆಳಕಾಯಿತು ಬಾಳಿಗೆ

ಧರ್ಮಾಂಧಾನುಕರಣೆಯೂ ದುಃಖಕ್ಕೆ ಮೂಲ
ಮಹಾನ್ ಮಾನವತಾವಾದಿ ಮಂಥಿಸಿದ
ಅಹಿಂಸಾ ಕೃಷಿಯ ಭರತ ಭೂಮಿಯಲಿ

ರಾಜ್ಯ ಗಡಿ, ಸ್ವಾರ್ಥದ ವ್ಯಾಸ, ಪಾಪದ ಪರಿಧಿ
ವಿಸ್ತರಿಸಿದರೆ ಸಂಕೋಲೆ ತಪ್ಪಿದ್ದಲ್ಲ
ಯೋಗಿಯ ಮಾತಿಗೆ ಕವಡೆ ಕಿಮ್ಮತ್ತಿನ ಸ್ಥಾನವಿಲ್ಲ

ಬಸವಣ್ಣ, ಗಾಂಧಿ, ಕುವೆಂಪು, ಅಂಬೇಡ್ಕರ್
ಶಿಷ್ಯ ಕೋಟಿ ಮರೆಯಲಿಲ್ಲ ಸಾಧನಾಮಯಿ ವಚನವ
ಏನು ಪ್ರಯೋಜನ? ಉಳಿಯಿತಷ್ಟೇ, ಬೆಳೆಯಲಿಲ್ಲ

ಬುದ್ಧ, ಮಹಾವೀರ, ಕ್ರಿಸ್ತ, ಪೈಗಂಬರ್
ನಾನಕ ರಮಾನಂದ ಕಬೀರರು
ಲೋಕ ಕಲ್ಯಾಣದ ಪ್ರವರ್ತಕರಿಂದು ನಗಣ್ಯ

ಭಯೋತ್ಪಾದನೆ ಉಸಿರು, ನರಮೇಧ ನಿತ್ಯೋತ್ಸವ
ನಾಗರಿಕತೆಯ ತೊಟ್ಟಿಲಲ್ಲಿ ಅಟ್ಟಹಾಸ
ಕಂದಮ್ಮಗಳ ಆಕ್ರಂದನ ಅಸೀಮ

ಮತ್ತೆ ಸಾವಿರ ಬುದ್ಧ ಪೂರ್ಣಿಮೆ
ಬಂದರೂ ಬುದ್ಧಿ ಬರುವುದಿಲ್ಲ ಈ ಮಂದಿಗೆ
ಪ್ರಕೃತಿ ಗರ್ಭಧರಿಸಿ ಪ್ರಸವವಾಗಬೇಕೇನೋ?

– ಚಂದ್ರಶೇಖರ ದ.ಕೋ.ಹಳ್ಳಿ


ಬುದ್ಧನ ಚಿಂತನೆಗಳು

ಗೌತಮ ಬುದ್ಧನ ಚಿಂತನೆಗಳು ಜಗತ್ತಿಗೆ ಶಾಂತಿ, ಕರುಣೆ ಮತ್ತು ವಿವೇಕದ ಹಾದಿಯನ್ನು ತೋರಿಸಿವೆ. ಅವರ ಬೋಧನೆಗಳನ್ನು ಮುಖ್ಯವಾಗಿ ನಾಲ್ಕು ಆರ್ಯ ಸತ್ಯಗಳು ಮತ್ತು ಅಷ್ಟಾಂಗ ಮಾರ್ಗಗಳಲ್ಲಿ ಕಾಣಬಹುದು.

ನಾಲ್ಕು ಆರ್ಯ ಸತ್ಯಗಳು (Four Noble Truths)
ಜೀವನದ ಸತ್ಯವನ್ನು ಅರ್ಥಮಾಡಿಕೊಳ್ಳಲು ಬುದ್ಧ ಈ ನಾಲ್ಕು ಅಂಶಗಳನ್ನು ಬೋಧಿಸಿದನು:
ದುಃಖ (Sorrow): ಲೋಕವು ದುಃಖಮಯವಾಗಿದೆ; ಜನನ, ಮರಣ, ರೋಗ ಮತ್ತು ವಿಯೋಗಗಳೆಲ್ಲವೂ ದುಃಖದ ರೂಪಗಳೇ.
ದುಃಖ ಸಮುದಾಯ (Origin of Sorrow): ದುಃಖಕ್ಕೆ ಮುಖ್ಯ ಕಾರಣ ಆಸೆ (ತೃಷ್ಣಾ) ಮತ್ತು ಅಜ್ಞಾನ.
ದುಃಖ ನಿರೋಧ (End of Sorrow): ಆಸೆಯನ್ನು ಗೆಲ್ಲುವುದರಿಂದ ಮಾತ್ರ ದುಃಖದಿಂದ ಮುಕ್ತಿ ಅಥವಾ ‘ನಿರ್ವಾಣ’ ಪಡೆಯಲು ಸಾಧ್ಯ.
ದುಃಖ ನಿರೋಧಗಾಮಿನಿ ಪ್ರತಿಪದ (The Path): ದುಃಖವನ್ನು ಹೋಗಲಾಡಿಸಲು ‘ಅಷ್ಟಾಂಗ ಮಾರ್ಗ’ವನ್ನು ಅನುಸರಿಸಬೇಕು.

ಅಷ್ಟಾಂಗ ಮಾರ್ಗ (The Eightfold Path)
ಜೀವನದಲ್ಲಿ ಸಮತೋಲನ ಕಾಯ್ದುಕೊಳ್ಳಲು ಬುದ್ಧ ಎಂಟು ಮಾರ್ಗಗಳನ್ನು ಸೂಚಿಸಿದನು:

1.ಸಮ್ಯಕ್ ದೃಷ್ಟಿ: ಸರಿಯಾದ ತಿಳುವಳಿಕೆ.
2.ಸಮ್ಯಕ್ ಸಂಕಲ್ಪ: ಒಳ್ಳೆಯ ಉದ್ದೇಶಗಳು.
3.ಸಮ್ಯಕ್ ವಾಕ್ಕು: ಸತ್ಯವಾದ ಮತ್ತು ಮೃದುವಾದ ಮಾತು.
4.ಸಮ್ಯಕ್ ಕರ್ಮ: ಅಹಿಂಸೆ ಮತ್ತು ಸತ್ಕರ್ಮಗಳ ಪಾಲನೆ.
5.ಸಮ್ಯಕ್ ಆಜೀವ: ನ್ಯಾಯಯುತವಾದ ಜೀವನೋಪಾಯ.
6.ಸಮ್ಯಕ್ ವ್ಯಾಯಾಮ: ಕೆಟ್ಟ ಆಲೋಚನೆಗಳನ್ನು ತಡೆದು ಒಳ್ಳೆಯದನ್ನು ಬೆಳೆಸುವ ಪ್ರಯತ್ನ.
7.ಸಮ್ಯಕ್ ಸ್ಮೃತಿ: ಜಾಗರೂಕತೆ ಅಥವಾ ಸಾವಧಾನತೆ.
8.ಸಮ್ಯಕ್ ಸಮಾಧಿ: ಮನಸ್ಸಿನ ಏಕಾಗ್ರತೆ ಮತ್ತು ಶಾಂತಿ.

ಪ್ರಮುಖ ಸಂದೇಶಗಳು
ಮಧ್ಯಮ ಮಾರ್ಗ: ಅತಿಯಾದ ಭೋಗ ಅಥವಾ ಅತಿಯಾದ ಕಠಿಣ ತಪಸ್ಸು ಎರಡನ್ನೂ ಬಿಟ್ಟು ಮಧ್ಯಮ ಹಾದಿಯಲ್ಲಿ ನಡೆಯುವುದು.
ಅಹಿಂಸೆ: ಯಾವುದೇ ಜೀವಿಗೂ ಮನಸ್ಸಿನಿಂದ ಅಥವಾ ಕ್ರಿಯೆಯಿಂದ ಹಿಂಸೆ ನೀಡಬಾರದು.
ದ್ವೇಷದಿಂದ ದ್ವೇಷ ತೀರದು: ದ್ವೇಷವನ್ನು ದ್ವೇಷದಿಂದ ಗೆಲ್ಲಲು ಸಾಧ್ಯವಿಲ್ಲ, ಅದನ್ನು ಪ್ರೀತಿಯಿಂದ ಮಾತ್ರ ಗೆಲ್ಲಬಹುದು.

ಗೌತಮ ಬುದ್ಧನ ಬೋಧನೆಗಳು ಆಧುನಿಕ ಜಗತ್ತಿನ ಒತ್ತಡ, ಸಂಘರ್ಷ ಮತ್ತು ಅತಿಯಾದ ಭೋಗಜೀವನಕ್ಕೆ ಶಾಶ್ವತ ಪರಿಹಾರವನ್ನು ನೀಡುತ್ತವೆ. ಅವರ ‘ಮಧ್ಯಮ ಮಾರ್ಗ’, ಅಹಿಂಸೆ, ಕರುಣೆ, ಮತ್ತು ಮನಸ್ಸಿನ ನಿಯಂತ್ರಣ (ಸಾವಧಾನತೆ) ಇಂದಿನ ದಿನಗಳಲ್ಲಿ ಮಾನಸಿಕ ಶಾಂತಿ, ಸುಸ್ಥಿರ ಅಭಿವೃದ್ಧಿ ಮತ್ತು ಸಾಮಾಜಿಕ ಸಾಮರಸ್ಯಕ್ಕೆ ಅತ್ಯಂತ ಪ್ರಸ್ತುತವಾಗಿವೆ.

ಅಂತಿಮವಾಗಿ, ಬುದ್ಧನ ವಿಚಾರಗಳು ಕೇವಲ ಒಂದು ಧರ್ಮವಲ್ಲ, ಅದೊಂದು ಜೀವನ ವಿಧಾನ. ಇಂದಿನ ಸಂಕೀರ್ಣ ಜಗತ್ತಿನಲ್ಲಿ ಬೌದ್ಧಿಕ ಮತ್ತು ಆಧ್ಯಾತ್ಮಿಕ ಸಮತೋಲನವನ್ನು ಕಾಯ್ದುಕೊಳ್ಳಲು ಅವರ ಬೋಧನೆಗಳು ಅನಿವಾರ್ಯ.

ಮಹಾತ್ಮ ಆದದ್ದು ಹೇಗೆ?

ಜಗತ್ತು ಕಂಡ ಮಹಾಪುರುಷರಲ್ಲಿ ಎದ್ದು ನಿಲ್ಲುವ ವ್ಯಕ್ತಿತ್ವವೇ ಬುದ್ಧನದು. ಅವನ ಜೀವನ, ವ್ಯಕ್ತಿತ್ವ, ಅವನು ಕಂಡ ಸತ್ಯಗಳು ಇಡೀ ಪ್ರಪಂಚದ ಇತಿಹಾಸದಲ್ಲೇ ಒಂದು ಹೊಸ ಪ್ರವಾಹವನ್ನು ಸೃಷ್ಟಿಸಿತು. ಅವನ ಬದುಕನ್ನು ಗಮನಿಸಿದರೆ, ಯೌವನದ ಉತ್ತುಂಗ ಅವಸ್ಥೆಯಲ್ಲಿದ್ದ ಸಮಯದಲ್ಲಿ ನಡೆದ ಕೆಲವು ಘಟನೆಗಳು ಅವನ ಬದುಕನ್ನೇ ಬದಲಾಯಿಸಿಬಿಟ್ಟಿತು. ರಾಜ್ಯ, ಅಧಿಕಾರ, ಪತ್ನೀಪುತ್ರರನ್ನು ಒಳಗೊಂಡ ಸುಖಮಯ ಸಂಸಾರ, ಅಪಾರ ಸಂಪತ್ತು-ಕೀರ್ತಿ ಎಲ್ಲವೂ ಅವನಿಗಿತ್ತು. ಆದರೂ ಅದೇನೋ ಅಪೂರ್ಣತೆ ಅವನ ಒಳಗಿನಿಂದ ಕಾಡುತ್ತಿತ್ತು. ಒಂದು ದಿನ ಇದ್ದಕ್ಕಿದ್ದಂತೆ ಸಂಚಾರ ಹೊರಟಿದ್ದ ಸಿದ್ದಾರ್ಥನಿಗೆ (ಬುದ್ಧನ ಹಿಂದಿನ ಹೆಸರು) ಒಬ್ಬ ವೃದ್ಧ, ಒಬ್ಬ ರೋಗಿಷ್ಠ, ಇನ್ನೊಂದು ಕಡೆ ಶವಯಾತ್ರೆ ಕಂಡು ಬಂತು. ಅದುವರೆಗೂ ಅಂತಹ ಜನರನ್ನು ಸಿದ್ದಾರ್ಥ ಕಂಡಿರಲಿಲ್ಲ. ಅಂತಹ ಜನರು ಕಣ್ಣಿಗೆ ಬಿದ್ದರೆ ಅವನಲ್ಲಿ ವೈರಾಗ್ಯ ಜಾಗೃತವಾದೀತೆಂದು ಸಿದ್ದಾರ್ಥನ ತಂದೆ ಹೆದರಿದ್ದ. ಹಾಗಾಗಿ ಅವನ ಕಣ್ಣಿಗೆ ಅಂತಹ ಜನರು ಬೀಳದಂತೆ ಎಚ್ಚರ ವಹಿಸಿದ್ದ. ಈಗ ಸಂಚಾರದ ವೇಳೆಗೆ ಕಂಡ ಈ ದೃಶ್ಯಗಳು ಸಿದ್ಧಾರ್ಥನನ್ನು ಚಕಿತನನ್ನಾಗಿಸಿದವು. ರಥದ ಸಾರಥಿ ಚನ್ನನಿಂದ ಅವರ ಬಗೆ ಹಲವು ಪ್ರಶ್ನೆಗಳನ್ನು ಕೇಳಿದ, ಅವರ ಬಗ್ಗೆ ತಿಳಿದುಕೊಂಡ. ಅವುಗಳು ಅವನ ಅಂತರಂಗದಲ್ಲಿ ಅಡಗಿದ್ದ ವೈರಾಗ್ಯದ ಜ್ವಾಲಾಮುಖಿಯನ್ನೇ ಹೊರಹೊಮ್ಮಿಸಿದವು. ನಡು ರಾತ್ರಿಯಲ್ಲೇ ಅವನು ಅರಮನೆ, ಪತ್ನಿ, ಪುತ್ರ, ಕುಟುಂಬ, ಸಂಪತ್ತು ಎಲ್ಲವನ್ನೂ ತೊರೆದು ಹೊರನಡೆದ. ಸತ್ಯಾನ್ವೇಷಣೆಯೊಂದೇ ಅವನ ಗುರಿಯಾಯಿತು. ಈ ಹೊಸ ಹಾದಿಯೇ ಅವನನ್ನು ಬುದ್ಧನನ್ನಾಗಿಸಿತು.

ಅಂತರಂಗದ ಅನ್ವೇಷಣೆಗೆ ಕೆಲವೊಮ್ಮೆ ಬಾಹ್ಯ ಪ್ರಪಂಚದಲ್ಲಿ ಕೆಲವು ಸೂಚನೆಗಳು ಸಿಗುತ್ತವೆ. ಹಾಗೆ ಸಿಕ್ಕ ಸೂಚನೆಗಳೇ ಮುಂದೆ ಜೀವನವೆಂಬ ಪ್ರವಾಹದ ದಿಕ್ಕನ್ನು ಬದಲಾಯಿಸುತ್ತವೆ. ಬುದ್ದನ ಜೀವನದಲ್ಲಿ ನಡೆದ ಈ ಸಣ್ಣ ಘಟನೆಗಳೇ ಅನಂತ ಸತ್ಯದೆಡೆಗೆ ಅವನನ್ನು ಕರೆದೊಯ್ದಿತ್ತು.

ಪ್ರೇಮಭಿಕ್ಷು

‘ಪ್ರೇಮಭಿಕ್ಷು’ ಪ್ರಭುಶಂಕರ ಅವರಿಂದ ರಚಿತವಾದ ಜನಪ್ರಿಯ ಕನ್ನಡ ಕಾದಂಬರಿಯಾಗಿದ್ದು, ಇದು ಬುದ್ಧನ ಜೀವನ ಮತ್ತು ಆತನ ಕರುಣೆಯ ಸಂದೇಶವನ್ನು ಆಧರಿಸಿದೆ. ಈ ಕೃತಿಯು ದರೋಡೆಕೋರ ಅಂಗುಲಿಮಾಲನ ಪರಿವರ್ತನೆಯ ಕಥೆಯನ್ನು ಸರಳವಾಗಿ ವಿವರಿಸುತ್ತದೆ. ಇದು ದೀರ್ಘಕಾಲದವರೆಗೆ ಕಾಲೇಜು ಪಠ್ಯ ಪುಸ್ತಕವಾಗಿತ್ತು.

ಬುದ್ಧನು ಅಂಗುಲಿಮಾಲ ಎಂಬ ಭಯಾನಕ ದರೋಡೆಕೋರನನ್ನು ಪ್ರೀತಿ ಮತ್ತು ಕರುಣೆಯಿಂದ ಪರಿವರ್ತಿಸುವ ಕಥೆ ಈ ಕಾದಂಬರಿಯ ವಸ್ತು. ಅಲ್ಲದೆ, ಬೌದ್ಧ ಭಿಕ್ಷುಗಳ ಜೀವನಶೈಲಿ ಮತ್ತು ಬುದ್ಧನ ವ್ಯಕ್ತಿತ್ವವನ್ನು ಸೊಗಸಾಗಿ ಚಿತ್ರಿಸುತ್ತದೆ. ಸರಳ ಮತ್ತು ಸುಂದರವಾದ ನಿರೂಪಣೆ ಈ ಕೃತಿಯ ವಿಶೇಷತೆ.

ಬುದ್ಧ ಪ್ರಾರ್ಥನೆ

ಬುದ್ಧಂ ಶರಣಂ ಗಚ್ಛಾಮಿ
ಧರ್ಮಂ ಶರಣಂ ಗಚ್ಛಾಮಿ
ಸಂಘಂ ಶರಣಂ ಗಚ್ಛಾಮಿ…

ಈ ಪ್ರಾರ್ಥನೆಯನ್ನು ಬೌದ್ಧ ಧರ್ಮದ ‘ತ್ರಿಶರಣ’ ಅಥವಾ ‘ಮೂರು ಶರಣುಗಳು’ ಎಂದು ಕರೆಯಲಾಗುತ್ತದೆ.

ಬುದ್ಧಂ ಶರಣಂ ಗಚ್ಛಾಮಿ: ನಾನು ಬುದ್ಧನಿಗೆ (ಜ್ಞಾನಿಗೆ) ಶರಣಾಗುತ್ತೇನೆ.

ಧಮ್ಮಂ ಶರಣಂ ಗಚ್ಛಾಮಿ: ನಾನು ಧರ್ಮಕ್ಕೆ (ಬುದ್ಧ ಬೋಧಿಸಿದ ಮಾರ್ಗಕ್ಕೆ) ಶರಣಾಗುತ್ತೇನೆ.

ಸಂಘಂ ಶರಣಂ ಗಚ್ಛಾಮಿ: ನಾನು ಸಂಘಕ್ಕೆ (ಜೀವನದ ಮಾರ್ಗದಲ್ಲಿ ಸಾಗುವವರ ಸಮೂಹಕ್ಕೆ) ಶರಣಾಗುತ್ತೇನೆ.

Related posts

ಪರಿಚಯ ಪ್ರಕಾಶನ ‘ಒಡಲು ಮತ್ತು ಸೃಷ್ಟಿ’ ಬಿಡುಗಡೆ ನಾಳೆ

ಜ. 20ರಂದು ಮಂಡ್ಯ ಜಿಲ್ಲಾ ಯುವ ಸಮಾವೇಶ

ಯುವಜನತೆ ನಗರದ ಚಿತ್ರಣವನ್ನು ಕಣ್ತುಂಬಿಕೊಳ್ಳಿ – ಎನ್ ಚಲುವರಾಯಸ್ವಾಮಿ

Leave a Comment